ADVERTISEMENT

ಗುಸು ಗುಸು: ದಾವಣಗೆರೆ ಕ್ಷೇತ್ರ | ನೆಂಟರೆಲ್ಲ ವ್ಯಾಪ್ತಿ ಪ್ರದೇಶದ ಹೊರಗೆ...

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 23:50 IST
Last Updated 28 ಮಾರ್ಚ್ 2024, 23:50 IST
   

ದಾವಣಗೆರೆ ಲೋಕಸಭಾ ಕಣದಲ್ಲಿ ಬೀಗತಿಯರ ನಡುವಿನ ಕದನ ತಾರಕಕ್ಕೇರಿದೆ. ಕ್ಷೇತ್ರದಲ್ಲಿ ಬಹು ಸಂಖ್ಯಾತರಾಗಿರುವ ಸಾದು ಲಿಂಗಾಯತ ಸಮಾಜದ ಇಬ್ಬರು ನಾರಿ ಮಣಿಯರ ಕದನ ಸಮಾಜದ ಉಳಿದ ನೆಂಟರಿಷ್ಟರಿಗೆ ಪೀಕಲಾಟ ತಂದಿದೆಯಂತೆ.

ಶಾಮನೂರು ಕುಟುಂಬದ ಸೊಸೆ ಪ್ರಭಾ ಮಲ್ಲಿಕಾರ್ಜುನ್‌ ಕಾಂಗ್ರೆಸ್‌ನಿಂದ ಹಾಗೂ ಭೀಮಸಮುದ್ರದ ಅಡಿಕೆ ವರ್ತಕ ಜಿ. ಮಲ್ಲಿಕಾರ್ಜುನಪ್ಪ ಕುಟುಂಬದ ಸೊಸೆ ಗಾಯತ್ರಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ಕ್ಷೇತ್ರದಲ್ಲಿನ ಅವರ ಸಮಾಜದ ಬಹುತೇಕ ಕುಟುಂಬಗಳು ಇಬ್ಬರಿಗೂ ನೆಂಟರೇ. ಚುನಾವಣಾ ಪ್ರಚಾರ ಬಿರುಸು ಪಡೆದಿದ್ದು, ಬೆಂಬಲ ಕೋರಿ ಬೆಳಿಗ್ಗೆ ಒಬ್ಬರು ಬಂದರೆ, ಸಂಜೆ ಮತ್ತೊಬ್ಬರು ಬರುತ್ತಿದ್ದಾರಂತೆ. ಇಬ್ಬರಲ್ಲಿ ಯಾರ ಪರ ನಿಂತರೂ ಮತ್ತೊಬ್ಬರಿಗೆ ಬೇಸರವಾಗುತ್ತದೆ. ತಟಸ್ಥರಾಗಿ ಉಳಿದರೆ ಇಬ್ಬರ ಸಿಟ್ಟಿಗೆ ಗುರಿಯಾಗಬೇಕಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ ಬಹುತೇಕ ಕುಟುಂಬಗಳು ಬೇಸಿಗೆ ರಜೆಯನ್ನೇ ನೆಪವಾಗಿಟ್ಟುಕೊಂಡು ಮೆಲ್ಲಗೆ ಜಾಗ ಖಾಲಿ ಮಾಡುತ್ತಿದ್ದಾರಂತೆ.

ಬಹುತೇಕ ಮನೆಗಳು ಬೀಗ ಹಾಕಿರುವುದನ್ನು ಕಂಡು ಮೊಬೈಲ್‌ ಫೋನ್‌ಗೆ ಕರೆ ಮಾಡಿದೆ ನೀವು ಕರೆ ಮಾಡಿದ ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ ಇದ್ದಾರೆ ಎಂದೋ, ಮೊಬೈಲ್‌ ಸ್ವಿಚ್ಢ್‌ಆಫ್‌ ಎಂದೋ ಬರುತ್ತಿದೆಯಂತೆ. ಅಷ್ಟಕ್ಕೆ ಸುಮ್ಮನಾಗದ ಬೀಗತಿಯರು ಬೀಗ ಹಾಕಿ ಮನೆಗಳನ್ನು ಗುರುತು ಮಾಡಿಕೊಂಡು ಅವರ ಬಹುಹತ್ತಿರದ ನೆಂಟರಿಗೆ ಹುಡುಕಿ ಕರೆ ತರುವ ಹೊಣೆಯನ್ನೂ ಹೊರಿಸಿದ್ದಾರಂತೆ.  

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.