ಪ್ರಾತಿನಿಧಿಕ ಚಿತ್ರ
ನನಗೆ ಹದಿನೇಳು ವರ್ಷ. ಅಪ್ಪ, ಅಮ್ಮ ಮತ್ತು ನಾನು ಇರುವ ಚಿಕ್ಕ ಕುಟುಂಬ. ಈಚೆಗೆ ಅಪ್ಪ ಅಮ್ಮ ಪರಸ್ಪರ ಮಾತನಾಡುವುದಿಲ್ಲ. ಆದರೆ, ನನ್ನೊಟ್ಟಿಗೆ ಇಬ್ಬರೂ ನಗು ನಗುತ್ತಾ ಮಾತನಾಡುತ್ತಾರೆ. ಮನೆಯಲ್ಲಿ ಎಲ್ಲವೂ ಸರಿ ಇಲ್ಲ ಅನಿಸುತ್ತಿದೆ. ಇದು ಚಿಂತೆಯಾಗಿ ಕಾಲೇಜಿನಲ್ಲಿಯೂ ಕೊರೆಯುತ್ತದೆ. ಸ್ನೇಹಿತರೊಂದಿಗೆ ಇದ್ದಾಗ ಏನೂ ಅನಿಸದು. ಮನೆಗೆ ಹೋದರೆ ಉಸಿರುಗಟ್ಟಿದಂತೆ ಆಗುತ್ತದೆ. ಅವರಿಬ್ಬರೂ ಪರಸ್ಪರ ಕುದಿಯುತ್ತಿದ್ದಾರೆ ಎಂದೂ ಅನಿಸುತ್ತದೆ. ಇದು ನನ್ನ ಅನಿಸಿಕೆಯೇ?, ಅವರಿಗೆ ಕೇಳಿ ಪರಿಹರಿಸಿಕೊಳ್ಳಬೇಕೆ? ಅಥವಾ ಈಗ ಅನಿಸಿದ್ದನ್ನು ಉಪೇಕ್ಷಿಸಬೇಕೇ? ಮನೆಯ ವಾತಾವರಣವನ್ನು ಮೊದಲಿನಂತೆ ಮಾಡುವುದು ಹೇಗೆ?
ನಿಮ್ಮ ಸ್ಥಿತಿ ಕೇಳಿ ವಿಷಾದವಾಯಿತು. ಪಾಲಕರ ಹತ್ತಿರ ಮುಕ್ತವಾಗಿ ಮಾತನಾಡುವುದೂ ಸುಲಭವೇನಲ್ಲ. ತಳಮಳವನ್ನು ಅವರಿಗೆ ಹೇಳುವುದು ತಪ್ಪಲ್ಲ. ಇಷ್ಟು ವರ್ಷಗಳ ಕಾಲ ನೀವು ಮೂವರು ಪರಸ್ಪರ ಹೇಗಿದ್ದೀರಿ ಎನ್ನುವುದೂ ಇಲ್ಲಿ ಮುಖ್ಯವಾಗುತ್ತದೆ. ಮನೆಯಲ್ಲಿ ಪಾಲಕರ ಮನಸ್ತಾಪದಿಂದಾಗಿ ಹದಿಹರೆಯದಲ್ಲಿ ಮಕ್ಕಳ ಮನಸ್ಸಿನ ಮೇಲೆ ಗಾಸಿಯಾಗುತ್ತದೆ. ಅವರಿಗೆ ಗೊಂದಲ ಉಂಟಾಗುತ್ತದೆ. ಮಾಡದ ತಪ್ಪಿಗೆ ನರಳುವಂತಾಗುತ್ತದೆ.
ಯಾರು ಎಷ್ಟೊತ್ತಿಗೆ ಬಂದರೂ ಮನೆಯಲ್ಲಿ ಇರುವವರು ಕಾಯುತ್ತ ಇರಬೇಕು. ಆಧುನಿಕ ಯುಗದಲ್ಲಿ ಮನೆಗಳಲ್ಲಿ ಇರುವವರು ಮೂವರೇ ಆಗಿರುವುದರಿಂದ ಪರಸ್ಪರ ಕಾಯುತ್ತ, ಸಹನೀಯವಾಗಿಯೂ, ಕುತೂಹಲಿಗಳಾಗಿಯೂ ಇರುವುದು ಕಷ್ಟ. ಯಾರಿಗೂ ಯಾರನ್ನೂ ಸಂತೈಸುವ ವ್ಯವಧಾನವಾಗಲೀ, ಸಮಾಧಾನವಾಗಲೀ ಇರುವುದಿಲ್ಲ.
ಈಗ ನೀವು ಮಾಡಬಹುದಿಷ್ಟು. ಪಾಲಕರಲ್ಲಿ ಹೆಚ್ಚು ಆತ್ಮೀಯರೋ ಯಾರೋ, ಅವರ ಹತ್ತಿರ ನಿಮ್ಮ ನೋವನ್ನು ತೋಡಿಕೊಳ್ಳಿ. ಅವರಿಬ್ಬರೂ ನಿಮಗೆ ಬಹುಮುಖ್ಯ ಎಂಬುದನ್ನು ತಿಳಿಸಲು ಪ್ರಯತ್ನಿಸು. ಅವರ ವರ್ತನೆಯಿಂದಾಗಿ ಮನಸ್ಸಿಗೆ ಆಗುತ್ತಿರುವ ಹಿಂಸೆಯ ಬಗ್ಗೆ ಪ್ರತ್ಯೇಕವಾಗಿ ಹೇಳಿಕೊಳ್ಳಿ. ಮಗನ ಖುಷಿಗಾಗಿ ಮನಸ್ತಾಪ ಕರಗಬಹುದು.
ಅವರಿಬ್ಬರನ್ನೂ ಒತ್ತಾಯಿಸಿ ಯಾವುದಾದರೂ ಊರಿಗೆ ಕರೆದುಕೊಂಡಿ ಹೋಗಿ ಬರಬಹುದು. ಬರುವುದರೊಳಗೆ ಮೊದಲಿನಂತೆ ಆಗುವ ಸಾಧ್ಯತೆಯೂ ಇರುತ್ತದೆ. ಏರುಪೇರಾಗಿರುವ ಸಂಬಂಧವನ್ನು ಸರಿಪಡಿಸಲು ಹೋಗದೇ, ಅವರವರ ಇಷ್ಟದಂತೆ ಅವರೇ ಪರಿಹರಿಸಿಕೊಳ್ಳುವವರೆಗೂ ಸಮಯ ನೀಡಿ. ಆದರೆ, ನಿಮಗಾಗುತ್ತಿರುವ ಸಮಸ್ಯೆ ಬಗ್ಗೆ ಮುಕ್ತವಾಗಿ ಹೇಳಿಕೊಳ್ಳಿ. ಅವರಿಬ್ಬರ ನಡುವಿನ ಮೌನಕ್ಕೆ ಹಲವು ವ್ಯಾಖ್ಯಾನಗಳನ್ನು ನೀಡುವುದಕ್ಕಿಂತಲೂ ಚಿಂತೆ ಬಿಟ್ಟು ನಿಮ್ಮ ಬದುಕಿನ ಕಡೆಗೂ ಗಮನ ಕೊಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.