ಬೆಂಗಳೂರು: ‘ಧಮ್ಕಿ ಹಾಕುವುದು ಮತ್ತು ಫ್ಲ್ಯಾಟ್‌ಗಳ ನಕ್ಷೆ ಮಂಜೂರಾತಿಗೆ ಪ್ರತಿ ಚದರ ಅಡಿಗೆ ₹ 100 ದರ ನಿಗದಿ ಮಾಡಿರುವುದೂ ಜನರ ಸೇವೆ ಆಗುತ್ತದಾ’ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯೂ ಆಗಿರುವ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
‘ರಾಮನಗರ ಜನರ ಸೇವೆ ಮಾಡಲು ಅಣ್ಣ, ತಮ್ಮ ಇರುವುದು’ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆ ಕುರಿತು ಸುದ್ದಿಗಾರರಿಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ಅವರು ಏನು ಸೇವೆ ಮಾಡುತ್ತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೆಂಗಳೂರಿನಲ್ಲಿ ಫ್ಲ್ಯಾಟ್ ನಕ್ಷೆ ಅನುಮೋದನೆಗೆ ಅಡಿಗೆ ₹ 100 ದರ ನಿಗದಿ ಮಾಡಿರುವುದು ಸೇವೆ ಅಲ್ಲವೆ? ಎಲ್ಲರಿಗೂ ಧಮ್ಕಿ ಹಾಕುವುದೂ ಒಂದು ಸೇವೆ. ಅದನ್ನೆ ತಾನೆ ಮಾಡಡುತ್ತಾ ಇರುವುದು’ ಎಂದು ಕೇಳಿದರು.
‘ಅವರ ಸೇವೆಯೇ ಬೇರೆ ರೀತಿ. ಸೇವೆ ಮಾಡುತ್ತಿದ್ದಾರೋ ಅಥವಾ ರಾಜ್ಯವನ್ನು ಯಾವ ಪರಿಸ್ಥಿತಿಗೆ ತೆಗೆದುಕೊಂಡು ಹೋಗುತ್ತಿದ್ದಾರೋ ಮುಂದಿನ ದಿನಗಳಲ್ಲಿ ನೋಡೋಣ. ನಾವು ನಿದ್ದೆ ಮಾಡಲು ಬಂದಿದ್ದೇವಾ? ಅವರು ಮಾತ್ರ ಸೇವೆ ಮಾಡುವುದು. ಪಂಚಾಯಿತಿ ಸದಸ್ಯರ ರೀತಿ ಕೆಲಸ ಮಾಡುತ್ತಾರಂತೆ. ಪಾಪ, ಇವರು ಅಲ್ಲಿ ಹೋಗಿ ಕೈಹಾಕಿದರೆ ಪಂಚಾಯಿತಿ ಸದಸ್ಯರು ಏನು ಮಾಡಬೇಕು’ ಎಂದರು.
‘ಕೋವಿಡ್ ಸಮಯದಲ್ಲಿ ಕುಮಾರಸ್ವಾಮಿ ಎಲ್ಲಿ ಹೋಗಿದ್ದರು ಎಂದು ಕೇಳಿದ್ದಾರೆ. ಅನಿತಾ ಕುಮಾರಸ್ವಾಮಿ ರಾಮನಗರದ ಶಾಸಕರಾಗಿದ್ದರು. ನಾನು ಚನ್ನಪಟ್ಟಣದ ಶಾಸಕನಾಗಿದ್ದೆ. ನಾವು ಏನು ಸೇವೆ ಸಲ್ಲಿಸಬೇಕಿತ್ತೋ ಅದನ್ನು ಮಾಡಿದ್ದೇವೆ. ಇವರಂತೆ ಡಂಗೂರ ಹೊಡೆದು ಪ್ರಚಾರ ತೆಗೆದುಕೊಂಡಿಲ್ಲ’ ಎಂದು ಹೇಳಿದರು.
ಭಯದಿಂದ ಮಾತನಾಡುತ್ತಿದ್ದಾರೆ: ‘ನಾನು ಸುಮಲತಾ ಅಂಬರೀಷ್ ಅವರನ್ನು ಭೇಟಿಮಾಡಿ ಮಾತುಕತೆ ನಡೆಸಿರುವುದಕ್ಕೆ ಕಾಂಗ್ರೆಸ್‌ನವರು ಭಯಗೊಂಡಿದ್ದಾರೆ. ಆರೋಗ್ಯಕರ ಚರ್ಚೆಯಾಗಿದೆ ಎಂದು ಸುಮಲತಾ ಹೇಳಿರುವುದು ಕಾಂಗ್ರೆಸ್ ಪಕ್ಷದವರಿಗೆ ಭಯ ಹುಟ್ಟಿಸಿದೆ’ ಎಂದು ಕುಮಾರಸ್ವಾಮಿ ಹೇಳಿದರು.
‘ಕರಾವಳಿ ಹೊರತುಪಡಿಸಿ ಎಲ್ಲ ಕ್ಷೇತ್ರಗಳಲ್ಲಿ ನಾನು ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಬೆಂಗಳೂರು ಗ್ರಾಮಾಂತರದಲ್ಲೂ ಪ್ರಚಾರ ನಡೆಸುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.