ADVERTISEMENT

'ಸೂರರೈ ಪೋಟ್ರು' ನೈಜತೆ ಕುರಿತ ಆಕ್ಷೇಪಗಳಿಗೆ ಕ್ಯಾ. ಗೋಪಿನಾಥ್‌ ಸ್ಪಷ್ಟನೆ ಇದು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2020, 8:37 IST
Last Updated 21 ನವೆಂಬರ್ 2020, 8:37 IST
   

ನನ್ನ ಪುಸ್ತಕ ಮತ್ತು ನಿಜ ಜೀವನದ ನೈಜ ಸಂಗತಿಗಳಿಗೆ 'ಸೂರರೈ ಪೋಟ್ರು' ಸಿನಿಮಾ ಪೂರಕವಾಗಿಲ್ಲ ಎಂದು ನನ್ನ ಶಾಲಾ ದಿನಗಳ ಸಹಪಾಠಿಗಳು, ಸೇನೆಯ ಸ್ನೇಹಿತರು ಮತ್ತು ಏರ್‌ ಡೆಕ್ಕನ್‌ನ ಕೆಲ ಸಹೋದ್ಯೋಗಿಗಳು ನನ್ನ ಬಳಿ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಆದರೆ, ಅವರಿಗೆ ನಾನು ಹೇಳಿದ್ದೇನೆಂದರೆ, 'ಸಿನಿಮೀಯ ಪರಿಣಾಮಕ್ಕಾಗಿ ಅದನ್ನು ಕಾಲ್ಪನಿಕವಾಗಿ ಚಿತ್ರಿಸಲಾಗಿದೆ. ಆದರೆ, ಕಾಲ್ಪನಿಕತೆ ಮೀರಿ ಚಿತ್ರದಲ್ಲಿ ಸಂದೇಶವಿದೆ,' ಎಂದು ಕ್ಯಾ. ಜಿ.ಆರ್‌ ಗೋಪಿನಾಥ್‌ ಹೇಳಿಕೊಂಡಿದ್ದಾರೆ.

ಕನ್ನಡಿಗ ಕ್ಯಾಪ್ಟನ್ ಜಿ.ಆರ್‌‌ ಗೋಪಿನಾಥ್‌ ಅವರ 'ಸಿಂಪ್ಲಿ ಫ್ಲೈ: ಎ ಡೆಕ್ಕನ್‌ ಒಡಿಸ್ಸಿ' ಪುಸ್ತಕ ಆಧಾರಿತ 'ಸೂರರೈ ಪೋಟ್ರ' ಸಿನಿಮಾ ಒಟಿಟಿ ವೇದಿಕೆಯಲ್ಲಿ ಇತ್ತೀಚೆಗೆ ಬಿಡುಗಡೆಯಾಯಿತು. ತಮಿಳು ನಟ ಸೂರ್ಯ ಅಭಿನಯದ, ಸುಧಾ ಕೊಂಗಾರ ಅವರ ನಿರ್ದೇಶನದ ತಮಿಳು ಸಿನಿಮಾದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆಯಾದರೂ, ಆಕ್ಷೇಪಗಳೂ ಕೇಳಿ ಬಂದಿವೆ. ಸಿನಿಮಾದ ಸನ್ನಿವೇಶಗಳ ನೈಜವಲ್ಲ ಎಂಬ ಮಾತುಗಳೂ ಕೇಳಿ ಬಂದಿವೆ. ಇದೇ ಹಿನ್ನೆಲೆಯಲ್ಲಿ ಶುಕ್ರವಾರ ಟ್ವೀಟ್‌ ಮಾಡಿರುವ ಕ್ಯಾಪ್ಟನ್‌ ಗೋಪಿನಾಥ್‌ ಎಲ್ಲರ ಅನುಮಾನ ನೀಗಿಸುವ ಪ್ರಯತ್ನ ಮಾಡಿದ್ದಾರೆ.

'ಸಂಪೂರ್ಣ ವಾಸ್ತವ ನೆಲೆಗಟ್ಟಿನಲ್ಲಿ ಸಿನಿಮಾ ಮಾಡಿದರೆ, ಅದು ಸಾಕ್ಷ್ಯಚಿತ್ರವಾಗುತ್ತಿತ್ತು. ಸಿನಿಮಾ ಮೌಲ್ಯವನ್ನು ಹೊಂದಿದೆ. ಆದರೆ, ವಿಭಿನ್ನ ಪ್ರಕಾರವಾಗಿ ಮೂಡಿ ಬಂದಿದೆ. ನಾಯಕನನ್ನು ಸಾಧಕನಂತೆ ತೋರಿಸಲಾಗಿದೆಯಾದರೂ, ಅವನು ದುರ್ಬಲ. ಆತ ಗೆಲ್ಲಬೇಕಿದ್ದರೆ, ಪತ್ನಿ, ಕುಟುಂಬಸ್ಥರ ಭಾವನಾತ್ಮಕ ಬೆಂಬಲ ಬೇಕು ಎಂಬುದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅಲ್ಲದೆ, ನಾಯಕನಿಗಿಂತಲೂ ತಂಡದ ಸದಸ್ಯರೇ ಹೆಚ್ಚು ತ್ಯಾಗ ಮಾಡಬೇಕಾಗುತ್ತದೆ ಎಂಬುದನ್ನು ಚಿತ್ರಿಸಲಾಗಿದೆ,' ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

'ಪತ್ನಿ ತನ್ನ ಕನಸುಗಳನ್ನು ತ್ಯಾಗ ಮಾಡದೆ ನಾಯಕನ ಕನಸನ್ನು ಹಂಚಿಕೊಳ್ಳಬಹುದು. ಅವಳು ತನ್ನನ್ನು ಅಧೀನಳನ್ನಾಗಿಸಿಕೊಳ್ಳದೆಯೇ, ಸ್ವಂತಿಕೆ, ಸ್ವಾಭಿಮಾನ ಕಳೆದುಕೊಳ್ಳದೆ ಪುರುಷನನ್ನು ಬೆಂಬಲಿಸಬಹುದು. ಇದಕ್ಕೆ ತದ್ವಿರುದ್ಧವಾಗಿ, ಪತಿಯ ಆತ್ಮವಿಶ್ವಾಸ ಉಡುಗಿಹೋದಾಗ ಚೈತನ್ಯ ತುಂಬಬಲ್ಲಳು, ಉತ್ತೇಜಿಸಬಲ್ಲಳು. ನಟಿ ಅಪರ್ಣ ಮೂಲಕ ನಿರ್ದೇಶಕಿ ಸುಧಾ ಇದನ್ನು ಸೊಗಸಾಗಿ ಚಿತ್ರಿಸಿದ್ದಾರೆ,' ಎಂದು ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

'ಪ್ರತಿಬಾರಿ ಬಿದ್ದಾಗಲೂ, ಮೇಲೆದ್ದು ಬರುವ ಕತೆ ನಿಜ ಜೀವನದಲ್ಲಿಯೂ ಇದೆ. 'ನಾನು ಸೋತಿದ್ದೇನೆ, ಆದರೆ, ವಿಫಲನಾಗಿಲ್ಲ,' ಎಂದು ವ್ಯಕ್ತಿಯೊಬ್ಬ ಹೇಳಿಕೊಳ್ಳುವ ಕುರಿತಾದದ್ದು ಈ ಸಿನಿಮಾ. ನಾನು ಸಮಸ್ಯೆಯಿಂದ ಓಡಿಹೋದಾಗ ವಿಫಲನೆನಿಸಿಕೊಳ್ಳುತ್ತೇನೆ. ನಾನು ಕೆಳಗೆ ಬಿದ್ದಾಗಲೆಲ್ಲಾ ಮೇಲೇಳುತ್ತೇನೆ. ಇದು ನಿರಂತರವೂ ಅಲ್ಲ. ಸಮಾಜದಲ್ಲಿ ಒಳ್ಳೆಯ ಜನರೂ ಇದ್ದಾರೆ, ಸೂರ್ಯ ಉದಯಿಸುತ್ತಾನೆ ಮತ್ತು ಬಾಗಿಲುಗಳು ತೆರೆದುಕೊಳ್ಳೂತ್ತವೆ ಎಂಬ ವಿಶ್ವಾಸವಿರುತ್ತದೆ. ಇದನ್ನು ನಟ ಸೂರ್ಯ ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ,' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.