ಅಮಿರ್ ಖಾನ್ ಮತ್ತು ಅರೀಜಿತ್ ಸಿಂಗ್
ಹಿನ್ನೆಲೆ ಗಾಯನಕ್ಕೆ ನಿವೃತ್ತಿ ಘೋಷಿಸಿದ್ದ ಗಾಯಕ ಅರಿಜೀತ್ ಸಿಂಗ್ ಬಾಲಿವುಡ್‌ನ ಮುಂಬರುವ ‘ಏಕ್ ದಿನ್’ ಸಿನಿಮಾದಲ್ಲಿ ಹಾಡೊಂದನ್ನು ಹಾಡಿದ್ದಾರೆ ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದೆ.
ಏಕ್ ದಿನ್ ಸಿನಿಮಾವನ್ನು ಅಮಿರ್ ಖಾನ್ ಬ್ಯಾನರ್ ಅಡಿ ಮನ್ಸೂರ್ ಖಾನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಸುನೀಲ್ ಪಾಂಡೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ನಟಿ ಸಾಯಿ ಪಲ್ಲವಿ ಹಾಗೂ ಜುನೈದ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ವರ್ಷದ ಮೇ 1ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.
ಕೋಲ್ಕತ್ತದಲ್ಲಿ ಇತ್ತೀಚೆಗೆ ನಡೆದ ಸಿತಾರ್ ವಾದಕಿ ಅನುಷ್ಕಾ ಶಂಕರ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅರೀಜಿತ್ ಸಿಂಗ್ ಅಚ್ಚರಿ ಮೂಡಿಸಿದ್ದರು.
ಈ ಬಗ್ಗೆ ಸಿನಿಮಾ ತಂಡ ಪೋಸ್ಟ್‌ನಲ್ಲಿ ‘ಏಕ್ ದಿನ್ ಸಿನಿಮಾದ ಸಂಗೀತಕ್ಕೆ ಇನ್ನಷ್ಟು ಹೃದಯಸ್ಪರ್ಶಿ ಕೊಡುಗೆ ನೀಡಿದ್ದಕ್ಕಾಗಿ ಅರೀಜಿತ್ ಅವರಿಗೆ ಧನ್ಯವಾದಗಳು. ನಿಮ್ಮೊಂದಿಗೆ ಕಳೆದ 4 ದಿನ ಸಂತೋಷವಾಗಿತ್ತು‘ ಎಂದು ಬರೆದಿದ್ದಾರೆ.
ಈ ಹಿಂದೆ ಮನ್ಸೂರ್ ಅವರ ಜತೆ ‘ಖಯಾಮತ್ ಸೆ ಕಯಾಮತ್ ತಕ್’, ‘ಜೋ ಜೀತಾ ವೋಹಿ ಸಿಕಂದರ್’, ‘ಅಕೇಲೆ ಹಮ್ ಅಕೇಲೆ ತುಮ್’ ಮತ್ತು ‘ಜಾನೆ ತೂ... ಯಾ ಜಾನೇ ನಾ’ ಮುಂತಾದ ಚಿತ್ರಗಳಲ್ಲಿ ಅರೀಜಿತ್ ಕೆಲಸ ಮಾಡಿದ್ದರು.
ಜನವರಿ 27ರಂದು ಅರೀಜಿತ್ ತಮ್ನ ಗಾಯನದಿಂದ ನಿವೃತ್ತಿ ಹೊಂದುವುದಾಗಿ ಹೇಳಿದ್ದರು. ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡು ‘ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳಲು ನಿರ್ಧರಿಸಿರುವೆ. ಅದೊಂದು ಅದ್ಭುತ ಪಯಣ. ಇಷ್ಟು ವರ್ಷಗಳ ಕಾಲ ನನ್ನ ಹಾಡುಗಳನ್ನು ಕೇಳಿ, ಅಪಾರ ಪ್ರೀತಿ ತೋರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳಲು ಬಯಸುವೆ. ಸ್ವತಂತ್ರವಾಗಿ ಸಂಗೀತ ಸಂಯೋಜನೆ ಕಾರ್ಯವನ್ನು ಮುಂದುವರಿಸುವೆ ಹಾಗೂ ಈಗಾಗಲೇ ಕೈಗೆತ್ತಿಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವೆ' ಎಂದೂ ಅವರು ಸ್ಪಷ್ಟನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.