ADVERTISEMENT

ಕರ್ನಾಟಕದ ಮಾಜಿ IAS ಅಧಿಕಾರಿ ಸಸಿಕಾಂತ್ ಸೆಂಥಿಲ್ ತ. ನಾಡು ಕಾಂಗ್ರೆಸ್ ಅಭ್ಯರ್ಥಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2024, 2:11 IST
Last Updated 24 ಮಾರ್ಚ್ 2024, 2:11 IST
ಸಸಿಕಾಂತ್ ಸೆಂಥಿಲ್
ಸಸಿಕಾಂತ್ ಸೆಂಥಿಲ್   

– ‍ಪ್ರಜಾವಾಣಿ ಚಿತ್ರ

ನವದೆಹಲಿ: ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್‌ ಶನಿವಾರ ಬಿಡುಗಡೆ ಮಾಡಿದೆ. ಹಿರಿಯ ನಾಯಕ ದಿಗ್ವಿಜಯ್ ಸಿಂಗ್‌, ವಾರ್‌ ರೂಂ ಮುಖ್ಯಸ್ಥರೂ ಆಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್, ಲೋಕಸಭೆ ವಿಪ್ ಮಾಣಿಕಂ ಟಾಗೋರ್, ಕೇಂದ್ರದ ಮಾಜಿ ಸಚಿವ ಕಾಂತಿಲಾಲ್‌ ಭುರಿಯಾ ಹಾಗೂ ಉತ್ತರ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಅಜಯ್ ರೈ ಸೇರಿ ಒಟ್ಟು 45 ಮಂದಿಗೆ ನಾಲ್ಕನೇ ಪಟ್ಟಿಯಲ್ಲಿ ಟಿಕೆಟ್ ಘೋಷಿಸಲಾಗಿದೆ.

ಅಲ್ಲಿಗೆ ಒಟ್ಟು 183 ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದಂತಾಗಿದೆ.

ADVERTISEMENT

ರಾಜಸ್ಥಾನದಲ್ಲಿ 2, ಕೇರಳದಲ್ಲಿ 4, ಗುಜರಾತ್‌ನಲ್ಲಿ 2, ಅಸ್ಸಾಂ ಹಾಗೂ ಹರಿಯಾಣದಲ್ಲಿ ತಲಾ 1 ಕ್ಷೇತ್ರಗಳನ್ನು ಮೈತ್ರಿ ಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ತಮಿಳುನಾಡಿನ 39 ಕ್ಷೇತ್ರಗಳ ಪೈಕಿ 9ರಲ್ಲಿ ಕಾಂಗ್ರೆಸ್‌ ಸ್ಪರ್ಧಿಸಲಿದೆ.

ಮಧ್ಯಪ್ರದೇಶದ ಮಾಜಿ ಸಿಎಂ ಹಾಗೂ ಹಾಲಿ ಸಂಸದ ದಿಗ್ವಜಯ ಸಿಂಗ್ ಅವರು ರಾಜಗಢದಿಂದ ಸ್ಪರ್ಧಿಸಿದರೆ, ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ವಾರಾಣಸಿಯಿಂದ ಪ್ರಧಾನಿ ಮೋದಿ ವಿರುದ್ಧ ಎರಡನೇ ಬಾರಿಗೆ ಕಣಕ್ಕಿಳಿಯಲಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಕರ್ನಾಟಕ ಕೆಡರ್‌ನ ಮಾಜಿ ಐಪಿಎಸ್ ಅಧಿಕಾರಿ ಸಸಿಕಾಂತ್‌ ಸೆಂಥಿಲ್ ಅವರು ತಮಿಳುನಾಡಿನ ತಿರುವಳ್ಳೂರ್ ಕ್ಷೇತ್ರದಿಂದ ಅದೃಷ್ಠ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಕ್ಷೇತ್ರವನ್ನು ಈಗ ಕಾಂಗ್ರೆಸ್‌ನ ಡಾ. ಕೆ. ಜಯಕುಮಾರ್ ಅವರು ಪ್ರತಿನಿಧಿಸುತ್ತಿದ್ದಾರೆ. ಶಿವಗಂಗಾ ಕ್ಷೇತ್ರದಿಂದ ಕಾರ್ತಿ ಚಿದಂಬರಂ ಸ್ಪರ್ಧಿಸಲಿದ್ದಾರೆ.

ಆಂಧ್ರಪ್ರದೇಶ ಕಾಂಗ್ರೆಸ್‌ನ ಉಸ್ತುವಾರಿಯೂ ಆಗಿರುವ ಮಾಣಿಕಂ ಟಾಗೋರ್‌ ನಾಲ್ಕನೇ ಬಾರಿಗೆ ವಿಧುನಗರದಿಂದ ಉಮೇದುವಾರಿಗೆ ಸಲ್ಲಿಸಲಿದ್ದಾರೆ. ಕಾಂತಿಲಾಲ್ ಭುರಿಯಾ ಮಧ್ಯಪ್ರದೇಶದ ರಟ್ಲಂನಿಂದ ಕಣಕ್ಕಿಳಿಯಲಿದ್ದಾರೆ.

4ನೇ ಪಟ್ಟಿಯಲ್ಲಿ ಮಧ್ಯಪ್ರದೇಶದ 12, ಉತ್ತರ ಪ್ರದೇಶದ 9, ತಮಿಳುನಾಡಿನ 7, ಮಹಾರಾಷ್ಟ್ರದ 4, ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಉತ್ತರಾಖಂಡ್ ಹಾಗೂ ರಾಜಸ್ಥಾನದ ತಲಾ 2, ಅಸ್ಸಾಂ, ಅಂಡಮಾನ್ ನಿಕೋಬರ್ ದ್ವೀಪ. ಛತ್ತೀಸಗಢ, ಮಿಜೋರಾಂ ಹಾಗೂ ಪಶ್ಚಿಮ ಬಂಗಾಳದ ಒಂದು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.