
ಸಾಂದರ್ಭಿಕ ಚಿತ್ರ
ನನಗೆ 25 ವರ್ಷ, ಬಿ.ಎ. ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ತಂದೆ ನನ್ನ ಓದಿನ ಮೇಲೆ ಅಪಾರವಾದ ನಂಬಿಕೆ ಇಟ್ಟುಕೊಂಡಿದ್ದಾರೆ. ಓದುವ ಹಂಬಲವಿದೆ. ಆದರೆ ಓದಿನ ಕಡೆ ಗಮನ ಕೊಡಲಾಗುತ್ತಿಲ್ಲ. ಇತ್ತೀಚೆಗೆ ಆತಂಕ, ಭಯ ಹೆಚ್ಚಾಗಿದೆ, ಕೀಳರಿಮೆಯಾಗುತ್ತಿದೆ. ಯಾವ ರೀತಿ ಬದುಕನ್ನು ಹಿಡಿತಕ್ಕೆ ತಂದುಕೊಳ್ಳಲಿ?
ಚೇತನ ನಾರಾಯಣ, ಬೆಳಗಾವಿ
ಓದುವಾಗ ಯಾವ ಆಲೋಚನೆಗಳು ಬರುತ್ತವೆ ಎನ್ನುವುದನ್ನು ಗಮನಿಸಿ. ಕಣ್ಣುಮುಚ್ಚಿ ಕೆಲವು ನಿಮಿಷ ಅವೇ ಆಲೋಚನೆಗಳ ಜತೆ ಸಾಗಿ. ಕೆಲವೇ ನಿಮಿಷಗಳಲ್ಲಿ ಅವುಗಳ ತಾಕಲಾಟ ನಿಯಂತ್ರಣಕ್ಕೆ ಬರುತ್ತದೆ. ಪುನಃ ಓದಲು ಪ್ರಾರಂಭಿಸಿ. ನಿಮಗೆ ಬೇಡದ ಆಲೋಚನೆಗಳು ಬಂದಾಗ ಅವುಗಳನ್ನೆಲ್ಲ ಒಂದು ಡೈರಿಯಲ್ಲಿ ಬರೆದಿಡಿ.
ಕಾಮಪ್ರಚೋದಕ ವಿಡಿಯೊ ನೋಡುವುದಿದ್ದರೆ ಕಡಿಮೆ ಮಾಡಿ. ಸೋಷಿಯಲ್ ಮೀಡಿಯಾ ಅಕೌಂಟ್‌ಗಳನ್ನು ಡಿಲೀಟ್ ಮಾಡಿ. ಸಾಕಷ್ಟು ಬ್ಯಾಂಕ್ ಬ್ಯಾಲೆನ್ಸ್ ಆದ ಮೇಲೆ ಇಂಥ ಅಕೌಂಟ್‌ಗಳನ್ನು ಇಟ್ಟುಕೊಳ್ಳಬಹುದು. ದಿನಕ್ಕೆ ಎರಡು ಸಲ ತಣ್ಣೀರಿನ ಸ್ನಾನ ಮಾಡಿ. ಸ್ವಿಮಿಂಗ್ ಮಾಡಿ.
ಪ್ರತಿರಾತ್ರಿ ಮಲಗುವ ಹಾಗೂ ಬೆಳಿಗ್ಗೆ ಏಳುವ ಸಮಯವನ್ನು ಶಿಸ್ತಿನಿಂದ ಪಾಲಿಸಿ. ಹಿತಮಿತವಾದ ಸಮತೋಲಿತ ಆಹಾರವನ್ನು ಸೇವಿಸಿ. ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕನಿಷ್ಠ ಅರ್ಧಗಂಟೆ ವಾಕಿಂಗ್ ಹಾಗೂ ಅರ್ಧ ಗಂಟೆ ವ್ಯಾಯಾಮ ಮಾಡಿ. ದಿನಕ್ಕೆರಡು ಸಲ ಕನಿಷ್ಠ ಹತ್ತು ನಿಮಿಷಗಳಂತೆ ಧ್ಯಾನ ಮಾಡುವುದನ್ನು ಪ್ರಾರಂಭಿಸಿ. ಧ್ಯಾನದಿಂದ ಮನಸ್ಸು ಸಮಾಧಾನ
ಗೊಳ್ಳುತ್ತದೆ. ತಂದೆಯ ನಂಬಿಕೆ ನಿಮಗೆ ಹೊರೆಯಾಗುವ ಬದಲು, ಅದು ನಿಮ್ಮ ‘ಶಕ್ತಿ’ಯಾಗಲಿ. ಹಾಗೆಯೇ ಮೊದಲು ನಿಮ್ಮ ಮೇಲೆ ನಂಬಿಕೆಯನ್ನು ಬೆಳೆಸಿಕೊಳ್ಳಿ. ನಿಮ್ಮ ಸಹಜ ಆಸೆ ಹಾಗೂ ಸಾಮರ್ಥ್ಯಕ್ಕಿಂತಲೂ ಹೆಚ್ಚಿನದಾದ ಗುರಿಯನ್ನು ಇಟ್ಟುಕೊಳ್ಳಬೇಡಿ.
ಪ್ರತಿರಾತ್ರಿ ಮಲಗುವ ಮೊದಲು ಕಣ್ಮುಚ್ಚಿ ಕುಳಿತು ಕೊಳ್ಳಿ. ಆರೇಳು ಸಲ ದೀರ್ಘವಾಗಿ ಉಸಿರಾಡಿ. ನಂತರ ನೀವು ಸರ್ಕಾರಿ ಅಧಿಕಾರಿಯಾದಂತೆ, ಆಫೀಸಿನಲ್ಲಿ ನೀವು ನಿಮ್ಮ ಕೆಲಸವನ್ನು ಮಾಡುತ್ತಿರುವಂತೆ, ನಿಮ್ಮ ಆಫೀಸಿನವರು ನಿಮ್ಮನ್ನು ಗೌರವಿಸಿದಂತೆ ಪದೇ ಪದೇ ಅಂದುಕೊಳ್ಳಿ. ಓದುವಾಗ ಹೆಚ್ಚಿನದನ್ನು ಘಟನೆ ಗಳಾಗಿಯೂ ಚಿತ್ರಗಳಾಗಿಯೂ ನಾಟಕೀಯ ಸನ್ನಿವೇಶ ಗಳಾಗಿಯೂ ಅರ್ಥಮಾಡಿಕೊಳ್ಳಿ. ಅವು ಸುಲಭವಾಗಿ ನೆನಪಿನಲ್ಲಿ ಇರುತ್ತವೆ. ನಿಮ್ಮನ್ನು ಬೇರೆಯವರೊಂದಿಗೆ ಹೋಲಿಸಿಕೊಳ್ಳುವುದು ತಪ್ಪು. ಪ್ರತಿಯೊಬ್ಬರಿಗೂ ಅವರದ್ದೇ ಆದ ಸಾಮರ್ಥ್ಯ ಇರುತ್ತದೆ. ಚಿರತೆಯ ಓಡುವ ಸಾಮರ್ಥ್ಯವನ್ನು ಆನೆಯ ಶಕ್ತಿಯ ಜೊತೆಗೆ ಹೋಲಿಸಿ, ಯಾರು ಹೆಚ್ಚು ಶಕ್ತಿವಂತರು ಎಂದು ಹೇಳುವುದು ಸಾಧ್ಯವಿಲ್ಲ. ಹಾಗೆಯೇ ನಿಮ್ಮ ವ್ಯಕ್ತಿತ್ವದ ವಿಶೇಷತೆಯನ್ನು ಸಲ್ಮಾನ್ ಖಾನ್ ವ್ಯಕ್ತಿತ್ವದ ಜೊತೆಗೆ ಹೋಲಿಸುವುದು ತಪ್ಪು. ಜಾಕಿಚಾನ್ ಎಂದಾಗ ನಿಮಗೆ ಅಮಿತಾಭ್ ಬಚ್ಚನ್ ನೆನಪಾಗಲು ಸಾಧ್ಯವಿಲ್ಲ!
ಬದುಕಿನ ಬಗ್ಗೆ ಅಪಾರವಾದ ನಿರೀಕ್ಷೆ
ಗಳನ್ನು ಇಟ್ಟುಕೊಳ್ಳಬೇಡಿ. ಬದುಕು ಬಂದಂತೆ ಸ್ವೀಕರಿಸಿ. ಒಮ್ಮೆ ನಪಾಸಾದರೆ ಕುಗ್ಗಬೇಡಿ. ಮತ್ತೆ ಪಾಸಾಗುವತ್ತ ಪ್ರಯತ್ನಿಸಿ. ವಿಫಲವಾದ ಪ್ರೀತಿಯ ಬಗ್ಗೆ ಆಲೋಚಿಸಬೇಡಿ. ಮುಂದೆ ಸಿಗಲಿರುವ ಚೆಂದನೆಯ ಪ್ರೀತಿಯ ಬಗ್ಗೆ ಉತ್ಸುಕರಾಗಿ. ಅದನ್ನು ಸ್ವೀಕರಿಸುವುದಕ್ಕಾಗಿ ನಿಮ್ಮ ವ್ಯಕ್ತಿತ್ವವನ್ನು ಹುರಿಗೊಳಿಸಿಕೊಳ್ಳಿ. ಜೀವನದಲ್ಲಿ ಒಂದೊಂದೇ ಮೆಟ್ಟಿಲೇರಿ ಹೋಗಬೇಕು. ಅದು ಬದುಕಿನ ರೀತಿ.
(ಲೇಖಕರು: ಡಾ ಡಿ.ಎಂ. ಹೆಗಡೆ, ಆಪ್ತಸಮಾಲೋಚಕ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.