ADVERTISEMENT

Lok Sabha Polls 2024: ಮತದಾನದ ವಿಡಿಯೊ ಚಿತ್ರೀಕರಿಸಿದ ಡಿಕೆ ಸುರೇಶ್ ಅಭಿಮಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಏಪ್ರಿಲ್ 2024, 14:09 IST
Last Updated 26 ಏಪ್ರಿಲ್ 2024, 14:09 IST
   

ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ‌ಕ್ಷೇತ್ರದ ಕೇರ್ಗಳ್ಳಿ ಮತಗಟ್ಟೆಯಲ್ಲಿ ಮತದಾನ ಪ್ರಕ್ರಿಯೆ ಹತ್ತು ನಿಮಿಷ ತಡವಾಗಿ ಆರಂಭವಾಯಿತು. ಇದಕ್ಕೆ ಮತದಾರರು ಆಕ್ಷೇಪ ವ್ಯಕ್ತಪಡಿಸಿದರು. ಏಳು ಗಂಟೆಗೆ ಅಣಕು ಮತದಾನ ಆರಂಭಿಸಿದ್ದಕ್ಕೆ ಮತದಾರರಿಂದ ಆಕ್ಷೇಪ ವ್ಯಕ್ತವಾಯಿತು. ಇಲ್ಲಿನ ಕೃಷ್ಣರಾಜ ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಸಾರ್ವಜನಿಕರ ಜೊತೆ ಸರದಿ ಸಾಲಿನಲ್ಲಿ ಬಂದು ಮತ ದಾನ ಮಾಡಿದರು. ವಾರ್ಡ್ ನಂ. 51ರ ಬೂತ್ ನಂ. 139ರಲ್ಲಿ (ಸಂಸ್ಕೃತ ಪಾಠಶಾಲೆಯಲ್ಲಿ) ಮತದಾನ ಮಾಡಿದರು. ಅವರಿಗೆ ಬಿಜೆಪಿ ಮುಖಂಡರು ಸಾಥ್ ನೀಡಿದರು.

ತಡವಾದ ಮತದಾನ, ಆಕ್ಷೇಪ

ಡಾ.ಕೆ.ಸುಧಾಕರ್ ತಮ್ಮ ಸ್ವಗ್ರಾಮ ಪೆರೇಸಂದ್ರದ ಮತಗಟ್ಟೆಯಲ್ಲಿ ಮತಚಲಾವಣೆ

ಜೆಡಿಎಸ್, ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಚಿಕ್ಕಬಳ್ಳಾಪುರ: ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ತಮ್ಮ ಸ್ವಗ್ರಾಮ ಪೆರೇಸಂದ್ರದ ಮತಗಟ್ಟೆಯಲ್ಲಿ ಮತಚಲಾಯಿಸಿದರು. ತಂದೆ ಕೇಶವರೆಡ್ಡಿ, ಪತ್ನಿ ಡಾ.ಪ್ರೀತಿ ಸಹ ಜೊತೆಯಲ್ಲಿ ಇದ್ದರು‌. ಈ ವೇಳೆ ಮಾತನಾಡಿದ ಡಾ.ಕೆ.ಸುಧಾಕರ್, ಕಳೆದ ಮೂರು ವಾರದಿಂದ ಹಗಲಿರುಳು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಎರಡೂ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ಕೊಡಗು ಜಿಲ್ಲೆಯಲ್ಲಿ ಆರಂಭದಲ್ಲೆ ಬಿರುಸಿನ ಮತದಾ‌ನ; ಸಾಲುಗಟ್ಟಿ ನಿಂತ ಮತದಾರರು

ಮಡಿಕೇರಿ: ನಗರದಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿದೆ.

ಇಲ್ಲಿನ ಅನೇಕ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದ ದೃಶ್ಯಗಳು ಕಂಡು ಬಂದವು.

ADVERTISEMENT

ಕೆಲವು ಮತಗಟ್ಟೆಗಳಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದರು.

ಮತದಾರರಿಗೆ ಮಕ್ಕಳಿಂದ ಸಹಾಯ

ಮೈಸೂರು: ಇಲ್ಲಿನ‌ ಚಾಮುಂಡೇಶ್ವರಿ ಕ್ಷೇತ್ರ ವ್ಯಾಪ್ತಿಯ ಕೇರ್ಗಳ್ಳಿ ಶಾಲಾ ಮತಗಟ್ಟೆಯಲ್ಲಿ ಮತದಾರರ ಸಹಾಯಕ್ಕೆ ಶಾಲಾ ಮಕ್ಕಳನ್ನು ನಿಲ್ಲಿಸಿದ್ದು ಕಂಡು ಬಂತು. ಶಾಲೆಯಲ್ಲಿ ಎರಡು ಮತಗಟ್ಟೆಗಳಿದ್ದು, ಶಾಲೆಯ ಮುಖ್ಯ ಗೇಟ್ ಬಳಿ ನಿಂತಿದ್ದ ಬಾಲಕರು, ಮತದಾರರ ಭಾಗದ ಸಂಖ್ಯೆಯನ್ನು ಕೇಳಿ ಮತಗಟ್ಟೆಯ ಬಳಿಗೆ ಕಳಿಸುತ್ತಿದ್ದರು. ಗ್ರಾಮದಲ್ಲೇ ಮನೆ ಇದ್ದು, ನಿನ್ನೆಯಿಂದಲೇ ತಾವು ಶಾಲೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದರು.

ಜಿ.ಟಿ. ದೇವೇಗೌಡ ಮತದಾನ

ಮೈಸೂರು: ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ‌ಜಿ.ಟಿ. ದೇವೇಗೌಡ ಅವರು

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತಮ್ಮ ಸ್ವಗ್ರಾಮ ಮೈಸೂರು ತಾಲ್ಲೂಕಿನ ಗುಂಗ್ರಾಲ್ ಛತ್ರದ ಗ್ರಾಮ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

ಅವರ ಪತ್ನಿ ಲಲಿತಾ ಕೂಡ ಮತ ದಾನ ಮಾಡಿದರು.

ಚಿಕ್ಕಮಗಳೂರು: ಬಿರುಸಿನ ಮತದಾನ; ರಂಭಾಪುರಿ ಶ್ರೀ ಹಕ್ಕು ಚಲಾವಣೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಬಾಳೆಹೊನ್ನೂರು ರಂಭಾಪುರಿ ಪೀಠದ ಪ್ರಸನ್ನ ರೇಣುಕವೀರ ಸೋಮೇಶ್ವರ ಸ್ವಾಮೀಜಿ ಮತದಾನ ಮಾಡಿದರು.

ಬಾಳೆಹೊನ್ನೂರಿನ ರಂಭಾಪುರಿ ಮಠದ ಪಕ್ಕದಲ್ಲೇ ಇರುವ ಸರ್ಕಾರಿ ಶಾಲೆಯ ಮತಗಟ್ಟೆಗೆ ಬೆಳಿಗ್ಗೆಯೇ ತೆರಳಿದ ಸ್ವಾಮೀಜಿ, ಮತದಾನ ಮಾಡಿದರು. ‘ಮತದಾನ ಮಾಡುವುದು ಸಂವಿಧಾನ ನೀಡಿದ ಪವಿತ್ರ ಹಕ್ಕು. ಮತ ಚಲಾವಣೆ ಮತದಾರರ ಪವಿತ್ರ ಕರ್ತವ್ಯ. ಎಲ್ಲರೂ ಮತದಾನ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲೆಡೆ ಮತಗಟ್ಟೆಗಳಲ್ಲಿ ಮತದಾರರು ಬೆಳಿಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಗಟ್ಟೆ ಬಳಿ ಸಾಲುಗಟ್ಟಿದ್ದಾರೆ. ಯುವಕರು, ವಯೋವೃದ್ಧರು ಸೇರಿ ಮತದಾನ ಮಾಡುತ್ತಿದ್ದಾರೆ.

ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಮತದಾನ

ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ಬೆಂಗಳೂರಿನ ಆರ್.ಆರ್ ನಗರದ ಮೌಂಟ್ ಕಾರ್ಮೆಲ್ ಇಂಗ್ಲಿಷ್ ಶಾಲೆಯಲ್ಲಿ ತಮ್ಮ ಮತ ಚಲಾಯಿಸಿದರು.

ಉಡುಪಿ–ಚಿಕ್ಕಮಗಳೂರು ಕ್ಷೇತ್ರ: ಮತದಾನ ಚುರುಕು

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು ಉತ್ಸಾಹದಿಂದ ಮತ ಚಲಾಯಿಸುತ್ತಿದ್ದಾರೆ. ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಜ್ಜರಕಾಡು ಮತಗಟ್ಟೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮತದಾನ ಮಾಡಿದರು. ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ, ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಸಹಿತ 10 ಮಂದಿ ಕಣದಲ್ಲಿದ್ದಾರೆ. ಕ್ಷೇತ್ರದಲ್ಲಿ 7,68,215 ಪುರುಷರು, 8,16,910 ಮಹಿಳಾ ಮತದಾರರು ಹಾಗೂ 37 ಲಿಂಗತ್ವ ಅಲ್ಪಸಂಖ್ಯಾತರು ಸೇರಿ 15,85,162 ಮತದಾರರು ಇದ್ದಾರೆ. 1,842 ಮತಗಟ್ಟೆಗಳನ್ನು ತೆರೆಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 202, ಉಡುಪಿ ಜಿಲ್ಲೆಯಲ್ಲಿ 203 ಸೂಕ್ಷ್ಮ ಮತಗಟ್ಟೆಗಳಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. 52 ಮತಗಟ್ಟೆಗಳಿಗೆ ಸಿಎಪಿಎಫ್‌ ಸಿಬ್ಬಂದಿ ನಿಯೋಜಿಸಲಾಗಿದೆ. 1,270 ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ನಡೆಯುತ್ತಿದೆ. ಚುನಾವಣಾ ಕರ್ತವ್ಯಕ್ಕೆ ತಲಾ 1,030 ಬಿಆರ್‌ಒ, ಎಪಿಆರ್‌ಒ ಹಾಗೂ 2,060 ಪಿಒಗಳನ್ನು ನಿಯೋಜಿಸಲಾಗಿದೆ.ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ಮತ ಚಲಾವಣೆ

ಮೊಗ್ರ: ಕೈಕೊಟ್ಟ ಮತಯಂತ್ರ

ಸುಳ್ಯ (ದಕ್ಷಿಣ ಕನ್ನಡ): ತಾಲ್ಲೂಕಿನ ಗುತ್ತಿಗಾರು ಗ್ರಾಮದ‌ ಮೊಗ್ರಾ ಎಂಬಲ್ಲಿ ಇವಿಎಂ ಕೈಕೊಟ್ಟ ಕಾರಣ ಮತದಾನ ಪ್ರಕ್ರಿಯೆ ಆರಂಭ ವಿಳಂಬವಾಯಿತು.

ಮತದಾರರು ತಮ್ಮ ಹಕ್ಕು ಚಲಾಯಿಸಲು ಬೆಳಿಗ್ಗೆ 7 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದರು. ಆದರೆ, ಮತಯಂತ್ರದಲ್ಲಿನ ತಾಂತ್ರಿಕ ದೋಷದಿಂದಾಗಿ

ಬೆಳಿಗ್ಗೆ‌ 7.45ರ ವರೆಗೂ ಮತದಾನ ಪ್ರಕ್ರಿಯೆ ಆರಂಭವಾಗಿಲ್ಲ.

ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆಯೊಂದರಲ್ಲಿ ಒಂದು ಮತ ಚಲಾವಣೆ ಆಗುತ್ತಿದ್ದಂತೆ ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ದೋಷ‌ ಕಂಡು ಬಂತು. ನಂತರ ವಿವಿ ಪ್ಯಾಟ್ ಅನ್ನು ಬದಲಾಯಿಸಲಾಯಿತು.‌

ಮಂಗಳೂರು ಉತ್ತರ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಕೂಡ ಯಂತ್ರಗಳಲ್ಲಿನ ತಾಂತ್ರಿಕ ದೋಷದಿಂದ‌ ಮತದಾನ ಆರಂಭವಾಗಲು ವಿಳಂಬವಾಯಿತು.‌

ಇವಿಎಂ ದೋಷದಿಂದ ಮತದಾನ ಸ್ಥಗಿತ

ಚಿಕ್ಕಮಗಳೂರು: ಜಿಲ್ಲೆಯ ಆಲ್ದೂರು ಸಮೀಪದ ಅರೇನೂರು ಮತಗಟ್ಟೆಯಲ್ಲಿ ಇವಿಎಂ ದೋಷದಿಂದ 45 ನಿಮಿಷ ಮತದಾನ ಸ್ಥಗಿತಗೊಂಡಿತ್ತು.

ಬೆಳಿಗ್ಗೆಯೇ ಸರತಿಯಲ್ಲಿ ನಿಂತಿದ್ದ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಮಾಹಿತಿ ದೊರೆತ ಕೂಡಲೇ ಸಹಾಯಕ ಚುನಾವಣಾ ಅಧಿಕಾರಿ ದಲ್ಜಿತ್ ಕುಮಾರ್ ಅವರು ಸ್ಥಳಕ್ಕೆ ಬಂದರು. ಎಂಜಿನಿಯರ್‌ಗಳನ್ನು ಕರೆಸಿ ದೋಷ ಸರಿಪಡಿಸಿದ ಬಳಿಕ ಮತದಾನ ಪ್ರಕ್ರಿಯೆ ಪುನರ್ ಆರಂಭವಾಗಿದೆ.

ಬೀರೂರಿನ ಹಳೇಪೇಟೆ ಮತ್ತು ಚೆನ್ನಾಪುರ ಮತಗಟ್ಟೆಯಲ್ಲಿ ಮತದಾನ ಆರಂಭಕ್ಕೆ ಮುನ್ನ ಇವಿಎಂ ದೋಷ ಕಂಡು ಬಂದಿತ್ತು. ಕೂಡಲೇ ಬದಲಿ ಮತಯಂತ್ರ ಅಳವಡಿಕೆ ಮಾಡಲಾಯಿತು. ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಲಿಂಗಸುಗೂರು: ₹ 500ರ ಝರಾಕ್ಸ್ ನೋಟಿನ 62 ಬಂಡಲ್ ಜಪ್ತಿ

ಲಿಂಗಸುಗೂರು (ರಾಯಚೂರು ಜಿಲ್ಲೆ): ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ಪಟ್ಟಣದ ಮನೆಯೊಂದರ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ₹ 500 ಮುಖ ಬೆಲೆಯ ನೋಟಿನ 62 ಬಂಡಲ್ ಜಪ್ತಿ ಮಾಡಿದ್ದಾರೆ..

ಎಸ್‌ಟಿಎಫ್‌ ತಂಡದ ಮುಖ್ಯಸ್ಥ ವಿಜಯಕುಮಾರ, ಅಬಕಾರಿ ಇನ್‌ಸ್ಪೆಕ್ಟರ್ ಪಾಂಡುರಂಗ ನೇತೃತ್ವದಲ್ಲಿ ಗೌಳಿಪುರದ ಚೋಟುಸಾಬ ಉರ್ಫ್ ಚಟ್ಯಾ ಮನೆ ಮೇಲೆ ದಾಳಿ ನಡೆದಾಗ ₹ 500 ಮುಖ ಬೆಲೆಯ ಝರಾಕ್ಷ್‌ ನೋಟುಗಳು ಪತ್ತೆಯಾಗಿದೆ.

ಮೆಟಲ್‌ ಬಾಕ್ಸ್‌ನಲ್ಲಿ ₹ 500 ನೋಟುಗಳ ಬಂಡಲ್‌ ಸಿಕ್ಕಾಗ ಅಧಿಕಾರಿಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದರು. ನೋಟಿನ ಅಳತೆಯಲ್ಲೇ ದಿನಪತ್ರಿಕೆಗಳನ್ನು ಕಟ್‌ ಮಾಡಿ ₹ 500 ಮುಖ ಬೆಲೆಯ ಝರಾಕ್ಸ್‌ ತೆಗೆದು ಬಂಡಲ್‌ ಮೇಲೆ ಹಾಗೂ ಕೆಳಗೆ ಇಟ್ಟು ಸಂಶಯ ಬಾರದಂತೆ ಕಟ್ಟಿ ಇಡಲಾಗಿತ್ತು. ಅಂತಹ 62 ಬಂಡಲ್‌ಗಳು ದೊರಕಿವೆ.

ಅಬಕಾರಿ ಇನ್‌ಸ್ಪೆಕ್ಟರ್ ಪಾಂಡುರಂಗ ಅಬಕಾರಿ ದಾಳಿ ನಡೆಸಿದಾಗ ನೋಟಿನ ಬಂಡಲ್ ಪತ್ತೆ ಆಗಿವೆ. ನಕಲಿ ನೋಟು ಬಳಸಿ ವಂಚಿಸುವ ಉದ್ದೇಶ ಹೊಂದಿರಬಹುದು. ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿ ಲಿಂಗಸುಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಭಾರಿ ಪ್ರಮಾಣದಲ್ಲಿ ನಗದು ಇರಿಸಲಾಗಿದೆ ಎನ್ನುವ ವದಂತಿ ಗುರುವಾರ ರಾತ್ರಿ ಹರಡಿತ್ತು. ತಡ ರಾತ್ರಿ ಶೋಧ ಕಾರ್ಯ ನಡೆದಾಗ ಝರಾಕ್ಸ್‌ ನೋಟುಗಳು ಪತ್ತೆಯಾಗಿವೆ. ಪೊಲೀಸ್ ಇನ್‌ಸ್ಪೆಕ್ಟರ್ ಪುಂಡಲಿಕ ಪಟತರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮತದಾನ

ಬೆಂಗಳೂರಿನ ಸಹಕಾರನಗರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ ಸರದಿಯಲ್ಲಿ ನಿಂತಿರುವ ಮತದಾರರು

ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಹಾಗೂ ಅವರ ಪತ್ನಿ ಪ್ರಸನ್ನ ಪ್ರಸನ್ನಾ ಭಂಡಾರಿ ಮಂಗಳೂರಿನ ಕದ್ರಿ ಜಿಲ್ಲಾ ಪಂಚಾಯಿತಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು

ತುಮಕೂರಿನಲ್ಲಿ ಮತದಾನ ಆರಂಭ

ತುಮಕೂರು: ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಠದ ಆವರಣದಲ್ಲಿರುವ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ಮತದಾರರು ಬೆಳಗ್ಗೆ 7 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ. 8,19,065 ಪುರುಷರು, 8,42,170 ಮಹಿಳಾ ಮತದಾರರು, 74 ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ಒಟ್ಟು 16,61,309 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಮತಗಟ್ಟೆಯ ಬಳಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆ ಒದಗಿಸಲಾಗಿದೆ.

ಕರೋಪಾಡಿ: ಮತಯಂತ್ರದಲ್ಲಿ ದೋಷ

ವಿಟ್ಲ (ದಕ್ಷಿಣ ಕನ್ನಡ): ಬಂಟ್ವಾಳ ತಾಲೂಕಿನ ಕರೋಪಾಡಿ ಎಂಬಲ್ಲಿ ಮತದಾನದ ಯಂತ್ರದಲ್ಲಿ ದೋಷಕಂಡುಬಂದ ಕಾರಣ ಮತದಾನ ಪ್ರಾರಂಭವಾಗಲು ವಿಳಂಬವಾಯಿತು.

ಬೂತ್ ಸಂಖ್ಯೆ 240 ಪದ್ಯಾಣ ಕರೋಪಡಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಎದುರಾಯಿತು.

ಮತಯಂತ್ರದಲ್ಲಿರುವ ಒಂದು ಬಟನ್ ಕೆಲಸ ಮಾಡದ ಕಾರಣ ಮತದಾನಕ್ಕೆ ಅಡ್ಡಿಯಾಗಿತ್ತು. ಮತಯಂತ್ರ ಬದಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮತಗಟ್ಟೆಗೆ ಬಾರದ ಜನ: ಮತದಾನ ಬಹಿಷ್ಕಾರ ಸಾಧ್ಯತೆ

ಚಿತ್ರದುರ್ಗ: ಗಣಿಬಾಧಿತ ಪ್ರದೇಶದ ವ್ಯಾಪ್ತಿಯಿಂದ ಹೊರಗಿಟ್ಟ ಕ್ರಮವನ್ನು ವಿರೋಧಿಸಿ ಮತದಾನ ಬಹಿಷ್ಕರಿಸುವುದಾಗಿ‌ ಎಚ್ಚರಿಕೆ ನೀಡಿದ್ದ ತಾಲ್ಲೂಕಿನ ಸಿದ್ಧಾಪುರ ಗ್ರಾಮಸ್ಥರು, ಶುಕ್ರವಾರ ಮತಗಟ್ಟೆಯತ್ತ ಸುಳಿದಿಲ್ಲ. ಮತದಾನ ಪ್ರಕ್ರಿಯೆ ಆರಂಭವಾಗಿ ಒಂದೂವರೆ ಗಂಟೆ ಕಳೆದರೂ ಯಾರೊಬ್ಬರೂ ಹಕ್ಕು ಚಲಾಯಿಸಿಲ್ಲ.

ಚಿತ್ರದುರ್ಗ ತಾಲ್ಲೂಕಿನ ಸಿದ್ಧಾಪುರ ಗ್ರಾಮದಲ್ಲಿ 510 ಮತದಾರರಿದ್ದಾರೆ. ಕಬ್ಬಿಣದ ಅದಿರು ಗಣಿಗಾರಿಕೆ ನಡೆಯುತ್ತಿರುವ ಮೆದಿಕೇರಿಪುರ ಗುಡ್ಡದಿಂದ 2 ಕಿ.ಮೀ ದೂರದಲ್ಲಿ ಗ್ರಾಮವಿದೆ. ಗಣಿಬಾಧಿತ ಪ್ರದೇಶದಿಂದ ಗ್ರಾಮವನ್ನು ಹೊರಗಿಟ್ಟಿರುವುದು ಜನರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಮತದಾನ ಬಹಿಷ್ಕಾರ ಮಾಡುವುದಾಗಿ ಗ್ರಾಮಸ್ಥರು ಎರಡು ದಿನಗಳ ಪ್ರತಿಭಟನೆ ನಡೆಸಿದ್ದರು. ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ಜನರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಮತಗಟ್ಟೆಯತ್ತ ಸುಳಿಯದಂತೆ ಗುರುವಾರ ರಾತ್ರಿ ಗ್ರಾಮದ ಮುಖಂಡರು ಜನರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಮತಗಟ್ಟೆ ಸಿಬ್ಬಂದಿ ಶುಕ್ರವಾರ ಬೆಳಿಗ್ಗೆ 7ಕ್ಕೆ ಮತದಾನ ಪ್ರಕ್ರಿಯೆಗೆ ಸಜ್ಜಾದರು. ಯಾರೊಬ್ಬರೂ ಮತಗಟ್ಟೆಗೆ ಧಾವಿಸದ ಪರಿಣಾಮ ಮತದಾರರಿಗೆ ಕಾಯುತ್ತ ಕುಳಿತಿದ್ದಾರೆ.

ಬೆಂಗಳೂರು ಕೇಂದ್ರ: ಮತದಾನ ಚುರುಕು, ಸರದಿಯಲ್ಲಿ ನಿಂತು ಮತ ಚಲಾವಣೆ

ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಚುರುಕಿನಿಂದ ನಡೆಯುತ್ತಿದೆ. ಮತದಾರರು ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡುತ್ತಿದ್ದಾರೆ.

ಶಿವಾಜಿನಗರ ಹಾಗೂ ಸರ್ವಜ್ಞ ನಗರ ವಿಧಾನಸಭಾ‌ ಕ್ಷೇತ್ರದ ಮತಗಟ್ಟೆಗಳಲ್ಲಿ ಮತದಾರರು ಸರದಿಯಲ್ಲಿ ನಿಂತಿದ್ದು ಕಂಡುಬಂತು.

ಶಿವಾಜಿನಗರದ ಗಂಗಾಧರ್ ಚೆಟ್ಟಿ ರಸ್ತೆಯ ಆರ್‌ಬಿಎಎನ್‌ಎಸ್ ಶಾಲೆ ಹಾಗೂ ಕಾಕ್ಸ್‌ಟೌನ್‌ನಲ್ಲಿ ಸಂತ ಅಲಾಷಿಯಸ್ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗಳಲ್ಲಿ ಮತದಾರರು ಮತ ಚಲಾಯಿಸುತ್ತಿದ್ದಾರೆ‌. ಮತಗಟ್ಟೆ ಬಳಿ ಪೊಲೀಸರು ಬಿಗಿಭದ್ರತೆ ಕೈಗೊಂಡಿದ್ದಾರೆ.

ರಾಮನಗರ ಗಿಫ್ಟ್ ಹಂಚುತ್ತಿದ್ದವರನ್ನು ಹಿಡಿದ ಮೈತ್ರಿ ಕಾರ್ಯಕರ್ತರು

ರಾಮನಗರ: ಲೋಕಸಭಾ ಚುನಾವಣೆಯ ಮತದಾನಕ್ಕೆ ಹಿಂದಿನ ರಾತ್ರಿ ಮತ್ತು ಇಂದು ಬೆಳಿಗ್ಗೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸ್ಮಾರ್ಟ್ ಗಿಫ್ಟ್ ಕಾರ್ಡ್ ಗಳು ಸದ್ದು ಮಾಡಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಾಸಕ ಎಚ್.ಸಿ. ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಸೇರಿದಂತೆ ಕಾಂಗ್ರೆಸ್ ನಾಯಕರ ಭಾವಚಿತ್ರ ಇರುವ ಸಗ ಕಾರ್ಡ್ ಗಳನ್ನು ರಾತ್ರೋರಾತ್ರಿ ವಿತರಿಸಲಾಗಿದೆ.

ರಾಮನಗರದ ವಾರ್ಡ್ ಗಳಲ್ಲಿ ಸಹ ರಾತ್ರಿಯಿಂದ ಬೆಳಗ್ಗಿನ ಜಾವದವರಗೆ ವಿತರಣೆ ಕೆಲಸ ನಡೆದಿದೆ ಎಂದು ಜೆಡಿಎಸ್ ಕಾರ್ಯಕರ್ತರು ದೂರಿದ್ದಾರೆ.

ಚಾಮರಾಜನಗರ: ಮತ ಸಂದೇಶ ಮುದ್ರಿತ ರೇಷ್ಮೆ ಸೀರೆಯಲ್ಲಿ ಮಿಂಚಿದ ಅಧಿಕಾರಿಗಳು

ಚಾಮರಾಜನಗರ: ಚುನಾವಣೆಯಲ್ಲಿ ಮತದಾನ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುತ್ತಿರುವ ಜಿಲ್ಲಾ ಸ್ವೀಪ್ ಸಮಿತಿ, ಕೈಮಗ್ಗದ ರೇಷ್ಮೆ ಸೀರೆಗಳಲ್ಲೂ ಜಾಗೃತಿ ಸಂದೇಶವನ್ನು ಮುದ್ರಿಸಿದೆ.

ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾ ನಾಗ್ಗ, ಜಿಲ್ಲಾ ಸ್ವೀಪ್ ನೋಡೆಲ್ ಅಧಿಕಾರಿ ಲಕ್ಷ್ಮಿ ಹಾಗೂ ಚಾಮರಾಜನಗರ ಸಹಾಯಕ ಚುನಾವಣಾಧಿಕಾರಿ ಸವಿತಾ ಸೇರಿದಂತೆ ಉನ್ನತ ಅಧಿಕಾರಿಗಳು ಮತದಾನದ ದಿನ ಆ ಸೀರೆಗಳನ್ನು ಧರಿಸಿ ಮಿಂಚಿದರು.

‘ಚುನಾವಣಾ ಪರ್ವ ದೇಶದ ಗರ್ವ’ ಎಂಬ ಸಂದೇಶನ್ನು ಸೀರೆಯಲ್ಲಿ ಮುದ್ರಿಸಲಾಗಿದೆ.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರು ನಗರದ ಪಿಡಬ್ಲ್ಯುಡಿ ಕಾಲೊನಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.

ರೇಷ್ಮೆ ಸೀರೆ ಧರಿಸಿ ಮತಗಟ್ಟೆಗೆ ಬಂದಿದ್ದ ಅವರಿಗೆ ಲಕ್ಷ್ಮಿ, ಸವಿತಾ ಸಾಥ್ ನೀಡಿದರು.

‘ಕೊಳ್ಳೇಗಾಲದ ನೇಕಾರ ಕೃಷ್ಣಮೂರ್ತಿ ಅವರು 10 ಸೀರೆಗಳನ್ನು ನೇಯ್ದಿದ್ದು, ಅದನ್ನು ನಾವು ಖರೀದಿಸಿದ್ದೇವೆ. ಮತದಾನದ ಅರಿವು ಮೂಡಿಸಲು ಸ್ವೀಪ್ ಸಮಿತಿ ಮಾಡಿರುವ ಪ್ರಯತ್ನ ಇದು’ ಎಂದು ಸ್ವೀಪ್ ಸಮಿತಿ ನೋಡೆಲ್ ಅಧಿಕಾರಿ ಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗಮನ ಸೆಳೆಯುತ್ತಿದೆ ಸಾಂಪ್ರದಾಯಿಕ ಮತಗಟ್ಟೆ: ಚಾಮರಾಜನಗರದ ರಾಮಸಮುದ್ರದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿರುವ ಸಾಂಪ್ರದಾಯಿಕ ಮತಗಟ್ಟೆ ಗಮನಸೆಳೆಯುತ್ತಿದೆ.

ಜಾನಪದ ಕಲಾವಿದರು ಬಳಸುವ ಸಂಗೀತ ಪರಿಕರಗಳು, ಹಳೆ ಕಾಲದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಮತಗಟ್ಟೆಗಳಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಜನರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಮುಸ್ಲಿಮರಿಂದ ಬೆಳಿಗ್ಗೆಯೇ ಮತದಾನ: ಬಿಸಿಲು ಮತ್ತು ಮಧ್ಯಾಹ್ನ ಶುಕ್ರವಾರದ ಪ್ರಾರ್ಥನೆ ಇರುವುದರಿಂದ ಮುಸ್ಲಿಂ ಸಮುದಾಯದ ಮತದಾರರು ಬೆಳಿಗ್ಗೆಯೇ ಮತದಾನ ಮಾಡಲು ಉತ್ಸಾಹ ತೋರುತ್ತಿದ್ದಾರೆ.

ಬೆಳಿಗ್ಗೆಯಿಂದಲೇ ಮತಗಟ್ಟೆಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುತ್ತಿದ್ದಾರೆ.

ಶತಾಯುಷಿ 101 ವರ್ಷದ ತಿಮ್ಮಮ್ಮ ಮತದಾನ

ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶ್ರೀಕಾಂತ್ ವಿದ್ಯಾಸಂಸ್ಥೆಯ ಮತಗಟ್ಟೆಯಲ್ಲಿ ಶತಾಯುಷಿ 101 ವರ್ಷದ ತಿಮ್ಮಮ್ಮ ಮತ ಚಲಾಯಿಸಿದರು.

ಕರ್ನಾಟಕದಲ್ಲಿ ಬೆಳಿಗ್ಗೆ 9ರ ಹೊತ್ತಿಗೆ ಶೇ. 9.21ರಷ್ಟು ಮತದಾನ

ಮಹದೇಶ್ವರ ಬೆಟ್ಟ: ಮತಗಟ್ಟೆಗೆ ಬಾರದ ಮತದಾರರು

ಕುಟುಂಬದೊಂದಿಗೆ ಯದುವೀರ್ ಮತದಾನ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಂಕರಮಠ ರಸ್ತೆಯ ಶ್ರೀಕಾಂತ ಮಹಿಳಾ ವಿದ್ಯಾಲಯದಲ್ಲಿ ಶುಕ್ರವಾರ ಮತ ದಾನ ಮಾಡಿದರು.

ತಾಯಿ ಪ್ರಮೋದಾದೇವಿ‌ ಒಡೆಯರ್, ಪತ್ನಿ ತ್ರಿಷಿಕಾದೇವಿ ಜೊತೆ ಬಂದು ಮತ‌ ಚಲಾಯಿಸಿದರು.

ಇದಕ್ಕೂ ಮುನ್ನ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸಿದರು.

ಸುತ್ತೂರು ಶ್ರೀ ಮತದಾನ

ಮೈಸೂರು: ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಸುತ್ತೂರಿನಲ್ಲಿ ಶಿವರಾತ್ರೀಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮತದಾನ ಮಾಡಿದರು.

ಅರ್ಹರೆಲ್ಲರೂ ಮತದಾನ ಮಾಡಬೇಕು ಎಂದು ತಿಳಿಸಿದರು.

ಸುತ್ತೂರು ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ.

ಮಂಗಳೂರು: ಮತಗಟ್ಟೆ ಬಳಿ ವ್ಯಕ್ತಿಯೊಬ್ಬರ ಪುಂಡಾಟ

ಮಂಗಳೂರು: ಇಲ್ಲಿಯ ಕಪಿತಾನಿಯೊ ಮತಗಟ್ಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಆರ್‌.ಪದ್ಮರಾಜ್‌ ಮತದಾನ ಮಾಡಿ ತೆರಳುವ ವೇಳೆ ವ್ಯಕ್ತಿಯೊಬ್ಬ ಪುಂಡಾಟ ನಡೆಸಿದ.

ಪದ್ಮರಾಜ್‌ ಮತದಾನ ಮಾಡಿದ ನಂತರ, ಮತಗಟ್ಟೆ ಬಳಿ ಇದ್ದ ಮಾಧ್ಯಮದವರೊಟ್ಟಿಗೆ ಮಾತನಾಡಿದರು. ಅವರು ಅಲ್ಲಿಂದ ತೆರಳುತ್ತಿದ್ದಾಗ ಅಲ್ಲಿಗೆ ಬಂದ ವ್ಯಕ್ತಿಯೊಬ್ಬರು, ‘ಕಾಂಗ್ರೆಸ್‌ ಅಭ್ಯರ್ಥಿಗೇ ಹೆಚ್ಚು ಪ್ರಚಾರ ಸಿಗುತ್ತಿದೆ...’ ಎಂದೆಲ್ಲ ರೇಗಾಡಿದರು. ಸ್ಥಳದಲ್ಲಿದ್ದ ಪೊಲೀಸರು ಪ್ರಶ್ನಿಸಿದಾಗ, ಆ ವ್ಯಕ್ತಿ ಪೊಲೀಸರೊಂದಿಗೂ ಜಟಾಪಟಿ ನಡೆಸಿದರು. ಪೊಲೀಸರು ಆತನನ್ನು ಅಲ್ಲಿಂದ ಕರೆದೊಯ್ದರು.

ಕಪಿತಾನಿಯೊ ಮತಗಟ್ಟೆಯಲ್ಲಿ ಮತದಾನಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಮತದಾನ ಸುಸೂತ್ರವಾಗಿ ನಡೆಯುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮುಲ್ಲೈ ಮುಗಿಲನ್‌ ಪ್ರತಿಕ್ರಿಯಿಸಿದರು.

ಕೈಕೊಟ್ಟ ಮತಯಂತ್ರ

ಮೈಸೂರು ಜಿಲ್ಲೆ ಹುಣಸೂರು ನಗರದ ಮತಗಟ್ಟೆ ಸಂಖೆ 92ರ ಶಬ್ಬೀರ್ ನಗರದಲ್ಲಿ ಮತಯಂತ್ರ ಕೈಕೊಟ್ಟ ಕಾರಣ ಚುನಾವಣಾಧಿಕಾರಿ ಮತಯಂತ್ರ ಬದಲಿಸಿ ಮತದಾನಕ್ಕೆ ಅನುಕೂಲ ಮಾಡಿದ್ದಾರೆ.

ಮೈಸೂರಿನ ಜ್ಞಾನ ಗಂಗಾ ಶಾಲೆಯಲ್ಲಿ ಪಿ ಎಸ್ ಲಕ್ಷ್ಮಿ 91 ವರ್ಷ ಮತ ಚಲಾಯಿಸಿದರು. ಪ್ರಜಾವಾಣಿ ಚಿತ್ರ.

ದ.ಕ. ಕ್ಷೇತ್ರ: ಬೆಳಿಗ್ಗೆ 9ರ ಹೊತ್ತಿಗೆ ಶೇ 14.33ರಷ್ಟು ಮತದಾನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಿರುಸಿನಿಂದ‌ ಮತದಾನ ನಡೆಯುತ್ತಿದೆ.

ಬೆಳಿಗ್ಗೆ 9 ಗಂಟೆಯ ವೇಳೆಗೆ ಜಿಲ್ಲೆಯಲ್ಲಿ ಶೇ 14.33ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಬೆಳಿಗ್ಗೆ 7 ಗಂಟೆಯಿಂದಲೇ ಹೆಚ್ಚಿನ ಮತಗಟ್ಟೆಗಳಲ್ಲಿ ಜನದಟ್ಟಣಿ ಇದ್ದು, ಮತದಾರರು ಸರದಿಯಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಮೈಸೂರಿನ ಸಂಸ್ಕೃತ ಪಾಠ ಶಾಲೆಯಲ್ಲಿ ಶಾಸಕ ಶ್ರೀವತ್ಸ ಅವರು ಮತ ಚಲಾಯಿಸಿದರು.

ಮೈಸೂರಿನ ಸಂಸ್ಕೃತ ಪಾಠ ಶಾಲೆಯಲ್ಲಿ ಶಾಸಕ ಶ್ರೀವತ್ಸ ಅವರು ಮತ ಚಲಾಯಿಸಿದರು. ಪ್ರಜಾವಾಣಿ ಚಿತ್ರ.

ಮತ ತಂತ್ರ ದಲ್ಲಿ ದೋಷ ಅರ್ಧ ಗಂಟೆ ತಡವಾಗಿ ಆರಂಭಗೊಂಡ ಮತದಾನ

ಮತಯಂತ್ರದಲ್ಲಿ ಸಮಸ್ಯೆ: ಕೆಲವೆಡೆ ತಡವಾಗಿ ಶುರುವಾದ ಮತದಾನ

ಉತ್ಸಾಹದಿಂದ ಹಕ್ಕು ಚಲಾಯಿಸಿದ ಮತದಾರರು

ರಾಮನಗರ: ಜಿಲ್ಲೆಯಲ್ಲಿ ಮತದಾರರು ಬೆಳಿಗ್ಗೆ ಉತ್ಸಾಹದಿಂದ ಮತ ಚಲಾಯಿಸಿದರು. ಕೆಲವೆಡೆ ವಿದ್ಯುನ್ಮಾನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ವಿಳಂಬವಾಯಿತು.

ತಾಲ್ಲೂಕಿನ ಬನ್ನಿಕುಪ್ಪೆ, ಲಕ್ಕೋಜನಹಳ್ಳಿ, ಅಂಕನಹಳ್ಳಿ, ರಾಮನಗರ ನಗರದ ವಾರ್ಡ್ ಗಳು ಸೇರಿದಂತೆ ವಿವಿಧೆಡೆ ಭರದಿಂದ ಮತದಾನ ಸಾಗಿತು. ಕೆಲಸ ಕಾರ್ಯಗಳಿಗೆ ಹೋಗಬೇಕಿದ್ದವರು ಬೆಳಿಗ್ಗೆಯೇ ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿ ಹೋದರು.

ರಾಮನಗರದ ಶಾಂತಿನಿಕೇತನ ಶಾಲೆ ಬೂತ್ ಸಂಖ್ಯೆ- 62ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಮತದಾನ ಅರ್ಧ ತಾಸು ತಡವಾಯಿತು. ಬೆಳಿಗ್ಗೆ 9.30ರವರೆಗೆ ಶೇ 8.17ರಷ್ಟು ಮತದಾನವಾಗಿದೆ.

ಎರಡೂವರೆ ತಾಸು ವಿಳಂಬವಾಗಿ ಆರಂಭವಾದ ಮತದಾನ

ಮಂಗಳೂರು: ಮಂಗಳೂರು ದಕ್ಷಿಣ ವಿಧಾನಸಭಾ‌‌ ಕ್ಷೇತ್ರದ ಮತಗಟ್ಟೆ ಸಂಖ್ಯೆ 20ರಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು‌ಬಂದ‌‌ ಕಾರಣ ಎರಡೂವರೆ‌ ತಾಸು ವಿಳಂಬವಾಗಿ ಮತದಾನ ಆರಂಭವಾಯಿತು.

ಬಿಜೈ ಚರ್ಚ್ ಆವರಣದಲ್ಲಿರುವ ಸೇಂಟ್ ಫ್ರಾನ್ಸಿಸ್ ಝ್ಸೇವಿಯರ್ ಶಾಲೆಯ ಮತಗಟ್ಟೆ ಸಂಖ್ಯೆ 20ರಲ್ಲಿ ಮತದಾರರು ಬೆಳಿಗ್ಗೆ 7 ಗಂಟೆಯಿಂದಲೇ ಸರದಿಯಲ್ಲಿ ನಿಂತಿದ್ದರು. ಆರಂಭದಲ್ಲೇ ಮತಯಂತ್ರದಲ್ಲಿ ದೋಷ ಕಂಡುಬಂತು.

ಮತಯಂತ್ರ ಬದಲಾಯಿಸಿ ಮತದಾನ ಆರಂಭ ಆಗುವ ವೇಳೆಗೆ 9.30 ಗಂಟೆ ದಾಟಿತ್ತು. 100ಕ್ಕೂ ಹೆಚ್ಚು ಜನರು ತಮ್ಮ ಹಕ್ಕು ಚಲಾಯಿಸಲು ಸರದಿಯಲ್ಲಿ ನಿಂತು ಕಾಯಬೇಕಾಯಿತು ಎಂದು ಮತ ಚಲಾಯಿಸಲು ಬಂದಿದ್ದ ಮತದಾರರೊಬ್ಬರು ಪ್ರತಿಕ್ರಿಯಿಸಿದರು.

ಚಿತ್ರದುರ್ಗ: ಮತ ಚಲಾಯಿಸಿದ ನವ ದಂಪತಿ

ಬೆಂಗಳೂರು: 20ನೇ ಬಾರಿ ಮತದಾನ ಮಾಡಿದ 86ರ ವೃದ್ಧ

ಮೈಸೂರು: ಮತದಾನ ಮಾಡಿ ಫೋಟೊ ಹಂಚಿಕೊಂಡರು!

ಲಿಂಗಸುಗೂರು: ₹500ರ ಝರಾಕ್ಸ್ ನೋಟಿನ 62 ಬಂಡಲ್ ಜಪ್ತಿ

4 ತಾಸಲ್ಲಿ ಶೇ 25.09ರಷ್ಟು ಮತದಾನ

ಮಂಡ್ಯ ಲೋಕಸಭಾ ಕ್ಷೇತ್ರ

ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುಂಚನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಶಿಕ್ಷಣ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಯತಿಗಳಾದ ಚೈತನ್ಯನಾಥ ಸ್ವಾಮೀಜಿ, ಮಂಗಳಾನಾಥ ಸ್ವಾಮೀಜಿ, ಸತ್ಕೀರ್ತಿ ನಾಥ ಸ್ವಾಮೀಜಿ ಮತ ಚಲಾಯಿಸಿದರು

4 ತಾಸಲ್ಲಿ ಶೇ 25.09ರಷ್ಟು ಮತದಾನ

ಮೈಸೂರು: ಮೈಸೂರು- ಲೋಕಸಭಾ ಕ್ಷೇತ್ರದ ಮತದಾನ ಬಿರುಸಿನಿಂದ ಸಾಗಿದ್ದು, ಮೊದಲ 4 ತಾಸಿನಲ್ಲಿ ಅಂದರೆ ಬೆಳಿಗ್ಗೆ 11ರವರೆಗೆ ಸರಾಸರಿ ಶೇ 25.09ರಷ್ಟು ಮತ ದಾನವಾಗಿದೆ.

ಮಡಿಕೇರಿ ಶೇ 28.94, ವಿರಾಜಪೇಟೆ ಶೇ 30.87 ಪಿರಿಯಾಪಟ್ಟಣ ಶೇ 24.14, ಹುಣಸೂರು ಶೇ 22.75, ಚಾಮುಂಡೇಶ್ವರಿ ‌ಶೇ 24.96, ಕೃಷ್ಣರಾಜ ಶೇ 23.37, ಚಾಮರಾಜ ಶೇ 22.6, ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಶೇ 23.93ರಷ್ಟು ಮತ ದಾನ ಆಗಿದೆ.

ದೇವಿಕುಂಟೆ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ

ಬಾಗೇಪಲ್ಲಿ: ತಾಲ್ಲೂಕಿನ ಗೂಳೂರು ಹೋಬಳಿ ದೇವಿ ಕುಂಟೆ ಗ್ರಾಮಸ್ಥರು ಮತದಾನ ಬಹಿಷ್ಕರಿಸಿದ್ದಾರೆ.

ಮಾರ್ಗಾನುಕುಂಟೆಯಿಂದ ದೇವಿಕುಂಟೆ ಗ್ರಾಮಕ್ಕೆ 1994ರಲ್ಲಿ ರಸ್ತೆ ಮಾಡಲಾಗಿದೆ. ಆದರೆ ಆ ರಸ್ತೆ ತೀವ್ರವಾಗಿ ಹಾಳಾಗಿದೆ. ರಸ್ತೆ ಮಾಡಿಸುವಂತೆ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಮತದಾನ ಬಹಿಷ್ಕರಿಸುತ್ತಿದ್ದೇವೆ ಗ್ರಾಮಸ್ಥರು ತಿಳಿಸಿದ್ದಾರೆ.

ಬೆಳಿಗ್ಗೆ 11.50 ಆದರೂ ಗ್ರಾಮದಲ್ಲಿ ಯಾರೂ ಮತದಾನ ಮಾಡಿರಲಿಲ್ಲ.

ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಕುಟುಂಬ ಸಮೇತರಾಗಿ ಮತದಾನ ಮಾಡಿದ ನಟ ಡಾಲಿ. ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಧರಿಸಿ ಬಂದು ಹಕ್ಕು ಚಲಾಯಿಸಿದ ಧನಂಜಯ.

ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತದಾನ

ನಟ ಪ್ರಕಾಶ್ ರಾಜ್ ಮತದಾನ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11ರ ಹೊತ್ತಿಗೆ ಶೇ 29.03ರಷ್ಟು ಮತದಾನ ನಡೆದಿದೆ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11ರ ಹೊತ್ತಿಗೆ ಶೇ 29.03ರಷ್ಟು ಮತದಾನ ನಡೆದಿದೆ ಕುಂದಾಪುರ32.67, ಉಡುಪಿ 30.27, ಕಾಪು 32.35, ಕಾರ್ಕಳ 32.77, ಶೃಂಗೇರಿ 23.18, ಮೂಡಿಗೆರೆ 27.05, ಚಿಕ್ಕಮಗಳೂರು 24.10, ತರಿಕೆರೆ 23.18ರಷ್ಟು ಮತದಾನ ನಡೆದಿದೆ. ಪೇಜಾವರಮಠದ ವಿಶ್ವಪ್ರಸನ್ನ ತೀರ್ಥ ಸ್ಚಾಮೀಜಿ ಉಡುಪಿಯ ನಾರ್ತ್ ಶಾಲೆ, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪಣಿಯಾಡಿ ಶಾಲೆಯಲ್ಲಿ, ಪಲಿಮಾರು ಮಠದ ಹಿರಿಯ ಯತಿ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಪಲಿಮಾರು ಕಿರಿಯಯತಿ ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ, ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಉಡುಪಿಯ ನಾರ್ತ್ ಶಾಲೆಯಲ್ಲಿ ಮತ ಚಲಾಯಿಸಿದರು. ನಟ ರಕ್ಷಿತ್ ಶೆಟ್ಟಿ ಕುಕ್ಕಿಕಟ್ಟೆ ಶಾಲೆಯಲ್ಲಿ ಮತಚಲಾಯಿಸಿದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಗಿಫ್ಟ್ ಕಾರ್ಡುಗಳನ್ನು ಹಂಚಲಾಗಿದೆ: ಎಚ್‌ಡಿಕೆ

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಳೆದ ಗಿಫ್ಟ್ ಕಾರ್ಡುಗಳನ್ನು ಹಂಚಲಾಗಿದೆ ಎಂದು ಸಾಕ್ಷಿ ಸಮೇತ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.

ಪಾರದರ್ಶಕ, ಮುಕ್ತ ಚುನಾವಣೆ ನಡೆಸುವಲ್ಲಿ ಚುನಾವಣೆ ಆಯೋಗ ಸಂಪೂರ್ಣ ವಿಫಲ ಎಂದು ಕಿಡಿಕಾರಿದ್ದಾರೆ.

ಹಣ ಹಂಚಿಕೊಂಡು ಚುನಾವಣಾ ನಡೆಸಲು ಅವಕಾಶ ಮಾಡಿಕೊಟ್ಟುಬಿಡಿ ಎಂದು ಆಯೋಗದ ಮೇಲೆ ಕಿಡಿಕಾರಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರವಾಗಿ ಕ್ಯೂ ಆರ್ ಕೋಡ್ ಇರುವ ಕೂಪನ್ ಗಳ ಹಂಚಿಕೆ ತಡೆಯಲು ಹೋದ ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ್ದಾರೆ.

ಕುಸುಮ ಹನುಮಂತಯ್ಯ, ಕುಣಿಗಲ್ ಶಾಸಕ ಡಾ.ರಂಗನಾಥ್, ಮಾಗಡಿ ಶಾಸಕ ಬಾಲಕೃಷ್ಣ, ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಡಿಸಿಎಂ ಡಿ.ಕೆ.ಶಿವಕುಮಾರ್ ಹೆಸರಿನಲ್ಲಿ ಕೂಪನ್ ಕಾರ್ಡುಗಳ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಶ್ರೀ HD ಕುಮಾರಸ್ವಾಮಿ ಅವರು ತಮ್ಮ ಕುಟುಂಬ ಸಮೇತರಾಗಿ ಇಂದು ಬಿಡದಿ ಸಮೀಪದ ಕೇತಿಗಾನಹಳ್ಳಿ ಗ್ರಾಮದ ಮತಗಟ್ಟೆಯಲ್ಲಿ ಮತದಾನ ಮಾಡಿದರು.

ದಕ್ಷಿಣ ಕನ್ನಡ: 11 ಗಂಟೆವರೆಗೆ ಶೇ 30.96 ಮತದಾನ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಶೇ 39.96 ರಷ್ಟು ಮತದಾನವಾಗಿದೆ.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 32.39, ಮೂಡುಬಿದರೆ ಕ್ಷೇತ್ರದಲ್ಲಿ ಶೆ! 27.46, ಮಂಗಳೂರು ಉತ್ತರದಲ್ಲಿ ಶೇ

30.39, ಮಂಗಳೂರು ದಕ್ಷಿಣದಲ್ಲಿ ಶೇ 26.54, ಮಂಗಳೂರು ಕ್ಷೇತ್ರದಲ್ಲಿ ಶೆ 31.63, ಬಂಟ್ವಾಳ ಕ್ಷೇತ್ರದಲ್ಲಿ ಶೇ 32.28, ಪುತ್ತೂರು ಕ್ಷೇತ್ರದಲ್ಲಿ ಶೆ 32.98 ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ 34.7 ಮತದಾನ ದಾಖಲಾಗಿದೆ.‌

ಕೆಲವು ಕಡೆಗಳಲ್ಲಿ‌ ಮತಯಂತ್ರ , ವಿವಿ ಪ್ಯಾಟ್ ನಲ್ಲಿ ತಾಂತ್ರಿಕ‌ ದೋಷ ಕಂಡು ಬಂದ ಕಾರಣ ಮತದಾನ ಆರಂಭಕ್ಕೆ ವಿಳಂಬವಾಗಿದೆ. ಮತದಾನ ಮಾಡಲು ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶ ಇದ್ದು, ಮತದಾರರು‌ ನಿಗದಿತ ಅವಧಿಯ ಒಳಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಸಂಜೆ 6 ಗಂಟೆಯ‌ ಒಳಗೆ ಮತಗಟ್ಟೆಯ ಲ್ಲಿ ಸರದಿಯಲ್ಲಿ ನಿಂತವರಿಗೆ ಮಾತ್ರ‌ ಮತದಾನಕ್ಕೆ ಅವಕಾಶ‌‌ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.‌

ಚಿಕ್ಕಬಳ್ಳಾಪುರ ಕ್ಷೇತ್ರ: ಶೇ 21.92ರಷ್ಟು ಮತದಾನ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆ 7 ಗಂಟೆಯಿಂದ 11 ಗಂಟೆವರೆಗೆ ಒಟ್ಟು ಶೇ 21.92 ಮತದಾನ ನಡೆದಿದೆ.

ಗೌರಿಬಿದನೂರು ಶೇ 22.06,

ಬಾಗೇಪಲ್ಲಿ ಶೇ 22.91

ಚಿಕ್ಕಬಳ್ಳಾಪುರ ಶೇ 23.46

ಯಲಹಂಕ ಶಢ 20.94

ಹೋಸಕೋಟೆ ಶೇ 26

ದೇವನಹಳ್ಳಿ ಶೇ 19.01

ದೊಡ್ಡಬಳ್ಳಾಪುರ ಶೇ 19.04

ನೆಲಮಂಗಲ ಶೇ 22.71%

ದಕ್ಷಿಣ ಕನ್ನಡ: 11 ಗಂಟೆವರೆಗೆ ಶೇ 30.96 ಮತದಾನ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ ಶೇ 39.96 ರಷ್ಟು ಮತದಾನವಾಗಿದೆ.

ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 32.39, ಮೂಡುಬಿದರೆ ಕ್ಷೇತ್ರದಲ್ಲಿ ಶೆ! 27.46, ಮಂಗಳೂರು ಉತ್ತರದಲ್ಲಿ ಶೇ

30.39, ಮಂಗಳೂರು ದಕ್ಷಿಣದಲ್ಲಿ ಶೇ 26.54, ಮಂಗಳೂರು ಕ್ಷೇತ್ರದಲ್ಲಿ ಶೆ 31.63, ಬಂಟ್ವಾಳ ಕ್ಷೇತ್ರದಲ್ಲಿ ಶೇ 32.28, ಪುತ್ತೂರು ಕ್ಷೇತ್ರದಲ್ಲಿ ಶೆ 32.98 ಹಾಗೂ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಶೇ 34.7 ಮತದಾನ ದಾಖಲಾಗಿದೆ.‌

ಕೆಲವು ಕಡೆಗಳಲ್ಲಿ‌ ಮತಯಂತ್ರ , ವಿವಿ ಪ್ಯಾಟ್ ನಲ್ಲಿ ತಾಂತ್ರಿಕ‌ ದೋಷ ಕಂಡು ಬಂದ ಕಾರಣ ಮತದಾನ ಆರಂಭಕ್ಕೆ ವಿಳಂಬವಾಗಿದೆ. ಮತದಾನ ಮಾಡಲು ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶ ಇದ್ದು, ಮತದಾರರು‌ ನಿಗದಿತ ಅವಧಿಯ ಒಳಗೆ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಸಂಜೆ 6 ಗಂಟೆಯ‌ ಒಳಗೆ ಮತಗಟ್ಟೆಯ ಲ್ಲಿ ಸರದಿಯಲ್ಲಿ ನಿಂತವರಿಗೆ ಮಾತ್ರ‌ ಮತದಾನಕ್ಕೆ ಅವಕಾಶ‌‌ ಇರುತ್ತದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ತಿಳಿಸಿದ್ದಾರೆ.‌

ಮತದಾರರಿಗೆ ನಿಂಬೆ ಹಣ್ಣಿನ ಜ್ಯೂಸ್ ವಿತರಣೆ

ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಹುಣಸೂರು ತಾಲ್ಲೂಕಿನ ನಾಗಪುರ ಆಶ್ರಮ ಶಾಲೆಯಲ್ಲಿ ಮತದಾರರಿಗೆ ನಿಂಬೆ ಹಣ್ಣಿನ ಜ್ಯೂಸ್ ವಿತರಿಸಲಾಯಿತು.

ಗಿರಿಜನರಷ್ಟೆ ಇರುವ ಈ ಹಾಡಿಯ ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಚಪ್ಪರವನ್ನು ಹಾಕಲಾಗಿತ್ತು. ಬಿರು ಬಿಸಿಲಿನಲ್ಲಿ ಬಂದ ಆದಿವಾಸಿಗಳಿಗೆ ನಿಂಬೆ ಹಣ್ಣಿನ ಜ್ಯೂಸ್ ವಿತರಿಸಲಾಯಿತು.

ಕಾಂಗ್ರೆಸ್‌ಗೆ ಉತ್ತಮ ವಾತಾವರಣ: ಸಿದ್ದರಾಮಯ್ಯ

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1ರ ಹೊತ್ತಿಗೆ ಶೇ 46.43ರಷ್ಟು ಮತದಾನ ನಡೆದಿದೆ

ಕುಂದಾಪುರ 49.14, ಉಡುಪಿ 47.04, ಕಾಪು 49.58, ಕಾರ್ಕಳ 48.96, ಶೃಂಗೇರಿ 49.49, ಮೂಡಿಗೆರೆ 46.44, ಚಿಕ್ಕಮಗಳೂರು 40.44, ತರಿಕೆರೆ 41.47 ರಷ್ಟು ಮತದಾನ ನಡೆದಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1ರ ಹೊತ್ತಿಗೆ ಶೇ 46.43ರಷ್ಟು ಮತದಾನ

ಮತಗಟ್ಟೆಗೆ ನಿಖಿಲ್‌ ಕುಮಾರಸ್ವಾಮಿ ಭೇಟಿ

ರಾಮನಗರ: ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಶುಕ್ರವಾರ ನಗರದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು.

ಮತಗಟ್ಟೆ ಹೊರಗಡೆ ಇದ್ದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ನಿಖಿಲ್ ಭೇಟಿ ಮಾಡಿದರು. ಮತದಾನ ಅಂತ್ಯವಾಗುವವರೆಗೆ ಮತಗಟ್ಟೆ ಬಿಟ್ಟು ಅಲುಗಾಡಬಾರದು. ಗಿಫ್ಟ್ ಕಾರ್ಡ್ ಹಂಚಿಕೆ ಮಾಡುತ್ತಿರುವುದರ ಬಗ್ಗೆಯೂ ನಿಗಾ ವಹಿಸುವಂತೆ ಸೂಚಿಸಿದರು.

ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 38.23 ರಷ್ಟು ಮತದಾನ

ಲೋಕಸಭೆಗೆ ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 38.23ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ ಕ್ಷೇತ್ರ: ಮಧ್ಯಾಹ್ನ 1 ಗಂಟೆಯವರೆಗೆ ಶೇ 48.1ರಷ್ಟು ಮತದಾನ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇ 48.1 ರಷ್ಟು ಮತದಾನವಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1ರ ಹೊತ್ತಿಗೆ ಶೇ 46.43ರಷ್ಟು ಮತದಾನ ನಡೆದಿದೆ

ಚಿತ್ರದುರ್ಗ: ಶೇ 39 ಮತದಾನ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಮಧ್ಯಾಹ್ನ 1 ಗಂಟೆವರೆಗೆ ಶೇ 39.05 ಮತದಾನವಾಗಿದೆ.

ಚಳ್ಳಕೆರೆ- ಶೇ 39.9

ಚಿತ್ರದುರ್ಗ-40.2

ಹಿರಿಯೂರು-37.5

ಹೊಳಲ್ಕೆರೆ - 38.60

ಹೊಸದುರ್ಗ-36.21

ಮೊಳಕಾಲ್ಮೂರು- 44.28

ಪಾವಗಡ- 36.47

ಶಿರಾ-37.85

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ನೆಲಮಂಗಲ ತಾಲ್ಲೂಕಿನ ನಿಜಗಲ್ಲು ಕೆಂಪೋಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಶತಾಯುಷಿ 105 ವರ್ಷದ ಮಾದೇನಹಳ್ಳಿ ಗ್ರಾಮದ ಗಂಗಮ್ಮ. ಸ್ವತಂತ್ರ ಭಾರತದ ಎಲ್ಲ ಚುನಾವಣೆಗಳಲ್ಲಿ ಮತದಾನ ಮಾಡಿದ ಹೆಗ್ಗಳಿಕೆಗೆ ಇವರದ್ದು

ಕೋಲಾರ ಕ್ಷೇತ್ರ: ಮಧ್ಯಾಹ್ನ 1 ಗಂಟೆಗೆ ಶೇ 37.1 ಮತದಾನ

ಕೋಲಾರ: ಕೋಲಾರ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ನಡೆದಿದ್ದು, ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ 37.1 ರಷ್ಟು ಮತದಾನವಾಗಿತ್ತು.

ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವಿ.ಗೌತಮ್‌ ಹಾಗೂ ಜೆಡಿಎಸ್‌ನ ಎಂ.ಮಲ್ಲೇಶ್‌ ಬಾಬು ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು ಒಟ್ಟು 18 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಬೆಳಿಗ್ಗೆ 7ಕ್ಕೆ ಮತದಾನ ಮಂದಗತಿಯಲ್ಲಿ ಆರಂಭವಾಗಿ 9 ಗಂಟೆ ವೇಳೆಗೆ ಚುರುಕು ಪಡೆಯಿತು. 9 ಗಂಟೆ ವೇಳೆಗೆ ಶೇ 8.35ರಷ್ಟು ಮತದಾನವಾಗಿತ್ತು. 11 ಗಂಟೆಗೆ ಶೇ 20.72 ಮತದಾನ ನಡೆದಿತ್ತು.

ಕಾಂಗ್ರೆಸ್ ಕಾರ್ಯಕರ್ತರಿಂದ ಚೊಂಬು‌, ಖಾಲಿ ಸಿಲಿಂಡರ್ ಪ್ರದರ್ಶನ

ನಟ ರಮೇಶ್ ಅರವಿಂದ್ ದಂ‍ಪತಿ ಮತ ಚಲಾವಣೆ

3ಗಂಟೆ ವೇಳೆಗೆ ಶೇ 50.93ರಷ್ಟು ಮತದಾನ

3ಗಂಟೆ ವೇಳೆಗೆ ಶೇ 50.93ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

14 ಕ್ಷೇತ್ರಗಳ ಶೇಕಡವಾರು ಮತದಾನ ಹೀಗಿದೆ

ಉಡುಪಿ– ಚಿಕ್ಕಮಗಳೂರು: ಶೇ 57.49

ಹಾಸನ: ಶೇ 55.92

ದಕ್ಷಿಣ ಕನ್ನಡ: ಶೇ 58.76

ಚಿತ್ರದುರ್ಗ: ಶೇ 52.14

ತುಮಕೂರು: 56.62

ಮಂಡ್ಯ: 57.44

ಮೈಸೂರು: 53.55

ಚಾಮರಾಜನಗರ: 54.82

ಬೆಂಗಳೂರು ಗ್ರಾಮಾಂತರ: 49.62

ಬೆಂಗಳೂರು ಉತ್ತರ: 41.12

ಬೆಂಗಳೂರು ಕೇಂದ್ರ: 40.10

ಬೆಂಗಳೂರು ದಕ್ಷಿಣ: 40.77

ಚಿಕ್ಕಬಳ್ಳಾಪುರ: 55.90

ಕೋಲಾರ: 54.66

ಸಂಜೆ 5 ಗಂಟೆ ವೇಳೆಗೆ ಶೇ 63.90 ಮತದಾನ

ಸಂಜೆ 5ಗಂಟೆ ವೇಳೆಗೆ ಶೇ 63.90ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

14 ಕ್ಷೇತ್ರಗಳ ಶೇಕಡವಾರು ಮತದಾನ ಹೀಗಿದೆ

ಉಡುಪಿ– ಚಿಕ್ಕಮಗಳೂರು: ಶೇ 72.13

ಹಾಸನ: ಶೇ 72.13

ದಕ್ಷಿಣ ಕನ್ನಡ: ಶೇ 71.83.00

ಚಿತ್ರದುರ್ಗ: ಶೇ 67.22

ತುಮಕೂರು: 72.10

ಮಂಡ್ಯ: 74.87

ಮೈಸೂರು: 65.85

ಚಾಮರಾಜನಗರ: 69.60

ಬೆಂಗಳೂರು ಗ್ರಾಮಾಂತರ: 61.78

ಬೆಂಗಳೂರು ಉತ್ತರ: 50.04

ಬೆಂಗಳೂರು ಕೇಂದ್ರ: 48.61

ಬೆಂಗಳೂರು ದಕ್ಷಿಣ: 49.37

ಚಿಕ್ಕಬಳ್ಳಾಪುರ: 70.97

ಕೋಲಾರ: 71.26

ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಹದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂಡಿಗನತ್ತ ಗ್ರಾಮದಲ್ಲಿ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರು, ಮತಗಟ್ಟೆಯ ಮೇಲೆ ಕಲ್ಲು ತೂರಾಟ ನಡೆಸಿ, ಇವಿಎಂಗೆ ಹಾನಿ ಮಾಡಿದ್ದಾರೆ. 

ಶೇ 100 ಮತದಾನ; ದಾಖಲೆ ಬರೆದ ಮತಗಟ್ಟೆ

ಮಂಗಳೂರು: ಬೆಳ್ತಂಗಡಿ ತಾಲ್ಲೂಕು ಬಾಂಜಾರು ಮಲೆ ಮತಗಟ್ಟೆಯಲ್ಲಿ ಶೇ 100ರಷ್ಟು ಮತದಾನವಾಗಿದೆ. ಚಾರ್ಮಾಡಿ ಘಾಟಿಯ ತಪ್ಪಲಿನಲ್ಲಿರುವ ಈ ಊರಿನ ಮತಗಟ್ಟೆಯಲ್ಲಿ 111 ಜನ ಮತದಾರರು ಮತ ಚಲಾಯಿಸಲು ಅರ್ಹತೆ ಪಡೆದಿದ್ದರು. ಸಂಜೆ 4ರ ವೇಳೆಗೆ ಎಲ್ಲರೂ ಮತದಾನ ಮಾಡಿದರು. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿ ಶೇ 99ರಷ್ಟು ಮತದಾನವಾಗಿತ್ತು. ಒಬ್ಬರು ಮತ ಚಲಾಯಿಸಿರಲಿಲ್ಲ.

ಮತದಾನದದ ವಿಡಿಯೊ ಚಿತ್ರೀಕರಿಸಿದ ಡಿಕೆಸು ಅಭಿಮಾನಿ

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ‌ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಅಭಿಮಾನಿಯೊಬ್ಬರು ಅವರಿಗೆ ಮತ ಚಲಾಯಿಸುವುದನ್ನು ವಿಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.