ADVERTISEMENT

ಸಂಗೀತವಷ್ಟೇ ಅಲ್ಲ, ಸಿನಿಮಾದಲ್ಲೂ ಎಸ್‌ಪಿಬಿ ಯಶಸ್ವಿ

ಕೆ.ಎಂ.ಸಂತೋಷಕುಮಾರ್
Published 26 ಸೆಪ್ಟೆಂಬರ್ 2020, 1:53 IST
Last Updated 26 ಸೆಪ್ಟೆಂಬರ್ 2020, 1:53 IST
ಮುದ್ದಿನ ಮಾವ ಸಿನಿಮಾದ ದೃಶ್ಯವೊಂದರಲ್ಲಿ ಎಸ್‌ಪಿಬಿ
ಮುದ್ದಿನ ಮಾವ ಸಿನಿಮಾದ ದೃಶ್ಯವೊಂದರಲ್ಲಿ ಎಸ್‌ಪಿಬಿ    

ಹಿರಿಯ ಗಾಯಕ ಡಾ. ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಗಾಯನ ಮೋಡಿಗೆ ಮಾರುಹೋಗದ ಸಂಗೀತ ರಸಿಕರೇ ಇಲ್ಲ. ಹಾಗೆಯೇ ಅವರ ಅಭಿನಯಕ್ಕೂ ಮರುಳಾಗದ ಕಲಾಭಿಮಾನಿಗಳಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು.. ಹೀಗೆ ಹಲವು ಭಾಷೆಗಳಲ್ಲಿ ಸಾವಿರಾರು ಸಿನಿಮಾ ಹಾಡುಗಳಿಗೆ ಕಂಠವಾಗಿರುವ ಎಸ್‌ಪಿಬಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೋಷಕ ನಟನಾಗಿಯೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

1993ರಲ್ಲಿ ತೆರೆಕಂಡ ಶಶಿಕುಮಾರ್‌ ಮತ್ತು ಶ್ರುತಿ ಅಭಿನಯದ, ಓಂ ಸಾಯಿಪ್ರಕಾಶ್‌ ನಿರ್ದೇಶನದ ‘ಮುದ್ದಿನ ಮಾವ’ ಚಿತ್ರ ನೋಡಿದ ಎಷ್ಟೋ ಅಳಿಯಂದಿರು ನಮಗೂ ಇಂತಹ ಮಾವನೇ ಸಿಗಬೇಕು ಎಂದುಕೊಳ್ಳುವುದು ಸಹಜವೇ. ಮಕ್ಕಳೂ ಅಷ್ಟೇ ಅಪ್ಪ ಅಂದರೆ ಹೀಗೆಯೇ ಆದರ್ಶವಾದಿಯಾಗಿ ಇರಬೇಕು ಎಂದುಕೊಳ್ಳುವುದು ಕೂಡ ಅಷ್ಟೇ ಸಹಜ. ಈ ಚಿತ್ರದಲ್ಲಿನ ಪ್ರಧಾನ ಪಾತ್ರ ಬಡ ಕೂಲಿಕಾರ್ಮಿಕ ರಾಮಯ್ಯನ ಪಾತ್ರ. ಪ್ರೇಕ್ಷಕನನ್ನು ಮನತುಂಬಿ ನಗಿಸುತ್ತದೆ, ಜತೆಗೆ ಹೃದಯ ಬಿರಿಯುವಂತೆ ಅಳಿಸುತ್ತದೆ. ಇಂತಹಪಾತ್ರಕ್ಕೆ ಜೀವ–ಭಾವ ತುಂಬಿದವರು ಎಸ್‌ಪಿಬಿ. ಈ ಚಿತ್ರದಲ್ಲಿನ ಅವರ ಅಭಿನಯಕ್ಕೆ ಮಾರುಹೋಗದ ಕಲಾರಸಿಕನಿಲ್ಲ.

1969ರಲ್ಲಿ ತೆರೆಕಂಡ ‘ಪೆಲ್ಲಾಂಟೆ ನೂರೆಲ್ಲಾ ಪಂಟ’ ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ ಬಣ್ಣದ ಲೋಕಕ್ಕೆ ನಟನಾಗಿಯೂ ಅವರು ಅಡಿ ಇಟ್ಟಿದ್ದರು.ನಂತರ 1971ರಲ್ಲಿ ‘ಮಹಮದ್‌ ಬಿನ್‌ ತುಘಲಕ್‌’ ಚಿತ್ರದ ಮೂಲಕ ತಮಿಳು ಚಿತ್ರರಂಗವನ್ನೂ ಪ್ರವೇಶಿಸಿದರು. ಒಂದು ದಶಕದ ನಂತರ, ಅಂದರೆ 1982ರಲ್ಲಿ ‘ಬಾಳೊಂದು ಚದುರಂಗ’ ಚಿತ್ರದ ಮೂಲಕ ಎಸ್‌ಪಿಬಿ ನಟನಾಗಿ ಸ್ಯಾಂಡಲ್‌ವುಡ್‌ಗೆ ಬಂದಿದ್ದು. ನಂತರ ‘ತಿರುಗುಬಾಣ’, ‘ಸಂದರ್ಭ’, ‘ಮಾಂಗಲ್ಯಂ ತಂತುನಾನೇನ’, ‘ಮಾಯಾ’, ‘ಮಹಾ ಯಡಬಿಡಂಗಿ’, ‘ಕಲ್ಯಾಣೋತ್ಸವ’ (ಈ ಚಿತ್ರದಲ್ಲಿ ಸೇನೆಯ ಕ್ಯಾಪ್ಟ‌ನ್‌ ಪಾತ್ರ ಅವರದು), ‘ಹೆತ್ತರೆ ಹೆಣ್ಣನ್ನೇ ಹೆರಬೇಕು’ ಕನ್ನಡ ಸಿನಿಮಾಗಳಿಗೆ ಅವರು ಬಣ್ಣ ಹಚ್ಚಿದ್ದರು. ಇನ್ನು ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳಲ್ಲಿ ಎಸ್‌ಪಿಬಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ, ಡಬ್ಬಿಂಗ್‌ ಕಲಾವಿದರಾಗಿ ಕಮಲ್‌ ಹಾಸನ್‌ ಮತ್ತು ರಜನಿಕಾಂತ್‌ ಅವರ ಚಿತ್ರಗಳಿಗೆ ಕಂಠದಾನ ಕೂಡ ಮಾಡಿದ್ದಾರೆ.

ADVERTISEMENT

ವಿಷ್ಣುವರ್ಧನ್, ಅನಿಲ್ ಕಪೂರ್, ಭಾಗ್ಯರಾಜ್, ಅರ್ಜುನ್‌ ಸರ್ಜಾ, ರಘುನಂದನ್ ಮೊದಲಾದ ನಟರ ಸಿನಿಮಾಗಳು ಅನ್ಯಭಾಷೆಗಳಿಗೆ ಡಬ್‌ ಆದಾಗ ಕಂಠದಾನ ಮಾಡಿದ್ದಾರೆ.

ತಮಿಳು ಮತ್ತು ತೆಲುಗಿನ ಧಾರಾವಾಹಿಗಳಲ್ಲೂ ಎಸ್‌ಪಿಬಿ ಅಭಿನಯಿಸಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಟಿ.ವಿ ಕಾರ್ಯಕ್ರಮಗಳಲ್ಲೂ ಎಸ್‌ಪಿಬಿ ಜನಪ್ರಿಯರು.ಐದು ದಶಕಗಳಲ್ಲಿ ಅವರು ನಟಿಸಿದ ಚಿತ್ರಗಳ ಸಂಖ್ಯೆ70ಕ್ಕೂ ಹೆಚ್ಚು. 2018ರಲ್ಲಿ ತೆರೆಕಂಡ ತೆಲುಗಿನ ‘ದೇವದಾಸ್’‌ ಚಿತ್ರದಲ್ಲಿ ನಟಿಸಿದ ಎಸ್‌ಪಿಬಿ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿಲ್ಲ. ಈ‘ಮುದ್ದಿನ ಮಾವ’ ಸಿನಿರಸಿಕರ ಹೃದಯದಲ್ಲಿ ಶಾಶ್ವತ ಜಾಗ ಗಿಟ್ಟಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.