
ಪಿಯುಸಿ ನಂತರ ‘ಎಂಜಿನಿಯರಿಂಗ್ ಅಥವಾ ಮೆಡಿಸಿನ್?’ ಎಂಬ ಸೀಮಿತ ಪ್ರಶ್ನೆಯೇ ಬಹುತೇಕ
ವಿದ್ಯಾರ್ಥಿಗಳನ್ನು ಕಾಡುತ್ತದೆ. ಪೋಷಕರ ನಿರೀಕ್ಷೆ ಹಾಗೂ ನೀಟ್, ಸಿಇಟಿ, ಜೆಇಇಯಂತಹ ಪ್ರವೇಶ ಪರೀಕ್ಷೆಗಳ ಒತ್ತಡದ ನಡುವೆ ಅನೇಕರು ತಮ್ಮ ನಿಜವಾದ ಆಸಕ್ತಿ, ಅಭಿರುಚಿಗಳನ್ನು ಗಮನಿಸುವುದಿಲ್ಲ. ಆದರೆ, ಸುಮಾರು 40 ವರ್ಷದ ವೃತ್ತಿಜೀವನವನ್ನು ಸಂತೋಷದಿಂದ ಸಾಗಿಸಲು, ಬದುಕಿನ ಗುರಿಗಳನ್ನು ಸಾಧಿಸಲು, ನಮಗೆ ಆಸಕ್ತಿಯಿರುವ ಕ್ಷೇತ್ರವನ್ನು ಆರಿಸಿಕೊಳ್ಳುವುದೇ ವೃತ್ತಿಯೋಜನೆಯ ಮೊದಲ ಹೆಜ್ಜೆ.
ನ್ಯಾಷನಲ್ ಕ್ಲ್ಯಾಸಿಫಿಕೇಷನ್ ಆಫ್ ಆಕ್ಯುಪೇಷನ್ಸ್– ಎನ್‌ಸಿಒ ಮಾಹಿತಿಯ ಪ್ರಕಾರ, ಪಿಯುಸಿ ನಂತರ ನೂರಾರು ಪದವಿ ಕೋರ್ಸ್‌ಗಳು ಮತ್ತು ಸಾವಿರಾರು ವೃತ್ತಿಗಳು ಲಭ್ಯವಿವೆ. ಅವುಗಳ ನಡುವೆ, ಅಸಾಂಪ್ರದಾಯಿಕ ಹಾಗೂ ಭವಿಷ್ಯಪೂರ್ಣ ಕ್ಷೇತ್ರಗಳನ್ನು ಪರಿಚಯಿಸುವುದೇ ಈ ಲೇಖನದ ಉದ್ದೇಶ.
ಜಗತ್ತಿನಾದ್ಯಂತ ವೇಗವಾಗಿ ಬೆಳೆಯುತ್ತಿರುವ ವೈವಿಧ್ಯಮಯ ಉದ್ಯಮವೇ ಆದರಾತಿಥ್ಯ (ಹಾಸ್ಪಿಟ್ಯಾಲಿಟಿ) ಕ್ಷೇತ್ರ. ‘ಅತಿಥಿ ದೇವೋಭವ’ ಅಂದರೆ ಅತಿಥಿಯೇ ದೇವರು ಎಂಬುದು ನಮ್ಮ ಸಂಸ್ಕೃತಿಯ ಮೂಲ ಮೌಲ್ಯ. ಅತಿಥಿಗಳಿಗೆ ಗೌರವ, ವೈಯಕ್ತಿಕ ಗಮನ, ಆತ್ಮೀಯ ಸೇವೆ ನೀಡುವುದರ ಪ್ರಾಮುಖ್ಯತೆಯನ್ನು ಇದು ಒತ್ತಿ ಹೇಳುತ್ತದೆ. ಶಿಸ್ತು ಮತ್ತು ಶಿಷ್ಟಾಚಾರ, ಸಕಾರಾತ್ಮಕ ಮನೋಭಾವ, ಜಾಗತಿಕ ದೃಷ್ಟಿಕೋನ ಹೊಂದಿರುವ ವಿದ್ಯಾರ್ಥಿಗಳಿಗೆ ಈ ಕ್ಷೇತ್ರದಲ್ಲಿ ಉದ್ಯೋಗ ಹಾಗೂ ಉದ್ಯಮಶೀಲತೆಯ ಅವಕಾಶಗಳು ಅಪಾರ.
ಭಾರತದ ಜಿಡಿಪಿಗೆ ಸುಮಾರು ಶೇ 6ರಷ್ಟು ಕೊಡುಗೆ ನೀಡುವ ಈ ಕ್ಷೇತ್ರದಲ್ಲಿ, ವಾರ್ಷಿಕಾಭಿವೃದ್ಧಿ ಶೇ 14ರಷ್ಟು ಎನ್ನಲಾಗಿದೆ. ಇದು ನೇರ ಮತ್ತು ಪರೋಕ್ಷವಾಗಿ ಸುಮಾರು 5 ಕೋಟಿ ಉದ್ಯೋಗಗಳನ್ನು ಸೃಷ್ಟಿಸಿದೆ. ಮಾರಾಟ– ಮಾರ್ಕೆಟಿಂಗ್, ಫ್ರಂಟ್ ಆಫೀಸ್, ಗ್ರಾಹಕ ಸೇವೆ, ಮಾನವ ಸಂಪನ್ಮೂಲ, ಹಣಕಾಸು, ಸರಬರಾಜು ಸರಪಳಿ, ಇವೆಂಟ್ ನಿರ್ವಹಣೆ ಪ್ರಮುಖ ವಿಭಾಗಗಳು. ಸ್ವಂತ ಅನುಭವದ ನಂತರ ರೆಸ್ಟೊರೆಂಟ್, ಬೊಟಿಕ್ ಹೋಟೆಲ್, ಟ್ರಾವೆಲ್ ಸ್ಟಾರ್ಟ್–ಅಪ್, ಇವೆಂಟ್ ಕಂಪನಿ ಇತ್ಯಾದಿಗಳನ್ನು ಆರಂಭಿಸುವ ಅವಕಾಶವಿದೆ.
ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕವಾಗಿ ಹಲವಾರು ಕೋರ್ಸ್‌ಗಳಿವೆ. ಬಿ.ಎಚ್‍ಎಂ (ಬ್ಯಾಚುಲರ್ ಅಫ್ ಹಾಸ್ಪಿಟ್ಯಾಲಿಟಿ ಮ್ಯಾನೇಜ್‍ಮೆಂಟ್, ಬಿ.ಎಸ್ಸಿ (ಹಾಸ್ಪಿಟ್ಯಾಲಿಟಿ, ಕೇಟರಿಂಗ್ ಮತ್ತು ಹೋಟೆಲ್ ಮ್ಯಾನೇಜ್‍ಮೆಂಟ್), ಬಿ.ಬಿ.ಎ (ಟೂರಿಸಂ ಆ್ಯಂಡ್ ಟ್ರಾವೆಲ್) ಮುಂತಾದ ಕೋರ್ಸ್‌ಗಳನ್ನು ಮಾಡಬಹುದು.
1982ರಲ್ಲಿ ಸ್ಥಾಪಿತವಾದ ‘ರಾಷ್ಟ್ರೀಯ ಹೋಟೆಲ್ ನಿರ್ವಹಣೆ ಮತ್ತು ಕೇಟರಿಂಗ್ ತಂತ್ರಜ್ಞಾನ ಮಂಡಳಿ’ಯು (ಎನ್‌ಸಿಎಚ್‌ಎಂಸಿಟಿ) ಪ್ರವಾಸೋದ್ಯಮ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು, ದೇಶದಾದ್ಯಂತ 90ಕ್ಕೂ ಹೆಚ್ಚು ಐಎಚ್‌ಎಂ (ಇನ್‌ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್) ಹಾಗೂ ಫುಡ್‌ಕ್ರ್ಯಾಫ್ಟ್ ಸಂಸ್ಥೆಗಳ ಮೇಲ್ವಿಚಾರಣೆ ಮಾಡುತ್ತದೆ.
ದೆಹಲಿ, ಮುಂಬೈ, ಔರಂಗಾಬಾದ್‌ನಲ್ಲಿರುವ ಐಎಚ್‌ಎಂಗಳು, ಮಣಿಪಾಲದಲ್ಲಿರುವ ವೆಲ್‌ಕಂ ಗ್ರೂಪ್, ದೆಹಲಿಯ ಒಬೆರಾಯ್ ಸೆಂಟರ್, ಕ್ರೈಸ್ಟ್, ಪರುಲ್, ಅಮಿಟಿ, ಅಪೀಜೆಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕ್ಯಾಂಪಸ್ ನೇಮಕಾತಿ ವ್ಯವಸ್ಥೆ ಇದೆ. ಪ್ರಾರಂಭಿಕ ಸಂಬಳ ₹ 3.5 ಲಕ್ಷದಿಂದ ₹ 5 ಲಕ್ಷ ಇರಬಹುದು. ವಿದೇಶಗಳಲ್ಲಿ ಅಥವಾ ಕ್ರೂಸ್ ಉದ್ಯಮದಲ್ಲಿ ₹ 20 ಲಕ್ಷದಿಂದ ₹ 25 ಲಕ್ಷದವರೆಗೆ ಅವಕಾಶಗಳಿದ್ದು, ಯುಎಇ, ಸಿಂಗಪುರ, ಯುರೋಪ್, ಆಸ್ಟ್ರೇಲಿಯಾದಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವಾಗ ಮೂಲಸೌಕರ್ಯ, ಅಧ್ಯಾಪಕ ವೃಂದ, ಉದ್ಯಮ ಸಂಪರ್ಕ, ಪ್ಲೇಸ್‌ಮೆಂಟ್ ದಾಖಲೆಯನ್ನು ತಪ್ಪದೇ ಪರಿಶೀಲಿಸಿ. ನಿಮ್ಮಲ್ಲಿ ಹೊಸ ಅನುಭವಗಳನ್ನು ಸೃಷ್ಟಿಸುವ ಉತ್ಸಾಹ ಮತ್ತು ಜಗತ್ತನ್ನು ಅನ್ವೇಷಿಸುವ ಕನಸುಗಳಿದ್ದರೆ, ಈ ಕ್ಷೇತ್ರ ನಿಮ್ಮದಾಗಬಹುದು.
ಆದರಾತಿಥ್ಯ ಎಂದರೆ ಬರೀ ಹೋಟೆಲ್ ಅಥವಾ ರೆಸ್ಟೊರೆಂಟ್‌ಗಳಷ್ಟೇ ಅಲ್ಲ, ವಸತಿ ಸೇವೆಗಳು (ಹೋಟೆಲ್, ರೆಸಾರ್ಟ್, ಹೋಮ್‌ಸ್ಟೇ), ಆಹಾರ– ಪಾನೀಯ ಸೇವೆ (ರೆಸ್ಟೊರೆಂಟ್, ಕೆಫೆ, ಕ್ಯುಎಸ್‌ಆರ್- ಕ್ವಿಕ್ ಸರ್ವಿಸ್ ರೆಸ್ಟೊರೆಂಟ್), ಪ್ರಯಾಣ ಮತ್ತು ಸಾರಿಗೆ (ವಿಮಾನ, ರೈಲು, ಬಸ್, ಟ್ಯಾಕ್ಸಿ, ಕ್ರೂಸ್), ಪ್ರವಾಸೋದ್ಯಮ ಸೇವೆ (ಟೂರ್ ಆಪರೇಟರ್, ಗೈಡ್, ವೀಸಾ, ಕರೆನ್ಸಿ ಸೇವೆಗಳು), ಮೀಟಿಂಗ್ಸ್- ಇನ್ಸೆಂಟಿವ್ಸ್- ಕಾನ್ಫರೆನ್ಸ್- ಇವೆಂಟ್ (ಎಂಐಸಿಇ), ಕೇಟರಿಂಗ್, ಮನರಂಜನೆ, ಆರೋಗ್ಯ– ಸ್ವಾಸ್ಥ್ಯ, ಸೌಂದರ್ಯ ಮತ್ತು ಸ್ಪಾ, ಅಮ್ಯೂಸ್‌ಮೆಂಟ್ ಪಾರ್ಕ್, ಮೃಗಾಲಯ, ವಸ್ತುಸಂಗ್ರಹಾಲಯ, ವನ್ಯಜೀವಿ ಸಫಾರಿ ಹಾಗೂ ತಂತ್ರಜ್ಞಾನ ಸೇವೆಗಳೆಲ್ಲವೂ ಈ ಕ್ಷೇತ್ರಕ್ಕೆ ಸೇರಿವೆ. ಇತ್ತೀಚೆಗೆ ಜನಪ್ರಿಯವಾಗಿರುವ ಡೆಸ್ಟಿನೇಶನ್ ವೆಡಿಂಗ್ ಸಹ ಇದೇ ಕ್ಷೇತ್ರದ ಭಾಗ.
ಆತ್ಮವಿಶ್ವಾಸ, ಆತಿಥ್ಯ ಮನೋಭಾವ, ಉತ್ತಮ ಸಂವಹನ, ಸಮಯಪಾಲನೆ, ತಂಡದ ಮನೋಭಾವ, ಸಮಸ್ಯೆಗಳಿಗೆ ಪರಿಹಾರ, ಪ್ರಸ್ತುತೀಕರಣ ಕೌಶಲ, ತಾರ್ಕಿಕ ಚಿಂತನೆ, ಬಹುಭಾಷಾ ಪ್ರಾವೀಣ್ಯ ಅಗತ್ಯ. ವೃತ್ತಿಪರ ಕೌಶಲಗಳನ್ನು ಪದವಿ ಕೋರ್ಸ್‌ನಲ್ಲಿ ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ.
‘ಪಿಯುಸಿ ನಂತರ ಮುಂದೇನು?’ ಎನ್ನುವ ಪ್ರಶ್ನೆ ಕಾಡುತ್ತಿದೆಯೇ? ಚಿಂತೆ ಬಿಡಿ. ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಏಪ್ರಿಲ್‌ನಲ್ಲಿ ಆಯೋಜಿಸಲಿರುವ ‘ಎಡ್ಯುವರ್ಸ್’ ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಳ್ಳಿ, ನಿಮ್ಮ ಪ್ರಶ್ನೆಗೆ ಸೂಕ್ತ ಉತ್ತರ ಕಂಡುಕೊಂಡು ಉತ್ತಮ ಭವಿಷ್ಯ ನಿಮ್ಮದಾಗಿಸಿಕೊಳ್ಳಿ.
ಅಷ್ಟೇ ಅಲ್ಲ, ಸಿಇಟಿ, ಕಾಮೆಡ್–ಕೆ, ವೃತ್ತಿಪರ ಕೋರ್ಸ್ ಸೇರಿದಂತೆ ವಿವಿಧ ಕೋರ್ಸ್‌ಗಳು, ಉದ್ಯೋಗಾವಕಾಶ, ಕಾಲೇಜುಗಳಲ್ಲಿ ಸಿಗುವ ಬಗೆಬಗೆ ಸೌಲಭ್ಯಗಳ ಮಾಹಿತಿ, ವಿಶೇಷ ಗೋಷ್ಠಿಗಳು, ಸಂವಾದ.. ಎಲ್ಲವೂ ನಿಮಗಾಗಿ. ಮೇಳದ ದಿನಾಂಕಕ್ಕಾಗಿ ನಿರೀಕ್ಷಿಸಿ, ಶೈಕ್ಷಣಿಕ ಮಾಹಿತಿಯ ಕಣಜವನ್ನು ಎದುರುಗೊಳ್ಳಲು ಸಿದ್ಧರಾಗಿ.
ಲೇಖಕ: ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.