ADVERTISEMENT

’ದಿ ಆಕ್ಸಿಡೆಂಟಲ್‌ ಪ್ರೈಮ್‌ ಮಿನಿಸ್ಟರ್‌’ ಟ್ರೇಲರ್‌ ಬಿಡುಗಡೆ

ಸಿಂಗ್‌ ಆಗಿ ಖೇರ್‌

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2018, 10:33 IST
Last Updated 27 ಡಿಸೆಂಬರ್ 2018, 10:33 IST
   

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜೀವನ ಆಧಾರಿತ ’ದಿ ಆ್ಯಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್‘ ಚಿತ್ರದ ಟ್ರೇಲರ್‌ನ್ನು ಚಿತ್ರ ತಂಡ ಗುರುವಾರ ಬಿಡುಗಡೆ ಮಾಡಿದೆ.ಸಿಂಗ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಅನುಪಮ್ ಖೇರ್ ಸಿನಿಮಾ ಪ್ರಿಯರ ಗಮನ ಸೆಳೆದಿದ್ದಾರೆ.

ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು 2014ರಲ್ಲಿ ರಚಿಸಿದ ಇದೇ ಹೆಸರ ಕೃತಿ ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಸಿಂಗ್ ಅವರ ಜೀವನದಲ್ಲಿನ ಮಹತ್ತರ ಘಟ್ಟಗಳು, ಯುಪಿಎ ಸರ್ಕಾರದ ಅವಧಿಯಲ್ಲಿನ ರಾಜಕೀಯ ಬೆಳವಣಿಗೆ, ಮಹತ್ತರ ತಿರುವುಗಳನ್ನು ಚಿತ್ರದ ಕಥೆಯು ಒಳಗೊಂಡಿದೆ. ಆರ್ಥಿಕ ತಜ್ಞ ಮನಮೋಹನ್‌ ಸಿಂಗ್‌ 2004–2014ರ ವರೆಗೂ ಹತ್ತು ವರ್ಷಗಳು ದೇಶದ ಪ್ರಧಾನಿಯಾಗಿದ್ದರು.

ಬದುಕಿರುವ ವ್ಯಕ್ತಿಯ ಜೀವನಾಧಾರಿತ ಕಥೆಯನ್ನು ಸಿನಿಮಾ ರೂಪದಲ್ಲಿ ತರುವುದು, ಆ ವ್ಯಕ್ತಿಯೇ ತಾನಾಗಿ ಕ್ಯಾಮೆರಾ ಮುಂದೆ ಅಭಿನಯಿಸುವುದು ಸುಲಭದ ಪ್ರಕ್ರಿಯೆಯಲ್ಲ. ಸಿಂಗ್‌ ಪಾತ್ರಧಾರಿ ಅನುಪಮ್‌ ಖೇರ್‌ ಮೇಲೆ ಹೆಚ್ಚಿನ ಒತ್ತಡವಿದ್ಧಂತೆ ಕಂಡರೂ ತೆರೆಯ ಮೇಲೆ ಖೇರ್‌–ಸಿಂಗ್‌ ಒಬ್ಬರೇ ಆಗಿದ್ದಾರೆ.

ADVERTISEMENT

ಸಿಂಗ್ ಅವರ ಗಾಂಭೀರ್ಯ, ನಡೆ–ನುಡಿ, ಮಾತಿನ ನಡುವಿನ ವಿರಾಮ, ನೋಟ,..ಹೀಗೆ ಸೂಕ್ಷ್ಮ ಸಂಗತಿಗಳನ್ನು ತೀಕ್ಷ್ಣವಾಗಿ ಗಮನಿಸಿ ತನ್ನ ಪ್ರತಿ ಚಲನೆಯಲ್ಲಿ ಖೇರ್‌ ಅಳವಡಿಸಿಕೊಂಡಂತೆ ಕಾಣುತ್ತಿದೆ.

ವಿಜಯ ರತ್ನಾಕರ ಗುತ್ತೆ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ (ಸಂಜಯ್ ಬಾರು), ದಿವ್ಯಾ ಸೇಠ್ (ಮನಮೋಹನ್ ಸಿಂಗ್ ಪತ್ನಿ ಗುರುಶರಣಕೌರ್) ಮತ್ತು ಸುಜೇನ್ ಬರ್ನರ್ಟ್‌ (ಸೋನಿಯಾ ಗಾಂಧಿ), ಅರ್ಜುನ್‌ ಮಾಥುರ್‌(ರಾಹುಲ್‌ ಗಾಂಧಿ), ಆಹನಾ ಕುಮ್ರಾ(ಪ್ರಿಯಾಂಕಾ ಗಾಂಧಿ) ಸೇರಿ ಹಲವರ ಅಭಿನಯವಿದೆ.

ಟ್ರೇಲರ್‌ ಬಿಡುಗಡೆಗೂ ಮುಂಚಿನಿಂದಲೇ ಸಿನಿಮಾ ಹಲವರ ಗಮನ ಸೆಳೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯನ್ನೂ ಹುಟ್ಟು ಹಾಕಿದೆ. ಇದೀಗ ಟ್ರೇಲರ್‌ ನೋಡಿ ಸಿನಿಮಾ ನೋಡಲು ಕಾತುರರಾಗಿರುವ ಸಿನಿಮಾ ಪ್ರಿಯರು ಜನವರಿ 11ರ ವರೆಗೂ ಕಾಯಲೇಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.