ADVERTISEMENT

‘ಹೆಡ್‌ ಬುಷ್‌’ ವಿರುದ್ಧ ಎಂ.ಪಿ ಜಯರಾಜ್‌ ಪುತ್ರ ಅಜಿತ್‌ ಜಯರಾಜ್‌ ದೂರು

ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ* ಸಿನಿಮಾ ಬಿಡುಗಡೆ ತಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 4 ಮೇ 2022, 12:53 IST
Last Updated 4 ಮೇ 2022, 12:53 IST
ಹೆಡ್‌ ಬುಷ್‌ ಚಿತ್ರದಲ್ಲಿ ಧನಂಜಯ್‌
ಹೆಡ್‌ ಬುಷ್‌ ಚಿತ್ರದಲ್ಲಿ ಧನಂಜಯ್‌   

ಬೆಂಗಳೂರು: ನಟ ‘ಡಾಲಿ’ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬಾರದು ಎಂದು ಕೋರಿ ಎಂ.ಪಿ ಜಯರಾಜ್‌ ಪುತ್ರ,ನಟ ಅಜಿತ್‌ ಜಯರಾಜ್‌ ಚಲನಚಿತ್ರ ವಾಣಿಜ್ಯ ಮಂಡಳಿಗೆ ಬುಧವಾರ ದೂರು ನೀಡಿದ್ದಾರೆ.

ಅಗ್ನಿ ಶ್ರೀಧರ್‌ ಅವರ ಆತ್ಮಕಥೆ ‘ದಾದಾಗಿರಿಯ ಆ ದಿನಗಳು’ ಕೃತಿಯನ್ನು ಆಧರಿಸಿ ನಿರ್ಮಾಣಗೊಳ್ಳುತ್ತಿರುವ, ‘ಹೆಡ್‌ಬುಷ್‌–ದಿ ರೈಸ್‌ ಆ್ಯಂಡ್‌ ರೈಸ್‌ ಆಫ್‌ ಬೆಂಗಳೂರು ಅಂಡರ್‌ವರ್ಲ್ಡ್‌’ ಭಾಗ–1ರ ಚಿತ್ರೀಕರಣ ಕೆಲದಿನಗಳ ಹಿಂದಷ್ಟೇ ಪೂರ್ಣಗೊಂಡಿತ್ತು. ಇದರ ಬೆನ್ನಲ್ಲೇ ಚಿತ್ರ ಬಿಡುಗಡೆಗೆ ತಡೆ ಕೋರಿ ಅಜಿತ್‌ ವಾಣಿಜ್ಯ ಮಂಡಳಿ ಮೆಟ್ಟಲೇರಿದ್ದಾರೆ. ಭೂಗತ ದೊರೆ ಎಂ.ಪಿ ಜಯರಾಜ್‌ ಪಾತ್ರಕ್ಕೆ ನಟ ‘ಡಾಲಿ’ ಧನಂಜಯ್‌ ಸಿನಿಮಾದಲ್ಲಿ ಬಣ್ಣಹಚ್ಚಿದ್ದರು.

ದೂರಿನ ಕುರಿತು ವಿಡಿಯೊ ಮುಖಾಂತರ ಮಾಹಿತಿ ನೀಡಿರುವ ಅಜಿತ್‌, ‘ಹೆಡ್‌ಬುಷ್‌ ಸಿನಿಮಾ ಪೂರ್ಣವಾಗಿ ನನ್ನ ತಂದೆಯವರ ಕುರಿತಂತೇ ಇದೆ ಎಂದು ತಿಳಿದುಬಂತು. ಇದನ್ನು ವಿರೋಧಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ನೀಡಿದ್ದೇನೆ. ಸಿನಿಮಾ ಕುರಿತು ಮೊದಲೇ ನನ್ನ ಗಮನಕ್ಕೆ ಬಂದಿತ್ತು. ಈ ಕುರಿತು ಚಿತ್ರತಂಡದ ಜೊತೆಗೂ ಮಾತನಾಡಿದ್ದೇನೆ. ಆದರೆ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಅವರು ನೀಡಿರಲಿಲ್ಲ. ಏನೇ ಆದರೂ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ. ವೈಯಕ್ತಿಕ ಬದುಕಿಗೆ ನೋವಾಗುವಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ತಂದೆಯ ಮುಂದೆ ನಿಲ್ಲದೇ ಇರುವವರೆಲ್ಲಾ, ಅವರನ್ನು ನೋಡದೇ ಇರುವವರೆಲ್ಲಾ ಇವತ್ತು ಅವರನ್ನು ‘ಅವ್ನು..ಇವ್ನು..’ ಎನ್ನುತ್ತಿದ್ದಾರೆ. ಇದು ಸರಿಯಲ್ಲ’ ಎಂದಿದ್ದಾರೆ.

ADVERTISEMENT

ಡಾಲಿ ಪಿಕ್ಚರ್‌ ಹೌಸ್‌ಗೆ ಪತ್ರ: ಅಜಿತ್‌ ಜಯರಾಜ್‌ ಅವರು ನೀಡಿದ ದೂರನ್ನು ಆಧರಿಸಿ ‘ಹೆಡ್‌ಬುಷ್‌’ ನಿರ್ಮಾಣ ಸಂಸ್ಥೆ ಡಾಲಿ ಪಿಕ್ಚರ್‌ ಹೌಸ್‌ ಮತ್ತು ಸೋಮಣ್ಣ ಟಾಕೀಸ್‌ಗೆ ವಾಣಿಜ್ಯ ಮಂಡಳಿ ಪತ್ರ ಬರೆದಿದೆ. ‘ಕುಟುಂಬದ ಅನುಮತಿಯನ್ನು ಪಡೆಯದೇ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಸೂಕ್ತವೆಲ್ಲವೆಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾ, ಚಿತ್ರ ಬಿಡುಗಡೆಗೆ ಅವಕಾಶ ನೀಡಬಾರದೆಂದು ಅಜಿತ್‌ ಜಯರಾಜ್‌ ಕೋರಿದ್ದಾರೆ. ತಮಗೆ ಈ ಪತ್ರ ತಲುಪಿದ ಕೂಡಲೇ ತಾವು ಸಂಬಂಧಪಟ್ಟವರೊಡನೆ ಮಾತುಕತೆ ನಡೆಸಿ ವಿಷಯವನ್ನು ಇತ್ಯರ್ಥಪಡಿಸಿಕೊಳ್ಳುವುದು. ಇಲ್ಲವೇ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಬಗೆಹರಿಸಿಕೊಳ್ಳತಕ್ಕದ್ದು’ ಎಂದು ಉಲ್ಲೇಖಿಸಿದೆ.

ಇದು ಕೃತಿ ಆಧಾರಿತ ಸಿನಿಮಾ: ಅಜಿತ್‌ ದೂರಿನ ಕುರಿತು ಮಾಧ್ಯಮಗಳಿಗೆ ಪತ್ರಿಕ್ರಿಯೆ ನೀಡಿರುವ ಧನಂಜಯ್‌, ‘ಅಜಿತ್‌ ನನಗೆ ಚೆನ್ನಾಗಿ ಪರಿಚಯವಿದೆ. ಹೆಡ್‌ಬುಷ್‌ಗೂ ಅವರು ಶುಭಾಶಯ ಕೋರಿದ್ದರು. ನಾವು ಸ್ಪಷ್ಟವಾಗಿ ಇದು ಅಗ್ನಿ ಶ್ರೀಧರ್‌ ಅವರ ಕೃತಿ ಆಧಾರಿತ ಸಿನಿಮಾ ಎಂದು ಉಲ್ಲೇಖಿಸಿದ್ದೇವೆ. ಆದರೆ ಈಗ ಅಜಿತ್‌ ಅವರು ಏಕಾಏಕಿ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಕೋರ್ಟ್‌ಗೆ ಹೋಗುತ್ತೇನೆ ಎಂದಿದ್ದಾರೆ. ಸಿನಿಮಾ ಘೋಷಣೆ ಮಾಡಿದಾಗ ದೂರು ನೀಡಬಹುದಿತ್ತು. ಶೂಟಿಂಗ್‌ ಟೈಂನಲ್ಲಿ ಹೇಳಬಹುದಿತ್ತು. ಆದರೆ ಚಿತ್ರೀಕರಣ ಪೂರ್ಣಗೊಂಡ ನಂತರ ಈ ರೀತಿ ಮಾಡಿದ್ದಾರೆ ಎಂದರೆ ಅದರ ಹಿಂದೆ ಕಾಣದ ಕೈಗಳಿವೆ. ‘ಹೆಡ್‌ಬುಷ್‌’ ದೊಡ್ಡ ಬಜೆಟ್‌ ಸಿನಿಮಾ ಎಂದು ಇಡೀ ಚಿತ್ರರಂಗಕ್ಕೆ ಗೊತ್ತು. ನನ್ನ ವೈಯಕ್ತಿಕ ದುಡಿಮೆಯನ್ನು ಇದಕ್ಕೆ ಹಾಕಿದ್ದೇನೆ. ನಾವು ಸಿನಿಮಾ ಮಾಡುತ್ತಿರುವುದು ಅಗ್ನಿ ಶ್ರೀಧರ್‌ ಅವರ ಪುಸ್ತಕದ ಮೇಲೆ. ಏನೇ ಸಮಸ್ಯೆ ಇದ್ದರೂ, ಅಗ್ನಿ ಶ್ರೀಧರ್‌ ಜೊತೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕು. ಸಿನಿಮಾಗೂ ಅಜಿತ್‌ ದೂರಿಗೂ ಸಂಬಂಧವಿಲ್ಲ. ಶ್ರೀಧರ್‌ ಅವರ ಪುಸ್ತಕದ ಹಕ್ಕು ತೆಗೆದುಕೊಂಡು ನಾವು ಸಿನಿಮಾ ಮಾಡುತ್ತಿದ್ದೇವೆ. ಶ್ರೀಧರ್‌ ಸ್ಕ್ರಿಪ್ಟ್‌ ಬರೆದುಕೊಟ್ಟಿದ್ದಾರೆ. ಸಿನಿಮಾ ಚೆನ್ನಾಗಿ ಆಗಿದೆ ಎಂದಾಕ್ಷಣ ಈ ರೀತಿ ಟಾಕ್‌ ಆರಂಭವಾಗಿದೆ. ನಾನೂ ಹೋರಾಡುತ್ತೇನೆ. ಏಕೆಂದರೆ ನಾನೂ ಶ್ರಮ, ಹಣ ಹೂಡಿದ್ದೇನೆ’ ಎಂದಿದ್ದಾರೆ.

ಅಗ್ನಿ ಶ್ರೀಧರ್‌ ಚಿತ್ರಕಥೆ: ಭೂಗತ ದೊರೆ ಎಂ.ಪಿ.ಜಯರಾಜ್ ಜೀವನಾಧಾರಿತ ಹೆಡ್‌ಬುಷ್‌ ಚಿತ್ರಕ್ಕೆ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ನಿರ್ದೇಶಿಸಿದ್ದಾರೆ. 1970ರ ಬೆಂಗಳೂರಿನ ಭೂಗತ ಜಗತ್ತನ್ನು ಚಿತ್ರದಲ್ಲಿ ತೋರಿಸಲಾಗಿದೆ. ‘ಡಾಲಿ’ ಧನಂಜಯ, ಪಾಯಲ್ ರಜಪೂತ್, ಕ್ರೇಜಿಸ್ಟಾರ್ ರವಿಚಂದ್ರ, ‘ಲೂಸ್ ಮಾದ’ ಯೋಗಿ, ವಸಿಷ್ಠ ಎನ್ ಸಿಂಹ, ಡೈನಾಮಿಕ್ ಸ್ಟಾರ್ ದೇವರಾಜ್, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಡಾಲಿ ಪಿಕ್ಚರ್ಸ್ ಹಾಗೂ ಸೋಮಣ್ಣ ಟಾಕೀಸ್ ಲಾಂಛನದಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೊ ಸೋಮಣ್ಣ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.