ADVERTISEMENT

ಸೀಟ್‌ ಬ್ಲಾಕಿಂಗ್‌: 400 ಅಭ್ಯರ್ಥಿಗಳ ಶ್ರೇಯಾಂಕಕ್ಕೆ ಕೆಇಎ ತಡೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2025, 9:06 IST
Last Updated 20 ಜೂನ್ 2025, 9:06 IST
<div class="paragraphs"><p>ಕೆಇಎ</p></div>

ಕೆಇಎ

   

ಬೆಂಗಳೂರು: ಎಂಜಿನಿಯರಿಂಗ್‌ ಸೀಟುಗಳನ್ನು ಬ್ಲಾಕ್‌ ಮಾಡಿದ್ದ ಆರೋಪ ಎದುರಿಸುತ್ತಿರುವ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು 2025–26ನೇ ಸಾಲಿನಲ್ಲೂ ಪರೀಕ್ಷೆ ಬರೆದಿದ್ದು, ಅಂತಹ ವಿದ್ಯಾರ್ಥಿಗಳ ಶ್ರೇಯಾಂಕವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಡೆಹಿಡಿದಿದೆ.

2024–25ನೇ ಸಾಲಿನ ಪ್ರವೇಶದ ವೇಳೆ ಸೀಟ್‌ ಬ್ಲಾಕಿಂಗ್‌ ದಂಧೆ ನಡೆದಿತ್ತು. ಎಂಜಿನಿಯರಿಂಗ್‌ ಕೋರ್ಸ್‌ಗಳ ‘ಸೀಟ್‌ ಬ್ಲಾಕಿಂಗ್‌’ ದಂಧೆ ನಡೆಸುತ್ತಿದ್ದವರ ವಿರುದ್ಧ ಮಲ್ಲೇಶ್ವರದ ಸೈಬರ್‌ ಅಪರಾಧ ಹಾಗೂ ಮಾದಕ ವಸ್ತುಗಳ ನಿಯಂತ್ರಣ ಠಾಣೆ(ಸೈಬರ್)ಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. 

ADVERTISEMENT

ಸೀಟು ಹಂಚಿಕೆಯಾಗಿದ್ದರೂ, ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪಡೆಯದ 2,348 ವಿದ್ಯಾರ್ಥಿಗಳಿಗೆ ಕೆಇಎ ನೋಟಿಸ್‌ ನೀಡಿತ್ತು. ಕೆಲವರು ಉತ್ತರ ನೀಡಿದರೆ, ಬಹುತೇಕ ವಿದ್ಯಾರ್ಥಿಗಳು ನೋಟಿಸ್‌ಗೆ ಉತ್ತರ ನೀಡಿರಲಿಲ್ಲ. ನೋಟಿಸ್‌ ನೀಡಿದ್ದರೂ ಉತ್ತರ ನೀಡದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಬಾರಿಯೂ ಸಿಇಟಿ ಬರೆದಿದ್ದರು. ಅಂಥವರ ಶ್ರೇಯಾಂಕವನ್ನು ಕೆಇಎ ತಡೆಹಿಡಿದಿದೆ. 

ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ 2024–25ನೇ ಸಾಲಿಗೆ ನಡೆದಿದ್ದ ಸಿಇಟಿಯಲ್ಲಿ ಉನ್ನತ ರ್‍ಯಾಂಕ್‌ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳು ಎರಡನೇ ಸುತ್ತು ಪೂರ್ಣಗೊಳ್ಳುವವರೆಗೂ ಸೀಟು ಹಿಡಿದಿಟ್ಟುಕೊಂಡು ಕೊನೆಯ ಸುತ್ತಿನ ನಂತರ ತಮಗೆ ಹಂಚಿಕೆಯಾದ ಕಾಲೇಜುಗಳಿಗೆ ಪ್ರವೇಶ ಪಡೆಯದೇ ಇತರೆ ವಿದ್ಯಾರ್ಥಿಗಳಿಗೆ ನಷ್ಟ ಮಾಡಿದ್ದರು ಎಂದು ಕೆಇಎ ಆರೋಪಿಸಿತ್ತು.  

‘ಸೀಟ್‌ ಬ್ಲಾಕಿಂಗ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಕೆಲವರು ಶ್ರೇಯಾಂಕ ನೀಡುವಂತೆ ಮನವಿ ಸಲ್ಲಿಸಿದ್ದು, ಅವರ ಅಹವಾಲು ಆಲಿಸಲು ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಹಾಗೂ ಪೊಲೀಸರು ಸಲ್ಲಿಸಿದ ದೋಷಾರೋಪ ಪಟ್ಟಿ ಪರಿಶೀಲನೆಯ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್‌. ಪ್ರಸನ್ನ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.