ರಜಾ ಕಿರುಚಿತ್ರದ ದೃಶ್ಯ
ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವದ (ಬಿಐಎಸ್‌ಎಫ್‌ಎಫ್) 15ನೇ ಆವೃತ್ತಿಯು ಆರಂಭಗೊಂಡಿದ್ದು, ಆಗಸ್ಟ್ 17ರವರೆಗೆ ಚಿತ್ರೋತ್ಸವಕ್ಕೆ ಆಯ್ಕೆಯಾದ ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ.
ಈ ಬಾರಿಯ ಚಿತ್ರೋತ್ಸವವನ್ನು ಆನ್‌ಲೈನ್ ಮತ್ತು ವಿವಿಧ ಸ್ಥಳಗಳಲ್ಲಿ ಪ್ರದರ್ಶನ ಹೀಗೆ ಎರಡು ವಿಭಿನ್ನ ಮಾದರಿಯಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನ ಸುಚಿತ್ರಾ, ಗೋಥೆ
ಇನ್ ಸ್ಟಿಟ್ಯೂಟ್/ಮ್ಯಾಕ್ಸ್ ಮುಲ್ಲರ್ ಭವನ, ಅಲಯನ್ಸ್ ಫ್ರಾನ್ಸಿಸ್ ಡಿ ಬೆಂಗಳೂರು, ಆರ್‌ವಿ ವಿಶ್ವವಿದ್ಯಾಲಯ, ಕ್ಯೂರಿಯೋಸಿಟಿ ಸೈನ್ಸ್ ಸೆಂಟರ್‌ಗಳಲ್ಲಿ ಚಿತ್ರಗಳ ಪ್ರದರ್ಶನ ನಡೆಯಲಿದೆ.
ಚಿತ್ರೋತ್ಸವಕ್ಕೆ ಆಯ್ಕೆ ಮಾಡಿರುವ ಕಿರುಚಿತ್ರಗಳನ್ನು ಚಿತ್ರ ಪ್ರೇಮಿಗಳು ಅಂತರ್ಜಾಲ ತಾಣ https://www.bisff.in ನಲ್ಲಿ ವೀಕ್ಷಿಸಬಹುದು. ಚಿತ್ರೋತ್ಸವಕ್ಕೆ ಹೆಸರು ನೋಂದಾಯಿಸಿದ ವೀಕ್ಷಕರು ಆಗಸ್ಟ್ 17ರವರೆಗೆ ಚಿತ್ರಗಳನ್ನು ವೀಕ್ಷಿಸಬಹುದು.
‘ಯುವ ಮತ್ತು ಉದಯೋನ್ಮುಖ ಸಿನಿ ಪ್ರತಿಭೆಗಳಿಗೆ ಪ್ರತಿಷ್ಠಿತ ವೇದಿಕೆ ಒದಗಿಸಲು, ಉದ್ಯಮದ ಪ್ರಮುಖರಿಂದ ಮಾರ್ಗದರ್ಶನ ನೀಡಲು ಮತ್ತು ಚಿತ್ರ ನಿರ್ಮಾಪಕರನ್ನು ಪೋಷಿಸಲು ‘ಬಿಐಎಸ್‌ಎಫ್‌ಎಫ್’ ಬದ್ಧವಾಗಿದೆ. 2020ರಲ್ಲಿ ಆಸ್ಕರ್ ಅಕಾಡೆಮಿ ಅರ್ಹತಾ ಸ್ಥಾನಮಾನ ಪಡೆದ ನಂತರ ಚಿತ್ರೋತ್ಸವಕ್ಕೆ ಬರುವ ಕಿರುಚಿತ್ರಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಈ ವರ್ಷ 3000 ಕಿರುಚಿತ್ರಗಳು ಸ್ಪರ್ಧೆಗೆ ಬಂದಿದ್ದವು. ಅಂತರರಾಷ್ಟ್ರೀಯ, ಭಾರತೀಯ ಹಾಗೂ ಅನಿಮೇಷನ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ಮೈಕ್ ಹಾನ್, ತುಷಾರ್ ಹಿರಂದಾನಿ ಸೇರಿದಂತೆ ಸಾಕಷ್ಟು ಹೆಸರಾಂತ ಸಿನಿ ತಜ್ಞರು ತೀರ್ಪುಗಾರರ ಮಂಡಳಿಯಲ್ಲಿದ್ದಾರೆ. ಮಹಿಳಾ ಚಿತ್ರಗಳಿಗೆ ಪ್ರೋತ್ಸಾಹ ನೀಡಲು ಪ್ರತ್ಯೇಕ ವಿಭಾಗವಿದೆ’ ಎಂದು ಚಿತ್ರೋತ್ಸವದ ನಿರ್ದೇಶಕ ಆನಂದ್ ವರದರಾಜ್ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.