ADVERTISEMENT

ಲೋಕಸಭೆ ಚುನಾವಣೆ | ಎರಡು ಕ್ಷೇತ್ರಗಳ ‘ಕೈ’ ಟಿಕೆಟ್‌: ಇನ್ನಷ್ಟು ಕಗ್ಗಂಟು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 23:30 IST
Last Updated 23 ಮಾರ್ಚ್ 2024, 23:30 IST
   

ಬೆಂಗಳೂರು: ಸಚಿವ ಕೆ.ಎಚ್‌. ಮುನಿಯಪ್ಪ ಮತ್ತು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಆರ್. ರಮೇಶ್‌ ಕುಮಾರ್‌ ಬಣಗಳು ಪಟ್ಟು ಸಡಿಲಿಸದ ಕಾರಣ ಕೋಲಾರ ಟಿಕೆಟ್‌ ಹಂಚಿಕೆ ಕಗ್ಗಂಟು ಮತ್ತಷ್ಟು ಬಿಗಿಯಾಗಿದೆ. ಎರಡೂ ಬಣಗಳು ಟಿಕೆಟ್ ನೀಡುವಂತೆ ಬಿಗಿಪಟ್ಟು ಹಿಡಿದಿರುವುದರಿಂದ ಈ ವಿಚಾರವನ್ನು ರಾಜ್ಯ ನಾಯಕರು ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾರೆ.

ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ವಿಚಾರದಲ್ಲೂ ಕಾಂಗ್ರೆಸ್‌ನಲ್ಲಿ ಗೊಂದಲ ಮುಂದುವರಿದಿದೆ. ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯಿಲಿ ಹಾಗೂ ಯುವ ಮುಖಂಡ ರಕ್ಷಾ ರಾಮಯ್ಯ ಮಧ್ಯೆ ಟಿಕೆಟ್‌ಗಾಗಿ ಪೈಪೋಟಿ ಮುಂದುವರಿದಿದೆ. ಈ ಕ್ಷೇತ್ರದ ವಿಚಾರವನ್ನೂ ವರಿಷ್ಠರ ತೀರ್ಮಾನಕ್ಕೆ ಬಿಡಲಾಗಿದೆ.

ಮುನಿಯಪ್ಪ ಮತ್ತು ರಮೇಶ್ ಕುಮಾರ್ ಬಣವನ್ನು ಮುಖಾಮುಖಿಯಾಗಿಸಿ ಶನಿವಾರ ನಡೆಸಿದ ಸಂಧಾನ ಸಭೆಯಲ್ಲಿ, ‘ಕೋಲಾರ ಟಿಕೆಟ್‌ ಯಾರಿಗೇ ನೀಡಿದರೂ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ. 

ADVERTISEMENT

‘ಯಾರಿಗೆ ಟಿಕೆಟ್ ನೀಡಿದರೂ ಕೆಲಸ ಮಾಡುತ್ತೇವೆ. ಆದರೆ, ಮುನಿಯಪ್ಪ ಕುಟುಂಬಕ್ಕೆ ಮಾತ್ರ ಟಿಕೆಟ್ ನೀಡಬಾರದು. ಹಾಗೊಂದು ವೇಳೆ ನೀಡಿದರೆ ನಾವು ಕೆಲಸ ಮಾಡುವುದಿಲ್ಲ’ ಎಂದು ಮುನಿಯಪ್ಪ ಅವರ ಎದುರಿನಲ್ಲಿಯೇ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಕೋಪದಿಂದಲೇ ಸಭೆಯಿಂದ ಹೊರನಡೆದಿದೆ.

‘ಟಿಕೆಟ್ ವಿಚಾರವಾಗಿ ಗೊಂದಲ ಮಾಡಿಕೊಳ್ಳುವುದು ಬೇಡ. ಎಲ್ಲರೂ ಒಟ್ಟಿಗೆ ಕೆಲಸ ಮಾಡೋಣ. ಭಿನ್ನಾಭಿಪ್ರಾಯ ಮರೆತು ಕೆಲಸ ಮಾಡೋಣ. ಈ ವಿಚಾರವನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಡೋಣ. ಹೈಕಮಾಂಡ್‌ ಟಿಕೆಟ್ ನೀಡಿದವರ ಪರ ಕೆಲಸ ಮಾಡಬೇಕು’ ಎಂದು ಎರಡೂ ಬಣಗಳನ್ನು ಮುಖ್ಯಮಂತ್ರಿ ಸಮಾಧಾನಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.