
ಪ್ರಲ್ಹಾದ ಜೋಶಿ ಹಾಗೂ ಯತೀಂದ್ರ ಸಿದ್ದರಾಮಯ್ಯ
ಹುಬ್ಬಳ್ಳಿ: ಗೃಹ ಸಚಿವ ಅಮಿತ್ ಶಾ ಅವರನ್ನು ಗೂಂಡಾ ಎಂದು ಕರೆದಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಖಂಡನೀಯ. ಇದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯತೀಂದ್ರ ಮಾತನಾಡಿರುವ ಪ್ರಕರಣಗಳನ್ನು ಈಗಾಗಲೇ ನ್ಯಾಯಾಲಯ ಖುಲಾಸೆ ಮಾಡಿದೆ. ನ್ಯಾಯಾಲಯದ ಮೇಲೆ ಅವರಿಗೆ ವಿಶ್ವಾಸವಿಲ್ಲವೇ. ನ್ಯಾಯಾಂಗ ವ್ಯವಸ್ಥೆಗೆ ಅಪಮಾನ ಮಾಡಿದಂತೆ’ ಎಂದು ಟೀಕಿಸಿದರು.
ಅಪ್ಪ (ಮುಖ್ಯಮಂತ್ರಿ ಸಿದ್ದರಾಮಯ್ಯ) ಕೇಂದ್ರ ಸರ್ಕಾರದ ಮೇಲೆ ದೂರು ನೀಡುವ ಕೆಲಸ ಮಾಡುತ್ತಿದ್ದರೆ, ಮಗ (ಯತೀಂದ್ರ) ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಗೊಂದಲ ಸಹಜ: ‘ಚುನಾವಣೆ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳಲ್ಲಿ ಗೊಂದಲಗಳಿರುವುದು ಸಹಜ. ಚಿತ್ರದುರ್ಗ ಟಿಕೆಟ್ ಹಂಚಿಕೆಯಲ್ಲಾಗಿರುವ ಗೊಂದಲವನ್ನು ಪಕ್ಷದ ವರಿಷ್ಠರು ಬಗೆಹರಿಸುತ್ತಾರೆ' ಎಂದರು.
ಮಂಡ್ಯ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸುಮಲತಾ ಅವರನ್ನು ಸಮಾಧಾನಪಡಿಸುವ ಕೆಲಸ ನಡೆದಿದೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.