ADVERTISEMENT

ಅರ್ಜುನ್‌ ಸರ್ಜಾ ಅಪರಾಧಿಯಲ್ಲ, ಶ್ರುತಿ ಅವಕಾಶವಾದಿ ಹೆಣ್ಣಲ್ಲ: ಪ್ರಕಾಶ್‌ ರೈ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 9:28 IST
Last Updated 25 ಅಕ್ಟೋಬರ್ 2018, 9:28 IST
   

ಬೆಂಗಳೂರು: ಮೀ ಟೂ ಅಭಿಯಾನದಆರಂಭದಲ್ಲಿ ನಟಿ ಶ್ರುತಿ ಹರಿಹರನ್ ಪರ ಬ್ಯಾಟ್‌ಮಾಡಿದ್ದ ಬಹುಭಾಷಾ ನಟ ಪ್ರಕಾಶ್ ರೈ, ಇದೀಗಅರ್ಜುನ್ ಸರ್ಜಾ ಅವರನ್ನು ಹೊಗಳಿದ್ದಾರೆ.

ವಿವಾದಕ್ಕೆ ಸಂಬಂಧಿಸಿ ಟ್ವಿಟರ್‌ನಲ್ಲಿ ಸಂದೇಶವೊಂದನ್ನು ಪ್ರಕಟಿಸಿರುವ ಅವರು, ‘ಅರ್ಜುನ್‌ ನನ್ನ ಬಹುಕಾಲದ ಗೆಳೆಯ ಹಾಗೂಸಹಪ್ರಯಾಣಿಕ.ಆತನನ್ನು ನಾನು ತುಂಬಾ ಚೆನ್ನಾಗಿ, ನಿಮ್ಮೆಲ್ಲರಿಗಿಂತ ಆಂತರಿಕವಾಗಿ ಬಲ್ಲೆ ಎಂದಿದ್ದಾರೆ.ನಾನು ಎಲ್ಲೂ ಆತನನ್ನು ಸಾರಾಸಗಟಾಗಿ ಅಪರಾಧಿ ಎನ್ನಲಿಲ್ಲ,ಯಾರ ಬಗ್ಗೆಯು ಅರ್ಥವಿಲ್ಲದ ದೂಷಣೆ ಮಾಡುವವನೂ ನಾನಲ್ಲ ಎಂದು ಹೇಳಿದ್ದಾರೆ.

‘ಶ್ರುತಿ,ಎಲ್ಲರೂ ದೂಷಿಸುತ್ತಿರುವಂತೆ ಅವಕಾಶವಾದಿ ಹೆಣ್ಣು ಮಗಳಲ್ಲ.ಆಕೆಅಪ್ಪಟ ಪ್ರತಿಭಾವಂತೆ.ನಮ್ಮೆಲ್ಲರಂತೆ ಇವರನ್ನೂ ಬೆಳಸಿರುವುದು ನಮ್ಮ ಸಮಾಜವೇ’ ಎಂದು ಹೇಳಿದ್ದಾರೆ.

ADVERTISEMENT

ಈ ಇಬ್ಬರೂ ಚಿತ್ರರಂಗದಲ್ಲಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಇನ್ನೂ ಹೆಚ್ಚು ಕೆಲಸ ಮಾಡಬೇಕಾದವರೂ,ಮಾಡಲು ಸಾಧ್ಯವಿರುವವರು.ಈ ಸತ್ಯದ ಹಿನ್ನೆಲೆಯಲ್ಲಿ ನಾನು ತುಂಬಾ ಮಾರ್ಮಿಕವಾಗಿ ಕೇಳುತ್ತಿರುವ ಸೂಕ್ಷ್ಮತೆಯ ಪ್ರತಿಕ್ರಿಯೆ ಎಲ್ಲರಿಗೂ ಅರ್ಥವಾದರೆ ಒಳಿತು.ಯಾವುದೆ ಪಕ್ಷಪಾತವಿಲ್ಲದೆ,ಪೂರ್ವಾಗ್ರಹಪೀಡಿತರಲ್ಲದ ಕೆಲವು ಹಿರಿಯರು ಇಬ್ಬರನ್ನು ಕರೆಸಿ ತಕ್ಷಣವೆ ಇತ್ಯರ್ಥಿಸಿ...’ ಎಂದು ಬರೆದುಕೊಂಡಿದ್ದಾರೆ.

ಪ್ರಕಾಶ್‌ ರೈ ಈ ಹಿಂದೆ ಶ್ರುತಿ ಆರೋಪ ಕುರಿತು ಟ್ವೀಟ್‌ ಮಾಡಿದ್ದು, ‘ಶ್ರುತಿ ಹರಿಹರನ್‌ ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತೆ ದಿಟ್ಟ ಹೆಣ್ಣು. ಅರ್ಜುನ್ ಸರ್ಜಾ ಅವರು ಕನ್ನಡದ ಹೆಮ್ಮೆ. ಹಿರಿಯ ನಟರೂ ಎಂಬುದನ್ನೂ ಮರೆಯದಿರೋಣ. ಆದರೆ ಶ್ರುತಿಯವರ ಆರೋಪದ ಹಿನ್ನೆಲೆಯಲ್ಲಿ ಆ ಹೆಣ್ಣು ಅನುಭವಿಸಿದ ಅಸಹಾಯಕತೆ, ಅವಮಾನ, ಇಷ್ಟು ದಿನಗಳ ಕಾಲ ತನ್ನೊಳಗೆ ಹುದುಗಿಸಿಟ್ಟ ಆ ಗಾಯದ ನೋವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಅರ್ಜುನ್ ಅವರು ಈ ಆರೋಪವನ್ನು ಅಲ್ಲಗಳೆದರೂ ಅವರ ಆ ದಿನದ ವರ್ತನೆ ಆಕೆಯಲ್ಲಿ ಉಂಟು ಮಾಡಿದ ನೋವಿಗಾಗಿ ಕ್ಷಮೆ ಕೇಳುವುದು ದೊಡ್ಡತನದ ಲಕ್ಷಣ.

ಅರಿತೋ ಅರಿಯದೆಯೋ ನಾವು ಗಂಡಸರು ಹುಟ್ಟಿನಿಂದಲೇ ಹೆಣ್ಣಿನ ಬೇಕು, ಬೇಡಗಳ ಬಗ್ಗೆ ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು ನಿಜ. ಹೆಣ್ಣುಮಕ್ಕಳೂ ತಮ್ಮ ಹಕ್ಕನ್ನು ಅರಿಯದೇ ಇರುವುದೂ ಅಷ್ಟೇ ನಿಜ. ಪ್ರಸ್ತುತ ಹೆಣ್ಣುಮಕ್ಕಳ ಈ ‘ಮಿ ಟೂ’ ಅಭಿಯಾನ ಮುಂದಿನ ದಿನಗಳಲ್ಲಾದರೂ ನಮ್ಮ ಸಮಾಜದಲ್ಲಿ ಅವರ ಮೇಲಿನ ಶತಮಾನಗಳ ದೌರ್ಜನ್ಯ, ಅವಮಾನ ಹಾಗೂ ಅಸಹಾಯಕತೆಗೆ ಕೊನೆಯನ್ನು ಕಾಣಲಿ. ನಾನು ಶ್ರುತಿ ಹರಿಹರನ್ ಅವರ ಪರವಾಗಿ ಈ ಮೂಲಕ ಎಲ್ಲಾ ನೊಂದ ಹೆಣ್ಣು ಮಕ್ಕಳ ಪರವಾಗಿ ನಿಲ್ಲುತ್ತೇನೆ’ ಎಂದು ಪ್ರಕಾಶ್ ರೈ ಹೇಳಿದ್ದರು.

ಇವನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.