ADVERTISEMENT

Mahakumbh Mela | ಗಂಗಾ ಸ್ವಚ್ಛತೆಯ ಸವಾಲುಗಳೇನು?

ಚನ್ನಬಸಪ್ಪ ರೊಟ್ಟಿ
Published 6 ಫೆಬ್ರುವರಿ 2025, 0:30 IST
Last Updated 6 ಫೆಬ್ರುವರಿ 2025, 0:30 IST
<div class="paragraphs"><p>ಮಹಾಕುಂಭ ಮೇಳ</p></div>

ಮಹಾಕುಂಭ ಮೇಳ

   

ಈಗ ಎಲ್ಲೆಡೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ‘ಮಹಾಕುಂಭಮೇಳ’ದ್ದೇ ಸುದ್ದಿ. ಜನವರಿ 13ರಿಂದ ಫೆಬ್ರುವರಿ 26ರವರೆಗೆ 45 ದಿನ ನಡೆಯಲಿರುವ ಈ ಮೇಳ ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವ ಎಂಬ ಖ್ಯಾತಿ ಪಡೆದಿದೆ.

ಈ ಮಹಾ ಕುಂಭಮೇಳದಲ್ಲಿ ಅಂದಾಜು 45 ಕೋಟಿ ಸಂದರ್ಶಕರು ಮತ್ತು 50 ಲಕ್ಷ ‘ಕಲ್ಪವಾಸಿ’ (ಮಹಾ ಕುಂಭಮೇಳ ಮುಗಿಯುವವರೆಗೆ ಅದೇ ಸ್ಥಳದಲ್ಲಿಯೇ ನೆಲೆಸುವವರು) ಯಾತ್ರಿಕರು ಭೇಟಿ ನೀಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಮೇಳದ ಸಮರ್ಪಕ ನಿರ್ವಹಣೆಗಾಗಿ ‘ಮಹಾಕುಂಭ ನಗರ’ ಎಂಬ ಪ್ರತ್ಯೇಕ ಜಿಲ್ಲೆಯನ್ನೇ ಸ್ಥಾಪಿಸಲಾಗಿದೆ. 144 ವರ್ಷಗಳಿಗೆ ಒಮ್ಮೆ ನಡೆಯುವ ಈ ಮಹಾಕುಂಭಮೇಳ ಪೌರಾಣಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ.

ADVERTISEMENT

10 ಸಾವಿರ ಎಕರೆ ವಿಸ್ತೀರ್ಣದಲ್ಲಿ ಮಹಾಕುಂಭಮೇಳಕ್ಕೆ ಸಿದ್ಧತೆ ಕೈಗೊಳ್ಳಲಾಗಿದ್ದು, ಈ ಪ್ರದೇಶವನ್ನು 25 ವಲಯಗಳನ್ನಾಗಿ ವಿಂಗಡಿಸಲಾಗಿದೆ.

ಪ್ರಯಾಗ್‌ರಾಜ್‌ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳು ಇಲ್ಲಿಯೇ ಸಂಗಮಿಸುತ್ತವೆ ಎಂಬ ನಂಬಿಕೆ ಇದೆ. ಈ ಮೇಳದಲ್ಲಿ ಧಾರ್ಮಿಕ ಕಾರ್ಯಕ್ರಮದ ಜತೆಗೆ ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಲಾಗಿದೆ. ವಿದೇಶದಿಂದ ಬರುವ ಪ್ರವಾಸಿಗರು, ವಿದ್ವಾಂಸರು, ಸಂಶೋಧಕರು ಹಾಗೂ ಯಾತ್ರಿಕರಿಗಾಗಿ 5,000 ಚದರ ಅಡಿ ಜಾಗದಲ್ಲಿ ವಿಶೇಷ ವಸತಿ ವ್ಯವಸ್ಥೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಗಂಗಾ ನದಿ ಶುಚಿತ್ವದ ಕುರಿತು ಹಲವು ಸವಾಲುಗಳು ತಲೆದೋರಿವೆ. ಈ ಸವಾಲುಗಳ ಜತೆ ನದಿ ಮಾಲಿನ್ಯವನ್ನು ನಿರ್ವಹಿಸಲು ಸರ್ಕಾರ ಹತ್ತಾರು ಕ್ರಮಗಳನ್ನು ಕೈಗೊಂಡಿದೆ. ಆದರೂ ನದಿ ನೀರಿನ ಗುಣಮಟ್ಟದ ಬಗ್ಗೆ ಹಲವು ಕಳವಳಗಳು ಉಳಿದುಕೊಂಡಿವೆ.

ಮೇಳಕ್ಕೆ ಭೇಟಿ ನೀಡಿದ ಬೃಹತ್‌ ಜನಸಂಖ್ಯೆಯು ಪ್ರಯಾಗ್‌ರಾಜ್‌ ಪಟ್ಟಣದ ಒಟ್ಟು ಜನಸಂಖ್ಯೆಗಿಂತ ಸುಮಾರು 25ಪಟ್ಟು ಹೆಚ್ಚು. ಇದರಿಂದಾಗಿ ಪ್ರತಿನಿತ್ಯ ಮಾಲಿನ್ಯಯುಕ್ತ ಕೊಳಚೆನೀರಿನ ಉತ್ಪಾದನೆಯಲ್ಲಿ ಅಪಾರ ಹೆಚ್ಚಳ ಕಂಡುಬರುತ್ತದೆ.

ಮೇಳದ ಮುಖ್ಯ ಆಚರಣೆ ‘ಅಮೃತಸ್ನಾನ’ದ (ಶಾಹಿಸ್ನಾನ) ಇಲ್ಲಿಯವರೆಗಿನ ದಿನಗಳಲ್ಲಿ ಉತ್ಪತ್ತಿಯಾದ ಕೊಳಚೆನೀರು ಪ್ರತಿದಿನಕ್ಕೆ ಸರಿಸುಮಾರು 550 ಮಿಲಿಯನ್ ಲೀಟರ್‌ಗಳಿಗೆ ತಲುಪಿದೆ. ಜನವರಿ 13, 2025 (ಪುಷ್ಯ ಪೂರ್ಣಿಮೆ), ಜನವರಿ 14, 2025 (ಮಕರ ಸಂಕ್ರಮಣ), ಜನವರಿ 29, 2025 (ಮೌನಿ ಅಮಾವಾಸ್ಯೆ), ಫೆಬ್ರುವರಿ 3, 2025 (ವಸಂತ ಪಂಚಮಿ) ದಿನಗಳ ‘ಶಾಹಿಸ್ನಾನ’ದ ಮಹೂರ್ತ ಈಗಾಗಲೇ ಮುಗಿದಿದ್ದು, ಫೆಬ್ರುವರಿ 12, 2025 (ಮಾಘಿ ಪೂರ್ಣಿಮೆ) ಹಾಗೂ ಫೆಬ್ರುವರಿ 26, 2025 (ಶಿವರಾತ್ರಿ) ದಿನಗಳಂದು ‘ಶಾಹಿಸ್ನಾನ’ ನಡೆಯಲಿದೆ. ಈ ದಿನಗಳಂದು ಬಹುಪಾಲು ನೀರನ್ನು ಸಂಸ್ಕರಿಸದೇ ನೇರವಾಗಿ ಗಂಗಾ ನದಿಗೆ ಬಿಡುವುದರಿಂದ ಮಾಲಿನ್ಯ ಸಮಸ್ಯೆ ಉಲ್ಬಣಿಸಿದೆ. ಮಹಾಕುಂಭ ಮೇಳದ ಸಂದರ್ಭದಲ್ಲಿ ಪ್ರಯಾಗರಾಜ್ ಪ್ರತಿದಿನ ಸರಾಸರಿ 471.93 ಮಿಲಿಯನ್ ಲೀಟರ್ ಕೊಳಚೆ ನೀರನ್ನು ಉತ್ಪಾದಿಸುತ್ತಿದೆ. ಇದರಲ್ಲಿ 293 ಮಿಲಿಯನ್ ಲೀಟರ್ ಕೊಳಚೆ ನೀರು ನೇರವಾಗಿ ಗಂಗಾ ಮತ್ತು ಯಮುನಾ ನದಿಗಳಿಗೆ ಸೇರಿದರೆ, ಇನ್ನುಳಿದ 178.31 ದಶಲಕ್ಷ ಲೀಟರ್‌ ಕೊಳಚೆ ನೀರು ನಗರದಲ್ಲಿನ 81 ಚರಂಡಿಗಳಲ್ಲಿ ಹರಿಯುತ್ತದೆ.

ಸ್ವಚ್ಛತೆ ನಿರ್ವಹಣೆಯ ಕ್ರಮಗಳು

ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT: National Green Tribunal) ನೀಡಿದ ನಿರ್ದೇಶನದಂತೆ ಉತ್ತರ ಪ್ರದೇಶ ಸರ್ಕಾರ ಒಳಚರಂಡಿ ಸಂಸ್ಕರಣಾ ಪ್ರಕ್ರಿಯೆಗಳನ್ನು ಸುಧಾರಿಸಲು ಕ್ರಮ ಕೈಗೊಂಡಿದೆ. ಪ್ರಯಾಗರಾಜ್‌ ನಗರದಲ್ಲಿ ಸ್ಥಾಪಿಸಿರುವ ಹತ್ತು ಒಳಚರಂಡಿ ಸಂಸ್ಕರಣಾ ಘಟಕಗಳು (STPs) 81 ಚರಂಡಿಗಳಲ್ಲಿನ ಒಟ್ಟು 216.17 ಮಿಲಿಯನ್ ಲೀಟರ್ ಕೊಳಚೆನೀರನ್ನು ಸಂಸ್ಕರಿಸುತ್ತಿವೆ. ಆದರೆ, ಇದು ಅವುಗಳ ವಾಸ್ತವ ಸಾಮರ್ಥ್ಯ 43 ಮಿಲಿಯನ್ ಲೀಟರ್‌ ಅನ್ನು ಮೀರಿಸಿದೆ. ಈ ನಿಟ್ಟಿನಲ್ಲಿ ಮಹಾಕುಂಭ ನಗರ ನೆಲೆಗೊಂಡಿರುವ ಪ್ರದೇಶದಲ್ಲಿರುವ 22 ಒಳಚರಂಡಿಗಳಿಂದ ಪ್ರತಿದಿನ ಹೊರಬರುವ 60.80 ಮಿಲಿಯನ್ ಲೀಟರ್ ಕೊಳಚೆನೀರನ್ನು ಸ್ಥಳದಲ್ಲಿಯೇ ಸಂಸ್ಕರಿಸಲು ಉತ್ತರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದೆ.

ಮಹಾಕುಂಭ ನಗರದಲ್ಲಿ ಒಟ್ಟು 1.45 ಲಕ್ಷ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸೆಪ್ಟಿಕ್ ಟ್ಯಾಂಕ್‌ಗಳೊಂದಿಗೆ 15,000 ಫೈಬರ್–ರೀ ಇನ್‌ಫೋರ್ಸ್ಡ್ ಪಾಲಿಮರ್ (Fibre-reinforced polymer) ಶೌಚಾಲಯಗಳು ಮತ್ತು 22,000 ಪ್ರಿಫ್ಯಾಬ್ರಿಕೇಟೆಡ್ ಸ್ಟೀಲ್ ಟಾಯ್ಲೆಟ್‌ಗಳು ಇದರಲ್ಲಿ ಸೇರಿವೆ. ಸಾಧು–ಸಂತರು ನೆಲೆಗೊಂಡಿರುವ ಧಾರ್ಮಿಕ ಶಿಬಿರಗಳಲ್ಲಿ, ವಿಐಪಿ ಶಿಬಿರಗಳಲ್ಲಿ ವಿಶೇಷ ಟೆಂಟ್ ಮಾದರಿಯ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ. ಕೊಳಚೆ ನೀರು ಹರಿವಿಗಾಗಿ 200 ಕಿಲೋ ಮೀಟರ್‌ ಉದ್ದದ ತಾತ್ಕಾಲಿಕ ಒಳಚರಂಡಿ ವ್ಯವಸ್ಥೆಯನ್ನು ನಿರ್ಮಿಸಲಾಗಿದೆ.

ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ಗಂಗಾ ನದಿಯ ನೀರಿನ ಗುಣಮಟ್ಟವನ್ನು ಕಾಪಾಡಲು, ನೀರಿನ ಹರಿವನ್ನು ಹೆಚ್ಚಿಸುವುದು ಅಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಡಿಸೆಂಬರ್ 15 ರಿಂದಲೇ ತೆಹ್ರಿ ಅಣೆಕಟ್ಟಿನಿಂದ ಪ್ರತಿದಿನ 2,000 ಕ್ಯೂಸೆಕ್ ನೀರನ್ನು ಗಂಗಾ ನದಿಗೆ ಹೆಚ್ಚುವರಿಯಾಗಿ ಹರಿ ಬಿಡಲಾಗುತ್ತಿದೆ. ಇದಲ್ಲದೇ ವಿವಿಧ ಬ್ಯಾರೇಜ್‌ಗಳಿಂದಲೂ ಹೆಚ್ಚುವರಿ ನೀರನ್ನು ಗಂಗಾ ನದಿಗೆ ಹರಿಸಲಾಗುತ್ತಿದೆ.  ಇವೆಲ್ಲ ತಾತ್ಕಾಲಿಕ ಕ್ರಮಗಳಾಗಿದ್ದು, ದೀರ್ಘಕಾಲೀನ ಮಾಲಿನ್ಯ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ ಎಂಬ ಕಾಳಜಿಯನ್ನು ಪರಿಸರಪ್ರೇಮಿಗಳು ವ್ಯಕ್ತಪಡಿಸಿದ್ದಾರೆ.

ಹಸಿರೀಕರಣಕ್ಕೆ ‘ಮಿಯಾವಾಕಿ’ ತಂತ್ರ

ಮಹಾಕುಂಭ ಮೇಳದ ಹಿನ್ನೆಲೆಯಲ್ಲಿ, ಪ್ರಯಾಗ್‌ರಾಜ್‌ನಲ್ಲಿ ಪೂರ್ವಭಾವಿಯಾಗಿ ವ್ಯಾಪಕವಾದ ಹಸಿರೀಕರಣ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಕೋಟ್ಯಂತರ ಪ್ರವಾಸಿಗರಿಗೆ ಶುದ್ಧ ಗಾಳಿಯನ್ನು ಒದಗಿಸಲು ನಗರದ ಸುತ್ತ ಕಳೆದ ಎರಡು ವರ್ಷಗಳಲ್ಲಿ ದಟ್ಟವಾದ ಕಾಡುಗಳನ್ನು ಸೃಷ್ಟಿಸಲು ಪ್ರಯಾಗ್‌ರಾಜ್ ನಗರ ಪಾಲಿಕೆ ಜಪಾನನಲ್ಲಿ ಬಳಸುವ ‘ಮಿಯಾವಾಕಿ’ ತಂತ್ರವನ್ನು ಅನುಸರಿಸಿದೆ. ವ್ಯಾಪಕ ಪ್ರಯತ್ನಗಳಿಂದಾಗಿ ಪ್ರಯಾಗ್‌ರಾಜ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಚ್ಚ ಹಸಿರಿನ ಕಾಡುಗಳು ಕಂಡುಬರುತ್ತಿವೆ. ಪ್ರಯಾಗ್‌ರಾಜ್ ನಗರ ಪಾಲಿಕೆ ಒಟ್ಟು 55,800 ಚದರ ಮೀಟರ್‌ಗಳನ್ನು ಒಳಗೊಂಡಿರುವ ಹತ್ತು ಸ್ಥಳಗಳಲ್ಲಿ ‘ಮಿಯಾವಾಕಿ’ ತಂತ್ರದಡಿ ಮರಗಳನ್ನು ನೆಟ್ಟು ಬೆಳೆಸಿದೆ. ಪ್ರಯಾಗ್‌ರಾಜ್‌ನ ನೈನಿ ಕೈಗಾರಿಕಾ ಪ್ರದೇಶದಲ್ಲಿ ಅತಿದೊಡ್ಡ ನೆಡುತೋಪು ಬೆಳೆಸಲಾಗಿದ್ದು, ಅಲ್ಲಿ 63 ವಿವಿಧ ಜಾತಿಗಳ ಸುಮಾರು 1,20,000 ಮರಗಳನ್ನು ನೆಡಲಾಗಿದೆ. ಹೆಚ್ಚುವರಿಯಾಗಿ, ನಗರದ ಅತಿದೊಡ್ಡ ಕಸದ ಡಂಪಿಂಗ್ ಯಾರ್ಡ್ ಅನ್ನು ತೆರವುಗೊಳಿಸಿ ಅಲ್ಲಿ 27 ಜಾತಿಗಳ 27,000 ಮರಗಳನ್ನು ನೆಡಲಾಗಿದೆ.

‘ಮಿಯಾವಾಕಿ’ ತಂತ್ರವು ಸೀಮಿತ ಸ್ಥಳದಲ್ಲಿ ಹಾಗೂ ಶೀಘ್ರವಾಗಿ ದಟ್ಟ ಕಾಡುಗಳನ್ನು ಬೆಳೆಸುವ ವಿಧಾನವಾಗಿದೆ. 1970ರ ದಶಕದಲ್ಲಿ ‘ಅಕಿರಾ ಮಿಯಾವಾಕಿ’ ಈ ತಂತ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿಧಾನದಲ್ಲಿ ಮರದ ಬೆಳವಣಿಗೆ ವೇಗವಾಗಿದ್ದು, ಸಾಂಪ್ರದಾಯಿಕ ವಿಧಾನಗಳಿಗಿಂತ ಹತ್ತು ಪಟ್ಟು ವೇಗವಾಗಿ ಸಸ್ಯಗಳು ಬೆಳೆಯುತ್ತವೆ. ಈ ತಂತ್ರವು ವಿವಿಧ ಸ್ಥಳೀಯ ಜಾತಿಯ ಮರಗಳನ್ನು ಸಂಯೋಜಿಸುವ ಮೂಲಕ ನೈಸರ್ಗಿಕ ಕಾಡುಗಳ ಬೆಳವಣಿಗೆಗೆ ಪೂರಕವಾಗಿರುತ್ತದೆ ಹಾಗೂ ಸ್ಥಳೀಯ ಜೀವವೈವಿಧ್ಯವನ್ನು ಮತ್ತು ಮಣ್ಣಿನ ಗುಣಮಟ್ಟವನ್ನು ಸುಧಾರಿಸುತ್ತದೆ.

‘ಮಿಯಾವಾಕಿ’ ಅರಣ್ಯಗಳು ವಾಯು ಮತ್ತು ನೀರಿನ ಮಾಲಿನ್ಯವನ್ನು ಕಡಿಮೆ ಮಾಡಲು, ಮಣ್ಣಿನ ಸವೆತವನ್ನು ತಡೆಗಟ್ಟಲು ಮತ್ತು ಜೀವವೈವಿಧ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಈ ಕಾಡುಗಳು ತಾಪಮಾನವನ್ನು 4 ರಿಂದ 7 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆ ಮಾಡುತ್ತವೆ. ಇವು ಬೇಸಿಗೆಯಲ್ಲಿ ಶಾಖದ ಪರಿಣಾಮಗಳನ್ನು ತಗ್ಗಿಸುತ್ತವೆ. ಪ್ರಯಾಗ್‌ರಾಜ್‌ನಲ್ಲಿ ‘ಮಿಯಾವಾಕಿ’ ಅರಣ್ಯ ಯೋಜನೆಯಡಿ ವಿವಿಧ ಹಣ್ಣುಗಳ, ಔಷಧೀಯ ಮತ್ತು ಆಲಂಕಾರಿಕ ಸಸ್ಯಗಳನ್ನು ನೆಟ್ಟು ಬೆಳೆಸಲಾಗಿದೆ. ನೆಟ್ಟ ಪ್ರಮುಖ ಮರಗಳಲ್ಲಿ ಮಾವು, ಮಹುವಾ, ಬೇವು, ಅಶ್ವತ್ಥ, ಹುಣಸೆ, ತೇಗ, ದಾಸವಾಳ, ಬೌಗೆನ್ವಿಲ್ಲಾ, ಜಂಗಲ್ ಜಿಲೇಬಿ, ಬ್ರಾಹ್ಮಿ ಮತ್ತು ಬೆಟ್ಟದ ನೆಲ್ಲಿಕಾಯಿಯಂಥ ಸಸ್ಯಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.