ಕಲಬುರಗಿ: ಅಫಜಲಪುರ ಕ್ಷೇತ್ರದಲ್ಲಿ ಗುತ್ತೇದಾರ ಸಹೋದರರ ನಡುವೆ ಕದನ ಏರ್ಪಟ್ಟಿದ್ದು, ಬಿಜೆಪಿ ಟಿಕೆಟ್ ತಪ್ಪಿದ್ದರಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಅವರು ಅಣ್ಣ ಮಾಲೀಕಯ್ಯ ಗುತ್ತೇದಾರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.
ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರಗೆ ಬಿಜೆಪಿ ಟಿಕೆಟ್ ಅಂತಿಮವಾಗಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಸಹೋದರ ನಿತಿನ್ ಅವರಿಗೆ ತೀವ್ರ ನಿರಾಸೆಯಾಗಿದೆ. ಬೆಂಗಳೂರಿನಿಂದ ಒಂದೇ ವಿಮಾನದಲ್ಲಿ ಕಲಬುರಗಿಗೆ ಪ್ರಯಾಣಿಸಿದ ಸಹೋದರರು, ಮುಖಕ್ಕೆ ಮುಖ ಕೊಟ್ಟು ಮಾತನಾಡಿಲಿಲ್ಲ ಎನ್ನಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ನಿತಿನ್, ‘ಅಫಜಲಪುರ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದೆ. ಆದರೆ, ಟಿಕೆಟ್ ಕೈತಪ್ಪಿದೆ. ನಾನು ಹಿರಿಯರ ಜತೆಗೆ ಚರ್ಚಿಸಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ’ ಎಂದರು.
‘ಸಹೋದರನ ಮನವೊಲಿಕೆಗೆ ಬಗ್ಗುವುದಿಲ್ಲ. ಮಾತುಕತೆ ಮುಗಿದು ಹೋದ ಅಧ್ಯಾಯ. ಪಕ್ಷ ನನ್ನ ಕೈಬಿಟ್ಟರೂ ಕ್ಷೇತ್ರದ ಮತದಾರರು ನನ್ನ ಕೈಬಿಡುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.