ADVERTISEMENT

ಸಂದರ್ಶನ | ಹಾಸನ ಜಿಲ್ಲೆ ಅಭಿವೃದ್ಧಿ ಮಾಡಿದ್ದು ನಮ್ಮ ತಾತಂದಿರು: ಶ್ರೇಯಸ್ ಪಟೇಲ್‌

ಚಿದಂಬರಪ್ರಸಾದ್
Published 23 ಏಪ್ರಿಲ್ 2024, 4:13 IST
Last Updated 23 ಏಪ್ರಿಲ್ 2024, 4:13 IST
<div class="paragraphs"><p>ಶ್ರೇಯಸ್ ಪಟೇಲ್‌</p></div>

ಶ್ರೇಯಸ್ ಪಟೇಲ್‌

   
‘ಹಾಸನ ಜಿಲ್ಲೆ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡಿದ್ದು ನಮ್ಮ ತಾತಂದಿರಾದ ಜಿ.ಪುಟ್ಟಸ್ವಾಮಿಗೌಡರು, ಎಚ್‌.ಸಿ. ಶ್ರೀಕಂಠಯ್ಯನವರು. ಜೆಡಿಎಸ್‌ನವರೇ ಮೂರು ದಶಕಗಳಿಂದ ಅಧಿಕಾರದಲ್ಲಿದ್ದು, ಜಿಲ್ಲೆಯ ಅಭಿವೃದ್ಧಿಗೆ ಹೇಳಿಕೊಳ್ಳುವಂತಹ ಕೆಲಸ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಲಿ’ ಎನ್ನುತ್ತಲೇ ಮಾತಿಗೆ ಇಳಿದ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಶ್ರೇಯಸ್ ಪಟೇಲ್‌, ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನ ಇಲ್ಲಿದೆ.

ಕಾಂಗ್ರೆಸ್‌ಗೆ ಗ್ಯಾರಂಟಿ ಯೋಜನೆ ಹಾಗೂ ಪುಟ್ಟಸ್ವಾಮಿಗೌಡರ ಕಾರ್ಯವೇ ಆಸರೆಯೇ?

ಕಾಂಗ್ರೆಸ್‌ ಗ್ಯಾರಂಟಿಗಳಿಗೆ ಉತ್ತಮ ಬೆಂಬಲ ಸಿಗುತ್ತಿದೆ. 8 ತಿಂಗಳಲ್ಲಿಯೇ ಎಲ್ಲ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು ಕಾಂಗ್ರೆಸ್‌. ಈ ಬಾರಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಜನರ ನಾಡಿಮಿಡಿತ ತಿಳಿದುಕೊಂಡವರಿಗೆ ಮತ ನೀಡಲು ನಿರ್ಧರಿಸಿದ್ದಾರೆ. ನನ್ನ ಕುಟುಂಬಕ್ಕೆ ಆಗಿರುವ ಅನ್ಯಾಯವನ್ನು ಜನರ ಮುಂದಿಡುತ್ತಿದ್ದೇನೆ. ಇದೆಲ್ಲದರ ಪರಿಣಾಮ ಜಿಲ್ಲೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ಬೆಂಬಲ ಸಿಗುತ್ತಿದೆ.

ADVERTISEMENT

ಕಾಂಗ್ರೆಸ್‌ನಲ್ಲಿರುವ ಭಿನ್ನಾಭಿಪ್ರಾಯ ಬಗೆಹರಿದಿದೆಯೇ?

ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದವು. ಆದರೆ, ಅವೆಲ್ಲವೂ ಬಗೆಹರಿದಿವೆ. ಎಲ್ಲರೂ ಒಟ್ಟಾಗಿ ನನ್ನ ಪರವಾಗಿ ಮತಯಾಚನೆ ಮಾಡುತ್ತಿದ್ದಾರೆ. ಈ ಬಾರಿ ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ.

ಜಿಲ್ಲೆಯ ಅಭಿವೃದ್ಧಿಗೆ ಕಾಂಗ್ರೆಸ್‌ ಅಭ್ಯರ್ಥಿ ಏನು ಮಾಡಿದ್ದಾರೆ ಎಂದು ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್‌ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ?

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇ ಕಾಂಗ್ರೆಸ್‌. ಸಕ್ಕರೆ ಕಾರ್ಖಾನೆ, ನೀರಾವರಿ, ಆಸ್ಪತ್ರೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಪುಟ್ಟಸ್ವಾಮಿಗೌಡರು, ಶ್ರೀಕಂಠಯ್ಯನವರು, ನಂಜೇಗೌಡರು ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಭದ್ರ ತಳಪಾಯ ಹಾಕಿದ್ದಾರೆ. ಶಾಶ್ವತ ಅಭಿವೃದ್ಧಿ ಮಾಡಿರುವುದು ನಮ್ಮ ತಾತ ಪುಟ್ಟಸ್ವಾಮಿಗೌಡರು. ಇಲ್ಲಿಯವರೆಗೆ ಅಧಿಕಾರದಲ್ಲಿ ಇದ್ದ ಜೆಡಿಎಸ್‌ನವರು ಯಾವ ಅಭಿವೃದ್ಧಿ ಮಾಡಿದ್ದಾರೆ? ಜಿಲ್ಲೆಯ ಯಾವ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತಿದ್ದಾರೆ?

ಬಿಜೆಪಿ–ಜೆಡಿಎಸ್‌ ಮೈತ್ರಿ ಕಾಂಗ್ರೆಸ್‌ ಮೇಲೆ ಪರಿಣಾಮ ಬೀರಲಿದೆಯೇ?

ಜಾತ್ಯತೀತವಾಗಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಜೆಡಿಎಸ್‌ನವರು ಕಳೆದ ಬಾರಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರು. ನಂತರ ಏನು ಮಾಡಿದರು? ಈ ಬಾರಿ ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ. ಏ.26ರ ನಂತರ ಬಿಜೆಪಿಯವರ ಜೊತೆಗೂ ಅದನ್ನೇ ಮಾಡುತ್ತಾರೆ. ಅದಕ್ಕೂ ಮುನ್ನ ನೀವೇ ಎಚ್ಚೆತ್ತುಕೊಳ್ಳಿ ಎಂದು ಬಿಜೆಪಿಯವರಿಗೂ ಮನವಿ ಮಾಡುತ್ತೇನೆ. ಮೈತ್ರಿಯಿಂದ ಕಾಂಗ್ರೆಸ್‌ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ.

ಸಂಸದರಾಗಿ ಆಯ್ಕೆಯಾದರೆ, ಜಿಲ್ಲೆಗೆ ನೀವು ಕೊಡುವ ಯೋಜನೆಗಳು ಏನು?

ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತೇನೆ. ಮಹಿಳೆಯರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುತ್ತೇನೆ. ಕಾಡಾನೆ ಸಮಸ್ಯೆ ನಿವಾರಣೆ, ಮಲೆನಾಡಿನಲ್ಲಿ ನೀರಿನ ಸಮಸ್ಯೆ ನಿವಾರಣೆ, ಕೊಬ್ಬರಿ, ತಂಬಾಕು, ಸಾಂಬಾರ ಪದಾರ್ಥಗಳಿಗೆ ಯೋಗ್ಯದರ ಒದಗಿಸುವ ಕೆಲಸ ಮಾಡುತ್ತೇನೆ. ಹಾಸನ ನಗರದಲ್ಲಿ ಯುಜಿಡಿ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಯತ್ನ ಮಾಡುತ್ತೇನೆ. ಕಡೂರಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಶ್ರಮಿಸುತ್ತೇನೆ.

ರಾಜಕೀಯ ಹಿನ್ನೆಲೆ, ವಯಸ್ಸು, ವಿದ್ಯಾರ್ಹತೆ ಎಲ್ಲದರಲ್ಲೂ ಎನ್‌ಡಿಎ ಅಭ್ಯರ್ಥಿ ಹಾಗೂ ನೀವು ಸಮಬಲರಾಗಿದ್ದೀರಿ. ಜನರು ನಿಮಗೇ ಏಕೆ ಮತ ನೀಡಬೇಕು?

ಒಂದು ಬದಲಾವಣೆ ತೆಗೆದುಕೊಂಡು ಬನ್ನಿ ಎಂದು ಮನವಿ ಮಾಡುತ್ತಿದ್ದೇನೆ. ಇಲ್ಲಿಯವರೆಗೆ ಎಲ್ಲ ಅಧಿಕಾರವನ್ನೂ ಅವರಿಗೆ ಕೊಟ್ಟಿದ್ದೀರಿ. ಈ ಬಾರಿ ನನಗೂ ಒಂದು ಅವಕಾಶ ನೀಡಿ. ತಾತನ ಹಾದಿಯಲ್ಲಿ ಮುಂದುವರಿಯುತ್ತೇನೆ. ಶ್ರೇಯಸ್‌ ಮೇಲೆ ನಂಬಿಕೆ ಇಟ್ಟು ನೋಡಿ. ಕೆಲಸ ಮಾಡದಿದ್ದರೆ ಶಿಕ್ಷೆ ಕೊಡಿ. ಜನರಿಗೆ ಸ್ಪಂದಿಸುವ ಇಚ್ಛಾಶಕ್ತಿ ಇರುವವರನ್ನು ಆಯ್ಕೆ ಮಾಡಿ ಎಂದು ಕೋರುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.