ADVERTISEMENT

ರಾಜಕೀಯ ಪಲ್ಲಟಕ್ಕೆ ಸಾಕ್ಷಿಯಾದ ಮಂಡ್ಯ; ನನ್ನ ನಿರ್ಧಾರ ನಾಳೆ ಪ್ರಕಟ: ಸುಮಲತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಏಪ್ರಿಲ್ 2024, 11:24 IST
Last Updated 2 ಏಪ್ರಿಲ್ 2024, 11:24 IST
<div class="paragraphs"><p>ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಸಂಸದೆ ಸುಮಲತಾ ಅಂಬರೀಷ್‌ ಅವರ ಮನೆಗೆ ಭೇಟಿ ನೀಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದರು. ಸುಮಲತಾ ಅವರ ಮಗ ಅಭಿಷೇಕ್‌ ಜತೆಗಿದ್ದರು.</p></div>

ಬೆಂಗಳೂರಿನ ಜೆ.ಪಿ. ನಗರದಲ್ಲಿರುವ ಸಂಸದೆ ಸುಮಲತಾ ಅಂಬರೀಷ್‌ ಅವರ ಮನೆಗೆ ಭೇಟಿ ನೀಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಡಿ. ಕುಮಾರಸ್ವಾಮಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದರು. ಸುಮಲತಾ ಅವರ ಮಗ ಅಭಿಷೇಕ್‌ ಜತೆಗಿದ್ದರು.

   

ಬೆಂಗಳೂರು: ಮಂಡ್ಯ ನಗರದ ಕಾಳಿಕಾಂಬ ಸಮುದಾಯ ಭವನದ ಆವರಣದಲ್ಲಿ ನಾಳೆ (ಬುಧವಾರ) ಬೆಳಿಗ್ಗೆ 10 ಗಂಟೆಗೆ ಬೆಂಬಲಿಗರ ಸಭೆ ನಡೆಸಲಿದ್ದೇನೆ. ಬಳಿಕ ಲೋಕಸಭೆ ಚುನಾವಣೆ ಸಂಬಂಧ ಜನರ ಸಮ್ಮುಖದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ತಿಳಿಸಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಅವರು, ‘ನನ್ನ ಸ್ವಾಭಿಮಾನಿ ಮಂಡ್ಯದ ಬಂಧುಗಳೆ, ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಾನು ಕಳೆದ ಬಾರಿ ಐತಿಹಾಸಿಕ ಗೆಲುವು ಸಾಧಿಸಿದ ನಂತರ, ಈ ಕ್ಷೇತ್ರದ ಬಗ್ಗೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಈ ಸಲದ ಲೋಕಸಭೆ ಚುನಾವಣೆಯೂ ಅದಕ್ಕೆ ಹೊರತಾಗಿಲ್ಲ. ಈಗಾಗಲೇ ರಾಜಕೀಯ ಪಲ್ಲಟಕ್ಕೆ ಮಂಡ್ಯ ಕ್ಷೇತ್ರ ಸಾಕ್ಷಿಯಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ನನ್ನ ನಿಲುವಿಗಾಗಿ ಅನೇಕರು ಕಾಯುತ್ತಿದ್ದಾರೆ. ಈಗಾಗಲೇ ಆ ಕುರಿತಂತೆ ಗಂಭೀರ ಚಿಂತನೆ ಕೂಡ ಮಾಡಲಾಗಿದೆ. ನಿಮ್ಮೆಲ್ಲರ ನೆಚ್ಚಿನ ರೆಬಲ್ ಸ್ಟಾರ್ ಅಂಬರೀಷ್ ಅವರಾಗಲಿ, ನಾನಾಗಲಿ ನಮ್ಮ ಕುಟುಂಬವಾಗಲಿ ಯಾವತ್ತಿಗೂ ಅಧಿಕಾರಕ್ಕೆ ಅಂಟಿಕೊಂಡು ಕೂತಿಲ್ಲ. ಮಂಡ್ಯಕ್ಕಾಗಿ, ನನ್ನ ಮಂಡ್ಯದ ಸ್ವಾಭಿಮಾನಿಗಳ ಸೇವೆಗೆ ಯಾವತ್ತಿಗೂ ನಾವು ಬದ್ಧ. ಹಾಗಾಗಿಯೇ ಏನೇ ನಿರ್ಧಾರ ತಗೆದುಕೊಂಡರೂ ನಿಮ್ಮೊಂದಿಗೆ ಚರ್ಚಿಸಿಯೇ ಮುಂದುವರೆಯುವೆ’ ಎಂದು ಹೇಳಿದ್ದಾರೆ.

‘ನಿಮ್ಮ ಭಾವನೆಗಳನ್ನು ನನ್ನೊಂದಿಗೆ ಹಂಚಿಕೊಳ್ಳಲು ನಿಮ್ಮ ಸಮಯವನ್ನು ನನಗೆ ಕೊಟ್ಟು ಮನೆವರೆಗೂ ಬಂದಿದ್ದೀರಿ. ಕೆಲವರು ತಾವು ಇದ್ದಲ್ಲೇ ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು. ನಿಮ್ಮ ಪ್ರೀತಿ ದೊಡ್ಡದು. ಯಾವತ್ತೂ ಅದು ಹಾಗೆಯೇ ಇರಲಿ ಎಂದು ಆಶಿಸುವೆ’ ಎಂದು ತಿಳಿಸಿದ್ದಾರೆ.

‘ನಾಳೆ ಬೆಳಗ್ಗೆ 10 ಗಂಟೆಗೆ ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ದೇವಸ್ಥಾನದ ಆವರಣದಲ್ಲೇ ನನ್ನ ಮತ್ತು ನಿಮ್ಮೆಲ್ಲರ ನಿಲುವನ್ನು ಸ್ಪಷ್ಟಪಡಿಸುವ ಹಾಗೂ ಮಂಡ್ಯ ಲೋಕಸಭಾ ಚುನಾವಣೆ ಕುರಿತಂತೆ ನನ್ನ ನಿರ್ಧಾರವನ್ನು ನಿಮ್ಮೆಲ್ಲರ ಮುಂದೆಯೇ ಪ್ರಕಟಿಸುತ್ತಿದ್ದೇನೆ. ನಮ್ಮೊಂದಿಗೆ ನಮ್ಮೆಲ್ಲರ ಪ್ರೀತಿಯ ದರ್ಶನ್, ಅಭಿಷೇಕ್ ಅಂಬರೀಷ್ ಇರಲಿದ್ದಾರೆ. ತಮ್ಮ ಸಲಹೆ ಮತ್ತು ಸೂಚನೆ ಹಾಗೂ ಭಾವನೆಗಳಿಗೆ ಯಾವತ್ತೂ ನಾನು ನೋವು ತರಲಾರೆ. ನಿಮ್ಮ ನಡೆಯೇ ನನ್ನದೂ ಆಗಿರಲಿದೆ. ಬನ್ನಿ, ಜೊತೆಯಾಗಿ ಮಂಡ್ಯವನ್ನು ಮತ್ತಷ್ಟು ಅಭಿವೃದ್ಧಿಪಡಿಸೋಣ’ ಎಂದು ಬರೆದುಕೊಂಡಿದ್ದಾರೆ.

ಸುಮಲತಾ –ಎಚ್‌ಡಿಕೆ ಭೇಟಿ‌

ಸುಮಲತಾ ಅವರನ್ನು ಭಾನುವಾರ ಭೇಟಿ ಮಾಡಿದ್ದ ಕುಮಾರಸ್ವಾಮಿ ಅವರು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದರು.

2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅವರು ಜೆಡಿಎಸ್– ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಅವರ ಮಗ ನಿಖಿಲ್‌ ಕುಮಾರಸ್ವಾಮಿ ಅವರನ್ನು ಸೋಲಿಸಿದ್ದರು. ಐದು ವರ್ಷಗಳಿಂದ ಸುಮಲತಾ ಮತ್ತು ಕುಮಾರಸ್ವಾಮಿ ಮಧ್ಯೆ ಮಾತುಕತೆ ಇರಲಿಲ್ಲ. ರಾಜಕೀಯವಾಗಿ ಶತಾಯಗತಾಯ ವಿರೋಧಿಸುವ ಹಂತಕ್ಕೆ ತಲುಪಿದ್ದರು.

ಸುಮಲತಾ ಮಂಡ್ಯದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ತಯಾರಿ ನಡೆಸಿದ್ದರು. ಎನ್‌ಡಿಎ ಮೈತ್ರಿಕೂಟ ಕ್ಷೇತ್ರವನ್ನು ಜೆಡಿಎಸ್‌ ಪಕ್ಷಕ್ಕೆ ಬಿಟ್ಟುಕೊಟ್ಟ ಬಳಿಕ ಮುಂದಿನ ರಾಜಕೀಯ ನಡೆ ಕುರಿತು ನಿರ್ಧಾರ ಪ್ರಕಟಿಸಿಲ್ಲ. ಜೆ.ಪಿ.ನಗರದಲ್ಲಿರುವ ಸುಮಲತಾ ಮನೆಗೆ ಭಾನುವಾರ ಸಂಜೆ ಭೇಟಿ ನೀಡಿದ್ದ ಕುಮಾರಸ್ವಾಮಿ, ಕೆಲಕಾಲ ಮಾತುಕತೆ ನಡೆಸಿದರು. ಅಭಿಷೇಕ್‌ ಅಂಬರೀಷ್‌ ಅವರೂ ಜತೆಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.