ಭಾರತದಲ್ಲಿ ನಾಗರಿಕ ವಿಮಾನಯಾನವು ಒಂದು ಶತಮಾನಕ್ಕೂ ಹೆಚ್ಚು ಕಾಲದ ಪ್ರಯಾಣವನ್ನು ಪೂರೈಸಿದೆ. ವಿಮಾನಯಾನ ಉದ್ಯಮ ಬೆಳೆದಂತೆ, ಪೈಲಟ್‌ಗಳು, ಎಂಜಿನಿಯರ್‌ಗಳು ಮತ್ತು ಇತರ ಸಿಬ್ಬಂದಿಗೆ ತರಬೇತಿ ನೀಡುವ ಅಗತ್ಯವೂ ಹೆಚ್ಚಾಯಿತು. 1930-40ರ ದಶಕಗಳಲ್ಲಿ ಕೆಲವು ಫ್ಲೈಯಿಂಗ್ ಕ್ಲಬ್‌ಗಳು ಮತ್ತು ಸಣ್ಣ ತರಬೇತಿ ಶಾಲೆಗಳು ಆರಂಭವಾದವು. ಈ ಸಂಸ್ಥೆಗಳು ಪ್ರಾಥಮಿಕವಾಗಿ ಪೈಲಟ್‌ಗಳಿಗೆ ತರಬೇತಿ ನೀಡುತ್ತಿದ್ದವು.
ಈಗ ನಾಗರಿಕ ವಿಮಾನಯಾನ ಶಿಕ್ಷಣ ಮತ್ತು ತರಬೇತಿಯನ್ನು ನೀಡುವ ಹಲವಾರು ಪ್ರಸಿದ್ಧ ಕಾಲೇಜುಗಳು ಮತ್ತು ಸಂಸ್ಥೆಗಳಿವೆ.
ಪೈಲಟ್ ತರಬೇತಿ, ವಿಮಾನ ನಿರ್ವಹಣಾ ಎಂಜಿನಿಯರಿಂಗ್ (ಎಎಂಇ), ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ), ಕ್ಯಾಬಿನ್ ಸಿಬ್ಬಂದಿ, ಏರ್‌ಪೋರ್ಟ್ ಮ್ಯಾನೇಜ್‌ಮೆಂಟ್ ಮತ್ತು ಸಂಬಂಧಿತ ಕೋರ್ಸ್‌ಗಳನ್ನು ಇಲ್ಲಿ ನೀಡಲಾಗುತ್ತದೆ. ಕ್ಷೇತ್ರದಲ್ಲಿನ ನಿರಂತರ ಬೆಳವಣಿಗೆಯಿಂದಾಗಿ ಯುವಜನರಿಗೆ ಗುಣಮಟ್ಟದ ಶಿಕ್ಷಣ ಮತ್ತು ಉಜ್ವಲ ವೃತ್ತಿ ಅವಕಾಶಗಳು ದೊರಕುತ್ತಿವೆ.
ಇಂಡಿಯನ್ ಏವಿಯೇಷನ್ ಅಕಾಡೆಮಿ–ಐಎಎ:
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ), ಬ್ಯೂರೊ ಆಫ್ ಸಿವಿಲ್ ಏವಿಯೇಷನ್ ಸೆಕ್ಯೂರಿಟಿ (ಬಿಸಿಎಎಸ್) ಮತ್ತು ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಸಹಯೋಗದೊಂದಿಗೆ 2010ರಲ್ಲಿ ಸ್ಥಾಪಿಸಲಾದ ಐಎಎ, ವಿಮಾನಯಾನದ ವಿವಿಧ ವಿಭಾಗಗಳಲ್ಲಿ, ವಿಶೇಷವಾಗಿ ವಿಮಾನ ನಿಲ್ದಾಣ ನಿರ್ವಹಣೆ, ಸುರಕ್ಷತೆ ಮತ್ತು ಭದ್ರತೆಯಲ್ಲಿ ವೃತ್ತಿಪರ ತರಬೇತಿಯನ್ನು ನೀಡುತ್ತದೆ. ಕಾಲಾನಂತರದಲ್ಲಿ, ಕಮರ್ಷಿಯಲ್ ಪೈಲಟ್ ಲೈಸೆನ್ಸ್ (ಸಿಪಿಎಲ್) ಮತ್ತು ಪ್ರೈವೇಟ್ ಪೈಲಟ್ ಲೈಸೆನ್ಸ್ (ಪಿಪಿಎಲ್) ತರಬೇತಿಯನ್ನು ನೀಡುವ ಪೈಲಟ್ ತರಬೇತಿ ಸಂಸ್ಥೆಗಳು, ಎಎಂಇ, ಎಟಿಸಿ, ಕ್ಯಾಬಿನ್ ಸಿಬ್ಬಂದಿ ಮತ್ತು ವಿಮಾನ ನಿಲ್ದಾಣ ನಿರ್ವಹಣೆಗೆ ಸಂಬಂಧಿಸಿದ ಹಲವಾರು ಖಾಸಗಿ ಮತ್ತು ಸಾರ್ವಜನಿಕ ತರಬೇತಿ ಸಂಸ್ಥೆಗಳು ದೇಶದಾದ್ಯಂತ ಸ್ಥಾಪನೆಯಾದವು.
ಇಂದಿರಾ ಗಾಂಧಿ ರಾಷ್ಟ್ರೀಯ ಉಡಾನ್ ಅಕಾಡೆಮಿ, ಅಮೇಠಿ, ಉತ್ತರಪ್ರದೇಶ:
ಇದು, ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಅತ್ಯಂತ ಪ್ರತಿಷ್ಠಿತ ಮತ್ತು ಹಳೆಯ ಪೈಲಟ್ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ. ಇಲ್ಲಿ ಸುಧಾರಿತ ತರಬೇತಿ ಸೌಲಭ್ಯಗಳು, ಆಧುನಿಕ ಸಿಮ್ಯುಲೇಟರ್‌ಗಳು ಮತ್ತು ಉತ್ತಮ ತರಬೇತಿ ವಿಮಾನಗಳಿವೆ. ವಿವಿಧ ವಿಮಾನಯಾನ ಸಂಸ್ಥೆಗಳೊಂದಿಗೆ ಉತ್ತಮ ಸಹಯೋಗವಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ
ಗಳನ್ನು ಕಲ್ಪಿಸುತ್ತದೆ.
ರಾಜೀವ್ ಗಾಂಧಿ ನ್ಯಾಷನಲ್ ಏವಿಯೇಷನ್ ಯೂನಿವರ್ಸಿಟಿ, ಅಮೇಠಿ, ಉತ್ತರಪ್ರದೇಶ:
ವಿಮಾನಯಾನ ವಲಯಕ್ಕೆ ಮೀಸಲಾದ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ ಇದು. ಇಲ್ಲಿ ಪೈಲಟ್ ತರಬೇತಿ ಮಾತ್ರವಲ್ಲದೆ, ವಿಮಾನಯಾನ ನಿರ್ವಹಣೆ, ಏರ್‌ಪೋರ್ಟ್ ಗ್ರೌಂಡ್ ಟ್ರೈನಿಂಗ್, ಏವಿಯೇಷನ್ ಲಾಜಿಸ್ಟಿಕ್ಸ್‌ನಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳನ್ನು ನೀಡಲಾಗುತ್ತದೆ.
ಬಾಂಬೆ ಫ್ಲೈಯಿಂಗ್ ಕ್ಲಬ್ (ಬಿಎಫ್‌ಸಿ), ಮುಂಬೈ, ಮಹಾರಾಷ್ಟ್ರ:
1928ರಲ್ಲಿ ಸ್ಥಾಪಿತವಾದ ಬಿಎಫ್‌ಸಿ, ಪೈಲಟ್ ತರಬೇತಿಗೆ ಹೆಸರಾದ ಭಾರತದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಫ್ಲೈಯಿಂಗ್ ಕ್ಲಬ್‌ಗಳಲ್ಲಿ ಒಂದಾಗಿದೆ. ಜೆಆರ್‌ಡಿ ಟಾಟಾ ಅವರು ತಮ್ಮ ಮೊದಲ ವಿಮಾನ ಹಾರಾಟಕ್ಕಾಗಿ ಈ ಕ್ಲಬ್‌ನಲ್ಲಿ ತರಬೇತಿ ಪಡೆದಿದ್ದರು.
ಇಲ್ಲೂ ಕಲಿಯಬಹುದು:
ಮೈಸೂರಿನ ಓರಿಯಂಟ್ ಫ್ಲೈಟ್ಸ್ ಏವಿಯೇಷನ್ ಅಕಾಡೆಮಿ, ಮಧ್ಯಪ್ರದೇಶದ ಧನಾ ನಗರದ ಚೈಮ್ಸ್ ಏವಿಯೇಷನ್ ಅಕಾಡೆಮಿ, ಬೆಂಗಳೂರಿನ ಹಿಂದೂಸ್ತಾನ್ ಏವಿಯೇಷನ್ ಅಕಾಡೆಮಿ, ಅಹಮದಾಬಾದ್ ಏವಿಯೇಷನ್ & ಏರೋನಾಟಿಕ್ಸ್ ಲಿಮಿಟೆಡ್, ಹೈದರಾಬಾದ್‌ನ ಏಷ್ಯಾ ಪೆಸಿಫಿಕ್ ಫ್ಲೈಟ್ ಟ್ರೈನಿಂಗ್ ಅಕಾಡೆಮಿಯಲ್ಲಿ ಪೈಲಟ್ ತರಬೇತಿ ಜೊತೆಗೆ ಏರೊನಾಟಿಕಲ್ ಎಂಜಿನಿಯರಿಂಗ್, ಏರ್‌ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರಿಂಗ್ ಶಿಕ್ಷಣ, ಕ್ಯಾಡೆಟ್ ಪೈಲಟ್ ಪ್ರೋಗ್ರಾಂ, ಆಧುನಿಕ ಫ್ಲೀಟ್ ನಿರ್ವಹಣೆ ತರಬೇತಿ ನೀಡಲಾಗುತ್ತದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು ನೇರವಾಗಿ ‘ನಾಗರಿಕ ವಿಮಾನಯಾನ’ ಕೋರ್ಸ್‌ಗಳನ್ನು ಕಲಿಸದಿದ್ದರೂ ಪದವಿ ಮತ್ತು ಸ್ನಾತಕೋತ್ತರ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ವಿಶ್ವದರ್ಜೆಯ ಸಂಶೋಧನೆ ಮತ್ತು ಶಿಕ್ಷಣದ ಜೊತೆಗೆ ವಿಮಾನಯಾನ ನಿರ್ವಹಣೆ ಹಾಗೂ ವಿನ್ಯಾಸ ಕ್ಷೇತ್ರಕ್ಕೆ ಅಗತ್ಯವಾದ ಮೂಲಭೂತ ಜ್ಞಾನವನ್ನು ಒದಗಿಸುತ್ತದೆ.
ಚೆನ್ನೈನ ಹಿಂದೂಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಸೈನ್ಸ್, ದೆಹಲಿ ಮತ್ತು ರಾಜಸ್ಥಾನದ ನೀಮ್‌ರಾನಾದ ಸ್ಕೂಲ್ ಆಫ್ ಏರೊನಾಟಿಕ್ಸ್, ಪುಣೆ ಇನ್‌ಸ್ಟಿಟ್ಯೂಟ್ ಆಫ್ ಏವಿಯೇಷನ್ ಟೆಕ್ನಾಲಜಿ ಸಂಸ್ಥೆಗಳು ಏರ್‌ಕ್ರಾಫ್ಟ್ ಮೇಂಟೆನೆನ್ಸ್ ಎಂಜಿನಿಯರಿಂಗ್, ಏರೊನಾಟಿಕಲ್ ಎಂಜಿನಿಯರಿಂಗ್ ಮತ್ತು ವಿಮಾನಯಾನ ಸಂಬಂಧಿತ ಕೋರ್ಸ್‌ಗಳಿಗೆ ಹೆಸರಾಗಿವೆ. ನೋಯ್ಡಾದ ಅಮಿಟಿ ಮತ್ತು ಗಾಲ್ಗೋಟಿಯಾಸ್
ವಿಶ್ವವಿದ್ಯಾಲಯಗಳು, ಬೆಂಗಳೂರಿನ ಅನೇಕ ಪದವಿ ಕಾಲೇಜುಗಳು, ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಏವಿಯೇಷನ್ ಮ್ಯಾನೇಜ್‌ಮೆಂಟ್, ಏರ್‌ಲೈನ್ ಆಪರೇಷನ್ಸ್ ವಿಷಯಗಳಲ್ಲಿ ಪದವಿ ಕೋರ್ಸ್‌ಗಳನ್ನು ನೀಡುತ್ತವೆ.
ತರಬೇತಿಗೆ ಸೇರುವ ಮುನ್ನ...
ಯಾವುದೇ ವಿಮಾನಯಾನ ಶಿಕ್ಷಣ ಸಂಸ್ಥೆಗೆ ಸೇರುವ ಮೊದಲು, ಅದು ಡಿಜಿಸಿಎಯಿಂದ ಅನುಮೋದಿತವಾಗಿದೆಯೇ ಎಂದು ವೆಬ್‌ಸೈಟ್‌ನಲ್ಲಿ ಖಚಿತಪಡಿಸಿಕೊಳ್ಳುವುದು ಅತಿ ಮುಖ್ಯ.
ಶೈಕ್ಷಣಿಕ ಅರ್ಹತೆ:
ಪೈಲಟ್ ಮತ್ತು ಎಎಂಇ ಕೋರ್ಸ್‌ಗಳಿಗೆ ಪಿಯುಸಿ (10+2) ವಿಜ್ಞಾನ ವಿಭಾಗದ ಗಣಿತ, ಭೌತ ವಿಜ್ಞಾನ ವಿಷಯಗಳಲ್ಲಿ ಕನಿಷ್ಠ ಶೇ 50 ಅಂಕಗಳೊಂದಿಗೆ ಉತ್ತೀರ್ಣರಾಗಿರ
ಬೇಕು. ಎಟಿಸಿ, ಕ್ಯಾಬಿನ್ ಸಿಬ್ಬಂದಿ, ಏರ್‌ಪೋರ್ಟ್ ಮ್ಯಾನೇಜ್‌ಮೆಂಟ್ ವೃತ್ತಿಗಳಿಗೆಪಿಯುಸಿ (10+2) ಅಥವಾ ಪದವಿಯಲ್ಲಿ ಗಣಿತ, ಭೌತವಿಜ್ಞಾನ ವಿಷಯಗಳನ್ನು ಅಧ್ಯಯನ ಮಾಡಿರಬೇಕು. ಸಂಬಂಧಿತ ಡಿಪ್ಲೊಮಾ ಅಥವಾ ಪದವಿ ಕೋರ್ಸ್ ಮುಗಿಸಿದ್ದರೆ ಅನುಕೂಲ.
ವಯಸ್ಸು 17-30 ವರ್ಷಗಳ ನಡುವೆ ಇರಬೇಕು. ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹೊಂದಿರಬೇಕಾದುದು ಕಡ್ಡಾಯ. ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿಗೆ ಉತ್ತಮ ದೃಷ್ಟಿ, ಬಣ್ಣ ಗುರುತಿಸುವಿಕೆ, ಉತ್ತಮ ಶ್ರವಣ ಸಾಮರ್ಥ್ಯ ಇರಲೇಬೇಕು. ಕ್ಯಾಬಿನ್ ಸಿಬ್ಬಂದಿಯಾಗಲು ಕನಿಷ್ಠ 155 ಸೆಂ.ಮೀ. ಎತ್ತರ ಇರಬೇಕು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಒಳ್ಳೆಯ ಸಂವಹನ ಕೌಶಲ ಇರಬೇಕಾದುದು ಕಡ್ಡಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.