ADVERTISEMENT

ಸಿದ್ದರಾಮಯ್ಯ ಮನಃಪೂರ್ವಕ ಪ್ರಚಾರ ಮಾಡಿಲ್ಲ: ಸುಮಲತಾ

​ಪ್ರಜಾವಾಣಿ ವಾರ್ತೆ
Published 2 ಮೇ 2019, 11:36 IST
Last Updated 2 ಮೇ 2019, 11:36 IST
ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಸುಮಲತಾ ಅವರನ್ನು ಬೆಂಬಲಿಗರು ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಧ್ವಜ ಹಿಡಿದು ಸ್ವಾಗತ ಕೋರಿದರು
ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಸುಮಲತಾ ಅವರನ್ನು ಬೆಂಬಲಿಗರು ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ ಧ್ವಜ ಹಿಡಿದು ಸ್ವಾಗತ ಕೋರಿದರು   

ಮಂಡ್ಯ: ‘ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲು ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ ಅವರು ಮನಃಪೂರ್ವಕವಾಗಿ ಒಪ್ಪಿ ಬಂದಿಲ್ಲ. ಜೆಡಿಎಸ್‌ ಮುಖಂಡರ ಬ್ಲಾಕ್‌ಮೇಲ್‌ ತಂತ್ರಕ್ಕೆ ಹೆದರಿ ಬಂದಿದ್ದಾರೆ’ ಎಂದು ಪಕ್ಷೇತರ ಅಭ್ಯರ್ಥಿ ಎ.ಸುಮಲತಾ ಶನಿವಾರ ಹೇಳಿದರು.

ಮಳವಳ್ಳಿ ತಾಲ್ಲೂಕು ಗೊಲ್ಲರಹಳ್ಳಿಯಲ್ಲಿ ಅವರು ಮಾತನಾಡಿ ‘ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಿ ಕರೆದುಕೊಂಡು ಬಂದಿದ್ದಾರೆ. ಪಕ್ಷೇತರ ಅಭ್ಯರ್ಥಿಗೆ ಮತಹಾಕಬೇಡಿ ಎಂದು ಒಲ್ಲದ ಮನಸ್ಸಿನಿಂದಲೇ ಹೇಳಿದ್ದಾರೆ. ರಾಹುಲ್‌ ಗಾಂಧಿ ಬಂದು ಪ್ರಚಾರ ನಡೆಸಿದರೂ ಅದರಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ. ಎಚ್‌.ಡಿ.ದೇವೇಗೌಡರನ್ನು ನಾವು ತಂದೆಯ ಸ್ಥಾನದಲ್ಲಿ ನೋಡುತ್ತೇವೆ. ಅವರೂ ಹಾಗೆಯೇ ನಮ್ಮನ್ನು ಮಕ್ಕಳ ಸ್ಥಾನದಲ್ಲಿ ನೋಡಬೇಕು. ಆದರೆ ಜೆಡಿಎಸ್‌ ಮುಖಂಡರು ಅಂಬರೀಷ್‌ ಸಾವಿನ ವಿಚಾರದಲ್ಲಿ ಹೇಸಿಗೆ ರಾಜಕಾರಣ ಮಾಡುತ್ತಿದ್ದಾರೆ’ ವಾಗ್ದಾಳಿ ನಡೆಸಿದರು.

‘ಮುಖ್ಯಮಂತ್ರಿಗಳ ಬಾಯಿಯಲ್ಲಿ ತುಚ್ಚಮಾತು ಬರುತ್ತಿವೆ. ಮಹಿಳೆ ಬಗ್ಗೆ ಗೌರವವಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲ. ನಮ್ಮ ದೇಶ ಕಾಯುವ ಯೋಧರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಮಗನನ್ನು ಎಂ.ಪಿ ಮಾಡುವ ಬದಲು ದೇಶ ಕಾಯಲು ಸೈನ್ಯಕ್ಕೆ ಕಳುಹಿಸಿದ್ದರೆ ಸೈನಿಕರ ಬಗ್ಗೆ ಅವರಿಗೆ ತಿಳಿಯುತ್ತಿತ್ತು’ ಎಂದರು.

ADVERTISEMENT

ಕಾಂಗ್ರೆಸ್‌–ಬಿಜೆಪಿ– ಜೆಡಿಎಸ್‌ ಧ್ವಜ ಸಂಗಮ

ಮಳವಳ್ಳಿ ತಾಲ್ಲೂಕು ಕೊನ್ನಾಪುರ ಗ್ರಾಮದಲ್ಲಿ ಸುಮಲತಾ ಪ್ರಚಾರದ ವೇಳೆ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರು ಪಕ್ಷಗಳ ಧ್ವಜಗಳು ರಾರಾಜಿಸಿದವು. ಮೂರು ಪಕ್ಷಗಳ ಧ್ವಜ ಹಿಡಿದ ಜನರು ಒಗ್ಗಟ್ಟಿನಿಂದ ಸ್ವಾಗತ ಕೋರಿದರು. ಆ ದೃಶ್ಯವನ್ನು ಕಂಡ ಸುಮಲತಾ ‘ಮಂಡ್ಯದಲ್ಲಿ ಇತಿಹಾಸ ಅಂದರೆ ಇದೇನೇ. ಇಡೀ ದೇಶದಲ್ಲಿ ಮೂರು ಪಕ್ಷದ ಬಾವುಟ ಒಂದೇ ಕಡೆ ಇರುವುದನ್ನು ನೋಡಿದ್ದೀರಾ. ಅಂಬರೀಷ್‌ಗೆ ಎಲ್ಲಾ ಪಕ್ಷಗಳಲ್ಲೂ ಸ್ನೇಹಿತರು ಇದ್ದರು ಎನ್ನುವುದಕ್ಕೆ ಇದೇ ಸಾಕ್ಷಿ’ ಎಂದರು.

ನಂತರ ಜೆಡಿಎಸ್‌ ಯುವನಾಯಕಿ ಡಾ.ಲಕ್ಷ್ಮಿ ಅಶ್ವಿನ್‌ಗೌಡ ಅವರ ತವರು ನಿಟ್ಟೂರು ಕೋಡಿಹಳ್ಳಿಯಲ್ಲಿ ಪ್ರಚಾರ ಮಾಡಿದರು. ‘ನಿಮ್ಮೂರಿನ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಐಆರ್‌ಎಸ್‌ ಅಧಿಕಾರಿಗೆ ಜೆಡಿಎಸ್‌ ಮೋಸ ಮಾಡಿದೆ. ಕೆಲಸ ಬಿಡಿಸಿ ಕರೆತಂದು ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.

ಶಿವರಾಮೇಗೌಡಗೆ ಬುದ್ಧಿಭ್ರಮಣೆ: ಯಶ್‌

ನಾಗಮಂಗಲ ತಾಲ್ಲೂಕು ದೇವಲಾಪುರದಲ್ಲಿ ಪ್ರಚಾರ ಮಾಡಿದ ನಟ ಯಶ್‌, ಸಂಸದ ಶಿವರಾಮೇಗೌಡರ ವಿರುದ್ಧ ವಾಗ್ದಾಳಿ ನಡೆಸಿದರು.

‘ಅವರಿಗೆ ಬುದ್ಧಿಭ್ರಮಣೆಯಾಗಿರಬಹುದು. ಮಹಿಳೆಯರ ಮೇಲೆ ಸ್ವಲ್ಪವೂ ಗೌರವ ಇಲ್ಲ. ಬಸ್‌ ಸೀಟಿಗೆ ಕರ್ಚಿಫ್‌ ಇಟ್ಟು ಸೀಟು ಕಾಯ್ದಿರಿಸುವಂತೆ ಅವರನ್ನು ಜೆಡಿಎಸ್‌ನಲ್ಲಿ ಬಳಸಿಕೊಳ್ಳಲಾಗಿದೆ. ಸುಮಲತಾ ಅವರನ್ನು ಮಾಯಾಂಗನೆ ಎಂದು ಹೇಳಿರುವುದು ಖಂಡನೀಯ. ಇದಕ್ಕೆ ಜನರು ತಕ್ಕ ಉತ್ತರ ನೀಡಬೇಕು’ ಎಂದು ಹೇಳಿದರು.

ನಟ ದರ್ಶನ್‌ ಶ್ರೀರಂಗಪಟ್ಟಣದ ಇಂಡುವಾಳು ಗ್ರಾಮದಲ್ಲಿ ಜೋಡೆತ್ತಿನ ಗಾಡಿ ಹೊಡೆದು ಪ್ರಚಾರ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.