ADVERTISEMENT

ಶ್ರೀಮುರಳಿಯ ಭರಾಟೆ!

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:47 IST
Last Updated 24 ಡಿಸೆಂಬರ್ 2018, 19:47 IST
   

ಸೂಪರ್‌ ಹಿಟ್‌ ಸಿನಿಮಾ ‘ಮಫ್ತಿ’ಯಲ್ಲಿ ನಟಿಸಿದ ನಂತರ ಶ್ರೀಮುರಳಿ ಅವರು ಪುನಃ ವೀಕ್ಷಕರ ಎದುರು ಬರುತ್ತಿರುವುದು ‘ಭರಾಟೆ’ ಸಿನಿಮಾ ಮೂಲಕ. ಈ ಚಿತ್ರದ ಟೀಸರ್‌ ಈಗ ಯೂಟ್ಯೂಬ್ ಮೂಲಕ ಬಿಡುಗಡೆ ಆಗಿದ್ದು, 20 ತಾಸುಗಳಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿದ್ದಾರೆ.

ಟೀಸರ್‌ ಆರಂಭವಾಗುವುದು ಶ್ರೀಮುರಳಿ ಅವರು ಗಂಭೀರವಾಗಿ, ರಗೆಡ್‌ ಆಗಿ ಕಾಣಿಸುತ್ತ, ಹೆಜ್ಜೆ ಹಾಕುವುದರೊಂದಿಗೆ. ಇದರ ಚಿತ್ರೀಕರಣ ರಾಜಸ್ಥಾನದಲ್ಲಿ ನಡೆದಿರುವಂತಿದೆ. ‘ಕನ್ನಡಿಗರ ಬಗ್ಗೆ ಮಾತನಾಡುವ ಮೊದಲು ಕರ್ನಾಟಕದ ಬಗ್ಗೆ ತಿಳಿದುಕೋ. ಇಲ್ಲಿನ ನೀರು ಸಿಕ್ಕಿದರೆ ತೀರ್ಥ ಅಂದುಕೋ. ಅನ್ನ ಸಿಕ್ಕಿದರೆ ಪ್ರಸಾದ ಅಂದುಕೋ. ನಡೆದಾಡಲು ಜಾಗ ಸಿಕ್ಕಿದರೆ ದೇವಸ್ಥಾನದಲ್ಲಿ ನಡೆಯುತ್ತಿದ್ದೇನೆ ಎಂಬ ನಿಯತ್ತು ಇಟ್ಟುಕೋ. ಪೌರುಷ ಎಂಬುದು ಪ್ರತಿ ಕನ್ನಡಿಗನ ರಕ್ತದಲ್ಲೇ ಇದೆ’ ಎನ್ನುವ ಮಾತುಗಳನ್ನು ಶ್ರೀಮುರಳಿ ಆಡುತ್ತಾರೆ.

ಇಷ್ಟು ಹೇಳುತ್ತಿದ್ದಂತೆ ಟೀಸರ್‌ ಕೂಡ ಮುಕ್ತಾಯದ ಹಂತ ತಲುಪಿರುತ್ತದೆ. ಟೀಸರ್‌ನಲ್ಲಿ ಇರುವ ದೃಶ್ಯಗಳನ್ನು ಕಂಡರೆ, ಚಿತ್ರದಲ್ಲಿ ಹೊಡಿ–ಬಡಿ, ಆ್ಯಕ್ಷನ್‌, ಥ್ರಿಲ್‌ ಅಂಶಗಳಿಗೆ ಒಂಚೂರೂ ಕೊರತೆ ಎದುರಾಗಲಿಕ್ಕಿಲ್ಲ ಎಂದು ಅನಿಸುತ್ತದೆ. ಹಾಗೆಯೇ, ಡೈಲಾಗ್‌ಗಳೂ ರಗೆಡ್‌ ಆಗಿಯೇ ಇದ್ದು, ಶ್ರೀಮುರಳಿ ಅವರು ಕಟ್ಟಿಕೊಂಡಿರುವ ಇಮೇಜ್‌ಗೆ ಹೊಂದಿಕೆ ಆಗುವಂತಿವೆ.

ADVERTISEMENT

ಸುಪ್ರೀತ್‌ ಅವರು ಈ ಚಿತ್ರದ ನಿರ್ಮಾಪಕರು. ಚೇತನ್ ಕುಮಾರ್ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. 2019ರ ಬೇಸಿಗೆಯಲ್ಲಿ ಚಿತ್ರ ತೆರೆಯ ಮೇಲೆ ಬರಲಿದೆ ಎಂಬ ಸಂದೇಶ ಕೂಡ ಟೀಸರ್‌ನಲ್ಲಿಯೇ ಇದೆ. ‘ಭರಾಟೆ’ ಶೀರ್ಷಿಕೆಯ ಹಿಂಬದಿಯಲ್ಲಿ ಧ್ಯಾನಸ್ಥ ಬುದ್ಧನ ಚಿತ್ರವಿದ್ದು, ಸಿನಿಮಾದಲ್ಲಿ ಆ್ಯಕ್ಷನ್‌ ಮಾತ್ರವೇ ಅಲ್ಲದೆ ಇನ್ನೂ ಏನೇನು ಇರಬಹುದು ಎಂಬ ಕುತೂಹಲ ಮೂಡಿಸುತ್ತಿದೆ.

ಶ್ರೀಲೀಲಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.