ADVERTISEMENT

ಡಿ.ಎಂ.ಹೆಗಡೆ ಅವರ ಸಮಾಧಾನ ಅಂಕಣ: ಪೋಷಕರಿಗೆ ಹೇಗೆ ಮನವರಿಕೆ ಮಾಡಲಿ?

ಡಿ.ಎಂ.ಹೆಗಡೆ
Published 25 ಮೇ 2025, 23:30 IST
Last Updated 25 ಮೇ 2025, 23:30 IST
   

ಅಪ್ಪ–ಅಮ್ಮ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ತೆಗೆದುಕೊ ಅಂತಿದಾರೆ. ನನಗದರಲ್ಲಿ ಆಸಕ್ತಿ ಇಲ್ಲ. ಕಲಾವಿಭಾಗಕ್ಕೆ ಹೋಗಬೇಕಿದೆ. ಅಪ್ಪ ಅಮ್ಮನಿಗೆ ಮನವರಿಕೆ ಮಾಡಿ ಕೊಡಲು ಆಗುತ್ತಿಲ್ಲ. ಏನು ಮಾಡಲಿ?

ಇದು ಬಹಳ ಮನೆಗಳಲ್ಲಿ ಇರುವ ಸಾಮಾನ್ಯ ಸಮಸ್ಯೆ. ಪಾಲಕರಿಗೆ ತಮ್ಮ ಮಕ್ಕಳನ್ನು ಎಂಜಿನಿಯರ್‌, ಡಾಕ್ಟರ್‌ ಮಾಡುವ ಆಸೆ. ಅದಕ್ಕಾಗಿಯೇ ಅವರು ಬಹಳಷ್ಟು ಶ್ರಮಿಸಿರುತ್ತಾರೆ. ಮಕ್ಕಳಿಗೆ ಅದು ಇಷ್ಟ ಇರುವುದಿಲ್ಲ. ಇದು ಸೂಕ್ಷ್ಮವಾದ ಸಮಸ್ಯೆ. ಯಾರ ಪರವಾಗಿ ಮಾತನಾಡಿದರೂ ನೂರಕ್ಕೆ ನೂರು ಸರಿಯಾಗುವುದಿಲ್ಲ.

ಕೆಲವು ಸಲ ಮಕ್ಕಳಿಗೆ ತಮ್ಮ ಸಾಮರ್ಥ್ಯದ ಅರಿವು ಇರುವುದಿಲ್ಲ. ಹನುಮಂತನಿಗೆ ತನಗೆ ಸಮುದ್ರವನ್ನು ಹಾರುವ, ಲಂಕೆಯನ್ನು ತಲುಪುವ ಶಕ್ತಿ ಇದೆ ಎನ್ನುವುದರ ಅರಿವು ಇರಲಿಲ್ಲ. ಉಳಿದವರಿಗೆ ಮಾತ್ರ ಹನುಮಂತನ ಶಕ್ತಿಯ ಮೇಲೆ ವಿಶ್ವಾಸ ಇತ್ತು. ಉಳಿದವರು ಅವನನ್ನು ಹೊಗಳಿ, ಪ್ರೋತ್ಸಾಹಿಸಿದ ನಂತರ, ಆತ ಸಮುದ್ರವನ್ನು ಹಾರಿ, ಲಂಕೆಯನ್ನು ತಲುಪಿ, ಸೀತಾಮಾತೆಯನ್ನು ಹುಡುಕಿ, ಮಾತನಾಡಿಸಿಕೊಂಡು, ಲಂಕೆಯನ್ನು ದಹಿಸಿ, ವಾಪಸು ಬರುತ್ತಾನೆ. ಹೀಗೆಯೇ ನಮ್ಮ ಮಕ್ಕಳಲ್ಲಿಯೂ ಅಪಾರವಾದ ಶಕ್ತಿ ಇರುತ್ತದೆ. ಅವರು ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಅವರ ಸುಪ್ತಶಕ್ತಿಯ ಬಗ್ಗೆ ಬಹಳ ಸಲ ಪಾಲಕರಿಗೆ, ಕೆಲವು ಸಲ ಶಿಕ್ಷಕರಿಗೆ ತಿಳಿದಿರುತ್ತದೆ. ಆಗ ಅವರು ಆ ಮಗುವಿನ ಮನಸ್ಸನ್ನು ಧನಾತ್ಮಕವಾಗಿ ಪ್ರೇರೇಪಿಸಲಿಕ್ಕೆ ಪ್ರಯತ್ನಿಸುವುದು ತಪ್ಪಲ್ಲ. ಕೆಲವರಿಗೆ ಇದರಿಂದ ಅನುಕೂಲವಾಗುತ್ತದೆ.

ADVERTISEMENT

ಪಾಲಕರ/ಶಿಕ್ಷಕರ ಮಾತನ್ನು ಕೇಳಿದ ಮಕ್ಕಳು ಮುಂದೆ ಮಹತ್ತರವಾದುದ್ದನ್ನು ಸಾಧಿಸಿದ್ದು ಇದೆ. ಪಾಲಕರ/ ಶಿಕ್ಷಕರ ಮಾತಿನಂತೆ ನಡೆದು ಬಂದಿದ್ದರಿಂದ ಈ ಹಂತವನ್ನು ತಲುಪಲಿಕ್ಕೆ ಸಾಧ್ಯವಾಗಿದೆ ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದನ್ನು ಕಾಣುತ್ತೇವೆ.

ಕೆಲವು ಸಲ, ಮಕ್ಕಳ ಇಷ್ಟದ ವಿರುದ್ಧ ಪಾಲಕರು ಒತ್ತಾಯ ಮಾಡುವುದು ಒಳ್ಳೆಯದಲ್ಲ. ಅದರಿಂದ ಧನಾತ್ಮಕವಾದ ಪರಿಣಾಮಗಳಾಗುವುದು ಕಡಿಮೆ. ಮಗುವಿನ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹಿಸುವುದು ಒಳ್ಳೆಯದು. ಹಾಗಾದಾಗ ಮಗು ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಳ್ಳುತ್ತದೆ. ‘ನಿನ್ನ ಜೀವನ, ನಿನ್ನ ಆಯ್ಕೆ. ಅದಕ್ಕೆ ನಮ್ಮ ಇತಿ ಮಿತಿಯಲ್ಲಿ ಪ್ರೋತ್ಸಾಹ ಮಾಡುವುದು ನಮ್ಮ ಕರ್ತವ್ಯ’ ಎಂದು ಪಾಲಕರು ಸ್ಪಷ್ಟವಾಗಿ ಹೇಳಬಹುದು. ಇಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಸೌಹಾರ್ದಯುತವಾಗಿ ಹಂಚಿಕೊಳ್ಳಬಹುದು. ಇದರಿಂದ ಇಬ್ಬರಿಗೂ ಒಳ್ಳೆಯದಾಗುತ್ತದೆ. ಇನ್ನು, ವಿಜ್ಞಾನವನ್ನು ಓದಿದರೆ ಮಾತ್ರ ಹೆಚ್ಚು ಒಳ್ಳೆಯದು. ಬೇರೆ ವಿಷಯಗಳನ್ನು ಓದಿದರೆ ಅಷ್ಟೇನೂ ಒಳ್ಳೆಯದಲ್ಲ ಎನ್ನುವುದು ಸರಿಯಲ್ಲ. ಈಗ ಎಲ್ಲಾ ಕ್ಷೇತ್ರಗಳಲ್ಲಿಯೂ ಅವಕಾಶಗಳು ಹೇರಳವಾಗಿವೆ. ಸರಿಯಾಗಿ ಕೆಲಸವನ್ನು ಮಾಡುವವರ ಕೊರತೆ ಇದೆ. ಹಾಗಾಗಿ, ಆಸಕ್ತಿ ಇರುವ ವಿಷಯವನ್ನು ಶ್ರದ್ಧೆಯಿಂದ ಓದಿಕೊಂಡರೆ, ಸರಿಯಾಗಿ ಕೆಲಸವನ್ನು ಕಲಿತುಕೊಂಡರೆ, ಮಕ್ಕಳು ಉತ್ತಮವಾದ ಬದುಕನ್ನು ಬದುಕಬಹುದು. ಕಲೆಯ ವಿಷಯಗಳನ್ನು ಓದಿಕೊಂಡರೆ ಅವಕಾಶಗಳು ಹೇರಳವಾಗಿವೆ ಎನ್ನುವುದನ್ನು ಪಾಲಕರೂ ಅರ್ಥ ಮಾಡಿಕೊಳ್ಳಬೇಕು.

ಸರ್ಕಾರಿ/ ಖಾಸಗಿ ಕ್ಷೇತ್ರಗಳಲ್ಲಿ ಹಲವಾರು ಅವಕಾಶಗಳಿವೆ. ಇಷ್ಟವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಪಕವಾಗಿ ಎದುರಿಸಿ, ಬೇರೆ ಬೇರೆ ಹುದ್ದೆಗಳನ್ನು ಅಲಂಕರಿಸಬಹುದು.

ಬದುಕುವ ಛಲ ಇರುವವರಿಗೆ ಬದುಕುವುದು ಯಾವತ್ತಿಗೂ ಒಂದು ಸವಾಲಾಗಿ ಕಾಣುವುದಿಲ್ಲ. ಒಬ್ಬರಂತೆ ಒಬ್ಬರಿಲ್ಲ. ಹಾಗೆಯೇ, ಒಬ್ಬರ ಬದುಕಿನಂತೆ ಇನ್ನೊಬ್ಬರ ಬದುಕಿಲ್ಲ. ಇಷ್ಟದ ವಿಷಯವನ್ನು ಶ್ರದ್ಧೆಯಿಂದ ಓದಿ. ಜೀವನದಲ್ಲಿ ಶ್ರದ್ಧೆಯಷ್ಟೆ ಮುಖ್ಯ. ಶ್ರದ್ಧೆಗೆ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂಬುದನ್ನು ಮರೆಯಬೇಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.