ADVERTISEMENT

ಕಾಕ್‌ಟೇಲ್‌, ಮಾಕ್‌ಟೇಲ್‌ ಸಿದ್ಧಪಡಿಸುವ ಕೌಶಲ ಕಲಿಸಲು ಇವೆ ಕೋರ್ಸ್‌ಗಳು

ವಿಜಯ್ ಜೋಷಿ
Published 24 ಆಗಸ್ಟ್ 2025, 23:54 IST
Last Updated 24 ಆಗಸ್ಟ್ 2025, 23:54 IST
   

ಮಹಾನಗರಗಳ ವೈಭವೋಪೇತ ಬಾರ್‌ಗಳಲ್ಲಿ ಬಗೆಬಗೆಯ ಪಾನೀಯಗಳನ್ನು ಬೆರೆಸಿ ಕಾಕ್‌ಟೇಲ್‌, ಮಾಕ್‌ಟೇಲ್‌ಗಳನ್ನು ಚೆಂದಕ್ಕೆ ಸಿದ್ಧಪಡಿಸಿ, ಪಾನಪ್ರಿಯರನ್ನು ಖುಷಿಪಡಿಸಲು ಯತ್ನಿಸುವ ಬಾರ್ಟೆಂಡರ್‌ಗಳದ್ದು ಬೇರೆಯದೇ ಜಗತ್ತು. ಪಾನಗೃಹ ಪರಿಚಾರಕರು ಈಗ ಉತ್ತಮ ವೇತನವನ್ನು ನಿರೀಕ್ಷಿಸ ಬಹುದು, ಬಾರ್ಟೆಂಡಿಂಗ್ ಕೆಲಸಕ್ಕೆ ಅಗತ್ಯವಿರುವ ಕೌಶಲಗಳನ್ನು ಕಲಿಸಲು ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮುಂದೆ ಬರುತ್ತಿವೆ ಎಂದು ಹೇಳುತ್ತಿದ್ದಾರೆ ಈ ಕ್ಷೇತ್ರದ ಅನುಭವಿಗಳು.

ಬಾರ್ಟೆಂಡಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಪಂಕಜ್ ಬಾಲಚಂದ್ರನ್ ಅವರು ಬೆಂಗಳೂರಿನಲ್ಲಿ ಈಚೆಗೆ ನಡೆದ ‘ಅಲ್ಟಿಮೇಟ್ ಬಾರ್ಟೆಂಡರ್ ಚಾಂಪಿಯನ್‌ಷಿಪ್‌’ನ ಹೋಸ್ಟ್‌ ಆಗಿ ಭಾಗಿಯಾಗಿದ್ದರು. ತಮ್ಮ ವೃತ್ತಿಯ ಬಗ್ಗೆ, ವೃತ್ತಿಯನ್ನು ಸಮಾಜವು ಈಗ ನೋಡುತ್ತಿರುವ ಬಗೆಯ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಮಾತನಾಡಿದರು.

‘ಬಾರ್ಟೆಂಡರ್‌ ಆಗಿ ಕೆಲಸ ಮಾಡುವವರಿಗೆ ಇಂದು ಉತ್ತಮ ವೇತನ ಸಿಗುತ್ತಿದೆ. 22 ವರ್ಷ ವಯಸ್ಸಿನ ಬಾರ್ಟೆಂಡರ್‌, ಇತರ ಕೆಲವು ಉದ್ಯೋಗಗಳಲ್ಲಿ ತೊಡಗಿಕೊಂಡಿರುವ ತನ್ನದೇ ವಯಸ್ಸಿನವರಿಗಿಂತ ಹೆಚ್ಚು ವೇತನ ಪಡೆಯಬಲ್ಲ. ಬಾರ್ಟೆಂಡಿಂಗ್ ಈಗ ಒಂದು ಐಷಾರಾಮಿ ವೃತ್ತಿಯಂತೆ ಆಗಿದೆ. ಈ ವೃತ್ತಿಯಲ್ಲಿ ತೊಡಗಿಕೊಂಡವರು ಪ್ರವಾಸ ಕೈಗೊಳ್ಳುವ, ಬೇರೆ ಬೇರೆ ಜನರನ್ನು ಭೇಟಿ ಮಾಡುವ ಅವಕಾಶ ಗಿಟ್ಟಿಸಿಕೊಳ್ಳಬಹುದು. ಇಂದು ಆಹಾರ ಮತ್ತು ಪಾನೀಯ ಕ್ಷೇತ್ರದ ಮೇಲೆ ಹೂಡಿಕೆ ಮಾಡಲು ಹಲವರು ಬಯಸುತ್ತಿದ್ದಾರೆ’ ಎಂದು ಅವರು ಮಾತಿನ ಆರಂಭದಲ್ಲಿ ಹೇಳಿದರು.

ADVERTISEMENT

‘ಐಎಚ್‌ಎಂ ಕೇಟರಿಂಗ್‌ ಕಾಲೇಜಿನಂತಹ ಸಂಸ್ಥೆಗಳು ಈ ವೃತ್ತಿಗೆ ಬರುವವರಿಗೆ ಆರಂಭಿಕ ಹೆಜ್ಜೆ ಇರಿಸಲು ತರಬೇತಿ ನೀಡುತ್ತವೆ. ಇಲ್ಲಿ ಆತಿಥ್ಯ, ಆಹಾರ ಮತ್ತು ಪಾನೀಯ, ಪಾಕಶಾಲೆಯ ಬಗ್ಗೆ ತರಬೇತಿ ಇರುತ್ತದೆ. ಆದರೆ ಬಾರ್‌ಗೆ ಸಂಬಂಧಿಸಿದ ವಿಶೇಷ ತರಬೇತಿ ಬಯಸಿದರೆ ಯುರೋಪಿಯನ್‌ ಬಾರ್ಟೆಂಡಿಂಗ್‌ ಸ್ಕೂಲ್‌ನಂತಹ ಸಂಸ್ಥೆಗಳಲ್ಲಿ ಅಗತ್ಯ ತರಬೇತಿ ಸಿಗುತ್ತದೆ. ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಈ ಸ್ಕೂಲ್‌ ಇದೆ’ ಎಂದರು ಪಂಕಜ್.

‘ಬಾರ್ಟೆಂಡಿಂಗ್ ವೃತ್ತಿಯನ್ನು ಕಲಿಸಲು ಹಲವು ಶಿಕ್ಷಣ ಸಂಸ್ಥೆಗಳು ಇದ್ದರೂ, ಅನುಭವಿ ಬಾರ್ಟೆಂಡರ್‌ಗಳ ಜೊತೆ ಕೆಲಸ ಮಾಡುವುದು ಹೆಚ್ಚು ಉತ್ತಮ. ಆದರೆ, ದೇಶದ ಮುಂಚೂಣಿ ಬಾರ್‌ಗಳು ಇಂತಹ ಶಿಕ್ಷಣ ಸಂಸ್ಥೆಗಳಿಂದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿವೆ’ ಎಂದು ಅವರು ತಿಳಿಸಿದರು.

ಅವರು ಹೇಳುವ ಪ್ರಕಾರ, ಬಾರ್ಟೆಂಡಿಂಗ್ ವೃತ್ತಿಯಲ್ಲಿ ನಿಪುಣರಿಗೆ ಬೇಡಿಕೆ ಇದೆ, ಆದರೆ ಅಂಥವರು ಸಿಗುತ್ತಿಲ್ಲ. ‘ಇಲ್ಲಿ ಬಹಳ ಕಿರಿಯ ವಯಸ್ಸಿನವರಿಗೂ ಒಳ್ಳೆಯ ವೇತನ ನೀಡಲಾಗುತ್ತಿದೆ. ಇದರ ಪರಿಣಾಮವಾಗಿ, ಕೆಲವು ಬಾರ್‌ಗಳಿಗೆ ಪ್ರತಿಭಾವಂತ ರನ್ನು ದೊಡ್ಡ ವೇತನ ಕೊಟ್ಟು ನೇಮಿಸಿಕೊಳ್ಳಲು ಆಗದಂತಹ ಸ್ಥಿತಿಯೂ ಇದೆ’ ಎಂದರು.

‘ಈ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗಿ ಇವೆ ಎಂಬುದನ್ನು ಜನ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬಾರ್ಟೆಂಡಿಂಗ್ ವೃತ್ತಿಗೆ ನಿಪುಣರು ಹೆಚ್ಚಾಗಿ ಸಿಗಬಹುದು. ಹಿಂದೆಲ್ಲ, ಭಾರತದಲ್ಲಿ ಕೆಲವು ವರ್ಷ ಕೆಲಸ ಮಾಡಿದ ನಂತರ ಬಾರ್ಟೆಂಡರ್‌ಗಳು ವಿದೇಶಗಳಿಗೆ ತೆರಳುತ್ತಿದ್ದರು. ಇದು ಈಗ ಬದಲಾಗುತ್ತಿದೆ. ಜನ ದುಬೈ, ಸಿಂಗಪುರದಲ್ಲಿ ಬಾರ್ಟೆಂಡರ್ ಆಗಿ ಕೆಲಸ ಮಾಡಿ, ಅನುಭವ ಸಂಪಾದಿಸಿ ಭಾರತಕ್ಕೆ ಮರಳುತ್ತಿದ್ದಾರೆ’ ಎಂದು ಮಾಹಿತಿ ನೀಡಿದರು.

‘ನಾನು ಈ ವೃತ್ತಿಯಲ್ಲಿ ಈಗ ಒಂದೂವರೆ ದಶಕದಿಂದ ಇದ್ದೇನೆ. ನಾನು ಕೆಲಸ ಶುರುಮಾಡಿದ್ದು ಇನ್ನೇನೋ ಆಗಿ, ನಂತರದ ದಿನಗಳಲ್ಲಿ ಈ ವೃತ್ತಿಯತ್ತ ಬಂದೆ. ಈಗ ನಾನು ಏಷ್ಯಾದ ಅತ್ಯುತ್ತಮ ಬಾರ್‌ಗಳಲ್ಲಿ ಒಂದನ್ನು ನಡೆಸುತ್ತಿದ್ದೇನೆ. ಬೇರೆ ಬೇರೆ ಬ್ರ್ಯಾಂಡ್‌ಗಳ ಜೊತೆ ಕೆಲಸ ಮಾಡುತ್ತೇನೆ. ಕಾಕ್‌ಟೇಲ್‌ ಮಾಡುವ, ಅದಕ್ಕೆ ಸಂಬಂಧಿಸಿದ ಇತರ ಕೆಲವು ಕೆಲಸಗಳನ್ನು ಮಾಡುತ್ತೇನೆ. ಬೇರೆಯವರಿಗಾಗಿ ನಮ್ಮ ಕನ್ಸಲ್ಟಿಂಗ್ ವಿಭಾಗದ ಮೂಲಕ ಉತ್ತಮ ಬಾರ್ ಕಟ್ಟಿಕೊಡುವ ಕೆಲಸವನ್ನೂ ಮಾಡುತ್ತೇನೆ’ ಎಂದು ಹೇಳಿದರು.

ಸಾಂಸ್ಕೃತಿಕವಾಗಿ ಬಹಳಷ್ಟು ಬದಲಾವಣೆಗಳು ಆಗಿವೆ. ನಾನು ಈ ವೃತ್ತಿಯಲ್ಲಿ ತೊಡಗಿದಾಗ ನನ್ನ ಕುಟುಂಬದಲ್ಲಿ ಕೆಲವರು ಅಪಸ್ವರ ಎತ್ತಿದ್ದರು. ಆದರೆ ಅವರೇ ಈಗ ನನ್ನ ಸಾಧನೆ ನೋಡಿ ಮೆಚ್ಚಿದ್ದಾರೆ. ಹಿಂದಿನ ಕೆಲವು ವರ್ಷಗಳಲ್ಲಿ ಸಮಾಜದಲ್ಲಿ ಬದಲಾವಣೆ ಆಗಿದೆ. ಈ ವೃತ್ತಿಯಲ್ಲಿ ಮಹಿಳೆಯರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.
– ಪಂಕಜ್ ಬಾಲಚಂದ್ರನ್, ಬಾರ್ಟೆಂಡರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.