
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆ್ಯಕ್ಷನ್ ಕಟ್ ಹೇಳಿರುವ, ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ.ಶೆಟ್ಟಿ ಜೊತೆಯಾಗಿ ನಟಿಸಿರುವ ‘45’ ಸಿನಿಮಾ ಡಿ.25ರಂದು ತೆರೆಕಾಣುತ್ತಿದೆ. ಸಿನಿಮಾ ಬಿಡುಗಡೆಗೂ ಮುನ್ನವೇ ‘ಜೀ’ ಸಂಸ್ಥೆಯು ಸಿನಿಮಾದ ಡಿಜಿಟಲ್ ಹಾಗೂ ಸ್ಯಾಟಲೈಟ್ ಹಕ್ಕುಗಳನ್ನು ಖರೀದಿಸಿದೆ.
ಸಿನಿಮಾಗೆ ಸೆನ್ಸಾರ್ ಮಂಡಳಿಯು ‘ಯು/ಎ’ ಪ್ರಮಾಣ ಪತ್ರ ನೀಡಿದೆ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಕರ್ನಾಟಕದಾದ್ಯಂತ ವಿತರಣೆ ಮಾಡಲಿದೆ. ಯುಗಾಂಡದ ಘೆಟೋ ಕಿಡ್ಸ್ ಜೊತೆಗಿನ ‘ಆ್ಯಫ್ರೊ ಟಪಾಂಗ್’ ಹಾಡಿನ ಮೂಲಕ ಸಿನಿಮಾದ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಸೋಮವಾರ(ಡಿ.15) ಟ್ರೇಲರ್ ಬಿಡುಗಡೆ ಮಾಡಿದೆ. ನಟ ರಿಷಬ್ ಶೆಟ್ಟಿ ಟ್ರೇಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ‘ನನ್ನ ಮೊದಲ ನಿರ್ದೇಶನದ ಸಿನಿಮಾದ ಸಂಗೀತ ನಿರ್ದೇಶಕರಾದ ಅರ್ಜುನ್ ಜನ್ಯ ನಿರ್ದೇಶನದ ಸಿನಿಮಾ ಇದು. ತಮ್ಮ ನಿರ್ದೇಶನದ ಮೊದಲ ಸಿನಿಮಾದಲ್ಲೇ ಒಂದು ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಅರ್ಜುನ್ ಅವರು ಅದನ್ನು ಸಾಧಿಸಿದ್ದಾರೆ. ನನ್ನ ನೆಚ್ಚಿನ ನಟರಾದ ಶಿವಣ್ಣ ಹಾಗೂ ಉಪೇಂದ್ರ ಅವರ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿಬಂದಿದೆ. ಅವರನ್ನು ತೆರೆಯಲ್ಲಿ ನೋಡುವುದೇ ಹಬ್ಬ’ ಎಂದಿದ್ದಾರೆ ರಿಷಬ್.
ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ‘45’ ಸಿನಿಮಾ ನಿರ್ಮಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.