ADVERTISEMENT

‘ಚಂದವಳ್ಳಿಯ ತೋಟ’ಕ್ಕೆ ಈಗ 56 ವಸಂತ!

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 10:14 IST
Last Updated 24 ಜೂನ್ 2020, 10:14 IST
ಪೋಸ್ಟರ್‌
ಪೋಸ್ಟರ್‌   

ಮಹಾತ್ಮ ಗಾಂಧೀಜಿ ಅವರ ಕೃಷಿ ಆಧಾರಿತ ಗ್ರಾಮೀಣ ಭಾರತದ ಆಶಯವನ್ನು ಪ್ರತಿಪಾದಿಸುವ ಕತೆ ಹೊಂದಿದ್ದ ಕನ್ನಡದ ಕಪ್ಪುಬಿಳುಪು ಚಿತ್ರ‘ಚಂದವಳ್ಳಿಯ ತೋಟ’ಕ್ಕೆ ಈಗ 56ರ ಸಂಭ್ರಮ.

1964ರ ಜೂನ್ 24ರಂದು ಬಿಡುಗಡೆಯಾಗಿದ್ದಚಿತ್ರ ಶತದಿನೋತ್ಸವ ಕಂಡಿತ್ತು.ಸಾಹಿತಿ ತ.ರಾ.ಸುಬ್ಬರಾವ್‌ (ತರಾಸು) ಕಾದಂಬರಿ ಆಧರಿಸಿ ತೆಗೆದ ಚಿತ್ರವಿದು. ಕಾದಂಬರಿಯ ಹೆಸರನ್ನೇ ಚಿತ್ರಕ್ಕೂ ಇಡಲಾಗಿತ್ತು.

ಚಂದವಳ್ಳಿ ಎಂಬ ಊರು. ಅಲ್ಲೊಂದು ಅವಿಭಕ್ತ ಕುಟುಂಬವಿರುತ್ತದೆ. ಆ ಊರಿನ ಆಸೆಬುರುಕನೊಬ್ಬನ ಕಾರಣದಿಂದಾಗಿ ಇಡೀ ಕುಟುಂಬ ಅವನತಿ ಹೊಂದುತ್ತದೆ. ಇದು ಸಿನಿಮಾದ ಕತೆ. ಗಾಂಧಿತತ್ವ, ಹಳ್ಳಿಗಳ ಬಡತನ, ಹಗೆತನ ಹೀಗೆ ಎಲ್ಲವನ್ನೂ ಪರಿಣಾಮಕಾರಿ ಕಟ್ಟಿಕೊಟ್ಟ‘ಚಂದವಳ್ಳಿಯ ತೋಟ’ ಸಹಜವಾಗಿ ಎಲ್ಲರ ಮನಗೆದ್ದಿತ್ತು.

ADVERTISEMENT

ರಾಜ್‌ಕುಮಾರ್‌, ಉದಯಕುಮಾರ್, ಜಯಂತಿ,ಬಾಲಕೃಷ್ಣ, ಆದವಾನಿ ಲಕ್ಷ್ಮಿದೇವಿ, ಜಯಶ್ರೀ ಹೀಗೆ ಬಹುತಾರಾಗಣದಿಂದ ಚಿತ್ರ ಗಮನ ಸೆಳೆದಿತ್ತು. ವರನಟ ರಾಜ್‌ಕುಮಾರ್‌ ಅವರ 50ನೇ ಚಿತ್ರ ಎಂಬುವುದು ಇದರ ಮತ್ತೊಂದು ಹೆಗ್ಗಳಿಕೆ. ಮೊದಲ ಬಾರಿಗೆ ರಾಜ್ ಮತ್ತು ಜಯಂತಿ ಒಟ್ಟಿಗೆ ನಟಿಸಿದ ಚಿತ್ರವೂ ಹೌದು.

ಬಿಡುಗಡೆಯಾದ ಮರು ವರ್ಷವೇ (1965) ‘ಅತ್ಯುತ್ತಮ ಕನ್ನಡ ಚಿತ್ರ’ ರಾಷ್ಟ್ರಪ್ರಶಸ್ತಿ ಪುರಸ್ಕಾರಕ್ಕೂ ಪಾತ್ರವಾಯಿತು. 1992ರಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ಕನ್ನಡ ಚಿತ್ರಂಗದ ಸಿಂಹಾವಲೋಕನ ಪರಿಚಯಿಸುವ ಚಿತ್ರವಾಗಿ ‘ಚಂದವಳ್ಳಿಯ ತೋಟ’ವನ್ನು ಪ್ರದರ್ಶಿಸಲಾಯಿತು. ಇದು ಈ ಚಿತ್ರದ ಮತ್ತೊಂದು ಹೆಗ್ಗಳಿಕೆ.

‘ಓ ನನ್ನ ಬಾಂಧವರೇ’ ಮತ್ತು ‘ನನ್ನ ಮನೆಯೇ ನಂದನ’ ಎರಡು ಗೀತೆಗಳಿಗೆ ತರಾಸು ಅವರೇ ಸಾಹಿತ್ಯ ರಚಿಸಿದ್ದರು. ಟಿ.ಜಿ. ಲಿಂಗಪ್ಪ ಸಂಗೀತ ಮತ್ತು ಆರ್‌.ಎನ್‌. ಜಯಗೋಪಾಲ ಸಾಹಿತ್ಯದ ಹಾಡು ಆ ಕಾಲಕ್ಕೆ ಜನಪ್ರಿಯವಾಗಿದ್ದವು. ಪಿ.ಬಿ.ಶ್ರೀನಿವಾಸ್‌, ಎಲ್‌.ಆರ್‌. ಈಶ್ವರಿ, ಪೀಠಾಪುರಂ ನಾಗೇಶ್ವರರಾವ್‌ ಮತ್ತು ಎಸ್‌. ಜಾನಕಿ ಹಾಡಿಗೆ ಧ್ವನಿಯಾಗಿದ್ದರು.ಬಿ.ದೊರೈರಾಜು ಕ್ಯಾಮೆರಾದಲ್ಲಿ ಹಳ್ಳಿಯ ಸೊಗಡನ್ನು ಸುಂದರವಾಗಿ ಸೆರೆ ಹಿಡಿದಿದ್ದರು. ಈ ಕಾರಣದಿಂದ ಚಿತ್ರ ವಿಮರ್ಶಕರಿಂದಲೂ ಉತ್ತಮ ಪ್ರಶಂಸೆ ಗಳಿಸಿತ್ತು.

ಕೈಗೂಡದ ಗುಬ್ಬಿ ವೀರಣ್ಣನವರ ಆಸೆ!

‘ಚಂದವಳ್ಳಿಯ ತೋಟ’ ಕಾದಂಬರಿಯಿಂದ ಪ್ರಭಾವಿತರಾಗಿದ್ದ ಗುಬ್ಬಿ ವೀರಣ್ಣನವರು ಇದನ್ನು ಸಿನಿಮಾ ಮಾಡುವುದಕ್ಕಾಗಿ ರೈಟ್ಸ್‌ ಪಡೆಯಲು ಸಿದ್ಧತೆ ನಡೆಸಿದ್ದರು. ಚಂದವಳ್ಳಿಯ ಬಂಜರುಭೂಮಿಯಲ್ಲಿ ಹಸಿರು ಬಿತ್ತುವ ಶಿವನಂಜು ಎಂಬ ರೈತನ ಪಾತ್ರವನ್ನು ತಾವೇ ನಿರ್ವಹಿಸಲು ಸಜ್ಜಾಗಿದ್ದರು.

ಆದರೆ, ಸಿನಿಮಾ ಮಾಡುವ ಹಕ್ಕು ಪಾಲ್‌‌ ಅಂಡ್‌ ಕಂಪನಿ ಪಾಲಾಯಿತು.ನಿರ್ದೇಶನದ ಹೊಣೆ ಟಿ.ವಿ. ಸಿಂಗ್‌ ಠಾಕೂರ್ ಅವರ ಹೆಗಲೇರಿತು. ‘ಸಹೋದರಿ’ ಎಂಬ ಯಶಸ್ವಿ ಚಿತ್ರದ ಮೂಲಕ ಆಗಲೇ ಸಿಂಗ್‌ ಹೆಸರು ಮಾಡಿದ್ದರು.

‘ಪಾಲ್‌‌ ಅಂಡ್‌ ಕಂಪನಿ ಸಿನಿಮಾ ಮಾಡಲು ಮುಂದಾದಾಗ ಶಿವನಂಜು ಪಾತ್ರಕ್ಕೆ ತಮ್ಮನ್ನೇ ಕರೆಯಬಹುದು ಎಂದು ವೀರಣ್ಣನವರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಅವರು ಮಾಡಬೇಕು ಎಂದುಕೊಂಡಿದ್ದ ಶಿವನಂಜು ಪಾತ್ರ ಉದಯ್‌ ಕುಮಾರ್ ಪಾಲಾಯಿತು. ಆ ನೋವು ಬಹಳ ದಿನ ವೀರಣ್ಣನವರನ್ನು ಕಾಡುತ್ತಿತ್ತು’ ಎಂದು ಹಿರಿಯ ಛಾಯಾಗ್ರಾಹಕ ಬಿ.ಎಸ್‌. ಬಸವರಾಜು ನೆನಪಿಸಿಕೊಳ್ಳುತ್ತಾರೆ.

ಬೆಂಗಳೂರಿನ ಪ್ರಭಾತ್‌ ಚಿತ್ರಮಂದಿರಲ್ಲಿ ಚಿತ್ರ ನೂರು ದಿನ ಓಡಿತ್ತು. ಶತದಿನೋತ್ಸವ ಸಮಾರಂಭಕ್ಕೆ ಸಾಹಿತಿ ವಿ.ಸೀತಾರಾಮಯ್ಯ ಮುಖ್ಯ ಅತಿಥಿಯಾಗಿದ್ದರು. 1965ರಲ್ಲಿ ಈ ಚಿತ್ರ ಕೆಂಪೇಗೌಡ ಚಿತ್ರಮಂದಿರದಲ್ಲಿ ಎರಡನೇ ಬಾರಿ ಬಿಡುಗಡೆಯಾದಾಗಲೂ ಶತದಿನೋತ್ಸವ ಕಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.