ಸಮಂತಾ ಹಾಗೂ ರಾಜ್ ನಿಡಿಮೋರು
ಚಿತ್ರ:ಇನ್‌ಸ್ಟಾಗ್ರಾಂ
ತೆಲುಗು ನಟಿ ಸಮಂತಾ ರುತ್ ಪ್ರಭು ಹಾಗೂ ಸಿನಿಮಾ ನಿರ್ಮಾಪಕ ರಾಜ್ ನಿಡುಮೊರು ನಿನ್ನೆ (ಸೋಮವಾರ) ಕೇವಲ 30 ಜನ ಆತ್ಮೀಯರ ಸಮ್ಮುಖದಲ್ಲಿ ಕೋಯಂಬತ್ತೂರಿನ ಈಶಾ ಫೌಂಡೇಷನ್‌ನಲ್ಲಿರುವ ಲಿಂಗ ಭೈರವಿ ದೇವಿ ಆಲಯದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಇವರು ‘ಭೂತ ಶುದ್ಧಿ ವಿವಾಹ’ ಪದ್ಧತಿ ಮೂಲಕ ಸರಳವಾಗಿ ಹಸೆಮಣೆ ಏರಿದ್ದಾರೆ.
'ಏನಿದು ಭೂತ ಶುದ್ಧಿ ವಿವಾಹ...?" ಎಂಬ ಹುಡುಕಾಟ ಆರಂಭಿಸಿದ್ದಾರೆ.
ಭೂತ ಶುದ್ಧಿ ವಿವಾಹದ ಕುರಿತು ಈ ಹಿಂದೆ ಸ್ವತಃ ಸದ್ಗುರು ಅವರು ನೀಡಿದ್ದ ವಿವರಣೆಯ ಪೋಸ್ಟ್ ಒಂದು ಧಿಡೀರನೆ ಹರಿದಾಡುತ್ತಿದೆ. ಭೂತ ಶುದ್ಧಿ ವಿವಾಹವನ್ನು ಸಾಮಾನ್ಯವಾಗಿ ಲಿಂಗ ಭೈರವಿ ಮಂದಿರಗಳಲ್ಲಿ ನಡೆಸಲಾಗುತ್ತದೆ. ಇದು ದೈವಿಕ ಸ್ತ್ರೀ ಲಿಂಗದ ರೂಪವೆಂದು ಭಾವಿಸಲಾಗುತ್ತದೆ.
ಪ್ರಪಂಚದಲ್ಲಿ ನಾನಾ ರೀತಿಯ ವಿವಾಹ ಪದ್ಧತಿಗಳಿವೆ. ಪ್ರತಿಯೊಂದು ಜಾತಿ, ಧರ್ಮದ ವಿವಾಹ ಕೂಡ ವಿಭಿನ್ನವಾಗಿರುತ್ತದೆ. ಕಾಲಕಾಲಕ್ಕೆ ತಕ್ಕಂತೆ ವಿವಾಹ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾ ಬಂದಿರುವುದನ್ನು ಕಾಣಬಹುದು. ಗಾಂಧರ್ವ ವಿವಾಹ, ಉಂಗುರ ಬದಲಿಸಿಕೊಳ್ಳುವುದು, ಮಾಂಗಲ್ಯ ಧಾರಣೆಯಂತಹ ವಿವಾಹ ಪದ್ಧತಿಗಳು ಇರುವುದನ್ನು ಕಾಣಬಹುದು.
ಭೂತ ಶುದ್ಧಿ ವಿವಾಹ ಪದ್ಧತಿ ಯೋಗ ವ್ಯವಸ್ಥೆಯಲ್ಲಿ ನಡೆದು ಬಂದಿದೆ. ಇದೊಂದು ಪವಿತ್ರ ವಿವಾಹದ ಆಚರಣೆ. ದಂಪತಿಗಳು ಮದುವೆಯಾಗುವ ಮೊದಲು ತಮ್ಮ ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸುವ ಯೋಗದ ಆಚರಣೆಯನ್ನು ಮಾಡಬೇಕು. ಪಂಚಭೂತ ಅಂದರೆ ಭೂಮಿ, ನೀರು, ಗಾಳಿ, ಬೆಂಕಿ ಮತ್ತು ಆಕಾಶ ಶುದ್ಧೀಕರಣ ಒಳಗೊಂಡಿರುವಂಥದ್ದು. ಇಬ್ಬರ ಭಾವನೆಗಳು, ಆಲೋಚನೆಗಳು ಮತ್ತು ದೈಹಿಕ ಗಡಿಗಳನ್ನು ಮೀರಿ ಆಳವಾದ ಸಂಪರ್ಕ ಸ್ಥಾಪಿಸುವ ಗುರಿಯನ್ನು ಈ ವಿವಾಹ ಪದ್ಧತಿ ಹೊಂದಿರುತ್ತದೆ ಎಂದು ಯೋಗಗುರು ಸದ್ಗುರು ಅವರು ತಿಳಿಸಿದ್ದಾರೆ.
ಈ ವಿವಾಹ ಪದ್ಧತಿಯ ಮೂಲಕ ದಂಪತಿಗಳು ಭಾವನಾತ್ಮಕ ಮತ್ತು ಸಾಮಾಜಿಕವಾಗಿ ಒಂದಾಗುವುದು ಮಾತ್ರವಲ್ಲ, ಧಾತು ರೂಪದಲ್ಲಿಯೂ ಆಳವಾದ ಬಂಧವನ್ನು ಹೊಂದಲು ಸಹಾಯ ಮಾಡುತ್ತದೆ ಎನ್ನುವ ನಂಬಿಕೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.