
2025ರಲ್ಲಿ ಭಾರತದಲ್ಲಿ ಹಲವು ಉತ್ತಮ ಸಿನಿಮಾಗಳು ಬಿಡುಗಡೆಗೊಂಡು ಯಶಸ್ಸು ಸಾಧಿಸಿವೆ. ವಿಶೇಷವಾಗಿ ನೈಜ ಘಟನೆ ಆಧಾರಿತ ಸಿನಿಮಾಗಳು ಹೆಚ್ಚು ಪ್ರಾಬಲ್ಯ ಸಾಧಿಸಿವೆ. ಸಾಹಸಮಯ, ಸಾಮಾಜಿಕ ನ್ಯಾಯ ಹಾಗೂ ಯುದ್ದದ ಸನ್ನಿವೇಶ ಒಳಗೊಂಡ ಚಿತ್ರಗಳು ವಿಶ್ವದಾದ್ಯಂತ ಮನ್ನಣೆ ಗಳಿಸಿವೆ. ಈ ವರ್ಷದ ಆರಂಭದಿಂದ ಅಂತ್ಯದವರೆಗೆ ಯಶಸ್ಸು ಸಾಧಿಸಿದ ನೈಜ ಘಟನೆ ಆಧಾರಿತ ಸಿನಿಮಾಗಳು ಯಾವುವು ಎಂಬುದನ್ನು ನೋಡೋಣ.
ಛಾವಾ:
2025ರಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಲನಚಿತ್ರ ಎಂಬ ಖ್ಯಾತಿಯನ್ನು ಛಾವಾ ಪಡೆದಿದೆ. ಛಾವಾ ಚಿತ್ರವು ವಿಶ್ವದಾದ್ಯಂತ ₹800 ಕೋಟಿಗೂ ಹೆಚ್ಚು ಗಳಿಕೆ ಮಾಡಿದ ಸಿನಿಮಾವಾಗಿದೆ. ಛತ್ರಪತಿ ಸಂಭಾಜಿ ಮಹಾರಾಜ್ ಅವರ ಜೀವನವನ್ನು ಆಧರಿಸಿ ಛಾವಾ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಚಲನಚಿತ್ರದಲ್ಲಿ ಮಾರಾಠ ಸಾಮ್ರಾಜ್ಯದ ಶೌರ್ಯ, ಕಾರ್ಯತಂತ್ರಗಳು, ಮೊಘಲರ ದಾಳಿಗಳು ಸೇರಿದಂತೆ ಮರಾಠರ ಯುದ್ದ ತಂತ್ರಗಳನ್ನು ಕಟ್ಟಿಕೊಡಲಾಗಿದೆ.
ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಐತಿಹಾಸಿಕ ಘಟನೆ ಆಧರಿತ ಸಿನಿಮಾದಲ್ಲಿ ಛಾವಾ ಪ್ರಮುಖವಾದ ಸಿನಿಮಾವಾಗಿದೆ.
ಛಾವಾ
ಕೇಸರಿ ಅಧ್ಯಾಯ 2
ರಘು ಮತ್ತು ಪುಷ್ಪಾ ಪಲತ್ ಬರೆದ ‘ದಿ ಕೇಸ್ ದಟ್ ಷೂಕ್ ದಿ ಎಂಪೈರ್’ ಪುಸ್ತಕವನ್ನು ಆಧಾರಿಸಿ ‘ಕೇಸರಿ ಅಧ್ಯಾಯ 2’ ಸಿನಿಮಾವನ್ನು ನಿರ್ಮಾಣ ಮಾಡಲಾಗಿದೆ. ಭಾರತದ ಐತಿಹಾಸಿಕ ಹತ್ಯಾಕಾಂಡ ಎಂಬ ಕುಖ್ಯಾತಿಗೆ ಕಾರಣವಾದ 1919ರ ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ನಂತರ ಬ್ರಿಟಿಷ್ ಅಧಿಕಾರಿ ಮೈಕೆಲ್ ಓ'ಡ್ವೈರ್ ಅವರ ವಿರುದ್ಧ ಸರ್ ಸಿ. ಶಂಕರನ್ ನಾಯರ್ ಅವರು ನೀಡಿದ ಮಾನನಷ್ಟ ಮೊಕದ್ದಮೆಯ ಕುರಿತಾಗಿದೆ. ಹಿಂದಿ ಸಿನಿಮಾವಾದ ‘ಕೇಸರಿ ಅಧ್ಯಾಯ 2’ ಭಾರತದ ಕಾನೂನು ಹೋರಾಟದ ಇತಿಹಾಸವನ್ನು ಬಿಚ್ಚಿಡುತ್ತದೆ. ಈ ಸಿನಿಮಾ ಜಾಗತಿಕವಾಗಿ ₹144 ಕೋಟಿ ಗಳಿಸುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಂಡ ಸಿನಿಮಾವಾಗಿದೆ.
ಕೇಸರಿ ಅಧ್ಯಾಯ 2
ಹಕ್:
ಹಕ್ ಸಿನಿಮಾವು ಕಾನೂನು ಹೋರಾಟದ ಸಿನಿಮಾವಾಗಿದೆ. ಈ ಸಿನಿಮಾವನ್ನು ಶಾ ಬಾನೋ ಬೇಗಂ ಪ್ರಕರಣದಿಂದ ಪ್ರೇರಿತವಾಗಿ ನಿರ್ಮಾಣ ಮಾಡಲಾಗಿದೆ. ಸಿನಿಮಾದಲ್ಲಿ ಮಹಿಳಾ ಹಕ್ಕು ಹಾಗೂ ಲಿಂಗ ಸಮಾನತೆಯನ್ನು ತೋರಿಸಲಾಗಿದೆ. ವಿಚ್ಛೇದಿತ ಮಹಿಳೆಯ ಜೀವನಾಂಶಕ್ಕಾಗಿ ನಡೆಯುವ ಹೋರಾಟವನ್ನು ಕೇಂದ್ರವಾಗಿಸಿಕೊಂಡು ಸಿನಿಮಾವನ್ನು ತೆಗೆಯಲಾಗಿದೆ. ಈ ಚಿತ್ರ ₹25 ಕೋಟಿಗೂ ಅಧಿಕ ಮೊತ್ತವನ್ನು ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಸ್ಥಾನ ಗಳಿಸಿದೆ. ಚಿತ್ರದಲ್ಲಿ ಯಾಮಿ ಗೌತಮ್ ಮತ್ತು ಇಮ್ರಾನ್ ಹಶ್ಮಿ ನಟನೆ ಮಾಡಿದ್ದಾರೆ.
ಹಕ್
120 ಬಹದ್ದೂರ್:
ಈ ಚಿತ್ರವು ಯುದ್ದದ ಹಿನ್ನಲೆ ಹೊಂದಿರುವ ಚಿತ್ರವಾಗಿದೆ. ಭಾರತ ಮತ್ತು ಚೀನಾದ ನಡುವೆ 1962ರ ಸಮಯದಲ್ಲಿ ರೆಜಾಂಗ್ ಲಾ ಕದನ ನಡೆಯುತ್ತದೆ. ಈ ಕದನದಲ್ಲಿ ಭಾರತದ 120 ಮಂದಿ ಸೈನಿಕರ ಒಂದು ಸಣ್ಣ ತುಕ್ಕಯ ಶೌರ್ಯವನ್ನು ಈ ಚಿತ್ರ ನಿರೂಪಿಸುತ್ತದೆ. ಈ ಚಿತ್ರದಲ್ಲಿ 3,000 ಚೀನಿ ಸೈನಿಕರ ವಿರುದ್ದ ನಡೆದ ಹೋರಾಟವನ್ನು ಚಿತ್ರಿಸಲಾಗಿದೆ. ಈ ಚಿತ್ರ ಸಾಕಾಷ್ಟು ವಿವಾದಗಳಿಗೂ ಕಾರಣವಾಗಿದೆ.
120 ಬಹದ್ದೂರ್
ಸ್ಕೈ ಫೋರ್ಸ್:
ಈ ಸಿನಿಮಾವು ಭಾರತ ಹಾಗೂ ಪಾಕಿಸ್ತಾನದ ನಡುವಿನ ಯುದ್ದವನ್ನು ಚಿತ್ರಿಸುತ್ತದೆ. 1965 ರ ಇಂಡೋ-ಪಾಕ್ ಯುದ್ಧದಲ್ಲಿ ಶತ್ರು ಪ್ರದೇಶದ (ಸರ್ಗೋಧಾ ಏರ್ ಬೇಸ್) ಒಳಗೆ ಭಾರತೀಯ ವಾಯು ಸೇನೆ ನಡೆಸಿದ ನಿರ್ಣಾಯಕ ಪ್ರತೀಕಾರದ ದಾಳಿಯನ್ನು ವಿವರಿಸುತ್ತದೆ. ಭಾರತದ ವೈಮಾನಿಕ ಯುದ್ಧವನ್ನು ಪ್ರದರ್ಶಿಸುವ ಈ ಚಿತ್ರ ದೇಶಭಕ್ತಿಯಿಂದ ಜನರ ಮನಸ್ಸು ಗೆದ್ದಿತು. ಅಕ್ಷಯ್ ಕುಮಾರ್ ಈ ಚಿತ್ರದಲ್ಲಿ ನಟಿಸಿದ್ದು, ವಿಶ್ವದಾದ್ಯಂತ ₹168 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ.
ಸ್ಕೈ ಫೋರ್ಸ್
ಇಕ್ಕಿಸ್:
2025ರ ಡಿಸೆಂಬರ್ 25ರಂದು ಇಕ್ಕಿಸ್ ಸಿನಿಮಾ ಬಿಡುಗಡೆ ಕಾಣಲಿದೆ. 1971 ರ ಇಂಡೋ-ಪಾಕ್ ಯುದ್ಧದ ಬಸಂತರ್ ಕದನದಲ್ಲಿ ಅದಮ್ಯ ಧೈರ್ಯವನ್ನು ಪ್ರದರ್ಶಿಸಿದ ಮತ್ತು ಮರಣೋತ್ತರವಾಗಿ ಪರಮ ವೀರ ಚಕ್ರವನ್ನು ಪಡೆದ ಎರಡನೇ ಲೆಫ್ಟಿನೆಂಟ್ ಅರುಣ್ ಖೇತರ್ಪಾಲ್ ಅವರ ಕಥೆಯನ್ನು ಹೇಳುತ್ತದೆ. ದೇಶ ಭಕ್ತಿಗೆ ಹೆಸರಾದ ಸಿನಿಮಾದಲ್ಲಿ ಈ ಸಿನಿಮಾ ಕೂಡಾ ಒಂದು. ಈ ಚಿತ್ರದಲ್ಲಿ ಖ್ಯಾತ ನಟ ಧರ್ಮೇಂದ್ರ ಅವರು ನಟಿಸಿದ್ದಾರೆ.
ಇಕ್ಕಿಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.