ADVERTISEMENT

ಕೋಲಾರ ಲೋಕಸಭಾ ಕ್ಷೇತ್ರ: ಜೆಡಿಎಸ್‌ನದ್ದು ಕಾದು ನೋಡುವ ತಂತ್ರ!

ಕಾಂಗ್ರೆಸ್‌ ಟಿಕೆಟ್‌ ತಪ್ಪಿದರೆ ಚಿಕ್ಕಪೆದ್ದಣ್ಣ ಸೆಳೆಯಲು ಜೆಡಿಎಸ್‌ ವರಿಷ್ಠರ ಪ್ರಯತ್ನ?

ಕೆ.ಓಂಕಾರ ಮೂರ್ತಿ
Published 29 ಮಾರ್ಚ್ 2024, 4:35 IST
Last Updated 29 ಮಾರ್ಚ್ 2024, 4:35 IST
ಕೆ.ಜಿ.ಚಿಕ್ಕಪೆದ್ದಣ್ಣ
ಕೆ.ಜಿ.ಚಿಕ್ಕಪೆದ್ದಣ್ಣ   

ಕೋಲಾರ: ಕೋಲಾರ ಮೀಸಲು ಕ್ಷೇತ್ರದ ಅಭ್ಯರ್ಥಿ ವಿಚಾರವಾಗಿ ಜೆಡಿಎಸ್‌ ಪಕ್ಷದವರು ಕಾದು ನೋಡುವ ತಂತ್ರಕ್ಕೆ ಮುಂದಾಗಿದ್ದಾರೆ. ಕಾಂಗ್ರೆಸ್‌ ಪಕ್ಷ ಕೈಗೊಳ್ಳುವ ನಿರ್ಧಾರದ ಮೇಲೆ ತಮ್ಮ ಅಭ್ಯರ್ಥಿ ಪ್ರಕಟಿಸಲು ನಿರ್ಧರಿಸಿದ್ದಾರೆ ಎಂಬುದು ಗೊತ್ತಾಗಿದೆ.

ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾದರೂ ಕ್ಷೇತ್ರದ ಟಿಕೆಟ್‌ಗಾಗಿ ಈ ಎರಡೂ ಪಕ್ಷದಲ್ಲಿ ಗೊಂದಲ ಬಗೆಹರಿದಿಲ್ಲ.

ಈಗಾಗಲೇ ಬಂಗಾರಪೇಟೆಯ ಎಂ.ಮಲ್ಲೇಶ್‌ ಬಾಬು ಅವರ ಹೆಸರನ್ನು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಸನದಲ್ಲಿ ಘೋಷಿಸಿದ್ದರು. ಆದರೆ, ಅದೇ ಅಂತಿಮವಲ್ಲವೆಂದು ಪಕ್ಷದ ರಾಜ್ಯ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ, ಆ ಪಕ್ಷದಲ್ಲೂ ಟಿಕೆಟ್‌ ವಿಷಯ ಕಗ್ಗಂಟಾಗಿದೆ.

ADVERTISEMENT

ದೇವನಹಳ್ಳಿ‌ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ನಿಸರ್ಗ ನಾರಾಯಣಸ್ವಾಮಿ ಹೆಸರು ಈಗ ಮುನ್ನೆಲೆಗೆ ಬಂದಿದೆ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್‌ ಹೆಸರೂ ಪಟ್ಟಿಯಲ್ಲಿದೆ.

ಆಕಸ್ಮಾತ್‌ ಕಾಂಗ್ರೆಸ್‌ನಿಂದ ಕೋಲಾರ ಕ್ಷೇತ್ರದ ಟಿಕೆಟ್‌ ಕೈತಪ್ಪಿದರೆ ಕೆ.ಎಚ್‌.ಮುನಿಯಪ್ಪ ಅವರ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ (ಎಡಗೈ ಸಮುದಾಯ) ಅವರನ್ನೂ ಪಕ್ಷಕ್ಕೆ ಕರೆತರಲು ಜೆಡಿಎಸ್‌ ವರಿಷ್ಠರು ಪ್ರಯತ್ನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕಾಂಗ್ರೆಸ್‌ ಟಿಕೆಟ್‌ ಅಂತಿಮಗೊಳ್ಳುವುದಕ್ಕೆ ಹಾಗೂ ಮುನಿಯಪ್ಪ ಒಪ್ಪಿಗೆಗೆ ಚಿಕ್ಕಪೆದ್ದಣ್ಣ ಕಾದಿದ್ದಾರೆ ಎಂಬುದೂ ಗೊತ್ತಾಗಿದೆ.

ಕಾಂಗ್ರೆಸ್‌ ಟಿಕೆಟ್‌ಗಾಗಿ ಚಿಕ್ಕಪೆದ್ದಣ್ಣ ಹಾಗೂ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ ಬಣದ ಸಿ.ಎಂ.ಮುನಿಯಪ್ಪ (ಬಲಗೈ ಸಮುದಾಯ) ಬಹಳ ದಿನಗಳಿಂದ ಪಟ್ಟು ಹಿಡಿದಿದ್ದಾರೆ. ಆದರೆ, ಇವರಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ಒಂದು ಬಣ ವಿರೋಧದಿಂದ ವ್ಯಕ್ತವಾಗುವ ಕಾರಣ ಬಣದಾಚೆಗಿನ ವ್ಯಕ್ತಿಗೆ ಟಿಕೆಟ್‌ ನೀಡಲು ಪಕ್ಷದ ವರಿಷ್ಠರು ಚಿಂತಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಬೆಂಗಳೂರಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಸಭೆಯೂ ನಡೆದಿದೆ. ರಮೇಶ್‌ ಕುಮಾರ್‌ ಬಣದ ಸಚಿವ ಡಾ.ಎಂ.ಸಿ.ಸುಧಾಕರ್‌, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್, ಶಾಸಕರಾದ ಕೆ.ವೈ.ನಂಜೇಗೌಡ, ಕೊತ್ತೂರು ಮಂಜುನಾಥ್‌, ಪ್ರದೀಪ್‌ ಈಶ್ವರ್‌, ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌, ಮುಳಬಾಗಿಲು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಆದಿನಾರಾಯಣ ಹಾಗೂ ಇತರ ಮುಖಂಡರು ಪಾಲ್ಗೊಂಡಿದ್ದರು.

‘ನಾವು ಟಿಕೆಟ್‌ ಬೇಡಿಕೆ ತ್ಯಜಿಸಲು ಸಿದ್ಧ. ಆದರೆ, ಕೆ.ಎಚ್‌.ಮುನಿಯಪ್ಪ ಕುಟುಂಬದವರಿಗೂ ಕೊಡಬಾರದು’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಭೆಗೆ ರಮೇಶ್‌ ಕುಮಾರ್‌ ಬಂದಿರಲಿಲ್ಲ. ಆದರೆ, ತಮ್ಮ ಬೆಂಬಲಿಗರಿಗೆ ಸೂಚನೆ ಕೊಟ್ಟು ಕಳುಹಿಸಿದ್ದರು ಎನ್ನಲಾಗಿದೆ.

ರಾಜ್ಯದ ಲೋಕಸಭಾ ಕ್ಷೇತ್ರಗಳ ಪೈಕಿ ಐದು ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿವೆ. ಕಾಂಗ್ರೆಸ್‌ ಈಗಾಗಲೇ ಎರಡು ಕ್ಷೇತ್ರಗಳ ಟಿಕೆಟ್‌ ಅನ್ನು (ವಿಜಯಪುರ, ಕಲಬುರಗಿ) ಬಲಗೈ ಸಮುದಾಯದ ಅಭ್ಯರ್ಥಿಗಳಿಗೆ ಕೊಟ್ಟಿದೆ. ಚಿತ್ರದುರ್ಗ ಕ್ಷೇತ್ರದಲ್ಲಿ ಎಡಗೈ ಸಮುದಾಯದ ಬಿ.ಎನ್‌.ಚಂದ್ರಪ್ಪ ಅವರಿಗೆ ಟಿಕೆಟ್‌ ನೀಡಿದೆ. ಚಾಮರಾಜನಗರ ಕ್ಷೇತ್ರದ ಟಿಕಟ್‌ ಡಾ.ಎಚ್.ಸಿ.ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ (ಬಲಗೈ) ಸಿಗುವ ಸಾಧ್ಯತೆ ಇದೆ. ಸಾಮಾಜಿಕ ನ್ಯಾಯಕ್ಕಾಗಿ ಕೋಲಾರ ಕ್ಷೇತ್ರ ಟಿಕೆಟ್‌ ಅನ್ನು ಎಡಗೈ ಅಭ್ಯರ್ಥಿಗೆ ಕೊಡಲು ಹೈಕಮಾಂಡ್‌ ನಿರ್ಧರಿಸಿರುವುದು ಗೊತ್ತಾಗಿದೆ. ಇದಕ್ಕೆ ಕೊನೆ ಹಂತದಲ್ಲಿ ರಮೇಶ್‌ ಕುಮಾರ್‌ ಬಣದವರು  ಕೂಡ ಒಪ್ಪಿಗೆ ಸೂಚಿಸಿರುವುದು ತಿಳಿದು ಬಂದಿದೆ.

ರಾಜ್ಯಸಭೆ ಮಾಜಿ ಸದಸ್ಯರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ ಎಲ್‌.ಹನುಮಂತಯ್ಯ (ಎಡಗೈ ಸಮುದಾಯ) ಹೆಸರೂ ಚಾಲ್ತಿಯಲ್ಲಿದೆ. ಅಲ್ಲದೇ, ಬೆಂಗಳೂರಿನ ಗೌತಮ್‌ (ಎಡಗೈ ಸಮುದಾಯ) ಎಂಬುವರ ಹೆಸರೂ ಗುರುವಾರ ಸಭೆಯಲ್ಲಿ ಪ್ರಸ್ತಾಪವಾಗಿದೆ.

ವಿರೋಧದ ನಡುವೆಯೂ ಚಿಕ್ಕಪೆದ್ದಣ್ಣಗೆ ಟಿಕೆಟ್‌ ಕೊಡಿಸಲು ಶತಪ್ರಯತ್ನ ರಮೇಶ್‌ ಕುಮಾರ್‌ ಬಣದ ವಿರೋಧದ ನಡುವೆಯೂ ಅಳಿಯ ಕೆ.ಜಿ.ಚಿಕ್ಕಪೆದ್ದಣ್ಣ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಲು ಸಚಿವ ಕೆ.ಎಚ್‌.ಮುನಿಯಪ್ಪ ಶತಪ್ರಯತ್ನ ಮುಂದುವರಿಸಿದ್ದಾರೆ. ಅದಕ್ಕೆ ಕುಟುಂಬದ ಒತ್ತಡವೂ ಇದೆ ಎನ್ನಲಾಗಿದೆ. ಕ್ಷೇತ್ರದ ಶಾಸಕರ ವಿರೋಧವಿದ್ದರೂ ಗೆಲ್ಲಿಸಿಕೊಂಡು ಬರುವ ತಾಕತ್ತು ತಮಗಿದೆ ಎಂದು ತಮ್ಮ ಬೆಂಬಲಿಗರಲ್ಲಿ ಹೇಳಿಕೊಂಡಿದ್ದಾರೆ. ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದಾರೆ. ‘2019ರ ಲೋಕಸಭೆ ಚುನಾವಣೆಯಲ್ಲಿ ಹಲವರು ನನ್ನ ವಿರುದ್ಧ ಕೆಲಸ ಮಾಡಿದ್ದರೂ 5 ಲಕ್ಷಕ್ಕೂ ಅಧಿಕ ಮತ ಪಡೆದಿದ್ದೆ. ಅದಕ್ಕೂ ಮೊದಲಿನ ಚುನಾವಣೆಯಲ್ಲಿ ಗೆದ್ದಾಗ ನಾನು ಪಡೆದಿದ್ದು ನಾಲ್ಕೂವರೆ ಲಕ್ಷ ಮತ ಅಷ್ಟೆ. ಕ್ಷೇತ್ರದಲ್ಲಿ ನಾನು ಏಳು ಬಾರಿ ಗೆದ್ದಿದ್ದು ಅನುಭವ ಇದೆ’ ಎಂದು ಅವರು ಈಚೆಗೆ ಸುದ್ದಿಗಾರರಿಗೆ ತಿಳಿಸಿದ್ದರು.

ಎಡ–ಬಲ ಪರ ಒತ್ತಡ ಪ್ರಮುಖ ನಾಯಕರು ಶಾಸಕರು ಹೈಕಮಾಂಡ್‌ ಮಟ್ಟದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಪಟ್ಟು–ಪ್ರತಿಪಟ್ಟು ಹಾಕುತ್ತಿದ್ದರೆ ಜಿಲ್ಲೆಯ ದಲಿತ ಮುಖಂಡರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೂಡ ತಮ್ಮ ವಾದ ಮುಂದಿಡುತ್ತಿದ್ದಾರೆ. ಕೆಲವರು ಎಡಗೈ ಸಮುದಾಯಕ್ಕೆ ಟಿಕೆಟ್‌ ಕೊಡಬೇಕೆಂದು ಒತ್ತಡ ಹಾಕುತ್ತಿದ್ದರೆ ಇನ್ನು ಕೆಲವರು ಬಲಗೈ ಸಮುದಾಯಕ್ಕೆ ನೀಡಬೇಕೆಂದು ಆಗ್ರಹ ಮಾಡುತ್ತಿದ್ದಾರೆ.

ಸಿ.ಎಂ ಡಿಸಿಎಂ ಮುಂದೆ ನಮ್ಮ ವಾದ ಮುಂದಿಟ್ಟೆವು. ಅವರು ನಮ್ಮ ಅಹವಾಲು ಆಲಿಸಿದರು. ತಾವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರಬೇಕೆಂದು ಸೂಚನೆ ನೀಡಿದರು
-ಎಂ.ಎಲ್‌.ಅನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಕಾಂಗ್ರೆಸ್‌
ಕೋಲಾರ ಟಿಕೆಟ್‌ಗಾಗಿ ನಾನೂ ರೇಸ್‌ನಲ್ಲಿ ಇದ್ದೇನೆ. ಕೊನೆ ಕ್ಷಣದವರೆಗೆ ಪ್ರಯತ್ನ ಮಾಡುತ್ತೇನೆ. ಹೈಕಮಾಂಡ್‌ ಕಳುಹಿಸಿದ ಪಟ್ಟಿಯಲ್ಲಿ ನನ್ನ ಹಾಗೂ ಚಿಕ್ಕಪೆದ್ದಣ್ಣ ಹೆಸರೂ ಇತ್ತು.
-ಎಲ್‌.ಹನುಮಂತಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.