ADVERTISEMENT

ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ: ಪ್ರಜ್ವಲ್‌ ವಿರುದ್ಧ ಎ.ಮಂಜು ಆರೋಪ

ಲೋಕಸಭಾ ಚುನಾವಣೆ 2019

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 12:35 IST
Last Updated 27 ಮಾರ್ಚ್ 2019, 12:35 IST
ಎ.ಮಂಜು
ಎ.ಮಂಜು   

ಹಾಸನ: ‘ಮೈತ್ರಿ ಕೂಟದ ಅಭ್ಯರ್ಥಿ ಆರ್‌.ಪ್ರಜ್ವಲ್‌ ಅವರು ನಾಮಪತ್ರ ಸಲ್ಲಿಕೆ ವೇಳೆ ಚುನಾವಣೆ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ’ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಆರೋಪಿಸಿದ್ದಾರೆ‌.

‘ಪ್ರಜ್ವಲ್ ಮತ್ತು ಅವರ ತಾಯಿ ಭವಾನಿ ರೇವಣ್ಣ ಎರಡು ಕಂಪನಿಗಳಲ್ಲಿ ಶೇಕಡಾ 20 ರಿಂದ 25 ರಷ್ಟು ಪಾಲು ಹೊಂದಿದ್ದಾರೆ. ಆದರೆ, ಪ್ರಮಾಣ ಪತ್ರದಲ್ಲಿ ಈ ಅಂಶವನ್ನು ಮರೆ ಮಾಚಲಾಗಿದೆ. ಆದ ಕಾರಣ ಅಭ್ಯರ್ಥಿ ನಾಮಪತ್ರ ತಿರಸ್ಕೃತ ಮಾಡಬೇಕೆಂದು ಜಿಲ್ಲಾ ಚುನಾವಣಾ ಅಧಿಕಾರಿಗೆ ದೂರು ನೀಡಲಾಗಿದೆ. ಪರಿಶೀಲನೆ ನಡೆಸುವುದಾಗಿ ಭರವಸೆ ನೀಡಿದ್ದಾರೆ. ನ್ಯಾಯ ಸಿಗದಿದ್ದರೆ ಕೇಂದ್ರ ಚುನಾವಣಾ ಆಯೋಗ ಹಾಗೂ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಸುದ್ದಿಗಾರರಿಗೆ ತಿಳಿಸಿದರು.

ಮಂಜು ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಜ್ವಲ್‌, ‘ಆ ಕಂಪನಿಗಳಿಗೆ ರಾಜೀನಾಮೆ ನೀಡಿ ಬಹಳ ದಿನವಾಗಿದೆ. ಅದರ ಬಗ್ಗೆ ಉಲ್ಲೇಖಿಸುವ ಅಗತ್ಯವಿಲ್ಲ. ಕಂಪನಿಯಿಂದ ಹೊರ‌ ಬಂದ ಮೇಲೆ ಅಲ್ಲಿ ಯಾವುದೇ ವ್ಯವಹಾರ ನಡೆಸುತ್ತಿಲ್ಲ. ಕೊಳ್ಳೆ‌ ಹೊಡೆದವರೇ ಹೀಗೆ ಮಾತನಾಡಿದರೆ ಬೇರೆಯವರು ಏನು ಮಾಡಬೇಕು’ ಎಂದು ತಿರುಗೇಟು ನೀಡಿದರು.

ಮಂಜು ಆರೋಪಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಎಚ್.ಡಿ.ರೇವಣ್ಣ, ‘ಅಭ್ಯರ್ಥಿ ಸುಳ್ಳು ಮಾಹಿತಿ ನೀಡಿದ್ದರೆ ಅದನ್ನು ಚುನಾವಣಾ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಮೂಗರ್ಜಿ ಬರೆಯಲು ಕೆಲವು ಗಿರಾಕಿಗಳು ಇದ್ದಾರೆ. ಚುನಾವಣೆ ಎದುರಿಸಲು ಶಕ್ತಿ ಇಲ್ಲದವರು ಈ ರೀತಿ ಮಾಡುತ್ತಾರೆ’ ಎಂದು ಕಿಡಿ ಕಾರಿದರು.

‘ಹಿಂದೆ ನನ್ನ ಕುಟುಂಬದ ವಿರುದ್ಧ ಸರ್ಕಾರಿ ಭೂಮಿ ಕಬಳಿಕೆ ಆರೋಪ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಭೂ ಕಬಳಿಕ ನಿಷೇಧ ವಿಶೇಷ ನ್ಯಾಯಾಲಯ, ನಮಗೆ ಕ್ಲೀನ್‌ ಚಿಟ್‌ ನೀಡಿದೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ಟೋಪಿ ಹಾಕಿ, ಈಗ ಮೋದಿ ಹಿಂದೆ ಹೋಗಿದ್ದಾರೆ. ಅವರಿಗೆ ಯಾವಾಗ ಟೋಪಿ ಹಾಕುತ್ತಾರೋ ಗೊತ್ತಿಲ್ಲ’ ಎಂದು ಲೇವಡಿ ಮಾಡಿದರು.

‘ಮಂಡ್ಯದಲ್ಲಿ ಸುಮಲತಾ ಹೆಸರಿನವರಿಂದ ನಾಮಪತ್ರ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಕೆಟ್ಟ ಹೆಸರು ತರಲು ಯಾರೋ ಹೀಗೆ ಮಾಡಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.