ADVERTISEMENT

ಡಾ.ರಾಜ್‌ಕುಮಾರ್‌ 16ನೇ ವರ್ಷದ ಪುಣ್ಯಸ್ಮರಣೆ: ಬೊಮ್ಮಾಯಿ ಸೇರಿ ಗಣ್ಯರಿಂದ ನಮನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಏಪ್ರಿಲ್ 2022, 11:31 IST
Last Updated 12 ಏಪ್ರಿಲ್ 2022, 11:31 IST
ಪುಣ್ಯಸ್ಮರಣೆ ಅಂಗವಾಗಿ ರಾಜ್‌ಕುಮಾರ್‌ ಪುಣ್ಯಭೂಮಿಯನ್ನು ಹೂವುಗಳಿಂದ ಅಲಂಕರಿಸಿರುವುದು
ಪುಣ್ಯಸ್ಮರಣೆ ಅಂಗವಾಗಿ ರಾಜ್‌ಕುಮಾರ್‌ ಪುಣ್ಯಭೂಮಿಯನ್ನು ಹೂವುಗಳಿಂದ ಅಲಂಕರಿಸಿರುವುದು   

ಬೆಂಗಳೂರು: ಇಂದು (ಮಂಗಳವಾರ) ನಟಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್‌ ಅವರ 16ನೇ ವರ್ಷದ ಪುಣ್ಯತಿಥಿ.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅಭಿಮಾನಿಗಳೂ ಸಾಮಾಜಿಕ ಜಾಲತಾಣಗಳಲ್ಲಿ ರಾಜ್‌ಕುಮಾರ್ ಅವರನ್ನು ಸ್ಮರಿಸಿದ್ದಾರೆ.

‘ಕನ್ನಡಿಗರ ಹೆಮ್ಮೆ, ಕಲಾಸರಸ್ವತಿಯ ವರಪುತ್ರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಕರ್ನಾಟಕ ರತ್ನ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಅಭಿಮಾನಪೂರ್ವಕ ನಮನಗಳು. ಕೋಟ್ಯಂತರ ಅಭಿಮಾನಿಗಳ ಪಾಲಿನ ಅಣ್ಣಾವ್ರು ಕನ್ನಡಿಗರ ಹೃದಯಮಂದಿರದಲ್ಲಿ ಚಿರಸ್ಥಾಯಿಯಾಗಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ADVERTISEMENT

‘ನಾಡಿನ ಕಲಾರಂಗದ ಸರ್ವಶ್ರೇಷ್ಠ ವ್ಯಕ್ತಿತ್ವ, ನಟಸಾರ್ವಭೌಮ, ಬಂಗಾರದ ಮನುಷ್ಯ ಶ್ರೀ ಡಾ.ರಾಜ್‍ಕುಮಾರ್ ಅವರ ಪುಣ್ಯತಿಥಿಯಂದು ಆದರಪೂರ್ವಕ ನಮನಗಳು. ಮನಮುಟ್ಟುವ ನಟನೆ, ಕಂಠಸಿರಿಯ ಮೂಲಕ ಅವರು ಸದಾ ನಮ್ಮೊಂದಿಗೆ ನೆಲೆಸಿದ್ದಾರೆ. ಅಣ್ಣಾವ್ರು ಎಂದಿಗೂ ಅಮರ’ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.

‘ಅಭಿನಯದಲ್ಲಿ ನಟಸಾರ್ವಭೌಮ, ವ್ಯಕ್ತಿತ್ವದಲ್ಲಿ ಬಂಗಾರದ ಮನುಷ್ಯ. ಹೀಗೆಂದರೆ ಕನ್ನಡಿಗರಿಗೆ ನೆನಪಾಗುವುದು ವರನಟ ಡಾ.ರಾಜ್ ಕುಮಾರ್. ಡಾ.ರಾಜ್ ಅವರು ನಮ್ಮನ್ನಗಲಿ ಇಂದಿಗೆ 16 ವರ್ಷ. ಸಾಂಸ್ಕೃತಿಕ ರಾಯಭಾರಿಯಾಗಿ ನಮ್ಮ ನಾಡು-ನುಡಿಗೆ ಅವರ ಸೇವೆ ಅಪಾರ. ಅಭಿಮಾನಿ ದೇವರುಗಳ ಪಾಲಿನ ಪ್ರೀತಿಯ ಅಣ್ಣಾವ್ರು ಕನ್ನಡಿಗರ ಜನಮಾನಸದಲ್ಲಿ ಎಂದಿಗೂ ಅಜರಾಮರ’ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

‘ಕನ್ನಡ ನಾಡಿನ‌ ಹೆಗ್ಗುರುತುಗಳಲ್ಲಿ ಡಾ.ರಾಜ್‌ಕುಮಾರ್ ಅವರು ಪ್ರಮುಖರಾದವರು. ನಟನಾಗಿ-ಗಾಯಕನಾಗಷ್ಟೇ ಅಲ್ಲದೆ ನಾಡು-ನುಡಿಗಾಗಿ ಹೋರಾಟವನ್ನೂ ಮಾಡಿದ ಮಹಾನ್ ಚೇತನ ನಮ್ಮೆಲ್ಲರ ಪ್ರೀತಿಯ ಅಣ್ಣಾವ್ರು. ಡಾ.ರಾಜ್‌ಕುಮಾರ್ ಅವರ ನೆನಪು ಅಭಿಮಾನಿಗಳ ಹೃದಯದಲ್ಲಿ ಹಚ್ಚಹಸಿರು. ಅವರ ಪುಣ್ಯಸ್ಮರಣಾ ದಿನದಂದು ಹೃದಯಪೂರ್ವಕ ನಮನಗಳು’ ಎಂದು ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

ಎಂದೆಂದಿಗೂ ನೀವು ನಮ್ಮೊಂದಿಗೆ ಎಂದು ಅಪ್ಪನನ್ನು ನೆನೆದು ನಟ ರಾಘವೇಂದ್ರ ರಾಜ್‌ಕುಮಾರ್‌ ಟ್ವೀಟ್ ಮಾಡಿದ್ದಾರೆ.

ಪುಣ್ಯಸ್ಮರಣೆ ಅಂಗವಾಗಿ ರಾಜ್ಯದ ಹಲವೆಡೆ ರಾಜ್‌ಕುಮಾರ್ ಅಭಿಮಾನಿಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

‘ಕರ್ನಾಟಕದ ಕಣ್ಮಣಿ, ಕನ್ನಡದ ಅಸ್ಮಿತೆ, ನಮ್ಮ ನೆಲದ ಸಾಕ್ಷಿಪ್ರಜ್ಞೆ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರು, ವರನಟ, ಪದ್ಮಭೂಷಣ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನದಂದು ಆ ಮೇರುನಟನಿಗೆ ನನ್ನ ಗೌರವ ಪ್ರಣಾಮಗಳು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.