ADVERTISEMENT

ಶಿಕ್ಷಣ: ಕಲಿಕೆಯಲ್ಲಿ ಗ್ಯಾಜೆಟ್‌ಗಳ ಬಳಕೆ ಮಿತಿ ಹೇಗೆ?

ಆರ್.ಶ್ರೀನಾಗೇಶ್
Published 16 ಡಿಸೆಂಬರ್ 2024, 0:16 IST
Last Updated 16 ಡಿಸೆಂಬರ್ 2024, 0:16 IST
<div class="paragraphs"><p>–ಐಸ್ಟಾಕ್ ಚಿತ್ರ</p></div>
   

–ಐಸ್ಟಾಕ್ ಚಿತ್ರ

ಟರ್ಮಿನೇಟರ್ ಎಂಬ ಇಂಗ್ಲಿಷ್ ಚಲನಚಿತ್ರವೊಂದಿದೆ. 2030ರ ಸುಮಾರಿಗೆ ಕಂಪ್ಯೂಟರ್‌ಗಳು ವಿಶ್ವವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಮನುಷ್ಯರನ್ನೇ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ. ಈ ಗುಲಾಮಗಿರಿಯಿಂದ ಹೊರತರಲು ಕ್ರಾಂತಿಕಾರಿಯೊಬ್ಬ ಹುಟ್ಟಿಕೊಂಡು ಕಂಪ್ಯೂಟರ್‌ಗಳ ವಿರುದ್ಧ ಕದನವನ್ನು ಸಾರಿ ಮನುಷ್ಯನನ್ನು ಗುಲಾಮಗಿರಿಯಿಂದ ಬಿಡಿಸುತ್ತಾನೆ. ಆದರೆ, ಅದಕ್ಕೆ ಮೊದಲು ಕಂಪ್ಯೂಟರ್‌ಗಳು ಈ ಕ್ರಾಂತಿಕಾರಿ ಹುಟ್ಟದೇ ಹೋದರೆ ಕ್ರಾಂತಿಯೇ ಆಗದು ಎಂದು ಅವನು ಹುಟ್ಟುವ ಮೊದಲೇ ಅವನ ತಾಯಿಯನ್ನು ಸಾಯಿಸಲು ಒಬ್ಬ ಯಾಂತ್ರಿಕ ಕೊಲೆಗಾರನನ್ನು ಕಳುಹಿಸುತ್ತವೆ. ಅದು ಗೊತ್ತಾದಾಗ ತನ್ನ ತಾಯಿಯನ್ನು ರಕ್ಷಿಸಲು ಆತ ರಕ್ಷಕನೊಬ್ಬನನ್ನು ಕಳುಹಿಸಿ ತಾಯಿಯನ್ನು ಉಳಿಸಿಕೊಳ್ಳುತ್ತಾನೆ.

ಈ ಸಿನಿಮಾ ಬಿಡುಗಡೆಯಾದಾಗ ಒಂದು ಕಥೆಯಾಗಿತ್ತು. ಆದರೆ, ಕಂಪ್ಯೂಟರ್‌, ಮೊಬೈಲ್‌ನಂಥ ಗ್ಯಾಜೆಟ್‌ಗಳ ವಾಸ್ತವದಲ್ಲಿ ನಮ್ಮನ್ನು ನಿಯಂತ್ರಿಸುತ್ತಿವೆ. ಅದರಲ್ಲಿಯೂ ಕಲಿಕೆಯ ಹಂತದಲ್ಲಿರುವ ಮಕ್ಕಳ ಮನಸ್ಸನ್ನು ಮೊಬೈಲ್ ಹೇಗೆಲ್ಲ ನಿಯಂತ್ರಿಸುತ್ತಿವೆ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ADVERTISEMENT

ಮೊಬೈಲ್ ಇಲ್ಲದೇ ಇರುವ ಕೈಗಳನ್ನು ನೋಡುವುದು ತುಂಬಾ ಕಡಿಮೆಯಾಗಿದೆ. ಭಾಷೆ ಕಲಿಯುತ್ತಿರುವ ಮೂರು ವರ್ಷದ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಗ್ಯಾಜೆಟ್‌ಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಸಣ್ಣಪುಟ್ಟ ಗುಣಾಕಾರ/ಸಂಕಲನ/ವ್ಯವಕಲನ ಮಾಡಲೂ ಮೊಬೈಲ್‌ನಲ್ಲಿರುವ ಕ್ಯಾಲ್ಕುಲೇಟರ್‌ಗಳನ್ನು ಬಳಸುವುದರಿಂದ ಮಿದುಳಿಗಿದ್ದ ಸಹಜ ಶಕ್ತಿಯನ್ನು ಕಳೆದುಕೊಂಡು ಬಿಟ್ಟಿದ್ದೇವೆ.‌

ವಿಶ್ವದ ಯಾವುದೇ ಪ್ರದೇಶ ಎಲ್ಲಿದೆ ಎಂದು ನೋಡಲು ಭೂಪಟ ಬಳಸುತ್ತಿದ್ದೆವು. ಇಂದು ಎಲ್ಲವನ್ನೂ ಗೂಗಲ್‌ನಲ್ಲಿಯೇ ಕೇಳುತ್ತೇವೆ. ಭೂಪಟದಲ್ಲಿ ವಿವಿಧ ಸ್ಥಳಗಳ ಹವಾಮಾನದ ಪರಿಸ್ಥಿತಿ, ಎಲ್ಲೆಲ್ಲಿ ಯಾವ ಬೆಳೆ ಸಿಗುವುದು, ಯಾವ ನದಿ ಎಲ್ಲಿ ಹರಿಯುತ್ತದೆ ಎಂಬ ಮಹತ್ವದ ಅಂಶಗಳು ಲಭ್ಯವಾಗುತ್ತಿತ್ತು. ನೆನಪಿಡಲೂ ಸುಲಭವಾಗುತ್ತಿತ್ತು. ಇಂದು ಬೇಕಾದ ಸ್ಥಳವನ್ನು ಮಾತ್ರ ಹುಡುಕುವುದರಿಂದ ಈ ಸಮಗ್ರ ಚಿತ್ರಣ ದೊರೆಯುವುದಿಲ್ಲ.

ಪದಕ್ಕೆ ಅರ್ಥ ಹುಡುಕಲು ನಿಘಂಟಿನ ಸಹಾಯ ತೆಗೆದುಕೊಳ್ಳುತ್ತಿದ್ದೆವು. ಜತೆಗೆ ಅದನ್ನು ಬರೆದು, ನಮ್ಮ ಮಸ್ತಕದಲ್ಲಿ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆವು. ಒಂದು ಪದ ಹುಡುಕಿ, ಇನ್ನೊಂದು ಪದದ ಬಗ್ಗೆ ಆಸಕ್ತಿ ಬಂದು ಪದಭಂಡಾರವೂ ಹೆಚ್ಚುತ್ತಿತ್ತು. ಆದರೆ ಈಗ ಹಾಗಲ್ಲ, ನಿಘಂಟಿನ ಆ್ಯಪ್‌ಗಳಿವೆ. ಅವುಗಳಲ್ಲಿ ಪದಗಳ ಅರ್ಥವನ್ನು ಹುಡುಕಿ, ಅಷ್ಟೇ ಬೇಗ ಮರೆಯುತ್ತಿದ್ದೇವೆ. ಹೇಗೂ ಕೈಬೆರಳ ತುದಿಯಲ್ಲಿಯೇ ನಿಘಂಟು ಲಭ್ಯವಿದೆಯಲ್ಲ. ಸಂದರ್ಭಕ್ಕೆ ಅದರ ಉಪಯೋಗ ಬಂದರೆ ಸಾಕು. ಆಮೇಲೆ ಅದು ಮರೆತರೂ ತೊಂದರೆಯಿಲ್ಲ ಎನ್ನುವ ಮನೋಭಾವದಲ್ಲಿ ಇದ್ದೇವೆ. ಇದರಿಂದ ಪದಭಂಡಾರ ಬೆಳೆಯುವುದಿಲ್ಲ.

ಇವುಗಳನ್ನು ಗಮನಿಸಿದಾಗ ಗ್ಯಾಜೆಟ್‌, ಆ್ಯಪ್‌, ರೀಲ್ಸ್‌ಗಳಿಗೆ ದಾಸರಾಗಿದ್ದೇವೆ. ಮನೆಯ ಹಿರಿಯ ಸದಸ್ಯರು ಗ್ಯಾಜೆಟ್‌ ಮೇಲೆ ನಿಯಂತ್ರಣ ಹಾಕಿಕೊಳ್ಳದಿದ್ದರೆ, ಕಿರಿಯರಿಗೆ ಮಾರ್ಗದರ್ಶನ ಸಿಗುವುದು ಹೇಗೆ? ಈ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳು ಹೀಗಿವೆ.

  • ನಿತ್ಯ ನಿರ್ದಿಷ್ಟ ಸಮಯದಲ್ಲಿ ಗ್ಯಾಜೆಟ್‌ ಬಳಕೆಗೆ ನಿಷೇಧ ಹೇರಿಕೊಳ್ಳಿ. ಆ ಸಮಯದಲ್ಲಿ ಮಕ್ಕಳಿಗೆ ಪುಸ್ತಕಗಳ ಓದು, ಕಥೆ ಹೇಳುವ ಕೌಶಲವನ್ನು ಕಲಿಸಿ

  • ಪ್ರಯಾಣ ಮಾಡುವಾಗ ಹತ್ತು ನಿಮಿಷವಾದರೂ ಓದಲು ಮೀಸಲು ಇಟ್ಟುಕೊಳ್ಳಿ. ಪಕ್ಕ ಕುಳಿತವರ ಪರಿಚಯ ಮಾಡಿಕೊಳ್ಳುವ ಪ್ರಯತ್ನ ಮಾಡಿ. ಇದರಿಂದ ಲೋಕಜ್ಞಾನ ಹೆಚ್ಚುತ್ತದೆ.

  • ಪದಕ್ಕೆ ಅರ್ಥ ಹುಡುಕಲು ನಿಘಂಟು ಬಳಸಿ. ಸಾಧ್ಯವಾದಷ್ಟು ಪಾಕೆಟ್‌ ನಿಘಂಟುಗಳನ್ನು ಇಟ್ಟುಕೊಳ್ಳಿ.

  • ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವಂಥ ಉತ್ತಮ ಶೋಗಳು, ಮಾಹಿತಿ ನೀಡುವ ಕಾರ್ಯಕ್ರಮಗಳು ಲಭ್ಯವಿದೆ. ಅವುಗಳನ್ನು ಸೂಕ್ತವಾಗಿ ಬಳಸಿಕೊಳ್ಳಿ.

  • ಕ್ಯಾಲ್ಕುಲೇಟರ್‌ಗಳನ್ನು ಬಳಸುವುದಕ್ಕಿಂತ ಗಣಿತದ ಮೋಜಿನ ಕುರಿತು ಮಕ್ಕಳಿಗೆ ಹೇಳಿ.

  • ಯಂತ್ರಗಳ ಮೇಲೆ ಹೆಚ್ಚಿನ ಅವಲಂಬನೆಯಿಲ್ಲದೇ ಮಿದುಳಿನ ಸಾಮರ್ಥ್ಯವನ್ನು ಹೆಚ್ಚಿಸುವ ಕಲಿಕೆಗೆ ಒತ್ತು ನೀಡಬೇಕಿದೆ.

  • ಮಕ್ಕಳಲ್ಲಿರುವ ಸಹಜ ಕಲಿಕಾ ಸಾಮರ್ಥ್ಯವನ್ನು ಹೆಚ್ಚು ಪ್ರೋತ್ಸಾಹಿಸಬೇಕಿದೆ.

  • ಪ್ರಕೃತಿಯೊಂದಿಗೆ ಮಕ್ಕಳು, ಪೋಷಕರು ಹೆಚ್ಚೆಚ್ಚು ಬೆರೆತಾಗ ಯಾಂತ್ರಿಕ ಬದುಕಿನಿಂದ ವಿಮುಖರಾಗಲು ಸಾಧ್ಯವಿದೆ.

  • ಪೃಕೃತಿಯಲ್ಲಿ ಅಡಕವಾಗಿರುವ ಸಣ್ಣ ಸಣ್ಣ ವಿಸ್ಮಯಗಳನ್ನು ನೋಡುತ್ತಾ ಮಕ್ಕಳು ಹೊಸ ಕಲಿಕೆಗೆ ತೆರೆದುಕೊಳ್ಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.