ADVERTISEMENT

ಶಿಕ್ಷಣ: ಸಾಧಕ ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸದ ಭಾಗ್ಯ

ಎ.ಎಂ.ಸುರೇಶ
Published 12 ಅಕ್ಟೋಬರ್ 2025, 23:30 IST
Last Updated 12 ಅಕ್ಟೋಬರ್ 2025, 23:30 IST
<div class="paragraphs"><p>ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ತಂಡ ಲಂಡನ್‌ನ ಕಲಾ ಗ್ಯಾಲರಿಯ ಮುಂದೆ</p></div>

ಶೈಕ್ಷಣಿಕ ಪ್ರವಾಸಕ್ಕೆ ತೆರಳಿದ್ದ ತಂಡ ಲಂಡನ್‌ನ ಕಲಾ ಗ್ಯಾಲರಿಯ ಮುಂದೆ

   

‘ಮುಂದೊಂದು ದಿನ ಬ್ರಿಟನ್‌ನ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಬೇಕು ಎಂದು ಕನಸು ಕಾಣುತ್ತಿದ್ದೇವೆ. ಅಲ್ಲಿನ ಶಿಕ್ಷಣ ಪದ್ಧತಿ ನೋಡಿದ ಮೇಲೆ ಉನ್ನತ ವ್ಯಾಸಂಗಕ್ಕೆ ಅಲ್ಲಿಗೇ ಹೋಗಬೇಕು ಎಂಬ ಆಸೆ ನಮ್ಮಲ್ಲೂ ಬಂದಿದೆ’– ‘ವಿದೇಶಿ ವಿನಿಮಯ’ ಕಾರ್ಯಕ್ರಮದಡಿ ಒಂದು ವಾರ ಬ್ರಿಟನ್‌ ಪ್ರವಾಸ ಕೈಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆ ಕಮ್ಮಾಜೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಕೀರ್ತನ್‌ ಮತ್ತು ಕಿರಣ್‌ಕುಮಾರ್‌ ಅವರ ಮಾತುಗಳಿವು.

ಎಸ್‌ಎಸ್‌ಎಲ್‌ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದಿರುವ ಇವರಿಬ್ಬರ ಜೊತೆಗೆ, ಅಶ್ವಿನಿ ಹಾಗೂ ಸವಿತಾ ಮಹದೇವಪ್ಪ ತಪಾಲ್‌ (ಬೆಳಗಾವಿ ಜಿಲ್ಲೆ ನಿಡಸೋಶಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ) ಅವರನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಸೆಪ್ಟೆಂಬರ್‌ನಲ್ಲಿ ಈ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು.

ADVERTISEMENT

ಇವರೊಂದಿಗೆ ತುಮಕೂರು ಜಿಲ್ಲೆಯ ಭುವನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಜಿ.ಎನ್‌.ರೂಪಾ, ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ತಾಲ್ಲೂಕು ಅಭಿವೃದ್ಧಿ ಅಧಿಕಾರಿ ನಾಗರಾಜ ಟಿ.ಪೂಜಾರ ಸಹ ತೆರಳಿದ್ದರು.

‘ಬ್ರಿಟನ್‌ನಲ್ಲಿ ಥಿಯರಿಗಿಂತ ಪ್ರಾಯೋಗಿಕವಾಗಿ ಕಲಿಯುವ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಾರೆ. ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳೇ ತರಗತಿಯಲ್ಲಿ ವಿವರಣೆ ನೀಡಬೇಕು. ಇದರಿಂದ ಮಕ್ಕಳು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂಬುದು ಶಿಕ್ಷಕರಿಗೆ ಗೊತ್ತಾಗುತ್ತದೆ. ಈ ಪದ್ಧತಿ ನನಗೆ ಇಷ್ಟವಾಯಿತು’ ಎನ್ನುತ್ತಾರೆ ಕೀರ್ತನ್‌.

‘ಅಲ್ಲಿ ಸರ್ಕಾರಿ ಶಾಲೆಗಳಿಗೂ, ಖಾಸಗಿ ಶಾಲೆಗಳಿಗೂ ಅಂತಹ ವ್ಯತ್ಯಾಸ ಇರುವು‌ದಿಲ್ಲ. ಖಾಸಗಿ ಶಾಲೆಗಳಲ್ಲಿ ಪಠ್ಯಕ್ರಮ ಸ್ವಲ್ಪ ಜಾಸ್ತಿ ಇರುತ್ತದೆ ಅಷ್ಟೆ’ ಎನ್ನುತ್ತಾರೆ ಕಿರಣ್‌ಕುಮಾರ್‌.

‘ಅಲ್ಲಿಗೆ ಹೋಗಿ ನೋಡಿದ ಮೇಲೆ, ಧೈರ್ಯದಿಂದ ಮಾತನಾಡಬೇಕು, ಯಾರನ್ನೂ ಅವಲಂಬಿಸಬಾರದು ಎಂಬುದು ಅರಿವಿಗೆ ಬಂದಿದೆ. ತಂತ್ರಜ್ಞಾನ ಆಧಾರಿತ ಕಲಿಕೆ ಬ್ರಿಟನ್‌ನಲ್ಲಿ ಇದೆ. ಅಲ್ಲಿನ ವಿಶ್ವವಿದ್ಯಾಲಯಗಳನ್ನು ನೋಡಿ ಖುಷಿಯಾಯಿತು’ ಎನ್ನುತ್ತಾರೆ ಗದಗ ಜಿಲ್ಲೆ ಮಲ್ಲಸಮುದ್ರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅಶ್ವಿನಿ ಹನುಮಂತಪ್ಪ ಲಮಾಣಿ.

‘ಬೆಂಗಳೂರಿಗೂ ಬರಲು ಸಾಧ್ಯವಿಲ್ಲದಂತಹ ನಾಲ್ವರು ವಿದ್ಯಾರ್ಥಿಗಳಿಗೆ ಮೊದಲ ಬಾರಿ ವಿದೇಶ ಪ್ರವಾಸದ ಅವಕಾಶ ಒದಗಿಬಂದಿತ್ತು. ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ, ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್‌, ಅಂಬೇಡ್ಕರ್‌ ಲಂಡನ್‌ನಲ್ಲಿ ಓದುವಾಗ ವಾಸ ಮಾಡುತ್ತಿದ್ದ ಮನೆ (ಈಗ ಮ್ಯೂಸಿಯಂ ಆಗಿದೆ), ಬ್ರಿಟನ್‌ ಪಾರ್ಲಿಮೆಂಟ್‌, ರಾಣಿಯ ಅರಮನೆ ಎಲ್ಲವನ್ನೂ ನೋಡಿದ ಮೇಲೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಬಂದಿದೆ’ ಎನ್ನುತ್ತಾರೆ ರೂಪಾ.

ಸ್ಕಾಟ್ಲೆಂಡ್‌ ರಾಜಧಾನಿ ಎಡಿನ್‌ಬರೊ, ಅಲ್ಲಿನ ಸಂಸತ್‌, ಶಾಲಾ–ಕಾಲೇಜುಗಳಲ್ಲಿನ ಶಿಕ್ಷಣ, ಪರೀಕ್ಷಾ ಪದ್ಧತಿ, ಅರ್ಥಶಾಸ್ತ್ರದ ಪಿತಾಮಹ ಆ್ಯಡಂ ಸ್ಮಿತ್‌ ವಾಸಿಸುತ್ತಿದ್ದ ಮನೆ, ರಾಜರ ಆಳ್ವಿಕೆ, ಎಡಿನ್‌ಬರೊ ಕೋಟೆಯಂತಹವುಗಳ ಬಗ್ಗೆ ತಿಳಿಯಲು ಅನುಕೂಲವಾಯಿತು. ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರು ವ್ಯಾಸಂಗ ಮಾಡಿದ್ದ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ, ಅಲ್ಲಿನ ಗ್ರಂಥಾಲಯ, ಸಭಾಂಗಣವನ್ನು ನೋಡಿ ವಿದ್ಯಾರ್ಥಿಗಳು ಖುಷಿಪಟ್ಟರು. ‘ಪ್ರಬುದ್ಧ’ ಯೋಜನೆಯಡಿ ಮ್ಯಾಂಚೆಸ್ಟರ್‌ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ನಡೆಸಲಾಯಿತು. ಇದರಿಂದ ಹಲವಾರು ವಿಷಯಗಳನ್ನು ನಮ್ಮ ವಿದ್ಯಾರ್ಥಿಗಳು ತಿಳಿದುಕೊಂಡರು. ಇದು ಹೆಮ್ಮೆಯ ವಿಷಯ ಎಂಬುದು ರೂಪಾ ಅವರ ಅನಿಸಿಕೆ.

ಆಯ್ಕೆ ಹೇಗೆ?


ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಬರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ 2024ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು, ಪ್ರಸ್ತುತ ವಸತಿ ಕಾಲೇಜಿನಲ್ಲೇ ಪಿಯುಸಿ ಓದುತ್ತಿರಬೇಕು ಎಂಬ ಷರತ್ತಿನೊಂದಿಗೆ ನಾಲ್ವರು ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಆಯ್ಕೆ ಮಾಡಲಾಗಿತ್ತು.
ಇದರಲ್ಲಿ ಇಬ್ಬರು ಬಾಲಕರು, ಇಬ್ಬರು ಬಾಲಕಿಯರು. ಇವರೆಲ್ಲ ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ಸೇರಿದವರು. ಇದಲ್ಲದೆ ಮೂರು ವರ್ಷಗಳಿಂದ ಅತ್ಯುತ್ತಮ ಫಲಿತಾಂಶ ಬರಲು ಶ್ರಮಿಸಿದ  ಒಬ್ಬ ಮಹಿಳಾ ಪ್ರಾಂಶುಪಾಲರಿಗೆ ಪ್ರವಾಸಕ್ಕೆ ಹೋಗಲು ಅವಕಾಶ ಕಲ್ಪಿಸಲಾಗಿತ್ತು. ಬೇರೆಯವರಿಗೆ ಇದು ಪ್ರೇರಣೆಯಾಗಲಿದೆ ಎಂಬುದು ಈ ಆಯ್ಕೆ ಮತ್ತು ಪ್ರವಾಸದ ಮುಖ್ಯ ಉದ್ದೇಶ.

ಅಂಬೇಡ್ಕರ್ ಅವರ ಶೈಕ್ಷಣಿಕ ಪಯಣ ಮತ್ತು ಅವರ ಚಿಂತನೆಯನ್ನು ರೂಪಿಸಿದ ಸಂಸ್ಥೆಗಳ ಬಗ್ಗೆ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ತಿಳಿಯಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಪ್ರವಾಸ  ಆಯೋಜಿಸಲಾಗಿತ್ತು. ಇದು ಮೊದಲ ಪ್ರವಾಸವಾಗಿದ್ದು, ಇನ್ನು ಮುಂದೆ ಪ್ರತಿ ವರ್ಷ ಈ ಕಾರ್ಯಕ್ರಮ ಆಯೋಜಿಸುವ ಉದ್ದೇಶವನ್ನು ಸಮಾಜ ಕಲ್ಯಾಣ ಇಲಾಖೆ ಹೊಂದಿದೆ.

ಶಾಲೆಗಳು ಉನ್ನತ ಶೈಕ್ಷಣಿಕ ಗುರಿಗಳನ್ನು ಹೊಂದಲು, ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಪ್ರೋತ್ಸಾಹಿಸಲು ಇದು ನೆರವಾಗಲಿದೆ. ಅಲ್ಲದೆ ಜಾಗತಿಕ ಶಿಕ್ಷಣ, ಶೈಕ್ಷಣಿಕ ವ್ಯವಸ್ಥೆ ಮತ್ತು ಸಂಪನ್ಮೂಲಗಳ ಬಗ್ಗೆ ತಿಳಿಯಲು ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ. ಶಿಕ್ಷಣದಲ್ಲಿ ಬ್ರಿಟನ್‌ ಬಹಳ ಮುಂದೆ ಇದೆ. ನಮ್ಮಲ್ಲೂ ಬದಲಾವಣೆ ಆಗಬೇಕು.
–ಜಿ.ಎನ್‌.ರೂಪಾ, ಪ್ರಾಂಶುಪಾಲರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.