ADVERTISEMENT

ವೆಲ್ಲೋರ್‌ನಲ್ಲಿ ಚುನಾವಣೆ ರದ್ದುಗೊಳಿಸಲು ಆಯೋಗ ಶಿಫಾರಸು

ಹಣ ನೀಡಿ ಮತದಾರರ ಮೇಲೆ ಪ್ರಭಾವ ಬೀರಿರುವ ಅನುಮಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2019, 4:51 IST
Last Updated 16 ಏಪ್ರಿಲ್ 2019, 4:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ:ತಮಿಳುನಾಡಿನ ವೆಲ್ಲೋರ್ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ರದ್ದುಗೊಳಿಸುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಚುನಾವಣಾ ಆಯೋಗ ಶಿಫಾರಸು ಮಾಡಿದೆ. ರಾಜಕೀಯ ಪಕ್ಷಗಳು ಹಣ ನೀಡಿ ಮತದಾರರ ಮೇಲೆ ಪ್ರಭಾವ ಬೀರಿರುವ ಅನುಮಾನದ ಮೇಲೆ ಆಯೋಗ ಈ ಕ್ರಮ ಕೈಗೊಂಡಿದೆ.

ವೆಲ್ಲೋರ್‌ ಜಿಲ‌್ಲೆಯ ಕಟ್ಪಾಡಿಯಲ್ಲಿರುವ ದೊರೈ ಮುರುಗನ್‌ ಮನೆ ಸೇರಿದಂತೆ ಕೆಲವುಡಿಎಂಕೆ ನಾಯಕರ ಮನೆ ಮೇಲೆ ಈಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ವೆಲ್ಲೋರ್‌ನಲ್ಲಿ ಇದೇ 18ರಂದು ಮತದಾನ ನಿಗದಿಯಾಗಿದೆ. ವೆಲ್ಲೋರ್ ಲೋಕಸಭಾ ಕ್ಷೇತ್ರದಲ್ಲಿ ಬರುವ ಅಂಬೂರ್ ಮತ್ತು ಗುಡಿಯಾಟ್ಟಂ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆಯೂ ನಿಗದಿಯಾಗಿದೆ. ಇದನ್ನೂ ರದ್ದುಪಡಿಸಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ ಎಂದು ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.

ADVERTISEMENT

ಆಯೋಗದ ಶಿಫಾರಸು ಸೋಮವಾರ ರಾತ್ರಿ ರಾಷ್ಟ್ರಪತಿ ಭವನ ತಲುಪಿದೆ. ಇದನ್ನು ಕೇಂದ್ರ ಕಾನೂನು ಸಚಿವಾಲಯದ ಜತೆಗೂ ಹಂಚಿಕೊಂಡು ಅಭಿಪ್ರಾಯ ಕೇಳಲಾಗುವುದು. ಆಯೋಗದ ಪ್ರಸ್ತಾಪವನ್ನು ರಾಷ್ಟ್ರಪತಿಗಳು ಅಂಗೀಕರಿಸುವ ಸಾಧ್ಯತೆಯೇ ಹೆಚ್ಚಿದೆ. ಒಂದು ವೇಳೆ ರಾಷ್ಟ್ರಪತಿಗಳು ಅಧಿಸೂಚನೆ ಹೊರಡಿಸಿದಲ್ಲಿ, ಈ ಬಾರಿ ಚುನಾವಣೆ ರದ್ದಾದ ಮೊದಲ ಕ್ಷೇತ್ರವಾಗಲಿದೆ ವೆಲ್ಲೋರ್ಎಂದು ವರದಿ ತಿಳಿಸಿದೆ.

ಇದೇ ಮೊದಲಲ್ಲ: 2017ರಲ್ಲಿ ಡಾ. ರಾಧಾಕೃಷ್ಣ ನಗರ ಕ್ಷೇತ್ರದ ವಿಧಾನಸಭೆ ಚುನಾವಣೆಯನ್ನು ಆಯೋಗ ಎರಡು ಬಾರಿ ರದ್ದುಪಡಿಸಿತ್ತು. ಎಐಎಡಿಎಂಕೆ ನಾಯರ ಮನೆಯಿಂದ ಅಕ್ರಮವಾಗಿ ಇರಿಸಲಾಗಿದ್ದ ಹಣ ವಶಕ್ಕೆ ಪಡೆದ ಹಿನ್ನೆಲೆಯಲ್ಲಿ 2016ರ ಏಪ್ರಿಲ್‌ನಲ್ಲಿ ಅರವಕುರಿಚಿ ಮತ್ತು ತಾಂಜಾವೂರು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಮುಂದೂಡಲಾಗಿತ್ತು. 2012ರಲ್ಲಿ ಜಾರ್ಖಂಡ್‌ನಿಂದ ರಾಜ್ಯಸಭಾ ಸ್ಥಾನಗಳಿಗೆ ನಡೆದ ಚುನಾವಣೆಯನ್ನೂ ರದ್ದುಗೊಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.