ADVERTISEMENT

ಸಮಾಧಾನ ಅಂಕಣ: ಪರೀಕ್ಷೆ ಭಯಕ್ಕೆ ಮದುವೆಯ ಬಯಕೆ?!

ಡಿ.ಎಂ.ಹೆಗಡೆ
Published 8 ಫೆಬ್ರುವರಿ 2026, 23:30 IST
Last Updated 8 ಫೆಬ್ರುವರಿ 2026, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

(ಎಐ ಚಿತ್ರ)

ನಾನೀಗ 9ನೇ ತರಗತಿಯಲ್ಲಿದ್ದೇನೆ. ನನಗೆ ಓದಿನಲ್ಲಿ ಆಸಕ್ತಿ ಇಲ್ಲ. ಶ್ರದ್ಧೆಯಿಂದ ಓದು, ಒಳ್ಳೆಯ ನೌಕರಿ ಸೇರಿಕೊಂಡು ಸುಖವಾಗಿರುವೆಯಂತೆ ಎನ್ನುವ ಪಾಲಕರ ಒತ್ತಾಯದಿಂದ ಬೇಸತ್ತಿದ್ದೇನೆ. ಇತ್ತೀಚೆಗೆ ನನಗೆ ಊಟ ಕೂಡ ಸೇರುತ್ತಿಲ್ಲ. ಡಾನ್ಸ್ ಕಲಿಯುತ್ತಿದ್ದೇನೆ. ಹಾಡುತ್ತೇನೆ. ನಾನು ತುಂಬಾ ತೆಳ್ಳಗಿದ್ದೇನೆ. ಬೇಗ ದಪ್ಪಗಾಗಬೇಕು, ಸೀರೆಯಲ್ಲಿ ಚೆನ್ನಾಗಿ ಕಾಣಬೇಕು ಅಂತ ಆಸೆ. ನಾನು ಪ್ರೀತಿಸುತ್ತಿರುವ ಹುಡುಗ ಎಂಜಿನಿಯರಿಂಗ್ ಓದುತ್ತಿದ್ದಾನೆ. ತನ್ನ ಓದು ಮುಗಿದ ನಂತರ ಮದುವೆಯಾಗೋಣ ಅನ್ನುತ್ತಿದ್ದಾನೆ. ನನಗೆ ಅಷ್ಟರವರೆಗೆ ಕಾಯುವ ತಾಳ್ಮೆ ಇಲ್ಲ. ನನಗೆ ಬೇಗನೇ ಮದುವೆಯಾಗಿ ಹೋಗಬೇಕು, ಬೇಗ ಬೇಗನೇ ಆರೆಂಟು ಮಕ್ಕಳನ್ನು ಹೆರಬೇಕು, ಅವರನ್ನೆಲ್ಲ ದೇಶಸೇವೆಗೆ ಕಳಿಸಬೇಕು ಎನ್ನುವ ಆಸೆ ಜಾಸ್ತಿಯಾಗುತ್ತಿದೆ. ಆದರೆ ಏನಾದರೂ ತೊಂದರೆಯಾಗಬಹುದು ಅಂತ ಭಯವೂ ಇದೆ. ನಾನೇನು ಮಾಡಬೇಕು ತಿಳಿಯುತ್ತಿಲ್ಲ. ಹುಚ್ಚೇ ಹಿಡಿದಂತಾಗಿದೆ. ದಾರಿ ತೋರಿಸಿ. 

ಸೀತಾ ಕಲ್ಯಾಣಕರ್, ಕುಮಟಾ

ಸೀತಾ, ನೀನು ಒಳ್ಳೆಯ ಹುಡುಗಿ. ಈಗ ನೀನು ತುಂಬಾ ಭಾವನಾತ್ಮಕ ತೊಳಲಾಟ, ಗೊಂದಲ ಮತ್ತು ಒತ್ತಡದಲ್ಲಿ ಇದ್ದೀಯ. ನಿನ್ನ ವಯಸ್ಸಿನಲ್ಲಿ ಕಾರಣಾಂತರಗಳಿಂದ ಇಂಥ ಭಾವನೆಗಳು ಬರುವುದು ಸಹಜ.

ನೀನು ಆತುರದಲ್ಲಿ ಏನೇನೋ ಮಾಡುವ ಮೊದಲು ಇಲ್ಲಿ ಪ್ರಶ್ನೆ ಕೇಳಿರುವುದಕ್ಕೆ ನಿನಗೆ ಭೇಷ್‌ ಎನ್ನುತ್ತೇನೆ. ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗಬೇಕು. ತಿಳಿದವರ ಸಹಾಯವನ್ನು ಕೇಳುವುದು ತಪ್ಪಲ್ಲ. ಮನೆಬಿಟ್ಟು ಓಡಿಹೋಗುವುದು ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ. ಅದರಿಂದ ಜೀವನಪೂರ್ತಿ ಕಷ್ಟ, ನಷ್ಟವನ್ನು ಅನುಭವಿಸಬೇಕಾಗುತ್ತದೆ. ನೀನೀಗ ಸಮಾಧಾನದಿಂದ ಸಮಸ್ಯೆಗಳನ್ನು ಎದುರಿಸಿ ನಿಂತರೆ ಮುಂದೆ ಒಳ್ಳೆಯದಾಗುತ್ತದೆ, ನಿನಗೆ ಉತ್ತಮ ಭವಿಷ್ಯವಿದೆ ಎನ್ನುವುದನ್ನು ನೀನು ಈಗ ನಂಬಬೇಕು.

ಪ್ರತಿದಿನ ಬೇಗ ಮಲಗಿ ಬೇಗ ಏಳುವುದನ್ನು ರೂಢಿಮಾಡಿಕೊಳ್ಳಬೇಕು. ಡಾನ್ಸ್‌ ಹಾಗೂ ಸಂಗೀತದ ಪ್ರ್ಯಾಕ್ಟೀಸ್‌ ಮಾಡು. ಅದರಿಂದ ನಮ್ಮ ದೇಶವನ್ನು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪ್ರತಿನಿಧಿಸಿ, ದೇಶಕ್ಕೆ ಗೌರವವನ್ನು ತರಬಹುದು. ಹೀಗೆ ನಿನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದಕ್ಕೆ ನಿನಗೀಗ ಸಾಕಷ್ಟು ಅವಕಾಶವಿದೆ.

ನಿನ್ನ ಜೀವನ ಇನ್ನೂ ಪ್ರಾರಂಭದ ಹಂತದಲ್ಲಿದೆ. ಬದುಕು ಬಹಳ ಸುದೀರ್ಘವಾಗಿದೆ. ಅದನ್ನು ಸಾರ್ಥಕವಾಗಿ ಬದುಕಬೇಕು. ಅದಕ್ಕೆ ನಿನಗಂತೂ ಅವಕಾಶಗಳು ಕೂಡ ಹೇರಳವಾಗಿವೆ. ಈಗ ಪರೀಕ್ಷೆಯಲ್ಲಿ ಪಾಸಾಗುವಷ್ಟನ್ನಾದರೂ ಓದು. ಓದುವ ಆಸಕ್ತಿ ಇರುವವರ ಗೆಳೆತನವನ್ನು ಮಾಡು. ನಿನ್ನ ದೇಹದ ಬಗ್ಗೆಯಾಗಲೀ ಬಣ್ಣದ ಬಗ್ಗೆಯಾಗಲೀ ತಮಾಷೆಯಾಗಿ ಮಾತನಾಡಿದರೆ ಕೋಪಿಸಿಕೊಳ್ಳಬೇಡ. ಕೀಳರಿಮೆ ಬೆಳೆಸಿಕೊಳ್ಳಬೇಡ. ಅವರೇ ನಿನ್ನನ್ನು ಹೊಗಳುವ ಹಾಗೆ ನೀನು ಬದಲಾಗಬೇಕು. ಹಾಗೆ ಆಗುತ್ತೇನೆ ಎಂದು ನಿರ್ಧರಿಸು. ಅದಕ್ಕಾಗಿ ಪ್ರಯತ್ನಿಸು.

ವಾರ್ಷಿಕ ಪರೀಕ್ಷೆಯ ಭಯದಿಂದ ಈಗ ನಿನಗೆ ಮದುವೆಯ ಆಸೆ ಚಿಗುರಿದೆ ಎನ್ನುವುದನ್ನು ಗಮನಿಸು. ಇದು ಪಲಾಯನವಾದ. ಮದುವೆ ಆಗಬೇಕೆನ್ನುವ ನಿನ್ನ ಆಸೆಯ ಬಗ್ಗೆ ಆಕ್ಷೇಪವಿಲ್ಲ. ಅದು ನೈಸರ್ಗಿಕವಾದ ಬಯಕೆ. ಆದರೆ ನೆಲದ ಕಾನೂನಿನ ಪ್ರಕಾರ, ನಿನಗಿನ್ನೂ ಮದುವೆ ಆಗುವ ವಯಸ್ಸಾಗಿಲ್ಲ. ಹಾಗಾಗಿ, ನಿನ್ನ ಆ ಆಸೆ ಈಗ ಈಡೇರುವ ಹಾಗಿಲ್ಲ. ಮದುವೆಯಾಗಲು ನೀನು ಪ್ರಬುದ್ಧಳಾಗಬೇಕು. ಅಲ್ಲಿಯವರೆಗೆ ನೀನು ಕಾಯಬೇಕು. ನಿನ್ನನ್ನು ಪ್ರೀತಿಸುವ ಹುಡುಗನಿಗೂ ನಿನ್ನ ಭವಿಷ್ಯ ಮುಖ್ಯವಾಗಬೇಕು. ನಿಮ್ಮಿಬ್ಬರ ಪ್ರೀತಿಯು ನಿಮ್ಮಿಬ್ಬರ ಬದುಕನ್ನು ಬೆಳಗುವುದಕ್ಕೆ ಪರಸ್ಪರ ಸಹಕಾರಿಯಾಗಬೇಕು. ಹಾಗೆ ಪ್ರೀತಿಸಬೇಕು. ಪರಸ್ಪರ ಪ್ರಾಮಾಣಿಕವಾಗಿ ಪ್ರೀತಿಸಬೇಕು. ಅದು ಕೂಡ ಅಷ್ಟು ಸುಲಭವೇನಲ್ಲ. ಇದೆಲ್ಲ ನಿನಗೆ ಮುಂದೆ ಅರ್ಥವಾಗುತ್ತದೆ.

ನಕಾರಾತ್ಮಕ ಆಲೋಚನೆಗಳನ್ನು ಪ್ರೇರೇಪಿಸುವ ಸೋಷಿಯಲ್‌ ಮೀಡಿಯಾ ಪೋಸ್ಟ್‌ಗಳನ್ನು ನೋಡಬಾರದು. ಸೋಡಿಯಲ್‌ ಮೀಡಿಯಾದಲ್ಲಿ ಅಪರಿಚಿತರು ನಮ್ಮನ್ನು ಇಷ್ಟಪಡುವುದರಿಂದಾಗಲೀ ಇಷ್ಟಪಡದೆ ಇರುವುದರಿಂದಾಗಲೀ ನಮಗೇನೂ ನಷ್ಟವಾಗುವುದಿಲ್ಲ ಎನ್ನುವುದನ್ನು ಅರಿತುಕೊಳ್ಳಬೇಕು.

ಪ್ರೀತಿಸಿ ಮದುವೆಯಾಗಿ ಜೊತೆಜೊತೆಯಾಗಿ ಬದುಕಿನಲ್ಲಿ ಸಾಧನೆ ಮಾಡಿದವರು ಅನೇಕರಿದ್ದಾರೆ. ನಿನಗಿರುವ ಅವಕಾಶದಲ್ಲಿ ನೀನು ಚೆನ್ನಾಗಿ ಓದಬೇಕು. ಪಾಸಾಗಬೇಕು. ನಿನ್ನನ್ನು ನೀನು ದೇಶಸೇವೆಗೆ ಅರ್ಪಿಸಿಕೊಳ್ಳಬೇಕು. ನಿನ್ನ ಮಕ್ಕಳೂ ಸೇರಿದಂತೆ ಅನೇಕಾನೇಕ ಜನ ನಿನ್ನಿಂದ ಸ್ಫೂರ್ತಿ ಪಡೆದು ದೇಶಸೇವೆಗೆ ಮುನ್ನುಗ್ಗುತ್ತಾರೆ. ದೇಶಸೇವೆ ಮಾಡು ವುದೆಂದರೆ ಸೈನ್ಯಕ್ಕೆ ಸೇರುವುದು ಮಾತ್ರವಲ್ಲ, ದೇಶದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ ಅಭಿವೃದ್ಧಿಗೆ ಕೊಡುಗೆ ಕೊಡುವುದೂ ಸೇರಿದೆ. ಅದಕ್ಕಾಗಿ, ನೀನು ಈಗ ಮಾಡಬೇಕಾದ ಕೆಲಸವನ್ನು ಶ್ರದ್ಧೆಯಿಂದ ಮಾಡು. ನಿನ್ನ ವ್ಯಕ್ತಿತ್ವವನ್ನು ಗಟ್ಟಿಯಾಗಿಸಿಕೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.