ಶಿವರಾಜ್‌ಕುಮಾರ್
ವಯಸ್ಸು ಅರವತ್ತು ದಾಟಿದ್ದರೂ ನಟ ಶಿವರಾಜ್‌ಕುಮಾರ್ ಅವರ ಸಿನಿಮಾ ಪ್ರೀತಿ, ಭಿನ್ನ ಪಾತ್ರಗಳನ್ನು ನಿಭಾಯಿಸುವ ಹಪಹಪಿ ಇನ್ನೂ ಕಡಿಮೆಯಾಗಿಲ್ಲ ಎನ್ನುವಂತಿತ್ತು ‘45’ ಸಿನಿಮಾದ ಟ್ರೇಲರ್. ನೆರೆದಿದ್ದ ಸಾವಿರಾರು ಜನರ ಮುಂದೆ ನಟ ಉಪೇಂದ್ರ ‘ಚೆಲುವೆಯ ನೋಟ ಚೆನ್ನಾ..’ ಎಂದು ಹಾಡುತ್ತಾ ಶಿವರಾಜ್‌ಕುಮಾರ್ ಗಲ್ಲ ಗಿಂಡಿದಾಗ, ನಿರೂಪಕಿ ಅನುಶ್ರೀ ದೃಷ್ಟಿ ತೆಗೆದಾಗ, ಚಂದನವನದ ‘ಶಿವಣ್ಣ’ ಹೆಣ್ಣಿನಂತೇ ನಾಚಿನೀರಾದರು. ಈ ದೃಶ್ಯಗಳಿಗೆ ವೇದಿಕೆಯಾಗಿದ್ದು ಅರ್ಜುನ್ ಜನ್ಯ ನಿರ್ದೇಶನದ ‘45’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭ.
ಬೆಂಗಳೂರಿನ ವಿದ್ಯಾಪೀಠದ ಬಳಿ ಇರುವ ಕೆಂಪೇಗೌಡ ಮೈದಾನದಲ್ಲಿ ಸೋಮವಾರ (ಡಿ.15) ರಾತ್ರಿ ನಡೆದ ಅದ್ದೂರಿಯಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ‘45’ ಸಿನಿಮಾದ ತ್ರಿಮೂರ್ತಿಗಳಾದ ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಗೂಡಿದ್ದರು. ಬೆಂಗಳೂರು, ಹುಬ್ಬಳ್ಳಿ, ಮೈಸೂರು, ತುಮಕೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
ಸಿನಿಮಾಗಳಲ್ಲಿ ಬಗೆಬಗೆಯ ವೇಷಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಶಿವರಾಜ್‌ಕುಮಾರ್, ಕಾಲ್ಗೆಜ್ಜೆ ಹಾಕಿಕೊಂಡು ಹೆಣ್ಣಿನ ವೇಷದಲ್ಲಿ ‘45’ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬೃಹತ್ ಪರದೆಯಲ್ಲಿ ಈ ದೃಶ್ಯ ಕಂಡಾಗ, ಶಿವರಾಜ್‌ಕುಮಾರ್ ಸಿನಿಮಾಗಳಲ್ಲಿ ಮಚ್ಚು ಎತ್ತಿದಾಗಕ್ಕಿಂತಲೂ ಹೆಚ್ಚಿನ ಚಪ್ಪಾಳೆ, ಶಿಳ್ಳೆಗಳು ಕೇಳಿಬಂದವು. ಈ ಹಿಂದೆ ‘ಮಿಡಿದಶೃತಿ’, ‘ಅಣ್ಣಾವ್ರ ಮಕ್ಕಳು’ ಸಿನಿಮಾಗಳಲ್ಲಿ ಹೆಣ್ಣಿನ ವೇಷ ಹಾಕಿಕೊಂಡಿದ್ದ ಶಿವರಾಜ್‌ಕುಮಾರ್ ಹಲವು ವರ್ಷಗಳ ಬಳಿಕ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಏನೀ ವೇಷ? ಎಂಬ ಪ್ರಶ್ನೆಗೆ ‘ಗುಟ್ಟು ಬಿಟ್ಟುಕೊಡುವುದಿಲ್ಲ, ಸಿನಿಮಾದಲ್ಲೇ’ ನೋಡಿ ಎಂದು ಉತ್ತರಿಸಿದ್ದಾರೆ.
‘ಸಂಗೀತ ನಿರ್ದೇಶಕ ಸಿನಿಮಾ ನಿರ್ದೇಶನ ಮಾಡುವುದೇ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಇತ್ತು. ನಿರ್ಮಾಪಕರಾದ ರಮೇಶ್ ರೆಡ್ಡಿ ಅವರು ಕಷ್ಟಪಟ್ಟು ದುಡಿದ ಹಣವನ್ನು ಈ ಸಿನಿಮಾಗೆ ಹಾಕಿದ್ದಾರೆ. ಹೀಗಿರುವಾಗ ನಮಗಿಷ್ಟಬಂದಂತೆ ಅದನ್ನು ಖರ್ಚು ಮಾಡಲು ಸಾಧ್ಯವಿಲ್ಲ. ಹೀಗಾಗಿ ಅವರಿಗೆ ನಂಬಿಕೆ ಬರಿಸಬೇಕು ಎನ್ನುವ ದೃಷ್ಟಿಯಿಂದ ಗ್ರಾಫಿಕ್ಸ್ ಮೂಲಕ ಸಂಪೂರ್ಣ ಚಿತ್ರವನ್ನು ಮಾಡಿ ಅವರೆದುರು ಪ್ರಸ್ತುತಪಡಿಸಿದ್ದೆ. ಇದಕ್ಕೂ ಒಂದು ದೊಡ್ಡ ಬಜೆಟ್ ಆಯಿತು. ಅದನ್ನೂ ಅವರು ಕೊಟ್ಟರು. ಈ ರೀತಿಯ ಪೂರ್ವಯೋಜನೆಯ ಪ್ರಯತ್ನ ಒಳ್ಳೆಯದು. ಈ ರೀತಿ ಮಾಡುವುದರಿಂದ ನಿರ್ಮಾಪಕರಿಗೆ ದುಡ್ಡು ಉಳಿಯುತ್ತದೆ, ಸಿನಿಮಾಗಳೂ ಚೆನ್ನಾಗಿ ಆಗುತ್ತವೆ. ಈ ಸಿನಿಮಾ ಯಶಸ್ವಿಯಾದರೆ ಈ ಟ್ರೆಂಡ್ ಮುಂದುವರಿಯಲಿದೆ’ ಎಂದರು ನಿರ್ದೇಶಕ ಅರ್ಜುನ್ ಜನ್ಯ.
‘ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಅವರ ಅಭಿಮಾನಿಯಾಗಿ ಅಭಿಮಾನವನ್ನಿಟ್ಟುಕೊಂಡು ‘45’ ಸಿನಿಮಾವನ್ನು ನಿರ್ದೇಶಿಸಿದ್ದೇನೆ. ಪ್ರತಿಯೊಂದು ಶಾಟ್ ಇಡುವಾಗಲೂ ಕಣ್ಣಿಂದ ಪ್ರತಿಯೊಬ್ಬರನ್ನೂ ಪ್ರೀತಿಸಿದ್ದೇನೆ. ಶಿವಣ್ಣ ಎಂದರೆ ನನಗೆ ಪ್ರಾಣ. ಇವತ್ತು ನಾನು ನಿರ್ದೇಶಕನಾಗಿ ಜನರ ಮುಂದೆ ನಿಂತಿದ್ದೇನೆ ಎಂದರೆ ಅದಕ್ಕೆ ಶಿವಣ್ಣ ಅವರೇ ಕಾರಣ. ಪೂರ್ಣ ಸಿನಿಮಾವನ್ನು ಅವರಿಗೇ ಅರ್ಪಿಸುತ್ತೇನೆ. ಅವರಿಲ್ಲದೇ ಇದ್ದಿದ್ದರೆ ಈ ಸಿನಿಮಾವನ್ನು ನಿರ್ದೇಶಿಸುತ್ತಲೇ ಇರಲಿಲ್ಲ. ಬೇರೆಯವರಿಗೆ ಕಥೆ ಕೊಟ್ಟುಬಿಡುತ್ತಿದ್ದೆ. ನನ್ನ ಜೊತೆ ಶಕ್ತಿಯಾಗಿ ಅವರು ನಿಂತು ಪ್ರೋತ್ಸಾಹಿಸಿದರು. ಶಿವಣ್ಣನನ್ನು ಎಷ್ಟೆಲ್ಲಾ ಅದ್ಭುತವಾಗಿ ತೋರಿಸಬಹುದೋ ಅಷ್ಟು ತೋರಿಸಿದ್ದೇನೆ. ಉಪೇಂದ್ರ ಅವರು ನಿರ್ದೇಶನದ ಚಕ್ರವರ್ತಿ. ಯಾರೂ ಅವರ ಅಭಿಮಾನಿಗಳಲ್ಲ ಎನ್ನಲು ಸಾಧ್ಯವೇ ಇಲ್ಲ. ಅವರು ಈ ಸಿನಿಮಾದ ಸ್ಟೈಲ್ ಐಕಾನ್. ರಾಜ್ ಬಿ.ಶೆಟ್ಟಿ ಅವರು ನಟನೆಯಲ್ಲಿ ಬರವಣಿಗೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಿದವರು. ನನ್ನ ಜೊತೆ ಶಕ್ತಿಯಾಗಿ ನಿಂತವರು. ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ’ ಎಂದರು ಜನ್ಯ.
ಎಲ್ಲಾ ನಿರ್ಮಾಪಕರು ಹಣ ಹಾಕಿ ಸಿನಿಮಾ ಮಾಡಿದರೆ, ರಮೇಶ್ ರೆಡ್ಡಿ ಅವರು ಈ ಸಿನಿಮಾಗೆ ಹಣ ಸುರಿದಿದ್ದಾರೆ. ಗ್ರಾಫಿಕ್ಸ್, ಮೇಕಿಂಗ್ ಅದ್ಭುತವಾಗಿದೆ. ಕನ್ನಡ ಸಿನಿಮಾ ಉಳಿಯಬೇಕು ಎಂದರೆ ಇಂತಹ ನಿರ್ಮಾಪಕರು ಇರಬೇಕು. ಶಿವಣ್ಣನ ಸ್ನೇಹವನ್ನು ಉಳಿಸಿಕೊಂಡಿದ್ದೇನೆ ಎನ್ನುವುದೇ ಹೆಮ್ಮೆ. ರಾಜ್ ಬಿ.ಶೆಟ್ಟಿ ಇವತ್ತು ನಮ್ಮ ಚಿತ್ರರಂಗದ ಮೋಸ್ಟ್ ವಾಂಟೆಂಡ್ ಹೀರೋ. ಶಿವಣ್ಣ–ಸುಧಾರಾಣಿ ಜೋಡಿಯ ಕ್ರೇಜ್ ಜೋರಿತ್ತು. ಸುಧಾರಾಣಿಯವರಂಥ ಹುಡುಗಿ ಹುಡುಕುತ್ತಿದ್ದೆವು.–ಉಪೇಂದ್ರ, ನಟ
ಇದು 45 ದಿನಗಳಲ್ಲಿ ನಡೆಯುವ ಕಥೆ ಹೀಗಾಗಿ ಈ ಶೀರ್ಷಿಕೆ. ಏನಕ್ಕೆ 45 ದಿನ? ಎನ್ನುವುದನ್ನು ಸಿನಿಮಾ ಉತ್ತರಿಸುತ್ತದೆ. ನಮ್ಮ ಪೀಳಿಗೆ ಬಹಳಷ್ಟು ವಿಚಾರಗಳನ್ನು ಮರೆತಿದೆ. ಇದನ್ನು ನೆನಪಿಸುವ ಎಳೆ ಕಥೆಯಲ್ಲಿದೆ. ಇಷ್ಟ ಪಟ್ಟು ಕೆಲಸ ಮಾಡಿದರೆ ಯಾವುದೂ ಕಷ್ಟವಿಲ್ಲ. ಹೀಗಾಗಿ ಸಂಗೀತ ನಿರ್ದೇಶನದ ಜೊತೆಗೆ ಸಿನಿಮಾ ನಿರ್ದೇಶನ ಕಷ್ಟವೆನಿಸಲೇ ಇಲ್ಲ’ ಎನ್ನುತ್ತಾರೆ ಅರ್ಜುನ್ ಜನ್ಯ.
ಈ ಸಿನಿಮಾ ಸೆಟ್‌ಗೆ ಇಳಿಯುವ ಮುನ್ನವೇ ಆ್ಯನಿಮೇಷನ್‌ನಲ್ಲಿ ಇಡೀ ಸಿನಿಮಾ ನೋಡಿದ್ದೆವು. ‘45’ ಬಿಡುಗಡೆಯಾದ ಬಳಿಕ ಅರ್ಜುನ್ ಜನ್ಯ ಬೇರೆ ಹಂತಕ್ಕೇ ತಲುಪಲಿದ್ದಾರೆ. ‘ಚೆಲುವೆಯ..’ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದೇನೆ. ಅದರ ಗುಟ್ಟು ಬಿಟ್ಟುಕೊಡುವುದಿಲ್ಲ. ಸಿನಿಮಾದಲ್ಲೇ ನೋಡಿ.–ಶಿವರಾಜ್‌ಕುಮಾರ್, ನಟ
ಸಮಾರಂಭದಲ್ಲಿ ಬೃಹತ್ ಕ್ರೇನ್‌ನಲ್ಲಿ ನೇತುಹಾಕಿದ್ದ ಹೊಲೋಗ್ರಾಮ್ ಪರದೆ ಮೇಲೆಯೂ ಟೀಸರ್, ಟ್ರೇಲರ್ ವಿಡಿಯೊ, ಫೋಟೊಗಳನ್ನು ಪ್ರದರ್ಶಿಸಿದ್ದು ಜನರ ಗಮನಸೆಳೆಯಿತು. ಸುಧಾರಾಣಿ ಅವರು ಅತಿಥಿ ಪಾತ್ರದಲ್ಲಿ ಶಿವರಾಜ್‌ಕುಮಾರ್ ಅವರಿಗೆ ಜೋಡಿಯಾಗಿ ‘45’ ಸಿನಿಮಾದಲ್ಲಿ ನಟಿಸಿದ್ದಾರೆ. ನಟ ಪ್ರಮೋದ್ ಶೆಟ್ಟಿ, ರಾಜೇಂದ್ರನ್, ಕೌಸ್ತುಭ ಮಣಿ ಮತ್ತಿತರರು ತಾರಾಬಳಗದಲ್ಲಿದ್ದಾರೆ.
ಕನ್ನಡ ಸಿನಿಮಾಗಳು ಗಡಿ ದಾಟಿ ಹೋಗಲ್ಲ ಎನ್ನುವ ಕೊರಗು ಇದೆ. ಪರಭಾಷಾ ಸಿನಿಮಾಗಳ ಹಾವಳಿ ಎನ್ನುತ್ತಲೇ ಇರುತ್ತೇವೆ. ನಾವೂ ಕೂಡಾ ಒಳ್ಳೆಯ ಸಿನಿಮಾಗಳನ್ನು ಮಾಡಿ ಹಾವಳಿ ಕೊಡುವವರಾಗಬೇಕು. ‘45’ ಸಿನಿಮಾ ಇಂತಹ ಸಿನಿಮಾ ಆಗಲಿದೆ ಎನ್ನುವ ಭರವಸೆ ಇದೆ. ಕನ್ನಡದ ಪ್ರೇಕ್ಷಕರು ಹೊಸತನಕ್ಕೆ ಹಪಹಪಿಸುತ್ತಿದ್ದಾರೆ. ಹೀಗಾಗಿ ಈ ಸಿನಿಮಾಗೊಂದು ಅವಕಾಶ ಕೊಡಿ. ಈ ಸಿನಿಮಾದಲ್ಲಿ ನಾನು ವಿದ್ಯಾರ್ಥಿಯಾಗಿದ್ದೆ. ನಾನು ಶಿವಣ್ಣ–ಉಪೇಂದ್ರ ಅವರ ಸಿನಿಮಾ, ಪೋಸ್ಟರ್ ನೋಡಿಕೊಂಡು ಇಲ್ಲಿಗೆ ಬಂದವನು, ಇಂದು ಅವರ ಜೊತೆ ತೆರೆಹಂಚಿಕೊಂಡಿದ್ದೇನೆ.–ರಾಜ್ ಬಿ.ಶೆಟ್ಟಿ, ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.