ADVERTISEMENT

ಚುನಾವಣೆ ಹೊಸ್ತಿಲಲ್ಲಿ ಶ್ರೀನಿವಾಸ ಪ್ರಸಾದ್ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2024, 7:24 IST
Last Updated 13 ಏಪ್ರಿಲ್ 2024, 7:24 IST
   

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಇಲ್ಲಿನ ಜಯಲಕ್ಷ್ಮಿಪುರಂನ ಅವರ ನಿವಾಸದಲ್ಲಿ ಶನಿವಾರ ಭೇಟಿಯಾಗಿ ಚರ್ಚಿಸಿರುವುದು ಕುತೂಹಲ ಮೂಡಿಸಿದೆ.

ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ, ಮುನಿಸು ಮರೆತು ಪ್ರಸಾದ್ ಅವರನ್ನು ಭೇಟಿಯಾಗಿರುವುದು ಚರ್ಚೆಗೆ ಆಸ್ಪದವಾಗಿದೆ. ಉಭಯ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚಿಸಿದರು. ಈ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ‌ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ‌. ಲಕ್ಷ್ಮಣ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸುನೀಲ್ ಬೋಸ್ ಅವರನ್ನು ಬೆಂಬಲಿಸುವಂತೆ ಕೋರಿದರು ಎಂದು ತಿಳಿದುಬಂದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಹಾಗೂ ಪ್ರಸಾದ್ ದೀರ್ಘಕಾಲದಿಂದ ಸ್ನೇಹಿತರು. ಜೊತೆಯಲ್ಲೇ ರಾಜಕಾರಣ ಮಾಡಿದವರು. ರಾಜಕೀಯವಾಗಿ ನಾನು ಕಾಂಗ್ರೆಸ್‌ನಲ್ಲಿದ್ದೆ, ಅವರು ಬಿಜೆಪಿಗೆ ಹೋಗಿದ್ದರು. ಅವರೀಗ ರಾಜಕೀಯದಿಂದ ನಿವೃತ್ತರಾಗಿದ್ದಾರೆ. ಹೀಗಾಗಿ ಅವರನ್ನು ಭೇಟಿಯಾಗಲು ಹಾಗೂ ಆರೋಗ್ಯ ವಿಚಾರಿಸಲು ಭೇಟಿಯಾಗಿದ್ದೆ ಎಂದು ತಿಳಿಸಿದರು.

ADVERTISEMENT

ನಾನು ಯಾವ ಪಕ್ಷಕ್ಕೂ ಬೆಂಬಲ ಕೊಡುವುದಿಲ್ಲ ಎಂದು ಹೇಳಿದ್ದಾರೆ.‌ ಆದ್ದರಿಂದ ಅವರಿಂದ ರಾಜಕೀಯವಾಗಿ ಬೆಂಬಲ ಕೋರುವುದರಲ್ಲಿ ಅರ್ಥವಿಲ್ಲ. ಹೀಗಾಗಿ ರಾಜಕೀಯವಾಗಿ ಏನನ್ನೂ ಚರ್ಚೆ ಮಾಡಿಲ್ಲ. ಆದರೆ, ಕಾಂಗ್ರೆಸ್ ಬಗ್ಗೆ ಅನುಕಂಪವಿರಲಿ ಎಂದು ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ‌ ಜೊತೆ ಮಾತನಾಡಿದ ಶ್ರೀನಿವಾಸ ಪ್ರಸಾದ್, ನಾಳೆ (ಏ.14) ಮೈಸೂರಿನಲ್ಲಿ ನಡೆಯಲಿರುವ ಮೋದಿ ಸಮಾವೇಶಕ್ಕೆ ಆಹ್ವಾನ ಬಂದಿಲ್ಲ, ಬರುವುದೂ‌ ಇಲ್ಲ. ಕರೆದಿಲ್ಲ, ಕರೆಯುವುದೂ ಇಲ್ಲ. ನಾನು ಹೋಗುವುದೂ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಜೊತೆ ರಾಜಕೀಯದ ಚರ್ಚೆ ನಡೆದಿಲ್ಲ. ಅವರ ಭೇಟಿ ನನಗೆ ಸಹಜವಾಗಿಯೇ ಖುಷಿ ಕೊಟ್ಟಿದ್ದೆ. ಅವರು ನನ್ನ ಬೆಂಬಲ ಕೇಳಿದ್ದಾರೆ. ನಾನು ರಾಜಕೀಯವಾಗಿ ನಿವೃತ್ತಿಯಾಗಿದ್ದೇನೆ ಎಂದು ಹೇಳಿದ್ದೇನಷ್ಟೆ. ಚಾಮರಾಜನಗರದಲ್ಲಿ ಕಾಂಗ್ರೆಸ್‌ಗೆ ಉತ್ತಮವಾದ ವಾತಾವರಣ ಇದೆ ಎಂದು ಹೇಳಿದರು.

ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಕೆ.ಹರೀಶ್ ಗೌಡ, ಎಚ್.ಎಂ. ಗಣೇಶ್ ಪ್ರಸಾದ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮುಡಾ ಅಧ್ಯಕ್ಷ ಕೆ.ಮರೀಗೌಡ ಮೊದಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.