ADVERTISEMENT

ಸಂದರ್ಶನ | ಸೋಲು–ಗೆಲುವುಗಳಿಗೆ ಕುಗ್ಗಿ, ಹಿಗ್ಗಬೇಕಿಲ್ಲ: ನೀನಾಸಂ ಸತೀಶ್‌

ವಿನಾಯಕ ಕೆ.ಎಸ್.
Published 28 ಮಾರ್ಚ್ 2024, 23:30 IST
Last Updated 28 ಮಾರ್ಚ್ 2024, 23:30 IST
<div class="paragraphs"><p>ನೀನಾಸಂ ಸತೀಶ್‌</p></div>

ನೀನಾಸಂ ಸತೀಶ್‌

   
ನೀನಾಸಂ ಸತೀಶ್‌, ರಚಿತಾ ರಾಮ್‌, ಅದಿತಿ ಪ್ರಭುದೇವ ಮುಖ್ಯಭೂಮಿಕೆಯಲ್ಲಿರುವ ‘ಮ್ಯಾಟ್ನಿ’ ಚಿತ್ರ ಮುಂದಿನ ವಾರ ತೆರೆ ಕಾಣುತ್ತಿದೆ. ನಾಯಕನಾಗಿ ಚಿತ್ರರಂಗದಲ್ಲಿ ದಶಕ ಪೂರೈಸಿರುವ ಸತೀಶ್‌ ತಮ್ಮ ಸಿನಿಪಯಣ ಹಾಗೂ ಚಿತ್ರ ಕುರಿತು ಮಾತನಾಡಿದ್ದಾರೆ...

ಚಿತ್ರಕ್ಕೆ ‘ಮ್ಯಾಟ್ನಿ’ ಎಂಬ ಶೀರ್ಷಿಕೆ ಯಾಕೆ? ಇದು ಸಿನಿಮಾ ಕುರಿತ ಕಥೆಯೇ?

‘ಮ್ಯಾಟ್ನಿ’ ಎಂದರೆ ಶೋ. ನಾಲ್ಕು ಸಿನಿಮಾ ಶೋಗಳಲ್ಲಿ ಒಂದು. ಹಾಗೆಯೇ ಬದುಕು ಕೂಡ ಒಂದು ಶೋ. ಭೂಮಿಗೆ ಬರುತ್ತೇವೆ, ಏನೋ ಒಂದಷ್ಟು ಮಾಡುತ್ತೇವೆ. ಒಂದು ದಿನ ಇದ್ದಕ್ಕಿದ್ದಂತೆ ಎಲ್ಲವನ್ನೂ ಬಿಟ್ಟು ಎದ್ದು ಹೋಗುತ್ತೇವೆ. ಜಗವೇ ನಾಟಕರಂಗ. ನಾವೆಲ್ಲ ಪಾತ್ರಧಾರಿಗಳಷ್ಟೆ. ಬದುಕಿನ ‘ಮ್ಯಾಟ್ನಿ’ ಅನ್ನೋ ಸಿನಿಮಾವೂ ಒಂದು ಶೋ. ಕಥೆಗೂ ಶೀರ್ಷಿಕೆಗೂ ನೇರ ಸಂಬಂಧವಿಲ್ಲ. ಒಂದು ರೂಪಕವಷ್ಟೆ. 

ADVERTISEMENT

ಚಿತ್ರದಲ್ಲಿ ನಿಮ್ಮ ಪಾತ್ರವೇನು?

ಶ್ರೀಮಂತ ಮನೆತನದ ವ್ಯಕ್ತಿ. ತಾಯಿಯನ್ನು ಪ್ರೀತಿಸುವಾತ. ಬಡವರಿಗೆ ಸಹಾಯ ಮಾಡುತ್ತ, ಪ್ರೀತಿ ಹಂಚುತ್ತ ಬದುಕಿನಲ್ಲಿ ಕಳೆದುಕೊಂಡಿದ್ದನ್ನು ಇನ್ನೊಬ್ಬರ ಪ್ರೀತಿಯಲ್ಲಿ ಗಳಿಸುವ ವ್ಯಕ್ತಿತ್ವ.

ಏಕೆ ಎರಡು ವರ್ಷದಿಂದ ನಿಮ್ಮ ಯಾವ ಸಿನಿಮಾವೂ ತೆರೆ ಕಂಡಿಲ್ಲ?

ಕೋವಿಡ್‌ ನಂತರ ಪ್ಲಾನಿಂಗ್‌ ವರ್ಕೌಟ್‌ ಆಗಲಿಲ್ಲ. ನಾನು ಕಥೆ ಆಯ್ಕೆಯಲ್ಲಿ ತುಂಬ ನಿಧಾನ. ಸಾಕಷ್ಟು ಯೋಚನೆ ಮಾಡಿ ಆಯ್ಕೆ ಮಾಡಿಕೊಳ್ಳುತ್ತೇನೆ. ಹಾಗಂತ ಮಾಡಿದ್ದೆಲ್ಲ ಸೂಪರ್‌ ಹಿಟ್‌ ಸಿನಿಮಾವಾಗಲ್ಲ. ಒಂದಲ್ಲ ಒಂದು ಕೊರತೆ ಆಗಿರುತ್ತದೆ. 2022ರಲ್ಲಿ ‘ಪೆಟ್ರೋಮ್ಯಾಕ್ಸ್‌’ ತೆರೆ ಕಂಡಿತ್ತು. 

ನಿಮ್ಮ ಹಿಂದಿನ ಸಿನಿಮಾಗಳಂತೆ ಇದರಲ್ಲಿಯೂ ಹಾಸ್ಯ ಹೆಚ್ಚಿರುತ್ತದೆಯಾ?

ಯಾವುದೇ ಪಾತ್ರಗಳಲ್ಲಿ ಕಾಮಿಡಿ ಬಿಟ್ಟಿಲ್ಲ. ಅಣ್ಣಾವ್ರ ಸಿನಿಮಾಗಳನ್ನು ನೋಡಿದರೆ ಎಂಥ ಪಾತ್ರದಲ್ಲಿಯೂ ಸಣ್ಣ ಕಾಮಿಡಿ ಇರುತ್ತಿತ್ತು. ಹಾಗೆಯೇ ಇದರಲ್ಲಿಯೂ ಸಣ್ಣ ಹಾಸ್ಯವಿದೆ. ನಾಗಭೂಷಣ್‌, ಶಿವರಾಜ್‌ ಕೆ.ಆರ್‌.ಪೇಟೆ, ಪೂರ್ಣಚಂದ್ರ ಮೈಸೂರು ಮಾಡಿರುವ ಪಾತ್ರಗಳು ನಗಿಸುತ್ತವೆ. 

ನೀವು ಮಾಡಬೇಕು ಅಂದುಕೊಂಡು ಮಾಡಲಾಗದ ಪಾತ್ರ?

ಜೀವನದಲ್ಲಿ ಚೆನ್ನಾಗಿದೀನಿ. ನೀನಾಸಂ ತರಬೇತಿ ಅಂಗಳದಿಂದ ಇಲ್ಲಿ ತನಕ ಜರ್ನಿ ಮಾಡಿ, 15 ಸಿನಿಮಾ ಆಗಿದೆ. ನಟನಾಗಿ 15 ವರ್ಷ ಪೂರೈಸಿದ್ದೇನೆ. ಸಂತೋಷಪಡಲು ಇದಕ್ಕಿಂತ ಹೆಚ್ಚಿನದು ಏನು ಬೇಕು? ಏನೋ ಮಿಸ್‌ ಆಗಿದೆ, ನನ್ನ ಪಾತ್ರ ಅವರು ಮಾಡಿಬಿಟ್ಟರು ಎಂದು ದುಃಖಿಸುವ ವ್ಯಕ್ತಿಯಲ್ಲ. ಮಾಡುವುದಷ್ಟೆ ನಮ್ಮ ಕೆಲಸ. ಈಗಾಗಲೇ ಮಾಡಿರುವುದು ಸೋತರೂ ವ್ಯಥೆ ಇಲ್ಲ. ‘ಟೈಗರ್‌ ಗಲ್ಲಿ’ ಚಿತ್ರ ದೊಡ್ಡಮಟ್ಟದಲ್ಲಿ ಸೋಲು ಕಂಡಿತು. ಅದರ ಬಳಿಕದ ‘ಅಯೋಗ್ಯ’ ದೊಡ್ಡ ಹಿಟ್‌. ಜನ ಎಲ್ಲವನ್ನೂ ಗಮನಿಸುತ್ತಾರೆ. ಜನಕ್ಕೆ ಸಿನಿಮಾ ಬಗ್ಗೆ ಬಹಳ ಆಸಕ್ತಿ ಇದೆ. ಟೀಸರ್‌, ಟ್ರೇಲರ್ ಎಲ್ಲವನ್ನೂ ನೋಡಿ ಜನ ಯಾವ ಸಿನಿಮಾಕ್ಕೆ ಹೋಗಬೇಕು ಎಂದು ನಿರ್ಧರಿಸುತ್ತಾರೆ. ಯಾರು ಬಂದರೂ ಅವರ ನಿರ್ಧಾರ ಬದಲಿಸಲು ಸಾಧ್ಯವಿಲ್ಲ. ಇದು ನನ್ನ ಅನುಭವಕ್ಕೆ ಬಂದಿದ್ದು. ಹೀಗಾಗಿ ಮಾಡಲಾಗದ ಪಾತ್ರ ಅಂತಲ್ಲ ಅಂದುಕೊಳ್ಳುವುದಿಲ್ಲ. ಜೀವನಕ್ಕಿಂತ ಯಾವುದೂ ದೊಡ್ಡದು ಅಲ್ಲ. ಸಿನಿಮಾವೂ ಬದುಕಿಗಿಂತ ದೊಡ್ಡದಲ್ಲ. ಸೋಲು, ಗೆಲುವುಗಳನ್ನು ಪಕ್ಕಕ್ಕಿಟ್ಟು ಬದುಕಬೇಕು. ಜೀವನ ಹಾಳು ಮಾಡಿಕೊಳ್ಳಬಾರದು. 

ನಿಮ್ಮ ಕೈಯ್ಯಲ್ಲಿರುವ ಮುಂದಿನ ಸಿನಿಮಾಗಳು...

‘ಅಶೋಕ ಬ್ಲೇಡ್‌’ ಚಿತ್ರೀಕರಣ ನಡೆಯುತ್ತಿದೆ. ಮೂರು–ನಾಲ್ಕು ಸ್ಕ್ರಿಪ್ಟ್‌ಗಳು ರೆಡಿ ಇದೆ. ಮುಂಬರುವ ದಿನಗಳಲ್ಲಿ ವರ್ಷಕ್ಕೆ ಮೂರು ನಾಲ್ಕು ಸಿನಿಮಾ ಬರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.