
ಅರವಿಂದ ಕೇಜ್ರಿವಾಲ್
(ಪಿಟಿಐ ಚಿತ್ರ)
ನವದೆಹಲಿ: 21 ದಿನಗಳ ಕಾಲ ಲೋಕಸಭೆ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಅವಕಾಶ ನೀಡಿದ ಸುಪ್ರೀಂ ಕೋರ್ಟ್‌ಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಧನ್ಯವಾದ ಸಲ್ಲಿಸಿದ್ದಾರೆ.
ಈ ಕುರಿತು ಇಂದು 'ಎಕ್ಸ್'ನಲ್ಲಿ ಬರೆದುಕೊಂಡಿರುವ ಕೇಜ್ರಿವಾಲ್, 'ಇಂದು ನಾನು ತಿಹಾರ್ ಜೈಲಿಗೆ ಹೋಗಿ ಶರಣಾಗುತ್ತೇನೆ. ಮಧ್ಯಾಹ್ನ 3 ಗಂಟೆಗೆ ಹೊರಡುತ್ತೇನೆ' ಎಂದು ಹೇಳಿದ್ದಾರೆ.
'ನಾನು ಮೊದಲು ರಾಜ್‌ಘಾಟ್‌ಗೆ ತೆರಳಿ ಮಹಾತ್ಮ ಗಾಂಧೀಜಿ ಅವರಿಗೆ ನಮನ ಸಲ್ಲಿಸುತ್ತೇನೆ. ಅಲ್ಲಿಂದ ನಾನು ಕನ್ನಾಟ್ ಪ್ಲೇಸ್‌ನಲ್ಲಿರುವ ಹನುಮಾನ್ ದೇಗುಲಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸುತ್ತೇನೆ' ಎಂದು ಹೇಳಿದ್ದಾರೆ.
ಅದಾದ ಬಳಿಕ ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಗೆ ತೆರಳಿ ಪಕ್ಷದ ಮುಖಂಡರನ್ನು ಹಾಗೂ ಕಾರ್ಯಕರ್ತರನ್ನು ಭೇಟಿಯಾಗುವುದಾಗಿ ಕೇಜ್ರಿವಾಲ್ ತಿಳಿಸಿದ್ದಾರೆ. ಅಲ್ಲಿಂದ ತಿಹಾರ್ ಜೈಲಿಗೆ ಹೊರಡುವುದಾಗಿ ಹೇಳಿದ್ದಾರೆ.
'ನೀವೆಲ್ಲರೂ ನಿಮ್ಮ ಆರೋಗ್ಯ ನೋಡಿಕೊಳ್ಳಿ. ಜೈಲಿನಲ್ಲಿದ್ದರೂ ನಿಮ್ಮ ಬಗ್ಗೆ ಚಿಂತೆ ಕಾಡಲಿದೆ. ನೀವು ಸಂತಸದಿಂದ ಇದ್ದರೆ, ನಾನೂ ಸಂತಸದಿಂದ ಇರುತ್ತೇನೆ' ಎಂದು ಹೇಳಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಮಾರ್ಚ್ ತಿಂಗಳಲ್ಲಿ ಬಂಧಿತರಾಗಿದ್ದ ಕೇಜ್ರಿವಾಲ್ ಅವರಿಗೆ ಪ್ರಜಾತಂತ್ರದ ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜೂನ್ 1ರವರೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಅವರು ಇಂದು (ಜೂನ್ 2ರಂದು) ಶರಣಾಗಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.