ADVERTISEMENT

Kannada New song : ಮುಂದುವರಿಯಲಿದೆ ಭಟ್ರ ‘ಅಮಲು’ ಆಲ್ಬಂ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 0:45 IST
Last Updated 6 ಜನವರಿ 2026, 0:45 IST
ಯೋಗರಾಜ್‌ ಭಟ್‌ 
ಯೋಗರಾಜ್‌ ಭಟ್‌    

‘ಫೋನು ಇಲ್ಲ ಮೆಸೇಜ್‌ ಇಲ್ಲ ನಿಂದು...’, ‘ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು..’, ‘ನಾವ್‌ ಮನೆಗೆ ಹೋಗೋದಿಲ್ಲ’.., ‘ಹಾಲು ಕುಡ್ದ ಮಕ್ಳೆ ಬದ್ಕಲ್ಲ...’ ಹೀಗೆ ನಿರ್ದೇಶಕ ಯೋಗರಾಜ್‌ ಭಟ್‌–ನಟ ಶರಣ್‌ ಕಾಂಬಿನೇಷನ್‌ನಲ್ಲಿ ಹಲವು ‘ಎಣ್ಣೆ ಹಾಡು’ಗಳು ಬಂದಿವೆ. ಇದಕ್ಕೆ ಹೊಸ ಸೇರ್ಪಡೆ ‘ಅಮಲು’. ನಿರ್ದೇಶನದ ಜೊತೆಗೆ ಗೀತ ಸಾಹಿತ್ಯದಲ್ಲಿ ಮುಂದುವರಿಯುವ ಇಚ್ಛೆಯನ್ನು ‘ಅಮಲು’ ರಿಲೀಸ್‌ ಸಂದರ್ಭದಲ್ಲಿ ಯೋಗರಾಜ್‌ ಭಟ್‌ ಬಿಚ್ಚಿಟ್ಟಿದ್ದಾರೆ. 

ಶರಣ್‌ ಜೊತೆಗಿನ ‘ಎಣ್ಣೆ ಹಾಡು’ಗಳ ನಂಟು ಇನ್ನೂ ಮುಂದುವರಿಯಲಿದೆ ಎನ್ನುವ ಸೂಚನೆಯನ್ನು ನೀಡುತ್ತಾ ಮಾತಿಗಿಳಿದ ಯೋಗರಾಜ್‌ ಭಟ್‌, ‘ನನ್ನ ಮನೆಯ ಬಳಿಯೇ ಒಬ್ಬ ಕುಡುಕನಿದ್ದಾನೆ. ಆತ ನನ್ನ ‘ಶರಬತ್ತು ಗೀತೆ’ಗಳ ಭಕ್ತ, ಅಭಿಮಾನಿ. ‘ನಾನು ಕುಡಿದು ಮಾತನಾಡುತ್ತಿಲ್ಲ’ ಎನ್ನುತ್ತಾಲೇ ನನ್ನೊಂದಿಗೆ ಮಾತಿಗಿಳಿಯುತ್ತಿದ್ದ. ಪ್ರತಿ ಕುಡುಕ ಹೇಳುವುದೇ ಈ ಮಾತನ್ನೇ. ಈ ಮಾತು ಹೇಳುತ್ತಿದ್ದಾರೆ ಎಂದರೆ ಖಂಡಿತಾ ಮದ್ಯಪಾನ ಮಾಡಿದ್ದಾರೆ ಎಂದರ್ಥ. ಇದನ್ನೇ ಹಾಡು ಮಾಡಿದರೆ ಚೆನ್ನಾಗಿರುತ್ತದೆ ಎಂದು ‘ಅಮಲು’ ಬರೆದೆ.

ಮೆಲೋಡಿಯಸ್‌ ಆಗಿದ್ದರೆ ಕಾಡುತ್ತದೆ ಎಂದು ಹೀಗೆ ಹಾಡು ಮಾಡಿದ್ದೇವೆ. ಶರಣ್‌ ಅವರೇ ಈ ಹಾಡಿಗೆ ದನಿಯಾಗಬೇಕು ಎಂದು ಬಯಸಿದ್ದೆ. ಈ ‘ಶರಬತ್ತು ಗೀತೆ’ಗಳ ‘ಅಮಲು’ ಆಲ್ಬಂ ಮುಂದುವರಿಯಲಿದೆ. ಮುಂದೆ ‘ಬಾಯಾರಿಕೆಗೆ ಏನು ಕಾರಣ’ ಎನ್ನುವ ಹಾಡು ಬರಲಿದೆ. ವಾಸುಕಿ ವೈಭವ್‌ ಇದನ್ನು ಹಾಡಿದ್ದಾರೆ. ಇದಾದ ಬಳಿಕ ಶರಣ್‌ ಅವರೇ ಮತ್ತೊಂದು ಹಾಡಿಗೆ ದನಿಯಾಗಲಿದ್ದಾರೆ’ ಎಂದರು. 

ADVERTISEMENT

ನಟ ಶರಣ್‌ ಮಾತನಾಡಿ,‘ಈ ‘ಅಮಲು’ ಬರೀ ಕುಡುಕರ ಹಾಡಲ್ಲ. ಹಾಡಿನಲ್ಲಿ ಸಾಕಷ್ಟು ಜೀವನದ ಒಳಾರ್ಥವಿದೆ’ ಎಂದರು. ಮಹದೇವ ಆರ್‌.ಕನಕಪುರ ಈ ಹಾಡನ್ನು ನಿರ್ಮಾಣ ಮಾಡಿದ್ದು, ಚೇತನ್‌–ಡ್ಯಾವಿ ಸಂಗೀತ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.