ADVERTISEMENT

ಮಾಸ್‌ಗಿಂತ ಕ್ಲಾಸ್‌ ಅಜಯ್‌ ಆಯ್ಕೆ

ರಾಹುಲ ಬೆಳಗಲಿ
Published 30 ಏಪ್ರಿಲ್ 2019, 19:46 IST
Last Updated 30 ಏಪ್ರಿಲ್ 2019, 19:46 IST
ಅಜಯ್‌ ದೇವಗನ್
ಅಜಯ್‌ ದೇವಗನ್   

‘ಸ್ಟಾ ರ್‌ಗಿರಿ, ಸ್ಟಾರ್‌ಡಂ, ಹೀರೋಯಿಸಂ ಮೇಲೆ ನನಗೆ ನಂಬಿಕೆ ಇಲ್ಲ. ಒಟ್ಟಾರೆ ಚಿತ್ರ ಯಶಸ್ಸು ಕಾಣಬೇಕು. ಚಿತ್ರ ನಿರ್ಮಾಣ ಎಂಬುದು ಒಂದಿಡೀ ತಂಡದ ಶ್ರಮ. ಅದರಲ್ಲಿ ಒಬ್ಬಿಬ್ಬರ ಪಾತ್ರವಷ್ಟೇ ಇರುವುದಿಲ್ಲ. ಚಿತ್ರದ ಸೋಲು ಮತ್ತು ಗೆಲುವನ್ನು ನಾಯಕನಾದವನು ಚಿತ್ರತಂಡದ ಜೊತೆ ಸಮವಾಗಿ ಸ್ವೀಕರಿಸಬೇಕು. ಇದು ನಾನು ರೂಢಿಸಿಕೊಂಡು ಬಂದ ಕಾರ್ಯಸಿದ್ಧಾಂತ. ಇದರಿಂದ ನಾನು ಯಾವುದೇ ಕಾರಣಕ್ಕೂ ವಿಮುಖನಾಗಲ್ಲ’.

ಹೀಗೆ ಹೇಳುವ ಅಜಯ್ ದೇವಗನ್, ಬದುಕಿನುದ್ದಕ್ಕೂ ಅದೇ ಧೋರಣೆ ಅನುಸರಿಸಿದ್ದಾರೆ ಕೂಡ. ಅತಿಯಾದ ಪ್ರಚಾರ ಪ್ರಿಯತೆ, ಸ್ಟಾರ್‌ಗಿರಿ, ವಿವಾದ, ವೈಮನಸ್ಸು ಮುಂತಾದವುಗಳಿಂದ ದೂರವಿರುವ ಅಜಯ್ ಅತಿ ಎತ್ತರದ ಸ್ಥಾನ ಗಳಿಸಬೇಕು ಎಂಬ ಅಭಿಲಾಷೆ ಹೊಂದಿಲ್ಲ. ಉಳಿದವರಿಗೆಲ್ಲ ಪೈಪೋಟಿ ಒಡ್ಡಿ ಮುನ್ನಡೆ ಸಾಧಿಸಬೇಕು ಎಂಬ ಉಮೇದಿಲ್ಲ. ತಮ್ಮ ಅಭಿನಯ ಮತ್ತು ಚಿತ್ರ ತಂಡದ ಶ್ರಮಕ್ಕೆ ಅನುಸಾರ, ಚಿತ್ರ ಗೆದ್ದರೆ ಸಾಕು ಎಂಬ ಮನೋಸ್ಥಿತಿ ಅವರದ್ದು.

1991ರಲ್ಲಿ ತೆರೆ ಕಂಡ ‘ಫೂಲ್ ಔರ್ ಕಾಂಟೆ’ ಚಿತ್ರದಿಂದ ಆರಂಭಗೊಂಡು ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾದ ‘ಟೋಟಲ್ ಧಮಾಲ್’ ಚಿತ್ರದವರೆಗೆ ಅಜಯ್ ದೇವಗನ್ ಅಭಿನಯವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರ ಪಾತ್ರದ ಆಯ್ಕೆ ಕುತೂಹಲ ಮೂಡಿಸುತ್ತದೆ.

ADVERTISEMENT

ಆ್ಯಕ್ಷನ್ ಹೀರೋ ರೂಪದಲ್ಲಿ ಬಾಲಿವುಡ್ ಪ್ರವೇಶಿಸಿದ ಅವರು ನಂತರದ ವರ್ಷಗಳಲ್ಲಿ ಕೌಟಂಬಿಕ, ಕಾಮಿಡಿ, ರೋಮ್ಯಾಂಟಿಕ್, ಮೆಲೋಡ್ರಾಮಾ ಸೇರಿದಂತೆ ಬಗೆಬಗೆಯ ವಿಷಯಗಳ ಆಧಾರಿತ ಚಿತ್ರಗಳಲ್ಲಿ ಅಭಿನಯಿಸಿದರು. ಒಂದೇ ತೆರನಾದ ಪಾತ್ರಕ್ಕೆ ಸೀಮಿತಗೊಳ್ಳಲು ಅವರು ಎಂದಿಗೂ ಇಷ್ಟಪಡಲಿಲ್ಲ.

ಚಿತ್ರರಂಗ ಪ್ರವೇಶಿಸಬೇಕು ಮತ್ತು ನಾಯಕನಾಗಿ ಅಭಿನಯಿಸಬೇಕು ಎಂಬ ಅಭಿಲಾಷೆ ಅಜಯ್ ದೇವಗನ್ ವ್ಯಕ್ತಪಡಿಸಿದಾಗ, ಅವರ ತಂದೆ, ಸ್ಟಂಟ್‌ಮ್ಯಾನ್ ವೀರೂ ದೇವಗನ್ ಎಚ್ಚರಿಕೆಯ ಮಾತುಗಳನ್ನಾಡಿದ್ದರು. ‘ನೀನೊಬ್ಬ ಸ್ಟಂಟ್ ಮ್ಯಾನ್ ಮಗ. ಚಿತ್ರರಂಗದಲ್ಲಿ ಪೈಪೋಟಿ ಇದೆ. ಕಾಲೆಳೆಯುವವರು ಮತ್ತು ಸೋಲಿಸಬೇಕೆಂದು ಬಯಸುವವರು ತುಂಬಾ ಜನ ಇರುತ್ತಾರೆ. ಅವರೆಲ್ಲರನ್ನೂ ಮೀರಿ ಬೆಳೆಯುವುದು ಸವಾಲಿನ ಕೆಲಸ. ಜಾಗ್ರತೆಯಿರಲಿ’ ಎಂದು ಬುದ್ಧಿಮಾತು ಹೇಳಿದ್ದರು.

ಆತ್ಮವಿಶ್ವಾಸ ಮತ್ತು ಛಲ ಹೊಂದಿದ್ದ ಅಜಯ್ ದೇವಗನ್ ಸೋಲನ್ನು ಒಪ್ಪಿಕೊಳ್ಳುವ ಮತ್ತು ಮುಂದಿಟ್ಟ ಹೆಜ್ಜೆ ಹಿಂದಿಡುವ ಇಚ್ಛೆ ಖಂಡಿತ ಇರಲಿಲ್ಲ. ಶ್ರಮ, ಶ್ರದ್ಧೆ ಮತ್ತು ಬದ್ಧತೆ ಮೇಲಿನ ನಂಬಿಕೆಯಿಂದಲೇ ‘ಫೂಲ್ ಔರ್ ಕಾಂಟೆ’ಯಲ್ಲಿ ನಾಯಕನಟನಾಗಿ ಅಭಿನಯಿಸಿದ ಅವರು ಮೊದಲನೇ ಚಿತ್ರಕ್ಕೆ ಫಿಲಂಫೇರ್ ಪ್ರಶಸ್ತಿ ಗಳಿಸಿದರು. ಎರಡೂ ಬೈಕ್‌ಗಳ ಮೇಲೆ ಕಾಲಿಟ್ಟು ಸಾಹಸ ಪ್ರದರ್ಶನ, ಹೇರ್‌ಸ್ಟೈಲ್, ತೀಕ್ಷ್ಣ ಕಂಗಳು, ಗಾಂಭೀರ್ಯತೆ ಅವರಿಗೆ ಹೊಸ ಇಮೇಜ್ ತಂದವು. ಬಾಲಿವುಡ್‌ಗೆ ವಿಭಿನ್ನ ನಾಯಕನ ಪರಿಚಯವಾಯಿತು.

28 ವರ್ಷಗಳಿಂದ ಬಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮದೇ ಆದ ಛಾಪು ಮತ್ತು ಐಡೆಂಟಿಟಿ ಕಾಪಾಡಿಕೊಂಡು ಬಂದಿರುವ ಅಜಯ್ ದೇವಗನ್ ಇನ್ನೊಬ್ಬರೊಂದಿಗೆ ಹೋಲಿಕೆ ಮಾಡಿಕೊಳ್ಳಲು ಅಥವಾ ಹಿರಿಯ ನಟರ ಅಭಿನಯ ನಕಲು ಮಾಡಲು ಇಚ್ಛಿಸುವುದಿಲ್ಲ. ಮಾಧ್ಯಮದವರೊಂದಿಗೆ ದೂರವಿರಲು ಬಯಸುವ ಅವರು ಚಿತ್ರದ ಮೂಲಕ ವಿಶಿಷ್ಟ ಸಂದೇಶ ನೀಡಲು ಮಾತ್ರ ಖಂಡಿತ ಬಯಸುತ್ತಾರೆ. ಅಂತಹ ಕೆಲ ಚಿತ್ರಗಳ ಪೈಕಿ ಯುವ, ದಿ ಲೆಜೆಂಡ್ ಆಫ್ ಭಗತ್ ಸಿಂಗ್, ರೇಡ್, ಸತ್ಯಾಗ್ರಹ ಮುಂತಾದವು ಪ್ರಮುಖವಾದವು.

ಎಲ್ಲ ಚಿತ್ರಗಳಲ್ಲೂ ಆ್ಯಂಗ್ರಿ ಯಂಗ್‌ಮ್ಯಾನ್‌ ಆಗಿ ಉಳಿಯಲು ಬಯಸದ ಅಜಯ್ ಕಾಮೆಡಿ ಚಿತ್ರಗಳಲ್ಲೂ ಮಿಂಚಿದ್ದಾರೆ. ಗೋಲ್ಮಾಲ್‌, ಧಮಾಲ್, ಬೋಲ್ ಬಚ್ಚನ್ ಸೇರಿದಂತೆ ಬಹುತೇಕ ಚಿತ್ರಗಳಲ್ಲಿ ಅವರು ಹೀರೊಇಸಂ ತೋರದೇ ಸಹನಟರೊಂದಿಗೆ ಸಹಜವಾಗಿ ಅಭಿನಯಿಸಿದ್ದಾರೆ. ಪೊಲೀಸ್ ಅಧಿಕಾರಿ ಸಿಂಗಂ ಪಾತ್ರವಂತೂ ಪೊಲೀಸ್ ಇಲಾಖೆಗೆ ಬಡಿದೆಬ್ಬಿಸಿತು ಅಲ್ಲದೇ ಹೊಸ ತರಹದ ಸ್ಫೂರ್ತಿ ನೀಡಿತು. ಪೊಲೀಸ್ ಎಂದರೆ ಬರೀ ಆದೇಶ ಪಾಲಿಸುವವರಲ್ಲ, ಅನಿವಾರ್ಯ ಬಿದ್ದಾಗ ಸಮಾಜದ ಹಿತದೃಷ್ಟಿಯಿಂದ ಕಾನೂನನ್ನೇ ಕೈಗೆತ್ತಿಕೊಳ್ಳುವವರು ಎಂಬ ಸಂದೇಶ ನೀಡಿದ್ದಾರೆ.

ಎಷ್ಟೇ ಹೊಸಬ ನಟರು ಪೈಪೋಟಿ ಒಡ್ಡಿದರೂ ಮತ್ತು ಹಳಬ ನಟರು ಹಿಂದೆ ಸರಿದುಕೊಂಡರೂ ಅಜಯ್ ಮಾತ್ರ ತಮ್ಮ ಕಾಯಕದಿಂದ ದೂರವಾಗಿಲ್ಲ. ವರ್ಷಕ್ಕೆ ಇಂತಿಷ್ಟು ಚಿತ್ರಗಳಲ್ಲಿ ಅಭಿನಯಿಸುತ್ತ, ನಿರ್ಮಿಸುತ್ತ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತ ಮುನ್ನಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.