ADVERTISEMENT

ಸಾಕ್ಷಾತ್‌ ಸಮೀಕ್ಷೆ – ಉತ್ತರ ಕನ್ನಡ: ಕಣದಲ್ಲಿ ‘ಹಳೆ ಮುಖ’ಗಳ ಕಾದಾಟ

ಬಿಜೆಪಿಗೆ ‘ಮೋದಿ’, ಕಾಂಗ್ರೆಸ್‍ಗೆ ‘ಗ್ಯಾರಂಟಿ’ಯೇ ಗೆಲುವಿನ ಆಸೆಗೆ ಆಸರೆ

ಗಣಪತಿ ಹೆಗಡೆ
Published 2 ಮೇ 2023, 20:03 IST
Last Updated 2 ಮೇ 2023, 20:03 IST
   

ಕಾರವಾರ: ಒಂದು ಕಾಲದಲ್ಲಿ ಜನತಾ ಪರಿವಾರ, ಕಾಂಗ್ರೆಸ್ ಪಾಲಿನ ಭದ್ರಕೋಟೆ ಎನಿಸಿದ್ದ ಉತ್ತರ ಕನ್ನಡದಲ್ಲೀಗ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಆದರೆ ಕಳೆದ ಬಾರಿ ಬಿಜೆಪಿಗೆ ಮತ ನೀಡಿ ಪೊರೆದಿದ್ದ ‘ಹಿಂದುತ್ವ’ ಈ ಬಾರಿ ಕೈಹಿಡಿಯುವ ಲಕ್ಷಣ ಕಾಣಿಸುತ್ತಿಲ್ಲ. ಆಡಳಿತ ವಿರೋಧಿ ಅಲೆಯಿಂದಾಗಿ ಬಿಜೆಪಿಗೆ ಕಾಂಗ್ರೆಸ್‌ನ ಪೈಪೋಟಿ ಪ್ರಬಲವಾಗಿದೆ.

ಬಿಜೆಪಿ ಕಳೆದ ಬಾರಿಯ ಸ್ಪರ್ಧಿಗಳನ್ನೇ ಮತ್ತೆ ಕಣಕ್ಕಿಳಿಸಿದೆ. ಕುಮಟಾ, ಯಲ್ಲಾಪುರ ಹೊರತಾಗಿ ಉಳಿದೆಡೆ ಕಾಂಗ್ರೆಸ್‍ನಿಂದಲೂ ಹಳೆ ಕಲಿಗಳೇ ಕಣಕ್ಕಿಳಿದಿದ್ದಾರೆ. ಕುಮಟಾ ಮತ್ತು ಹಳಿಯಾಳ ಕ್ಷೇತ್ರದಲ್ಲಿ ಜೆಡಿಎಸ್ ಪ್ರಬಲ ಪ್ರತಿಸ್ಪರ್ಧಿಯಾಗಿದೆ.

2018ರ ಚುನಾವಣೆಯ ಸಂದರ್ಭದಲ್ಲಿ ಹೊನ್ನಾವರದಲ್ಲಿ ನಡೆದಿದ್ದ ಪರೇಶ್ ಮೇಸ್ತ ಸಾವಿನ ವಿಚಾರ ಬಿಜೆಪಿಗೆ ಭರಪೂರ ಮತ ಫಸಲು ತಂದುಕೊಟ್ಟಿತ್ತು. ಪರೇಶ್ ಮೇಸ್ತನದ್ದು ಕೊಲೆ ಎಂದು ಪ್ರತಿಪಾದಿಸಿ ಬಿಜೆಪಿ ಹಿಂದುತ್ವದ ಅಲೆ ಎಬ್ಬಿಸಿ ಮತಗಳ ಧ್ರುವೀಕರಣಕ್ಕೆ ನಾಂದಿ ಹಾಡಿತ್ತು. ಪರಿಣಾಮವಾಗಿ ಕರಾವಳಿ ಭಾಗದ ಮೂರು ಕ್ಷೇತ್ರಗಳು ಸೇರಿದಂತೆ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅನಾಯಾಸವಾಗಿ ದಕ್ಕಿತ್ತು. 

ADVERTISEMENT

ಪರೇಶ್ ಸಾವಿನ ಕುರಿತು ಮಧ್ಯಂತರ ವರದಿ ಕೋರ್ಟ್‍ಗೆ ಸಲ್ಲಿಸಿದ ಸಿಬಿಐ, ‘ಅದು ಕೊಲೆಯಲ್ಲ,ಆಕಸ್ಮಿಕ ಸಾವು’ ಎಂದು ಹೇಳಿತು. ಇದನ್ನು ಅಸ್ತ್ರವಾಗಿಸಿದ ಕಾಂಗ್ರೆಸ್ ಪಕ್ಷವು ಬಿಜೆಪಿಯ ‘ಹಿಂದುತ್ವ’ದ ಬಣ್ಣ ಬಯಲು ಮಾಡಲು ಯತ್ನಿಸಿತು. ಆದರೆ ಈ ಚುನಾವಣೆಯಲ್ಲಿ ಈ ವಿಚಾರ ಮುನ್ನೆಲೆಗೆ ಬರದಿದ್ದರೂ ಬಿಜೆಪಿಯನ್ನು ‘ಹಿಂದುತ್ವ’ದ ಜಪದಿಂದ ತುಸು ಅಂತರದಲ್ಲಿ ನಿಲ್ಲಿಸಿದೆ.

ಬಿಜೆಪಿ ಈ ಬಾರಿ ‘ಮೋದಿ ಜಪ’ಕ್ಕೆ ಮೊರೆ ಹೋಗಿದೆ. ಪಕ್ಷದ ಪ್ರಚಾರಕ್ಕಾಗಿ ಮೋದಿ ಜಿಲ್ಲೆಗೆ ಮೊದಲ ಬಾರಿಗೆ(ಮೇ 3) ಭೇಟಿ ನೀಡುತ್ತಿದ್ದಾರೆ. ಮತ ಬೇಟೆಗೆ ಇದೇ ಅವರ ಪಾಲಿಗೆ ಪ್ರಬಲ ಅಸ್ತ್ರವಾಗಿದೆ. ಜಿಲ್ಲೆಯಲ್ಲಿ ಸಾಲು ಸಾಲು ಸಮಸ್ಯೆಗಳಿದ್ದರೂ ಅವುಗಳ ಬದಲು ‘ಗ್ಯಾರಂಟಿ ಕಾರ್ಡ್’ ಭರವಸೆಯೊಂದಿಗೆ ಕಾಂಗ್ರೆಸ್ ಪ್ರಚಾರ ಕೈಗೊಂಡಿದೆ.

ವರ್ಷಗಳ ಹಿಂದೆಯೇ ಜಿಲ್ಲೆಗೆ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಬೇಕು ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಆರಂಭವಾಯಿತು. ನಂತರ ಅದು ಗಂಭೀರ ಬೇಡಿಕೆಯಾಗಿಯೂ ಮಾರ್ಪಟ್ಟಿತು. ಜನರಿಂದ ಒತ್ತಡ ಹೆಚ್ಚಿದಾಗ ಆಸ್ಪತ್ರೆ ಸ್ಥಾಪಿಸುವ ಭರವಸೆ ನೀಡಿ, ಆರೋಗ್ಯ ಸಚಿವರು ಬಂದು ಸ್ಥಳ ಸಮೀಕ್ಷೆ ಮಾಡಿ ತೆರಳಿದ್ದೇ ಬಂತು. ಬಳಿಕ ಸರ್ಕಾರ ಪ್ರಸಕ್ತ ಬಜೆಟ್‍ನಲ್ಲಿ ‘ಘೋಷಣೆ’ಗೆ ಸೀಮಿತಗೊಳಿಸಿತು. ವಿಶೇಷವಾಗಿ ಕರಾವಳಿ ಭಾಗದಲ್ಲಿ ಈ ವಿಚಾರವೂ ಚುನಾವಣೆಯ ಅಸ್ತ್ರವಾಗಿದೆ. ಪ್ರತಿಭಾ ಪಲಾಯನ, ನಿರುದ್ಯೋಗ ಸಮಸ್ಯೆಗಳೂ ಎಂದಿನಂತೆ ಈ ಚುನಾವಣೆಯಲ್ಲೂ ಚರ್ಚಿತವಾಗುತ್ತಿವೆ. 

ಹಳಿಯಾಳ ಕ್ಷೇತ್ರದಲ್ಲಿ ಹತ್ತನೇ ಬಾರಿಗೆ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ನ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಅವರಿಗೆ ಇಬ್ಬರು ಪ್ರಬಲ ಎದುರಾಳಿದ್ದಾರೆ. ಎರಡು ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿದ್ದ ಎಸ್.ಎಲ್.ಘೋಟ್ನೇಕರ್ ಜೆಡಿಎಸ್‍ನಿಂದ ಸ್ಪರ್ಧೆಗೆ ಇಳಿದಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನೀಲ ಹೆಗಡೆ ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ನಿರ್ಣಾಯಕ ಮರಾಠಾ ಸಮುದಾಯದ ಮತಗಳ ಮೇಲೆ ಮೂವರ ಕಣ್ಣಿದೆ.

ಕೈ ಪಾಳಯದಿಂದ ಜಿಗಿದು ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ ವರ್ಚಸ್ಸು ವೃದ್ಧಿಸಿಕೊಂಡಿರುವ ಶಿವರಾಮ ಹೆಬ್ಬಾರ್‌ ಅವರಿಗೆ ಯಲ್ಲಾಪುರ ಕ್ಷೇತ್ರದಲ್ಲಿ ಬಿಜೆಪಿ ತೊರೆದು ‘ಕೈ’ ಹಿಡಿದ ವಿ.ಎಸ್.ಪಾಟೀಲ್ ಪ್ರಬಲ ಸ್ಪರ್ಧಿಯಾಗಿದ್ದಾರೆ. ಬಿಜೆಪಿಯ ಮೂಲ ಮತ್ತು ವಲಸಿಗ ಕಾರ್ಯಕರ್ತರ ನಡುವೆ ಸಮನ್ವಯತೆ ಸಾಧಿಸಲು ಹೆಬ್ಬಾರ್ ಯತ್ನಿಸುತ್ತಿದ್ದಾರೆ. ಬಿಜೆಪಿಯ ಸಾಂಪ್ರದಾಯಿಕ ಲಿಂಗಾಯತ ಮತಗಳ ಜತೆಗೆ ಮೂಲ ಕಾರ್ಯಕರ್ತರ ಸೆಳೆಯುವ ಯತ್ನದಲ್ಲಿ ಪಾಟೀಲ್ ಪ್ರಯತ್ನ ನಡೆದಿದೆ. 

ಯಾವ ಕ್ಷೇತ್ರ

ವಿಧಾನಸಭಾಧ್ಯಕ್ಷರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸತತ ಏಳನೇ ಬಾರಿಗೆ ಗೆಲುವಿನ ಕನಸು ಕಾಣುತ್ತಿದ್ದಾರೆ. ಬಿಜೆಪಿ ಸಾಂಪ್ರದಾಯಿಕ ಮತಗಳನ್ನು ಗಟ್ಟಿಯಾಗಿಸಿಕೊಳ್ಳುತ್ತಿದ್ದಾರೆ. ಜತೆಗೆ ‘ಮುಖ್ಯಮಂತ್ರಿ ಅಭ್ಯರ್ಥಿ’ ಎಂಬ ಪ್ರಚಾರವೂ ನಡೆದಿದೆ. ಕಾಂಗ್ರೆಸ್‍ನ ಭೀಮಣ್ಣ ನಾಯ್ಕ ಈ ಬಾರಿ ಪ್ರಬಲ ಎದುರಾಳಿಯಾಗಿದ್ದಾರೆ. ಕಾಂಗ್ರೆಸ್ ಮುಖಂಡರೆಲ್ಲ ಒಗ್ಗೂಡಿ ಕೆಲಸ ಮಾಡುತ್ತಿರುವುದು, ಸತತ ಸೋಲಿನ ಅನುಕಂಪವಿರುವುದೂ ಅವರಿಗೆ ವರವಾಗಿದೆ. 

ಭಟ್ಕಳ ಕ್ಷೇತ್ರದಲ್ಲಿ ಶಾಸಕ ಬಿಜೆಪಿಯ ಸುನೀಲ ನಾಯ್ಕ ಸ್ವಪಕ್ಷೀಯರ ವಿರೋಧ ಎದುರಿಸುತ್ತಿದ್ದಾರೆ. ಆದರೆ ‘ಹಿಂದುತ್ವ ಅಸ್ತ್ರ’ ಗೆಲ್ಲಿಸಬಹುದು ಎಂಬ ಲೆಕ್ಕಾಚಾರದಲ್ಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮಂಕಾಳ ವೈದ್ಯ ಹಿಂದುತ್ವದತ್ತಲೂ ಮೃದು ಧೋರಣೆ ಅನುಸರಿಸುತ್ತಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಜೆಡಿಎಸ್ ಸ್ವಲ್ಪಮಟ್ಟಿಗೆ ನಾಮಧಾರಿ ಮತ ಸೆಳೆಯುವ ಸಾಧ್ಯತೆ ಇದೆ.

‘ಹೊರಗಿನ ಅಭ್ಯರ್ಥಿ’: ಬಿಜೆಪಿಗೆ ಅಸ್ತ್ರ

ಕುಮಟಾ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸಿದ್ದ ಬಿಜೆಪಿಯ ದಿನಕರ ಶೆಟ್ಟಿಗೆ ಕಾಂಗ್ರೆಸ್ ‘ಹೊರಗಿನ’ ಅಭ್ಯರ್ಥಿ ನಿಲ್ಲಿಸಿದ್ದು ಅಸ್ತ್ರವಾಗಿದೆ. ಕಾಂಗ್ರೆಸ್‍ನಿಂದ ನಿವೇದಿತ್ ಆಳ್ವಾ ಅಭ್ಯರ್ಥಿಯಾದ ಬೆನ್ನಲ್ಲೆ, ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕಿ ಶಾರದಾ ಶೆಟ್ಟಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದರಲ್ಲಿದ್ದರು. ಪಕ್ಷದ ಅಧ್ಯಕ್ಷರು ಚರ್ಚಿಸಿದ ಬಳಿಕ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಮತ್ತೊಬ್ಬ ಪ್ರಬಲ ಆಕಾಂಕ್ಷಿ ಶಿವಾನಂದ ಹೆಗಡೆ ಕಡತೋಕ ಬಿಜೆಪಿ ಸೇರಿದ್ದಾರೆ. ಜೆಡಿಎಸ್‍ನ ಸೂರಜ್ ನಾಯ್ಕ ಸೋನಿ ಬಹುಸಂಖ್ಯಾತ ನಾಮಧಾರಿ ಹಾಗೂ ಜೆಡಿಎಸ್‍ನ ಸಾಂಪ್ರದಾಯಿಕ ಮತ ಕಸಿಯುವ ಯತ್ನದಲ್ಲಿದ್ದಾರೆ.

ಕಾರವಾರ ಕ್ಷೇತ್ರದಲ್ಲಿ ಶಾಸಕಿ ಬಿಜೆಪಿಯ ರೂಪಾಲಿ ನಾಯ್ಕ ಮತ್ತು ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಸೈಲ್ ನಡುವೆ ಪೈಪೋಟಿ ನಡೆದಿದೆ. ಆಡಳಿತ ವಿರೋಧಿ ಅಲೆ ಕಾಂಗ್ರೆಸ್ ಅಭ್ಯರ್ಥಿಗೆ ವರವಾಗಬಹುದಾದರೂ ಮೋದಿ ಕ್ಷೇತ್ರ ಭೇಟಿಯು ಬಿಜೆಪಿಯ ಆಸೆ ಚಿಗುರಿಸಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ
ಶಿವರಾಮ ಹೆಬ್ಬಾರ
ಉತ್ತರ ಕನ್ನಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.