ADVERTISEMENT

ಆಕಾಂಕ್ಷಿಗಳ ಪರಸ್ಪರ ಬೆಂಬಲ: ಗಂಗಾಂಬಿಕೆ, ಬಾಬು ನಾಮಪತ್ರ ಸಲ್ಲಿಕೆಗೆ ಸಿದ್ಧತೆ

ಗಂಗಾಂಬಿಕೆ, ಕೆಜಿಎಫ್‌ ಬಾಬು ನಾಮಪತ್ರ ಸಲ್ಲಿಕೆಗೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2023, 21:09 IST
Last Updated 11 ಏಪ್ರಿಲ್ 2023, 21:09 IST
ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಜಯನಗರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಜಿಎಫ್ ಬಾಬು ಅವರೊಂದಿಗೆ ಸಮಾಲೋಚನೆ ನಡೆಸಿದರು - –ಪ್ರಜಾವಾಣಿ ಚಿತ್ರ
ನಗರದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ ಆಕಾಂಕ್ಷಿ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಜಯನಗರದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕೆಜಿಎಫ್ ಬಾಬು ಅವರೊಂದಿಗೆ ಸಮಾಲೋಚನೆ ನಡೆಸಿದರು - –ಪ್ರಜಾವಾಣಿ ಚಿತ್ರ   

ಬೆಂಗಳೂರು: ಚಿಕ್ಕಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯ ಹೆಸರು ಘೋಷಿಸಿಲ್ಲ. ಈ ನಡುವೆ, ಟಿಕೆಟ್‌ ಘೋಷಣೆಗೂ ಮುನ್ನವೇ ಕ್ಷೇತ್ರದಿಂದ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಲು ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹಾಗೂ ಕೆಜಿಎಫ್‌ ಬಾಬು ಸಿದ್ಧತೆ ನಡೆಸಿದ್ದಾರೆ. ಇಬ್ಬರೂ ಆಕಾಂಕ್ಷಿಗಳು ಪರಸ್ಪರ ಬೆಂಬಲ ಘೋಷಿಸಿಕೊಂಡಿದ್ದಾರೆ. ತಮ್ಮ ಬೆಂಬಲಿಗರ ಜತೆಗೂ ಸಮಾಲೋಚನೆ ನಡೆಸಿದ್ದಾರೆ.

‘ಏಪ್ರಿಲ್‌ 13ರಂದು ಬೆಳಿಗ್ಗೆ 11ಕ್ಕೆ ಸೌತ್‌ ಎಂಡ್‌ ಸರ್ಕಲ್‌ ಬಳಿಯ ಚುನಾವಣೆ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸುತ್ತೇನೆ. ಅದಕ್ಕೂ ಮುನ್ನ ಜಯನಗರದ ಅಶೋಕ ಪಿಲ್ಲರ್ ಬಳಿಯಿಂದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಜತೆಗೆ ಪಾದಯಾತ್ರೆ ನಡೆಸಲಾಗುವುದು’ ಎಂದು ಗಂಗಾಂಬಿಕೆ ತಿಳಿಸಿದ್ದಾರೆ.

‘ಬಿ–ಫಾರಂ ಸಲ್ಲಿಸಲು ಏಪ್ರಿಲ್‌ 20ರ ತನಕ ಅವಕಾಶ ಇದೆ. ಚಿಕ್ಕಪೇಟೆಯಲ್ಲಿ ಎಲ್ಲ ವರ್ಗದ ಜನರೂ ನೆಲೆಸಿದ್ದಾರೆ. ನನಗೆ ಟಿಕೆಟ್‌ ನೀಡಿದರೆ ಕೆಜಿಎಫ್‌ ಬಾಬು ಅವರು ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.

ADVERTISEMENT

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಕೆಜಿಎಫ್‌ ಬಾಬು ಮಾತನಾಡಿ, ‘ನನ್ನ ಜಮೀನು ವೀಕ್ಷಣೆಗೆ ತೆರಳಿದ್ದ ವೇಳೆ ಅಲ್ಲೇ ಇದ್ದ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದೇನೆ. ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ನಾನು ಜೆಡಿಎಸ್‌ನಿಂದ ಟಿಕೆಟ್‌ ಕೇಳಿಲ್ಲ. ಗಂಗಾಂಬಿಕೆ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಗಂಗಾಂಬಿಕೆ ಅವರು ಮೇಯರ್ ಆಗಿದ್ದ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಇಬ್ಬರಲ್ಲಿ ಯಾರಿಗಾದರೂ ಕಾಂಗ್ರೆಸ್‌ ಟಿಕೆಟ್‌ ನೀಡಲಿ. ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ’ ಎಂದು ಹೇಳಿದರು.

ಇನ್ನು ಬಸವನಗುಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯು.ಬಿ. ವೆಂಕಟೇಶ್ ಏಪ್ರಿಲ್‌ 17ರಂದು ನಾಮಪತ್ರ ಸಲ್ಲಿಸಲಿದ್ದಾರೆ.

ಅಂದು ಬೆಳಿಗ್ಗೆ 9.30ಕ್ಕೆ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ, ಮೆರವಣಿಗೆ ಮೂಲಕ ತೆರಳಿ ಚೆನ್ನಮ್ಮನಕೆರೆ ಅಚ್ಚುಕಟ್ಟೆಯ 170–ಬಸವನ ಗುಡಿ ವಿಧಾನಸಭಾ ಕ್ಷೇತ್ರದ ಚುನಾವಣೆ ಅಧಿಕಾರಿಗೆ ನಾಮಪತ್ರ ಸಲ್ಲಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.