ADVERTISEMENT

ಡಾಲಿ ನಿರ್ಮಾಪಕರ 'ಡಾರ್ಲಿಂಗ್‌'

ಕೆ.ಎಚ್.ಓಬಳೇಶ್
Published 27 ಡಿಸೆಂಬರ್ 2019, 2:01 IST
Last Updated 27 ಡಿಸೆಂಬರ್ 2019, 2:01 IST
’ಡಾಲಿ’ ಚಿತ್ರದಲ್ಲಿ ಧನಂಜಯ್
’ಡಾಲಿ’ ಚಿತ್ರದಲ್ಲಿ ಧನಂಜಯ್   

‘ಪಾಪ್‌ಕಾರ್ನ್‌ ಮಂಕಿ ಟೈಗರ್‌’, ‘ತೋತಾಪುರಿ’, ‘ಯುವರತ್ನ’, ‘ಪೊಗರು’, ‘ಡಾಲಿ’, ‘ಸಲಗ’, ‘ಬಡವ ರಾಸ್ಕಲ್’ –ನಟ ಧನಂಜಯ್‌ ಅವರ ಬತ್ತಳಿಕೆಯಲ್ಲಿರುವ ಸಿನಿಮಾಗಳಿವು. ಕನ್ನಡದ ಬಹುತೇಕ ಸ್ಟಾರ್‌ ನಟರ ಎದುರು ಅವರೇ ವಿಲನ್‌.

ಪೋಷಕ ನಟ, ಖಳನಟ ಮತ್ತು ನಾಯಕನಾಗಿ ತೆರೆಯ ಮೇಲೆ ತಮ್ಮನ್ನು ಒಗ್ಗಿಸಿಕೊಂಡಿರುವ ಅಪರೂಪ ಕಲಾವಿದ ಅವರು. ‘ನನ್ನೊಳಗಿನ ನಟನೆಯ ಹಸಿವೇ ಇಷ್ಟು ಪಾತ್ರಗಳನ್ನು ಮಾಡಿಸುತ್ತಿದೆ’ ಎನ್ನುವುದು ಅವರ ಸ್ಪಷ್ಟನೆ. ಅವರೊಂದಿಗೆ ನಡೆಸಿದ ಮಾತುಕತೆ ಇಲ್ಲಿದೆ.

‘ಟಗರು’ ಚಿತ್ರದ ಬಳಿಕ ನಿಮ್ಮ ಸಿನಿಮಾ ಬದುಕು ಹೇಗಿದೆ?
ಈ ಚಿತ್ರಕ್ಕೂ ಮೊದಲು ನನ್ನ ಮೊಬೈಲ್‌ ರಿಂಗಾಗುತ್ತಿರಲಿಲ್ಲ; ಈಗ ದಿನಾಲೂ ರಿಂಗಾಗುತ್ತಿದೆ. ಒಳ್ಳೆಯ ಪಾತ್ರಗಳು ಸಿಗುತ್ತಿವೆ. ನಮ್ಮ ಮಾರುಕಟ್ಟೆಯನ್ನು ನಾವೇ ಗೊತ್ತು ಮಾಡಿಕೊಳ್ಳಬೇಕು. ಇಲ್ಲವಾದರೆ ಎಷ್ಟೇ ಒಳ್ಳೆಯ ನಟನಾದರೂ ಕಷ್ಟ. ಸಿನಿಮಾ ಮಾಡಲು ಆಗುವುದಿಲ್ಲ. ಯಾರೊಬ್ಬರೂ ನಮ್ಮ ಮೇಲೆ ಬಂಡವಾಳ ಹೂಡಲು ಸಿದ್ಧರಿರುವುದಿಲ್ಲ. ಯಾವುದೋ ಪಾತ್ರ ಮಾಡಿ ಕಳೆದು ಹೋಗಬೇಕಾಗುತ್ತದೆ. ‘ಟಗರು’ಗೂ ಮುಂಚೆ ‘ಅಲ್ಲಮ’ದಂತಹ ಸಿನಿಮಾ ಮಾಡಿದ್ದೆ. ಆದರೂ, ಜನರಿಗೆ ತಲುಪಿರಲಿಲ್ಲ. ನಟನಾಗಿಯೂ ಪ್ರೂವ್‌ ಮಾಡಿಕೊಳ್ಳಲು ಒದ್ದಾಡುತ್ತಿದ್ದೆ. ನನ್ನೊಳಗೆ ಅದೊಂದು ನೋವಿತ್ತು. ಈಗ ಹೀರೊ ಆಗಿ ಗುರುತಿಸಿಕೊಳ್ಳುವ ಹಾದಿಯಲ್ಲಿದ್ದೇನೆ.

ADVERTISEMENT

ಏಕಕಾಲಕ್ಕೆ ವಿಲನ್‌, ಪೋಷಕ ನಟ, ಹೀರೊ ಆಗಿ ನಟಿಸುವಾಗ ಎದುರಾಗುವ ನಿಜವಾದ ಸವಾಲುಗಳೇನು?
ಈ ಹಿಂದೆ ಪಾತ್ರಗಳು ಇರಲಿಲ್ಲ. ಈಗ ನನ್ನನ್ನು ಹುಡುಕಿಕೊಂಡು ಬರುತ್ತಿವೆ. ಇನ್ನೊಂದೆಡೆ ನನಗೂ ವಯಸ್ಸಾಗುತ್ತಿದೆ. ಅದಕ್ಕೊಂದಿಷ್ಟು ದುಡ್ಡು ಬೇಕು. ನಾನು ಕಟ್ಟಿಕೊಂಡು ಬಂದಿರುವ ಕನಸುಗಳಿವೆ. ಅವುಗಳನ್ನು ಈಡೇರಿಸಿಕೊಳ್ಳಬೇಕು. ಅದಕ್ಕಾಗಿ ‘ಡಾಲಿ’ ಪಿಕ್ಚರ್‌ ಕಟ್ಟಿದ್ದೇನೆ. ಕೆರೆಯ ನೀರನು ಕೆರೆಗೆ ಚೆಲ್ಲಿ... ಎನ್ನುವುದು ನನ್ನ ಧ್ಯೇಯ.

ನಟನೆ ಕುರಿತು ನಿಮ್ಮ ಆಸಕ್ತಿ ಕುದುರಿದ್ದು ಯಾವಾಗ?
ಬಾಲ್ಯದಲ್ಲಿ ‘ಭಕ್ತ ಪ್ರಹ್ಲಾದ’ ಸಿನಿಮಾದ ಕಥೆಯನ್ನು ಕ್ಯಾಸೆಟ್‌ನಲ್ಲಿ ಕೇಳುತ್ತಿದ್ದೆ. ಗುರುರಾಜುಲು ನಾಯ್ಡು ಅವರ ಹರಿಕಥೆ ಕೇಳುವುದೆಂದರೆ ನನಗೆ ಎಲ್ಲಿಲ್ಲದ ಖುಷಿ. ನಮ್ಮೂರಲ್ಲಿ ನಾಟಕ ಮಾಡುತ್ತಿದ್ದರು. ಅದರಲ್ಲಿ ಅಪ್ಪ, ಚಿಕ್ಕಪ್ಪ ನಟಿಸುತ್ತಿದ್ದರು. ಬಣ್ಣದಲೋಕಕ್ಕೆ ಬರಲು ಅವರೇ ನನಗೆ ಪ್ರೇರಣೆ. ಶಾಲೆಯಲ್ಲಿ ಸಣ್ಣಪುಟ್ಟ ಪಾತ್ರ ಮಾಡುತ್ತಿದ್ದೆ. ಪಿಯುಸಿಗೆ ಮೈಸೂರಿಗೆ ಬಂದೆ. ಆ ಅವಧಿಯಲ್ಲಿ ಓದಿಗಷ್ಟೇ ಗಮನ ಕೇಂದ್ರೀಕರಿಸಲು ಸಾಧ್ಯವಾಯಿತು. ಎಂಜಿನಿಯರಿಂಗ್ ಪದವಿ ಓದಲು ಶುರು ಮಾಡಿದಾಗ ‘ರಂಗಾಯಣ’ದ ಸೆಳೆತಕ್ಕೆ ಒಳಗಾದೆ. ನಾಟಕ ಮಾಡುತ್ತಲೇ ಸಿನಿಮಾದತ್ತ ಹೊರಳಿದೆ.

‘ಪೊಗರು’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
ಅದರಲ್ಲಿ ನಾನು ದೊಡ್ಡ ಉದ್ಯಮಿ. ಕಡುಭ್ರಷ್ಟನಾಗಿಯೂ ಇರುತ್ತೇನೆ. ಇದರಲ್ಲಿ ಫ್ರೆಂಚ್‌ನ ಮಾರ್ಗೆನ್ ಆಸ್ಟೆ, ಅಮೆರಿಕದ ಕಾಯ್‌ ಗ್ರೀನ್‌ ಒಂದು ಪಾರ್ಟ್‌ನಲ್ಲಿ ನನ್ನೊಟ್ಟಿಗೆಯೇ ಬರುತ್ತಾರೆ.

‘ಯುವರತ್ನ’ ಚಿತ್ರದ ಆ್ಯಂಟನಿ ಜೋಸೆಫ್‌ ಪಾತ್ರದ ವಿಶೇಷ ಏನು?
ಶೈಕ್ಷಣಿಕ ದಂಧೆ ಕುರಿತ ಕಥನ ಇದು. ಸಂತೋಷ್‌ ಆನಂದರಾಮ್‌ ತುಂಬಾ ಚೆನ್ನಾಗಿ ಕಥೆ ಹೆಣೆದಿದ್ದಾರೆ. ನನ್ನದು ಆ್ಯಂಟನಿ ಜೋಸೆಫ್‌ ಪಾತ್ರ. ಇಂದಿನ ಖಾಸಗಿ ಶೈಕ್ಷಣಿಕ ವ್ಯವಸ್ಥೆಯನ್ನು ಪ್ರತಿನಿಧಿಸುವ ಪಾತ್ರವದು.

ಕನ್ನಡ ಸಿನಿಮಾಗಳ ಗುಣಮಟ್ಟ ಕಡಿಮೆಯಾಗುತ್ತಿದೆ ಅನಿಸುತ್ತಿದೆಯೇ?
ಒಂದು ಮಟ್ಟಿಗೆ ಗುಣಮಟ್ಟ ಚೆನ್ನಾಗಿ ಆಗುತ್ತಿದೆ. ಆದರೆ, ಇತರೇ ಚಿತ್ರರಂಗಗಳಿಗೆ ಹೋಲಿಸಿದರೆ ಗುಣಮಟ್ಟ ಮತ್ತಷ್ಟು ವೃದ್ಧಿಸಬೇಕಿದೆ. ಅದರೊಟ್ಟಿಗೆ ಕನ್ನಡ ಸೊಗಡನ್ನೂ ಉಳಿಸಿಕೊಳ್ಳವೇಕು. ಬೇರೆ ಭಾಷೆಯ ಸಿನಿಮಾ ನೋಡಿ ಸಿನಿಮಾ ಮಾಡುವುದೇ ಬೇರೆ. ನಮ್ಮ ಬದುಕನ್ನು ಇಟ್ಟುಕೊಂಡು ಸಿನಿಮಾ ಕಟ್ಟುವುದೇ ಬೇರೆ. ಮಂಗಳೂರು, ಮಂಡ್ಯ ಸಂಸ್ಕೃತಿ ಇಟ್ಟುಕೊಂಡು ಚಿತ್ರ ಮಾಡುತ್ತಾರೆ. ಇದರಿಂದ ಕನ್ನಡ ಸೊಗಡು ಮತ್ತಷ್ಟು ಪಸರಿಸುತ್ತದೆ. ಚಾಮರಾಜನಗರದ ಶೈಲಿ ಇಟ್ಟುಕೊಂಡು ‘ಜೋಗಿ’ ಸಿನಿಮಾ ಮಾಡಲಾಯಿತು. ಅಂತಹ ಪ್ರಯತ್ನಗಳಾಗಬೇಕು. ‘ತಿಥಿ’ ಕೂಡ ಅಂಥದ್ದೇ ಪ್ರಯತ್ನ. ಈ ಮಣ್ಣಿನ ಕಥನಗಳನ್ನು ಕಟ್ಟಿಕೊಡುವ ಕೆಲಸವಾಗಬೇಕಿದೆ.

‘ಭೈರವ ಗೀತ’ ಚಿತ್ರದ ಬಳಿಕ ತೆಲುಗಿನಲ್ಲಿ ಮತ್ತೆ ಅವಕಾಶಗಳು ಬರಲಿಲ್ಲವೇ?
ಆ ಚಿತ್ರದ ಬಳಿಕ ಸಾಕಷ್ಟು ಅವಕಾಶಗಳು ಬಂದಿದ್ದು ನಿಜ. ಆದರೆ, ವಿಭಿನ್ನವಾದ ಕಥೆಗಳು ಬಂದರೆ ನಟಿಸಲು ಸಿದ್ಧನಿದ್ದೇನೆ. ಇತ್ತೀಚೆಗೆ ಗೀತಾ ಆರ್ಟ್ಸ್‌ನಿಂದ ವೆಬ್‌ ಸರಣಿಯಲ್ಲಿ ನಟಿಸುವಂತೆ ಅವಕಾಶ ಬಂದಿತ್ತು. ಅದರಲ್ಲಿ ನಟಿಸಲು ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.