ನಟ ಅಲ್ಲು ಅರ್ಜುನ್
ಚಿತ್ರ ಕೃಪೆ: @alluarjun
ಮುಂಬೈ: ಬಹುದೊಡ್ಡ ಪ್ರೇಕ್ಷಕರ ಬಳಗವಿರುವ ಬಾಲಿವುಡ್ ಪ್ರವೇಶಿಸುವುದು ಅಸಾಧ್ಯವೆಂದು ನಾನು ಭಾವಿಸಿದ್ದೆ. ಆದರೆ, ‘ಪುಷ್ಪ 2: ದಿ ರೂಲ್‘ ಮೂಲಕ ದೇಶದಾದ್ಯಂತದ ಪ್ರೇಕ್ಷಕರನ್ನು ರಂಜಿಸುವ ತಮ್ಮ ಆಸೆ ಈಡೇರುತ್ತಿದೆ ಎಂದು ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಹೇಳಿದ್ದಾರೆ.
2021ರಲ್ಲಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಏಕಕಾಲಕ್ಕೆ ತೆರೆ ಕಂಡಿದ್ದ ‘ಪುಷ್ಪ’ ಚಿತ್ರ ಹಿಂದಿ ಭಾಷಿಕ ಪ್ರದೇಶಗಳಲ್ಲೂ ಭಾರಿ ಮೆಚ್ಚುಗೆ ಗಳಿಸಿತ್ತು.
ಡಿಸೆಂಬರ್ 5ರಂದು ‘ಪುಷ್ಪ–ದಿ ರೂಲ್’ ಬಿಡುಗಡೆಯಾಗುತ್ತಿದ್ದು, ಮುಂಬೈನ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಅಲ್ಲು ಅರ್ಜುನ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.
‘ಪುಷ್ಪಾ 2: ದಿ ರೂಲ್" ಸಹ ‘ಪುಷ್ಪ’ ಚಿತ್ರದಷ್ಟೇ ಯಶಸ್ಸನ್ನು ಗಳಿಸಲಿದೆ ಎಂದು ನಾನು ನಂಬಿಕೆ ಇಟ್ಟಿದ್ದೇನೆ. ‘ಪುಷ್ಪ' ದೊಡ್ಡ ಹಿಟ್ ಆದಾಗ ಸಮೀಕ್ಷೆಯೊಂದು, ‘ಪುಷ್ಪ 2' ಭಾರತದಲ್ಲಿ ದೊಡ್ಡ ಚಿತ್ರವಾಗಲಿದೆ ಎಂದು ಹೇಳಿತ್ತು. ಇಡೀ ಭಾರತವೇ ನಮ್ಮಿಂದ ಈ ಚಿತ್ರವನ್ನು ನಿರೀಕ್ಷಿಸುತ್ತಿರುವುದರಿಂದ ಇದು ನಮಗೆ ದೊಡ್ಡ ವಿಷಯ ಎಂದು ಭಾವಿಸಿದ್ದೇನೆ. ಇದು ನನ್ನ ತಾಯ್ನಾಡಿಗೆ ಒಳ್ಳೆಯ ಹೆಸರು ತರುತ್ತದೆ ಎಂದು ಹೇಳಿದ್ದಾರೆ.
‘20 ವರ್ಷಗಳಿಂದ ನನ್ನನ್ನು ಬೆಂಬಲಿಸುತ್ತಿರುವ ತೆಲುಗು ಜನರಿಗೆ ಇದು ಹೆಮ್ಮೆಯ ವಿಷಯ. ನನ್ನನ್ನು ಒಬ್ಬ ನಟನಾಗಿ ರೂಪಿಸಿದ ಜನರು ಪುಷ್ಪ–2 ಚಿತ್ರವನ್ನು ದೊಡ್ಡ ಹಿಟ್ ಮಾಡುವ ಮೂಲಕ ಹೆಮ್ಮೆಪಡುವಂತೆ ಮಾಡುವ ಸಮಯ ನನ್ನದಾಗಿದೆ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ, ಪಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಭಾರಿ ಪ್ರಮಾಣದಲ್ಲಿ ಅಭಿಮಾನಿಗಳು ನೆರೆದಿದ್ದರು.
ಈ ಚಿತ್ರವನ್ನು ಸುಕುಮಾರ್ ನಿರ್ದೇಶಿಸಿದ್ದು, ಮೊದಲ ಭಾಗದಲ್ಲಿದ್ದ ರಶ್ಮಿಕಾ ಮಂದಣ್ಭ, ಫಹಾದ್ ಫಾಸಿಲ್ ಮತ್ತಿತರರು ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.