ನವದೆಹಲಿ: ಲೋಕಸಭಾ ಚುನಾವಣೆಯ ಆರು ಮತ್ತು ಏಳನೇ ಹಂತಗಳಲ್ಲಿ ಹೆಚ್ಚು ಮಹಿಳೆಯರನ್ನು ತಲುಪುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷವು ‘ಮಹಾಲಕ್ಷ್ಮಿ’ ಯೋಜನೆಯ 40 ಲಕ್ಷ ಕರಪತ್ರಗಳನ್ನು ಹಂಚಲು ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
‘ಮಹಾಲಕ್ಷ್ಮಿ’ ಯೋಜನೆಯಡಿ ಬಡ ಕುಟುಂಬದ ಮಹಿಳೆಯರಿಗೆ ವಾರ್ಷಿಕವಾಗಿ ₹1 ಲಕ್ಷ ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಘೋಷಿಸಿದೆ.
ದೇಶದ ಮಹಿಳೆಯರು ಸಂಕಷ್ಟ ಎದುರಿಸುತ್ತಿದ್ದು, ಪಕ್ಷದ ‘ಮಹಾಲಕ್ಷ್ಮಿ’ ಯೋಜನೆಯು ಅವರಿಗೆ ಕಷ್ಟದ ಕಾಲದಲ್ಲಿ ನೆರವಿಗೆ ಬರಲಿದೆ ಎಂದು ಇತ್ತೀಚೆಗೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿಡಿಯೊ ಸಂದೇಶದಲ್ಲಿ ತಿಳಿಸಿದ್ದರು.
‘ನಾವು ಕೋಟಿಗಟ್ಟಲೆ ಲಕ್ಷಾಧಿಪತಿಗಳನ್ನು ಸೃಷ್ಟಿಸಲಿದ್ದೇವೆ. ಬಡತನದ ರೇಖೆಗಿಂತ ಕೆಳಗಿರುವವರ ಪಟ್ಟಿಯನ್ನು ಯೋಜನೆಯ ಅಡಿಯಲ್ಲಿ ಸಿದ್ಧಪಡಿಸಲಾಗುವುದು. ಪ್ರತಿ ಬಡಕುಟುಂಬದ ಒಬ್ಬ ಮಹಿಳೆಯ ಖಾತೆಗೆ ತಿಂಗಳಿಗೆ ₹8,500 ಜಮೆ ಮಾಡುವ ಮೂಲಕ ವಾರ್ಷಿಕವಾಗಿ ₹1 ಲಕ್ಷ ನೀಡಲಾಗುವುದು’ ಎಂದು ರಾಹುಲ್ ಗಾಂಧಿ ಅವರು ಶನಿವಾರ ಚುನಾವಣಾ ರ್‍ಯಾಲಿಯೊಂದರಲ್ಲಿ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.