ತಾಯ್ತನದ ಸಂಭ್ರಮದಲ್ಲಿ ಭಾವನಾ ರಾಮಣ್ಣ
ಚಿತ್ರಕೃಪೆ: ಇನ್‌ಸ್ಟಾಗ್ರಾಂ
ಬೆಂಗಳೂರು: ಚಂದನವನದ ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಮಗು ಪಡೆದುಕೊಂಡಿದ್ದಾರೆ. ಮೊದಲ ಬಾರಿಗೆ ಮಗುವಿನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಈ ಕುರಿತು ಬರೆದುಕೊಂಡಿರುವ ಅವರು, ‘ದೊಡ್ಡ ಮನೆ, ಪುಟ್ಟ ಕುಟುಂಬ… ಈಗ ನಮ್ಮ ಗೂಡಿಗೆ ಬಂದ ಹೊಸ ಪುಟ್ಟ ಹಕ್ಕಿಯ ಚುಯ್ ಚುಯ್ ನಾದ. ಹಕ್ಕಿಗಳ ಹಾಡಿಗೆ ಹೊಸ ಸರಿಗಮ ಸೇರಿಸಿದ ಈ ಪುಟ್ಟ ಜೀವ, ನಮ್ಮ ಬದುಕಿಗೆ ಹೊಸ ಪ್ರೀತಿಯ ಅಲೆ ತಂದುಕೊಟ್ಟಿದೆ. ಈ ವಿನೂತನ ವಿಸ್ಮಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ’ ಎಂದಿದ್ದಾರೆ.
ಐವಿಎಫ್ ತಂತ್ರಜ್ಞಾನದ ಮೂಲಕ ಅವಳಿ ಮಕ್ಕಳಿಗೆ ತಾಯಿಯಾಗುತ್ತಿರುವ ಬಗ್ಗೆ ಭಾವನಾ ಮಾಹಿತಿ ಹಂಚಿಕೊಂಡಿದ್ದರು. ಆದರೆ ಹೆರಿಗೆ ವೇಳೆ ಒಂದು ಮಗು ಮೃತಪಟ್ಟಿದೆ ಎಂದು ಸುದ್ದಿಯಾಗಿತ್ತು. ಈ ಬಗ್ಗೆ ಭಾವನಾ ಯಾವುದೇ ಸ್ಪಷ್ಟನೆ ನೀಡಿಲ್ಲ.
‘20, 30ನೇ ವಯಸ್ಸಿನಲ್ಲಿ ತಾಯಿಯಾಗುವ ಬಗ್ಗೆ ನಾನು ಆಲೋಚಿಸಿರಲಿಲ್ಲ. ಆದರೆ ವಯಸ್ಸು 40 ದಾಟಿದಾಗ ತಾಯಿಯಾಗುವ ಬಯಕೆ ತೀವ್ರವಾಗಿತ್ತು. ಒಂಟಿ ಮಹಿಳೆಯಾಗಿ ಈ ದಾರಿ ಸುಲಭದ್ದಾಗಿರಲಿಲ್ಲ. ಮೊದಲ ಪ್ರಯತ್ನದಲ್ಲೇ ಗರ್ಭಿಣಿ ಆದೆ ಎಂದು ಬೇಬಿ ಬಂಪ್ ಚಿತ್ರಗಳನ್ನೂ ಹಂಚಿಕೊಂಡಿದ್ದರು.
‘ನನ್ನ ಮಕ್ಕಳಿಗೆ ತಂದೆ ಇಲ್ಲದೇ ಇರಬಹುದು. ಆದರೆ ಅವರು ಕಲೆ, ಸಂಗೀತ, ಸಂಸ್ಕೃತಿ ಮತ್ತು ಅಪರಿಮಿತ ಪ್ರೀತಿ ತುಂಬಿದ ಮನೆಯಲ್ಲಿ ಬೆಳೆಯುತ್ತಾರೆ. ಬಂಡಾಯದ ಕಾರಣಕ್ಕೆ ನಾನು ಈ ದಾರಿ ಆಯ್ಕೆ ಮಾಡಿಕೊಂಡಿಲ್ಲ. ನನ್ನ ಸತ್ಯವನ್ನು ಗೌರವಿಸುವ ಸಲುವಾಗಿ ಆಯ್ಕೆ ಮಾಡಿಕೊಂಡೆ’ ಎಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.