ADVERTISEMENT

ನಾನು ಚುನಾವಣೆಗೆ ಸ್ಪರ್ಧಿಸಲ್ಲ ಎಂದು ಮಾಧ್ಯಮಗಳಿಂದ ಅಪಪ್ರಚಾರ: ಈಶ್ವರಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2024, 12:50 IST
Last Updated 23 ಮಾರ್ಚ್ 2024, 12:50 IST
<div class="paragraphs"><p>ಕೆ.ಎಸ್.ಈಶ್ವರಪ್ಪ</p></div>

ಕೆ.ಎಸ್.ಈಶ್ವರಪ್ಪ

   

ಶಿವಮೊಗ್ಗ: 'ಬ್ರಹ್ಮ ಬಂದು ಬೇಡ ಎಂದು ಹೇಳಿದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 'ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನನ್ನೊಂದಿಗೆ ಮಾತನಾಡಿದ್ದಾರೆ. ಸ್ಪರ್ಧೆಯಿಂದ ಹಿಂದಕ್ಕೆ ಸರಿಯಲು ನಾನು ಒಪ್ಪಿಕೊಂಡಿರುವೆ ಎಂದು ಕೆಲವು ಮಾಧ್ಯಮಗಳು ಅಪಪ್ರಚಾರ ನಡೆಸುತ್ತಿವೆ. ಆ ಮೂಲಕ ನನ್ನ ಬೆಂಬಲಿಗರಲ್ಲಿ ಗೊಂದಲ ಮೂಡಿಸುತ್ತಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸ್ಥಳದಲ್ಲಿದ್ದ ಖಾಸಗಿ ವಾಹಿನಿಯೊಂದರ ಪ್ರತಿನಿಧಿ ವಿರುದ್ಧ ತೀವ್ರ ಅಸಮಾಧಾನ ಕೂಡ ವ್ಯಕ್ತಪಡಿಸಿದ ಈಶ್ವರಪ್ಪ, 'ನನ್ನೊಂದಿಗೆ ಯಾರೂ ಮಾತನಾಡಿಲ್ಲ. ಮಾತುಕತೆಗೆ ನಾನು ಸಿದ್ಧವೂ ಇಲ್ಲ' ಎಂದು ಒತ್ತಿ ಹೇಳಿದರು. ಕಾದು ನೋಡಿ ಕೆಲವೇ ದಿನಗಳಲ್ಲಿ ರಾಜ್ಯದ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ಆಗಲಿವೆ ಎಂದರು.

'ರಾಷ್ಟ್ರಭಕ್ತರ ಬಳಗ ಹೆಸರಿನಲ್ಲಿ ಚುನಾವಣೆ ಎದುರಿಸುವೆ. ಬೂತ್‌ ಮಟ್ಟದಿಂದ ಕಾರ್ಯಕರ್ತರನ್ನು ಸಂಘಟಿಸಿ ಸಂಪರ್ಕಿಸುವ ಕೆಲಸ ಆರಂಭವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಅಭ್ಯರ್ಥಿಗಳ ವಿರುದ್ಧ ಅಸಮಾಧಾನ ಹೊಂದಿರುವ ದೊಡ್ಡ ಸಂಖ್ಯೆಯ ಅದೃಶ್ಯ ಮತದಾರರು ನನ್ನೊಂದಿಗೆ ಇದ್ದಾರೆ. ರಾಷ್ಟ್ರಭಕ್ತ ಮುಸ್ಲಿಮರು ಕರೆ ಮಾಡಿ ಬೆಂಬಲ ಸೂಚಿಸುತ್ತಿದ್ದಾರೆ' ಎಂದರು.

ಮಾ.26ರಂದು ಬೆಳಿಗ್ಗೆ 11ಕ್ಕೆ ಇಲ್ಲಿನ ಶುಭಮಂಗಳ ಸಮುದಾಯ ಭವನದಲ್ಲಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶ ಆಯೋಜಿಸಲಾಗಿದೆ. ಪ್ರತಿ ಬೂತ್‌ನಿಂದ ಇಬ್ಬರಂತೆ 4 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಬರಲಿದ್ದಾರೆ ಎಂದರು.

'ಪುತ್ರನಿಗೆ ಟಿಕೆಟ್ ಸಿಗಲಿಲ್ಲ ಎಂದು ಯಡಿಯೂರಪ್ಪ ಅವರ ಕುಟುಂಬದ ರಾಜಕಾರಣದ ಬಗ್ಗೆ ಮಾತನಾಡುತ್ತಿರುವೆ ಎಂದು ಬಿಜೆಪಿಯ ಕೆಲವರು ಆರೋಪಿಸುತ್ತಿದ್ದಾರೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿ ಆದ ನಂತರ ಪುತ್ರನಿಗೆ ಅವಕಾಶ ಕೇಳಿದ್ದೇನೆ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಹೀಗಾಗಿ ಯಡಿಯೂರಪ್ಪ ಅವರ ಕುಟುಂಬ ರಾಜಕಾರಣ ಪ್ರಶ್ನೆ ಮಾಡಿದ್ದೇನೆ' ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವಾಸ್, ಸುವರ್ಣಾ ಶಂಕರ್, ಗನ್ನಿಶಂಕರ್, ಸೀತಾಲಕ್ಷ್ಮೀ, ಮಹಾಲಿಂಗಶಾಸ್ತ್ರಿ, ಕಾಚಿನಕಟ್ಟೆ ಸತ್ಯನಾರಾಯಣ, ಏಳುಮಲೈ, ಲಕ್ಷ್ಮೀಶಂಕರ ನಾಯಕ, ಅನಿತಾ, ವನಿತಾ, ಯಶೋಧಾ, ರಾಧಾ, ಉಮಾ, ಶಂಕರನಾಯ್ಕ ಸೇರಿದಂತೆ ಹಲವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.